ರಾಷ್ಟ್ರಧ್ವಜ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ನಾವು ನೆನಪಿಸಿಕೊಳ್ಳಬೇಕಾದ ನವೀನ್ ಜಿಂದಾಲ್

ಡಿಜಿಟಲ್ ಕನ್ನಡ ಟೀಮ್

ಮೊನ್ನೆ ಸಚಿವೆ ಸ್ಮೃತಿ ಇರಾನಿ ಅವರು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯಗೊಳಿಸಿದಾಗ, ಅದೇಕೆ ಆರೆಸ್ಸೆಸ್ ಐವತ್ತು ವರ್ಷ ತನ್ನ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ವಾಸ್ತವ ಏನೆಂದರೆ, ಹಲವು ವರ್ಷಗಳವರೆಗೆ ಆರೆಸ್ಸೆಸ್ ಅಂತಲ್ಲ, ರಾಷ್ಟ್ರಧ್ವಜವನ್ನು ಯಾರೂ ತಮಗಿಷ್ಟ ಬಂದ ಕಟ್ಟಡಗಳ ಮೇಲೆ ಹಾರಿಸುವಂತಿರಲಿಲ್ಲ.

ಈ ನಿಯಮ ಸಡಿಲವಾಗಿ ಸಾಮಾನ್ಯ ಪ್ರಜೆಯೂ ಕೆಲವು ಶಿಸ್ತುಗಳಿಗೆ ಒಳಪಟ್ಟು ರಾಷ್ಟ್ರಧ್ವಜವನ್ನು ಹಾರಿಸಬಹುದಾದ ನಿಯಮ ಬಂದಿದ್ದು ತೀರಾ ಇತ್ತೀಚೆಗೆ. ಇದಕ್ಕಾಗಿ ಅವಿರತ ಹೋರಾಡಿದ್ದುನವೀನ್ ಜಿಂದಾಲ್ ಎಂಬ ಉದ್ಯಮಿ. ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಜತೆ ಗುರುತಿಸಿಕೊಂಡು ಎರಡು ಬಾರಿ ಸಂಸದರೂ ಆಗಿದ್ದವರು.

ರಾಷ್ಟ್ರಧ್ವಜ ಹಾರಿಸುವುದು ದೇಶದ ಪ್ರತಿಯೊಬ್ಬ ನಾಗರೀಕನ ಹೆಮ್ಮೆಯ ಹಕ್ಕು, ಅದನ್ನು ಯಾರೂ ಕಸಿದುಕೊಳ್ಳಬಾರದು. ಕೇವಲ ಸರ್ಕಾರಿ ಕಚೇರಿಯಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲೂ ರಾಷ್ಟ್ರ ಧ್ವಜ ಹಾರಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಹೀಗಾಗಿ ಅದರ ನಿರ್ಬಂಧ ಸರಿಯಲ್ಲ ಎಂದು ಕಾನೂನು ಸಮರ ನಡೆಸಿ ಗೆದ್ದವರು ನವೀನ್ ಜಿಂದಾಲ್. ಪ್ರತಿ ಹಿಂದೂ ಮನೆಯಲ್ಲಿ ರಾಮಾಯಣ, ಮಹಾಭಾರತ, ಮುಸಲ್ಮಾನರ ಮನೆಯಲ್ಲಿ ಕುರಾನ್ ಹೇಗೆ ಇರುತ್ತದೋ ಅದೇ ರೀತಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಮನೆಯಲ್ಲೂ ತಿರಂಗಾ ಇರಬೇಕು ಎಂಬುದು ನವೀನ್ ಜಿಂದಾಲ್ ಪ್ರತಿಪಾದನೆ.

ಅಮೆರಿಕದಲ್ಲಿ ಪ್ರತಿ ಪ್ರಜೆ ಸ್ವತಂತ್ರವಾಗಿ ರಾಷ್ಟ್ರಧ್ವಜ ಬಳಸುವುದನ್ನು ಕಂಡು ಪ್ರೇರೇಪಿತರಾದ ನವೀನ್, ಈ ಹಕ್ಕನ್ನು ತಾವು ಪಡೆದು, ಇತರರಿಗೂ ನೀಡಬೇಕೆಂದು ನಿರ್ಧರಿಸಿದರು. ಛತ್ತೀಸಘಡ ರಾಯಘರ್ ನ ತಮ್ಮ ಕಂಪನಿಯಲ್ಲಿ ಪ್ರತಿನಿತ್ಯ ರಾಷ್ಟ್ರಧ್ವಜ ಹಾರಿಸಲು ಮುಂದಾದರು. ಆಗ ಅಲ್ಲಿನ ಆಯುಕ್ತರು ರಾಷ್ಟ್ರಧ್ವಜ ನೀತಿಯ ಉಲ್ಲಂಘನೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ನಿಬಂಧನೆಯಿಂದ ಬೇಸತ್ತ ನವೀನ್ ಜಿಂದಾಲ್, ಈ ಹಕ್ಕನ್ನು ಪಡೆದೇ ತೀರಬೇಕೆಂಬ ನಿರ್ಧಾರಕ್ಕೆ ಬಂದರು. 1995ರ ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.

ರಾಷ್ಟ್ರಧ್ವಜ ಬಳಸಲು ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು. ಈ ಅವಕಾಶದ ಮೇಲೆ ನಿರ್ಬಂಧ ಹಾಕುವ ಬದಲಿಗೆ ಧ್ವಜ ಹಾರಿಸಲು ನಿರ್ದಿಷ್ಟ ನಿಯಮಗಳನ್ನು ಜಾರಿಗೆ ತರುವುದು ಉತ್ತಮ ಎಂಬುದು ನವೀನ್ ವಾದ. ಪ್ರಸ್ತುತ ಚರ್ಚೆಯ ನಡುವೆ ಜಿಂದಾಲ್ ಅವರ ರಾಷ್ಟ್ರಧ್ವಜದ ಮೇಲಿನ ಪ್ರೇಮ ಹಾಗೂ ಆ ಹಕ್ಕನ್ನು ಪಡೆಯಲು ಅವರು ಹೋರಾಡಿದ ಹಾದಿ ಹೀಗಿದೆ:

  • ಈ ವಿಷಯದ ಕುರಿತು ಅಧ್ಯಯನ ನಡೆಸಲು ನೇಮಕವಾದ ಡಾ.ಪಿ.ಡಿ ಶಣೈ ಸಮಿತಿಯ ವರದಿಯನ್ನು 2002ರಲ್ಲಿ ಸ್ವೀಕರಿಸಿದ ಸಂಸತ್ತು.
  • ಜ.23 2004ರಲ್ಲಿ ಸುಪ್ರೀಂ ಕೋರ್ಟ್ ನವೀನ್ ಜಿಂದಾಲ್ ಅವರ ಪರವಾಗಿ ತೀರ್ಪು ನೀಡಿತು. ಅಲ್ಲದೆ ಸರ್ಕಾರ ಹೊಸ ‘ಭಾರತ ರಾಷ್ಟ್ರಧ್ವಜ ನೀತಿ 2002’ ಅನ್ನು ಜಾರಿಗೆ ತಂದಿತು.
  • 2005ರಲ್ಲಿ ತಿದ್ದುಪಡಿ ಮಾಡಿದ ರಾಷ್ಟ್ರೀಯ ಗೌರವಕ್ಕೆ ಧಕ್ಕೆ ನಿಯಂತ್ರಣ ಕಾಯ್ದೆಯನ್ನು ಸಂಸತ್ತಿನಲ್ಲಿ ಪರಿಚಯ. ಆ ಮೂಲಕ ಭಾರತೀಯ ಪ್ರಜೆ ರಾಷ್ಟ್ರಧ್ವಜವನ್ನು ಬಟ್ಟೆ, ಟೋಪಿಯಲ್ಲಿ ಬಳಸುವ ಅವಕಾಶಕ್ಕೆ ಒಪ್ಪಿಗೆ.
  • ವರ್ಷದ 365 ದಿನವೂ ಭಾರತೀಯ ಪ್ರಜೆ ರಾಷ್ಟ್ರಧ್ವಜವನ್ನು ಹಾರಿಸುವ ಸ್ವತಂತ್ರ 2008ರ ಜ.26ರಂದು ಸಿಕ್ಕಿತು.
  • ಮಾನ್ಯುಮೆಂಟಲ್ ಫ್ಲಾಗ್ ಎಂಬ ಪರಿಕಲ್ಪನೆ ಪರಿಚಯಿಸಿದ ನವೀನ್ ಜಿಂದಾಲ್. ಈ ಪರಿಕಲ್ಪನೆಯಲ್ಲಿ ದೇಶದ ವಿವಿಧೆಡೆ ಡೊಡ್ಡ ಗಾತ್ರದ ರಾಷ್ಟ್ರಧ್ವಜವನ್ನು ಹಾರಿಸಲು ನಿರ್ಧಾರ. 2009, ಡಿ.22ರಂದು ಸಿಕ್ಕ ಅನುಮತಿ. ಬೆಂಗಳೂರಿನ ಸೈನಿಕ ಸ್ಮಾರಕ ಭವನದ ಬಳಿಯೂ ಈ ಧ್ವಜ ಹಾರಿಸಲಾಗುತ್ತಿದೆ.
  • ಪತ್ನಿ ಶಲ್ಲು ಜಿಂದಾಲ್ ಬೆಂಬಲದೊಂದಿಗೆ ನ್ಯಾಷನಲ್ ಫ್ಲ್ಯಾಗ್ ಫೌಂಡೇಶನ್ ಸ್ಥಾಪನೆ. ನವದೆಹಲಿಯ ಕನ್ನೌಟ್ ಪ್ರದೇಶದ ಸೆಂಟ್ರಲ್ ಪಾರ್ಕ್ ನಲ್ಲಿ ಫ್ಲಾಗ್ ಆಫ್ ಇಂಡಿಯಾ ನಿರ್ಮಿಸಿ, ದೇಶದ ನಾಗರೀಕರಿಗೆ ಉಡುಗೊರೆಯಾಗಿ ನೀಡಿದರು. ಇದು ದೇಶದ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆ ಪಡೆದಿದೆ. ಈ ಸಂಸ್ಥೆಯ ಮೂಲ ಉದ್ದೇಶ ಯುವ ಜನಾಂಗದಲ್ಲಿ ರಾಷ್ಟ್ರಧ್ವಜದ ಮೌಲ್ಯವನ್ನು ಬಿತ್ತುವುದು. ಅದಕ್ಕಾಗಿ ತಿರಂಗಾ- ಹಕ್ಕು ಮತ್ತು ಜವಾಬ್ದಾರಿ ಎಂಬ ಸಂಚಾರಿ ವಸ್ತುಪ್ರದರ್ಶನ, ‘ತಿರಂಗಾ ತೇರಾ ಅಂಚಲ್’ ಆಡಿಯೋ ಆಲ್ಬಮ್, ತಿರಂಗಾ ರನ್, ತಿರಂಗಾ ಫೆಸ್ಟ್ ಹೀಗೆ ಹಲವು ಕಾರ್ಯಕ್ರಮಗಳ ಆಯೋಜನೆ.

Leave a Reply