ಸಾಕು ಕಾಮ್ರೆಡರೇ… ಮುಸ್ಲಿಂ ಕಾರ್ಡು, ಅಂಬೇಡ್ಕರ್ ಕಾರ್ಡು ಪಕ್ಕಕ್ಕಿಟ್ಟು ಕಾನೂನಿಗೆ ಶರಣಾಗಿ

ಚೈತನ್ಯ ಹೆಗಡೆ

ದೇಶದ್ರೋಹದ ಘೋಷಣೆ ಕೂಗಿದ ಆರೋಪ ಹೊತ್ತು, ತಲೆಮರೆಸಿಕೊಂಡಿದ್ದ ಐವರು ವಿದ್ಯಾರ್ಥಿಗಳು ಭಾನುವಾರ ತಡರಾತ್ರಿ ಜೆ ಎನ್ ಯು ಕ್ಯಾಂಪಸ್ಸಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳ ಗುಂಪು ಅವರೊಂದಿಗೆ ಸಭೆ ನಡೆಸಿ, ಆರೋಪಿಗಳಲ್ಲೊಬ್ಬರಾದ ಉಮರ್ ಖಾಲಿದ್ ಭಾಷಣವೂ ನೆರವೇರಿದೆ.

ಜೆ ಎನ್ ಯು ಸ್ವಾಯತ್ತ ವಿಶ್ವವಿದ್ಯಾಲಯವಾದ್ದರಿಂದ ಈ ಹಿಂದೆ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸುವುದಕ್ಕೆ ಪೋಲೀಸರನ್ನು ಒಳಬಿಟ್ಟುಕೊಂಡಿದ್ದೇ ವೈಸ್ ಚಾನ್ಸೆಲರ್ ಮಾಡಿರುವ ತಪ್ಪು ಅಂತ ಬುದ್ಧಿಜೀವಿಗಳ ಗಣ ಆಕ್ಷೇಪ ಎತ್ತಿತ್ತಾದ್ದರಿಂದ ಈ ಬಾರಿ ಪೋಲೀಸರು ಜೆ ಎನ್ ಯು ಗೇಟ್ ಹೊರಗಡೆಯೇ ಕಾಯುತ್ತಿದ್ದಾರೆ. ಸಂಬಂಧಿತ ಗುಂಪುಗಳೊಂದಿಗೆ ವೈಸ್ ಚಾನ್ಸೆಲರ್ ಸಭೆ ನಡೆಸಿ, ಅನುಮತಿಸಿದ ನಂತರವಷ್ಟೇ ಇವರ ಬಂಧನ ಸಾಧ್ಯವಾಗಲಿದೆ.

ಮುಂದಿನ ಸಂಘರ್ಷಕ್ಕಾಗಿ ಉಮರ್ ಖಾಲಿದ್ ಅದಾಗಲೇ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡಂತಿದೆ. ಅದರ ಮುನ್ನುಡಿಯಾಗಿ ಖಾಲಿದ್ ‘ಮುಸ್ಲಿಂ ಕಾರ್ಡ್’ ಎಸೆದಿದ್ದಾರೆ. ಸಂತ್ರಸ್ತ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಶಾರುಖ್ ಖಾನ್ ಸೂತ್ರಕ್ಕೆ ಶರಣಾಗಿರುವ ಖಾಲಿದ್, ‘ನನ್ನ ಹೆಸರು ಉಮರ್ ಖಾಲಿದ್, ಆದರೆ ನಾನು ಟೆರರಿಸ್ಟ್ ಅಲ್ಲ’ ಎಂದಿದ್ದಾರೆ.

ಖಾಲಿದ್ ಹಾಗೂ ಅವರ ಬೆಂಬಲಿಗರ ಮಾತುಗಳ ಸಾರಾಂಶ ಇಷ್ಟು- ‘ಮಾಧ್ಯಮದ ಒಂದು ವರ್ಗ ನಮ್ಮನ್ನು ದೇಶದ್ರೋಹಿಗಳನ್ನಾಗಿ ಚಿತ್ರಿಸಿ ಸಾರ್ವಜನಿಕರ ಆಕ್ರೋಶ ಸ್ಫೋಟಿಸುವಂತೆ ಮಾಡಿತು. ನ್ಯಾಯಾಲಯದಲ್ಲಿ ಕನ್ಹಯ್ಯ ಕುಮಾರ್ ಹತ್ಯೆಯೇ ಆಗಿಬಿಡುವಂಥ ಸನ್ನಿವೇಶವಿತ್ತು. ಹೀಗಾಗಿ ನಾವು ನಮ್ಮ ಕುಟುಂಬದ ಸುರಕ್ಷತೆ ದೃಷ್ಟಿಯಿಂದ ದೂರ ಉಳಿದಿದ್ದೆವು. ಆದರೆ ಈ ಒಂದು ವಾರದಲ್ಲಿಬೇರೆ ಬೇರೆ ಕಡೆಗಳಿಂದ ನಮಗೆ ಬೆಂಬಲ ವ್ಯಕ್ತವಾಗಿದೆ. ಈಗ ಕಾನೂನಿಗೆ ಒಪ್ಪಿಸಿಕೊಂಡು ಆರೆಸ್ಸೆಸ್ಸಿಗರೂ ಸೇರಿದಂತೆ ಗೂಂಡಾ ವಕೀಲರನ್ನು ಎದುರಿಸೋಕೆ ಸಿದ್ಧ.’

ಇಟ್ಸ್ ಓಕೆ, ನಿಮ್ಮ ಪಾಲಿನ ವರ್ಷನ್ ಒಪ್ಪಿಸುತ್ತಿದ್ದೀರಾ. ಆದರೆ ಖಾಲಿದ್ ಸೇರಿದಂತೆ ಅವರ ಸಹಚರರಿಗೆಲ್ಲ ಗೊತ್ತಿರಬೇಕು, ಜೆಪಿ- ಆರೆಸ್ಸೆಸ್ಸಿಗರು ಮಾತ್ರವೇ ನಿಮ್ಮನ್ನು ವಿರೋಧಿಸುತ್ತಿರೋದಲ್ಲ. ಸೇನೆ ನಿವೃತ್ತರು, ಜನಸಾಮಾನ್ಯರು, ಸೆಲೆಬ್ರಿಟಿಗಳ ಒಂದು ವರ್ಗ ಎಲ್ಲರೂ ನಿಮ್ಮ ಮೇಲೆ ಸಿಟ್ಟುಗೊಂಡಿದ್ದಾರೆ. ನಿಜ, ಇವರ ವಿರುದ್ಧದ ಅಭಿಯಾನದಲ್ಲಿ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಮುಂಚೂಣಿಯಲ್ಲಿದ್ದಿರಬಹುದು. ಅದಕ್ಕೆ ರಾಜಕೀಯ ಲಾಭವೂ ಇದ್ದಿರಬಹುದು. ಆದರೆ ನೀವೆಲ್ಲ ಈಗ ‘ಮಾಬ್ ಮೆಂಟಾಲಿಟಿ’ ಅಂತ ದೂರುತ್ತಿರುವ ಜನರ ಆಕ್ರೋಶ ಈ ಪರಿ ಏರುವುದಕ್ಕೆ ಕಾರಣ ಕೇವಲ ರಾಜಕೀಯದ್ದಲ್ಲ. ಎಲ್ಲವನ್ನೂ ಆರೆಸ್ಸೆಸ್ ಸಂಚು, ಕೇಂದ್ರ ಸರ್ಕಾರದ ಹತ್ತಿಕ್ಕುವ ಕ್ರಮ ಎಂದೆಲ್ಲ ಬಣ್ಣಿಸಬಹುದು. ಆದರೆ ಹೆಚ್ಚಿನವರು ಇದನ್ನು ನಂಬುವುದಕ್ಕೆ ಏಕೆ ತಯಾರಿಲ್ಲ ಅಂತಂದ್ರೆ- ಫೆಬ್ರವರಿ 9 ರಂದು ನೀವೆಲ್ಲ ಆಯೋಜಿಸಿದ್ದ ಸಭೆಯಲ್ಲಿ’ಮೋದಿ ಹಠಾವ್’ ಅಂತಲೋ ‘ಆರೆಸ್ಸೆಸ್ ಮುರ್ದಾಬಾದ್’ ಅಂತಲೋ ಕೂಗಿದ್ದರೆ ಆ ಪಾಳೆಯಕ್ಕೆ ಸೇರಿದ್ದ ಒಂದಿಷ್ಟು ಮಂದಿ ಮಾತ್ರ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಿದ್ದರು. ಆದರೆ ಅಲ್ಲಿ ಮೊಳಗಿದ್ದು, ‘ಆಜಾದಿ, ಆಜಾದಿ ಕಾಶ್ಮೀರದ ಆಜಾದಿ’ ಎಂಬ ಕೂಗು. ದೇಶವನ್ನು ತುಂಡು ಮಾಡುವ ತನಕ ಸಮರ ಮುಗಿಯದು ಎಂಬ ಘೋಷ. ಅತಿಬುದ್ಧಿವಂತಿಕೆಯ ಅವಕಾಶವಾದಿತನಕ್ಕೆ ಶರಣಾಗದೇ ಉಳಿದಿರುವ ಯಾವ ಭಾರತೀಯನೂ ಇದನ್ನು ಒಪ್ಪಲು ಸಾಧ್ಯವಿಲ್ಲ.

ಇಲ್ಲ… ಇಲ್ಲ.. ಹಾಗೆಲ್ಲ ಘೋಷಣೆ ಕೂಗಿದವರು ಜೆಎನ್ ಯುಗೆ ಸೇರದ ಯಾರೋ ಹೊರಗಿನವರು ಅಂತ ಹೇಳುತ್ತಿದ್ದೀರಿ. ಆ ಸಾಧ್ಯತೆಯೂ ಇದ್ದಿರಬಹುದೆಂದು ಒಪ್ಪಿಕೊಳ್ಳುವುದಾದರೂ ಈ ಪ್ರಚೋದನಾತ್ಮಕ ವಾತಾವರಣ ನಿರ್ಮಿಸಿದ ‘ಖ್ಯಾತಿ’ ತಮ್ಮದೇ ಎಂಬ ಕುರಿತಂತೂ ನಿಮ್ಮ ಪಾಳೆಯದವರಿಗೆ ಹೆಮ್ಮೆ ಇದೆ. ನ್ಯಾಯಾಂಗದ ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಿಯೇ ಗಲ್ಲಿಗೇರಿಸಿದ ಅಫ್ಜಲ್ ಸ್ಮರಣೆಗೆ ಕಾರ್ಯಕ್ರಮ ಏರ್ಪಡಿಸುತ್ತೀರಿ ಅಂತಾದರೆ ಅಲ್ಲಿ ದೇಶ ವಿರೋಧದ, ಪ್ರತ್ಯೇಕತೆಯ ಘೋಷಣೆ ಅಲ್ಲದೇ ಇನ್ನೇನು ಕೇಳುವುದಕ್ಕೆ ಸಾಧ್ಯ? ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಸಮರ್ಥಿಸಿಕೊಳ್ಳುವುದಾದರೆ ಯಾವ ದೇಶಕ್ಕೂ ಕಾಯ್ದೆಗಳೇ ಬೇಡ ಎಂದಂತಾಗುತ್ತದಷ್ಟೆ.

ತಡರಾತ್ರಿ ಜೆಎನ್ ಯುದಲ್ಲಿ ಸಮಾನ ಮನಸ್ಕರನ್ನು ಉದ್ದೇಶಿಸಿ ಮಾತನಾಡಿದ ಉಮರ್ ಖಾಲಿದ್ ಇದೇ ಧಾಟಿಯಲ್ಲೇ ಮಾತುದುರಿಸಿದ್ದಾರೆ. ‘ಕೊನೆಯಲ್ಲಿ, ನಾನು ಯಾವ ರಾಷ್ಟ್ರವಾದವನ್ನೂ ನಂಬೋದಿಲ್ಲ. ಗಡಿಗಳಿಲ್ಲದ ಜಗತ್ತನ್ನು ನಾನು ಇಷ್ಟಪಡುತ್ತೇನೆ. ಇದರ ನಿರ್ಮಾಣ ನಮ್ಮ ಕೈಯಲ್ಲೇ ಇದೆ’.

ಇದೆಂಥ ಭಂಡ ವಾದ? ಭಾರತ ಒಂದು ರಾಷ್ಟ್ರ ಎಂಬುದನ್ನು ಒಪ್ಪಿಕೊಂಡ ನಂತರವಷ್ಟೆ ಡಾ. ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಬರೆದಿದ್ದಲ್ಲವೇ? ಆಜಾದಿ ಹೆಸರಲ್ಲಿ ದೇಶವಿರೋಧಿತನ ಪ್ರಚೋದಿಸಿದ್ದನ್ನು ಈಗ ಪಿಲಾಸಪಿ ಮಾತುಗಳಲ್ಲಿ ಮುಚ್ಚಿಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಯಾರು ಒಪ್ತಾರೆ?

‘ನಾನು ಮುಸ್ಲಿಂ ಅನ್ನೋದನ್ನು ಯಾವತ್ತೂ ನೆನಪಿಸಿಕೊಂಡಿರಲಿಲ್ಲ. ಆದರೆ ಮಾಧ್ಯಮಗಳು ನೀಡುತ್ತಿರುವ ಪ್ರಚೋದನೆಯಿಂದ ಜನ ಅದನ್ನು ನೆನಪಿಸುವಂತಾಗಿದೆ.’ ಎನ್ನುತ್ತ ಮುಸ್ಲಿಂ ಆಗಿರುವ ಕಾರಣಕ್ಕೆ ತಾವು ಗುರಿಯಾಗುತ್ತಿರುವುದನ್ನು ಸೂಚಿಸಿದ್ದಾರೆ ಖಾಲಿದ್.

ಮೂಲಗಳನ್ನು ಉಲ್ಲೇಖಿಸುತ್ತ ಖಾಲಿದ್ ಗೆ ಇದ್ದಬದ್ದ ಉಗ್ರಸಂಘಟನೆ ಜತೆಗೆಲ್ಲ ಸಂಬಂಧ ಕಲ್ಪಿಸುವುದು ಖಂಡನೀಯವೇ. ಆದರೆ ಮುಸ್ಲಿಂ ಎಂಬ ಕಾರಣವಷ್ಟೇ ಖಾಲಿದ್ ರನ್ನು ಕಟಕಟೆಯಲ್ಲಿ ನಿಲ್ಲಿಸಿಲ್ಲ. ಹಾಗಾಗಿದ್ದರೆ ಇದೇ ಆರೋಪದ ಮೇಲೆ ಇತರರು ಅವರ ಜತೆ ನಿಲ್ಲಬೇಕಾದ ಪ್ರಮೇಯವೇ ಇರುತ್ತಿರಲಿಲ್ಲ. ಇನ್ನೊಬ್ಬ ರಿಯಾಜುಲ್ ಹಕ್ ಬಿಟ್ಟರೆ ಅನಿರ್ಬನ್ ಭಟ್ಟಾಚಾರ್ಯ, ಅಶುತೋಷ್ ಕುಮಾರ್, ಅನಂತ ಪ್ರಕಾಶ್ ನಾರಾಯಣ್, ರಾಮಾ ನಾಗಾ ಇವರ ವಿರುದ್ಧವೆಲ್ಲ ಧರ್ಮ ನೋಡಿ ಪ್ರಕರಣ ದಾಖಲಿಸಲಾಯಿತೇ?

ಖಾಲಿದ್ ಜತೆ ತಡರಾತ್ರಿ ಭಾಷಣ ಮಾಡಿದ ಅನಿರ್ಬನ್ ಭಟ್ಟಾಚಾರ್ಯ, ಖಾಲಿದ್ ರ ಮುಸ್ಲಿಂ ಕಾರ್ಡ್ ಜತೆಗೆ ಸಪೋರ್ಟಿಗೆ ಇನ್ನೊಂದಿರಲಿ ಅಂತ ‘ಅಂಬೇಡ್ಕರ್ ಕಾರ್ಡ್’ ಒಗೆದಿದ್ದಾರೆ. ಅಂಬೇಡ್ಕರ್ ಸಹ ಕಾಶ್ಮೀರದಲ್ಲಿ ಜನಮತಗಣನೆ ಆಗಬೇಕು ಅಂದಿದ್ದರು, ಸೇನೆಯ ಉಪಸ್ಥಿತಿ ಅವರಿಗೂ ಇಷ್ಟ ಇರಲಿಲ್ಲ ಗೊತ್ತಾ ಅಂದಿದ್ದಾರೆ.

ಅಯ್ಯೋ ಭಟ್ಟಾಚಾರ್ಯರೇ, ನಿಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಅಂಬೇಡ್ಕರ್ ಹೆಸರನ್ನೇಕೆ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತೀರಿ? ಜನಮತಗಣನೆ ಅನ್ನೋದು ಆ ಕಾಲದಲ್ಲಿ ಅಂಬೇಡ್ಕರ್ ಮಾತ್ರವಲ್ಲದೇ ಹಲವರ ಅಭಿಲಾಷೆ ಆಗಿತ್ತು. ಆದರೆ ಅದಕ್ಕೆ ಕರಾರುಗಳಿದ್ದವು. ಪಾಕಿಸ್ತಾನವು ಆಕ್ರಮಿಸಿಕೊಂಡ ಎಲ್ಲ ಪ್ರದೇಶಗಳಿಂದ ಅವರ ಸೇನೆ ಹಿಂತೆಗೆದು, ಎಲ್ಲವೂ ಮಿಲಿಟರಿ ಮುಕ್ತವಾಗಿ ನಂತರ ಅಲ್ಲಿ ಜನಮತಗಣನೆ ಎಂಬುದಾಗಿತ್ತು ಪ್ರಸ್ತಾಪ. ಗಡಿಗಳಿಲ್ಲದ ಚಿಂತನೆಯ ಯಾವ ಕಾಮ್ರೆಡರೂ ಪಾಕಿಸ್ತಾನ ಹಿಂತೆಗೆಯುವಂತೆ ಒತ್ತಾಯಿಸಲಿಲ್ಲ. ಹೀಗಾಗಿ ಜನಮತಗಣನೆ ಎಂಬುದು ಅವತ್ತೇ ಬಿದ್ದುಹೋದ, ಈಗ ಅನುಷ್ಠಾನ ಸಾಧ್ಯವಿಲ್ಲದ ಪರಿಕಲ್ಪನೆ ಅನ್ನೋದು ಅಧ್ಯಯನ ನಿರತರಿಗೆಲ್ಲ ಗೊತ್ತಾಗುತ್ತದೆ. ಆದರೆ ನೀವೆಲ್ಲ ಅಧ್ಯಯನದ ಜಾಯಮಾನದವರಲ್ಲವಲ್ಲ, ಘೋಷಣೆ ಕೂಗೋದಷ್ಟೇ ವಿದ್ಯಾರ್ಥಿ ಜೀವನ ಅಂದುಕೊಂಡೋರು. ಇದಕ್ಕೆ ಅಂಬೆಡ್ಕರರನ್ನೂ ಓದಿಕೊಳ್ಳಬೇಕಿಲ್ಲ, ಮಾರ್ಕ್ಸ್ ನನ್ನೂ ಓದಿಕೊಳ್ಳಬೇಕಿಲ್ಲ. ಅಷ್ಟಲ್ಲದೇ ನಿಜಕ್ಕೂ ಅಂಬೇಡ್ಕರರನ್ನು ಓದಿಕೊಂಡಿದ್ದರೆ ಅವರು ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಜಾರಿಗೊಳ್ಳುವುದಕ್ಕೆ, ಅದಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವುದಕ್ಕೆ ಪ್ರಖರ ವಿರೋಧ ವ್ಯಕ್ತಪಡಿಸಿ ರಾಷ್ಟ್ರವಾದ ಮೆರೆದಿದ್ದರು ಅಂತ ಗೊತ್ತಾಗುತ್ತಿತ್ತು. ಆದರೆ ಅಂಬೇಡ್ಕರ್ ನಿಮಗೆ ಬೇಕಿರೋದು ನಿಮ್ಮ ದೋಷ ಮುಚ್ಚಿಕೊಳ್ಳುವ ಗುರಾಣಿಯಾಗಿ ಮಾತ್ರ ಎಂಬುದೇ ದುರಂತ.

Leave a Reply