ಸುದ್ದಿಸಂತೆ: ನಾಳೆ ಪಂಚಾಯ್ತಿ ಫಲಿತಾಂಶ, ಕಾರಾಗೃಹಗಳಲ್ಲಿ ಸಿಸಿಟಿವಿ, ಉಗ್ರ ಕಾರ್ಯಾಚರಣೆ ಅಂತ್ಯ, ಜಾಟ್ ಹಿಂಸಾಚಾರ…

Home Minister Dr. G. Parameshwar, Police Commissioner N.S. Megharikh visit at Thyagaraja Nagar Women’s Police Station in Bengaluru on Monday.

ಇಂದು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಫಲಿತಾಂಶ

ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಫಲಿತಾಂಶ ಮಂಗಳವಾರ ಹೊರಬೀಳಲಿದೆ. ಈ ಕುರಿತ ಪ್ರಮುಖ ಅಂಶಗಳು ಹೀಗಿವೆ.

  • ಜಿಲ್ಲಾ ಪಂಚಾಯಿತಿ ಹಾಗೂ ಅದರ ವ್ಯಾಪ್ತಿಯ ತಾಲೂಕು ಪಂಚಾಯಿತಿಗಳಿಗೆ ಫೆ.13 ಮತ್ತು ಫೆ.20ರಂದು ಎರಡು ಹಂತಗಳಲ್ಲಿ ನಡೆದಿದ್ದ ಮತದಾನ. ಚುನಾವಣಾ ಮತ ಎಣಿಕೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯ.
  • ಆಯಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು. ಬೇಗನೆ ಫಲಿತಾಂಶ ಕೊಡಲು ಹೆಚ್ಚು ಟೇಬಲ್ ಅಳವಡಿಕೆ. ಮುನ್ನಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಬಿಗಿ ಪೊಲೀಸ್ ಬಂದೋಬಸ್ತ್. ಮತ ಎಣಿಕೆ ನಡೆಯುವ ಕೇಂದ್ರಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಪಟಾಕಿ ಸಿಡಿತ ನಿಷೇಧ.
  • ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ 1080 ಹಾಗೂ 175 ತಾಲ್ಲೂಕು ಪಂಚಾಯಿತಿ 3873 ಕ್ಷೇತ್ರಗಳಲ್ಲಿ 16991 ಅಭ್ಯರ್ಥಿಗಳು ಸ್ಪರ್ಧೆ.
  • ಕಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೊಸೆ ಹೊಳೇನರಸೀಪುರದ ಹಳೇಕೋಟೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಾ ಬೇತಮಂಗಲ ಕ್ಷೇತ್ರದ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ, ಎ.ಮಂಜು, ಪರಮೇಶ್ವರ್ ನಾಯಕ್, ಶಾಸಕ ವಿಶ್ವ ನಾಥ್ ಪತ್ನಿ, ವಿಜಯಾನಂದ ಕಾಶಪ್ಪನವರ್ ಪತ್ನಿ, ರಾಜಣ್ಣ ಅವರ ಪತ್ನಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಪುತ್ರ ಸೇರಿ ಪ್ರಮುಖ ರಾಜಕಾರಣಿಗಳ ಕುಟುಂಬ ಸದಸ್ಯರು.
  • ಪಂಚಾಯತಿ ಕಾಯ್ದೆ ತಿದ್ದುಪಡಿ ತಂದ ನಂತರ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಐದು ವರ್ಷ ಮತ್ತು ರಾಜ್ಯ ಸಚಿವ ಸಂಪುಟ ಸ್ಥಾನಮಾನ ದೊರೆಯುತ್ತದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ಸಚಿವರು, ಶಾಸಕರು, ಸಂಸದರ ಮಕ್ಕಳು ಹಾಗೂ ರಕ್ತ ಸಂಬಂಧಿಗಳು ಚುನಾವಣೆಗೆ ಸ್ಪರ್ಧೆ.

ಕಾರಾಗೃಹದಲ್ಲೂ ಸಿಸಿಟಿವಿ ಅಳವಡಿಕೆಗೆ ನಿರ್ಧಾರ

ರಾಜ್ಯದ ಕಾರಾಗೃಹಗಳಲ್ಲೇ ಖೈದಿಗಳು ಗಾಂಜಾ , ಮಾದಕ ದ್ರವ್ಯ ಸಾಗಣೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೆರೆಮನೆಯಲ್ಲೂ ಸಿಸಿಟಿವಿ ಅಳವಡಿಸುವ ನಿರ್ಧಾರಕ್ಕೆ ಬಂದಿದೆ. ಕೇವಲ ಗಾಂಜಾ ಹಾಗೂ ಮಾದಕ ದ್ರವ್ಯ ಅಷ್ಚೇ ಅಲ್ಲದೇ ಇತರೆ ಅಪರಾಧ ಚಟುವಟಿಕೆಗಳಲ್ಲಿ ಖೈದಿಗಳ ಭಾಗಿ ನಿಯಂತ್ರಣಕ್ಕೆ ಒಟ್ಟು 20 ಕಾರಾಗೃಹಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಈ ಯೋಜನೆಗೆ ₹17.44 ಕೋಟಿ ಮೀಸಲಿಡಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಮತ್ತೊಂದೆಡೆ ನಗರದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸುವುದಾಗಿ ಭರವಸೆ ಕೊಟ್ಟಿದ್ದಾರೆ.

ಕಳೆದ ಬಜೆಟ್ ನಲ್ಲಿ 10 ಹೊಸ ಮಹಿಳಾ ಪೊಲೀಸ್ ಠಾಣೆಗಳ ಸ್ಥಾಪನೆ ಘೋಷಣೆಯಾಗಿತ್ತು. ಅವುಗಳಲ್ಲಿ ಆರು ಠಾಣೆಗಳ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು, ಉಳಿದ ಜಿಲ್ಲೆಗಳಲ್ಲೂ ತಲಾ ಒಂದರಂತೆ ಮಹಿಳಾ ಠಾಣೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿದರು. ಇದೇ ವೇಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ನೇಮಿಸಲಾಗುವುದು ಎಂದರು.

3 ಉಗ್ರರ ಹತ್ಯೆ, ಕಾರ್ಯಾಚರಣೆ ಅಂತ್ಯ

ಶ್ರೀನಗರದ ಪಂಪೊರೆಯ ಸರ್ಕಾರಿ ಆವರಣಕ್ಕೆ ನುಗ್ಗಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಸತತ 48 ಗಂಟೆಗಳ ಕಾಲ ಕಾರ್ಯಚರಣೆ ನಂತರ ಈ ಉಗ್ರರನ್ನು ಹತ್ತಿಕ್ಕಲಾಗಿದೆ. ಈ ವೇಳೆ ಇಬ್ಬರು ಕ್ಯಾಪ್ಟನ್ ಹಾಗೂ ಇತರೆ ಮೂವರು ಮೃತಪಟ್ಟಿದ್ದಾರೆ. ಕಳೆದ 6 ವರ್ಷದಲ್ಲಿ ಶ್ರೀನಗರದಲ್ಲಿ ಇದು ದೊಡ್ಡ ಪ್ರಮಾಣದ ಆತ್ಮಹತ್ಯಾ ದಾಳಿ ಪ್ರಯತ್ನ ಎಂದೂ ಹೇಳಲಾಗುತ್ತಿದೆ. 120 ನಾಗರೀಕರನ್ನು ರಕ್ಷಿಸುವ ಮೂಲಕ ಈ ಕಾರ್ಯಚರಣೆ ಅಂತ್ಯಗೊಂಡಿದೆ.

 ಜಾಟ್ ಸಂಘರ್ಷ: ಸಾವಿನ ಸಂಖ್ಯೆ 8ಕ್ಕೆ ಏರಿಕೆ, ದೆಹಲಿಯಲ್ಲಿ ನೀರಿಗಾಗಿ ಪರದಾಟ

ಹರ್ಯಾಣದಲ್ಲಿ ನಡೆಯುತ್ತಿರುವ ಜಾಟ್ ಸಮುದಾಯದ ಮೀಸಲಾತಿ ಹೋರಾಟ ಹಿಂಸಾ ರೂಪ ಪಡೆದು ಏಳನೇ ದಿನವೂ ಮುಂದುವರೆದಿದೆ. ಪ್ರತಿಭಟನಾಕಾರರ ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ ಸೋಮವಾರವೂ ನಾಲ್ವರು ಸಾವನಪ್ಪಿದ್ದಾರೆ. ಒಟ್ಟಾರೆ ಸಾವಿನಸಂಖ್ಯೆ 8ಕ್ಕೆ ಏರಿದೆ. ಪೊಲೀಸ್ ಮತ್ತು ಸೇನೆಯ 20 ಮಂದಿ ಮತ್ತು 10 ಪ್ರತಿಭಟನಾಕಾರರು ಸಂಘರ್ಷದಲ್ಲಿ ಗಾಯಗೊಂಡಿದ್ದಾರೆ. ಇಲ್ಲಿಯವರೆಗೂ ಸಮಾರು 20 ಸಾವಿರ ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಇನ್ನೂ ಕೆಲವು ದಿನಗಳು ಕರ್ಫೂ ಮುಂದುವರೆಯಲಿದೆ.

ಈ ಪ್ರತಿಭಟನೆಯಿಂದ ರಾಷ್ಟ ರಾಜಧಾನಿ ದೆಹಲಿಯಲ್ಲಿ ನೀರಿನ ಅಭಾವ ಉಂಟಾಗಿದೆ. ಇದರಿಂದ ಇಲ್ಲಿನ ಜನರ ನಿತ್ಯ ಚಟುವಟಿಕೆಗಳಿಗೆ ತೀವ್ರತೊಂದರೆ ಆಗಿದೆ.

ಟಿ20 ಪಂದ್ಯ: ಮಿಥಾಲಿ ಪಡೆಗೆ ಜಯ

ಶ್ರೀಲಂಕಾ ವಿರುದ್ಧ ಸೋಮವಾರ ರಾಂಚಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ವನಿತೆಯರ ತಂಡ 34 ರನ್ ಗಳ ಜಯದೊಂದಿಗೆ ಶುಭಾರಂಭ ಮಾಡಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಲಂಕಾ ವನಿತೆಯರು 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 96 ರನ್ ಗಳಿಸಲಷ್ಟೇ ಶಕ್ತರಾದರು. ಭಾರತದ ಪರ ಸ್ಮೃತಿ ಮಂಧಾನ 35, ಹರ್ಮನ್ ಪ್ರೀತ್ ಕೌರ್ 36 ಹಾಗೂ ಅನುಜಾ ಪಾಟೀಲ್ 14ಕ್ಕೆ 3 ಉತ್ತಮ ಪ್ರದರ್ಶನ ನೀಡಿದರು.

ರೂಪಾಯಿ ಮೌಲ್ಯ ಕುಸಿತ

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಪ್ರತಿ ಡಾಲರ್ ಗೆ 68.91ರಷ್ಟು ಇಳಿಕೆಯಾಗಿದ್ದು, ಈವರೆಗಿನ ದಾಖಲೆಯ ಕುಸಿತ ಇದಾಗಿದೆ.

ಧೋನಿಗೆ ಗಾಯ, ಬದಲಿ ಆಟಗಾರನ ಸ್ಥಾನಕ್ಕೆ ಪಾರ್ಥೀವ್

ಬುಧವಾರದಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ ತಾಲೀಮು ನಡೆಸುತ್ತಿರುವ ಟೀಂ ಇಂಡಿಯಾಗೆ ಆತಂಕ ಎದುರಾಗಿದೆ. ಕಾರಣ, ನಾಯಕ ಮಹೇಂದ್ರ ಸಿಂಗ್ ಧೋನಿ ಸೋಮವಾರ ನಡೆದ ತಂಡದ ಮೊದಲ ಅಭ್ಯಾಸ ವೇಳೆ ಬೆನ್ನಿನಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಈ ವೇಳೆ ಆಯ್ಕೆ ಸಮಿತಿ ಪಾರ್ಥೀವ್ ಪಟೇಲ್ ಅವರನ್ನು ಬದಲಿ ಆಟಗಾರನ ಸ್ಥಾನಕ್ಕೆ ಆಯ್ಕೆ ಮಾಡಿದೆ. ಭಾರತ ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದೆ.

20 ವರ್ಷಗಳ ಹಿಂದಿನ ಪ್ರಕರಣಕ್ಕೆ 3 ವರ್ಷ ಜೈಲು

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 20 ವರ್ಷಗಳ ಹಿಂದೆ ಸರ್ಕಾರಿ ಸೇವೆಯಿಂದ ವಜಾಗೊಂಡಿದ್ದ ಕೇಂದ್ರ ಅಬಕಾರಿ ಇಲಾಖೆಯ ಮಾಜಿ ಸಬ್ ಇನ್ಸ್ ಫೆಕ್ಟರ್ ಸಮರೆಂದ್ರ ಸಿಂಗ್ ಗೆ ಸಿಬಿಐ ಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿ, 2.5 ಲಕ್ಷ ದಂಡ ಹಾಕಿದೆ. ಸಿಬಿಐ ವಿಶೇಷ ನ್ಯಾ. ಸರ್ವಜೀತ್ ಕುಮಾರ್ ಈ ಆದೇಶ ನೀಡಿದ್ದಾರೆ.

Leave a Reply