ಕನ್ಹಯ್ಯಾರನ್ನು ಬಂಧಿಸಿದ್ದು ಓಕೆ ಆದರೆ.. ಈ ಗೂಂಡಾ ವಕೀಲರ ಬಂಧನವಿಲ್ಲಯಾಕೆ?

ಸೋಮಶೇಖರ ಪಿ., ಭದ್ರಾವತಿ

ದೇಶದ್ರೋಹ ಆರೋಪದಲ್ಲಿ ಹೊತ್ತಿರುವ ಕನ್ಹಯ್ಯಾರನ್ನು ಬಂಧನ ಒಪ್ಪಬೇಕಾದ ವಿಚಾರ. ಆತ ತಪ್ಪಿತಸ್ಥ ಅಥವಾ ನಿರಪರಾಧಿ ಎಂದು ನ್ಯಾಯಾಂಗ ನಿರ್ಧರಿಸುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ, ಪಠಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಕಾನೂನನ್ನು ಏಕಾಏಕಿ ತಮ್ಮ ಕೈಗೆತ್ತಿಕೊಂಡು ಕನ್ಹಯ್ಯಾ ಮೇಲೆ ಹಲ್ಲೆ ನಡೆಸಿದ ವಕೀಲರಿಗೆ ಶಿಕ್ಷೆ ಇಲ್ಲವೇ ಎಂದು.

ಫೆ.15ರಂದು ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಪ್ರತಿಭಟನಾ ನಿರತ ವಕೀಲರ ಪೈಕಿ ವಿಕ್ರಮ್ ಸಿಂಗ್ ಚೌಹಾಣ್, ಯಶ್ಪಾಲ್ ಸಿಂಗ್ ಮತ್ತು ಒಮ್ ಶರ್ಮಾ, ಕನ್ಹಯ್ಯಾ ಹಾಗೂ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದು ನಾವೆಲ್ಲರೂ ನೋಡಿದ್ದೇವೆ. ಆ ವರ್ತನೆಗಾಗಿ ಕಾನೂನಿನ ಪ್ರಕಾರ ಅವರನ್ನು ಬಂಧಿಸಬೇಕಿತ್ತು. ಆದರೆ, ಈವರೆಗೂ ಅದು ಸಾಧ್ಯವಾಗಿಲ್ಲ.

ಅಷ್ಟಕ್ಕೆ ಈ ವಕೀಲರು ಸುಮ್ಮನಾಗಿದ್ದಾರೆ ಎಂದು ಭಾವಿಸಬೇಡಿ. ಈಗಿನ ಹೊಸ ವಿಷಯದ ಪ್ರಕಾರ, ಮತ್ತೆ ಕನ್ಹಯ್ಯಾ ಮೇಲೆ ದಾಳಿ ನಡೆಸಲು ಈ ಪುಂಡ ವಕೀಲರು ಸಜ್ಜಾಗಿದ್ದಾರೆ. ಹೌದು, ಇಂಡಿಯಾ ಟುಡೆ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಈ ಮೂವರು ವಕೀಲರೇ ಹೇಳಿರುವ ಮಾತಿದು. ‘ಕನ್ಹಯ್ಯಾ ಪೊಲೀಸರ ವಶದಲ್ಲಿದ್ದಾಗ ಸುದೀರ್ಘ 3 ಗಂಟೆಗಳ ಕಾಲ ಬಾರಿಸಿದ್ದೇವೆ. ‘ಭಾರತ್ ಮಾತಾಕಿ ಜೈ’ ಎಂದು ಹೇಳುವವರೆಗೂ ಬಿಟ್ಟಿಲ್ಲ. ನಮ್ಮ ಹೊಡೆತಗಳಿಗೆ ಆತನ ಪ್ಯಾಂಟ್ ಒದ್ದೆಯಾಯಿತು. ಇಷ್ಟಕ್ಕೆ ನಾವು ಸುಮ್ಮನಾಗೊದಿಲ್ಲ. ಯಾರೇ ಆಗಲಿ, ನಮ್ಮ ಮೇಲೆ ಏನೇ ಕೇಸ್ ದಾಖಲಿಸಲಿ ತಲೆ ಕೆಡಿಸಿಕೊಳ್ಳೊದಿಲ್ಲ. ಅವನನ್ನು ಇಷ್ಟಕ್ಕೇ ಬಿಡುವುದಿಲ್ಲ ಪೆಟ್ರೋಲ್ ಬಾಂಬ್ ಹಾಕುತ್ತೇವೆ’ ಎಂದು ರಾಜಾರೋಷವಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ.

ಜೆ ಎನ್ ಯು ಆವರಣದಲ್ಲಿ ದೇಶ ವಿರೋಧಿ ಕೂಗು ಎತ್ತಿದವರು ಹೇಗೆ ಕಾನೂನಿನ ಶಿಕ್ಷೆಗೆ ಒಳಗಾಗಬೇಕೊ, ಅದೇ ರೀತಿ ಕಾನೂನಿನ ಚೌಕಟ್ಟನ್ನು ಮೀರಿದ ವಕೀಲರ ಅತಿರೇಕದ ವರ್ತನೆ ಸಹ ಶಿಕ್ಷಾರ್ಹ.ಇಷ್ಟೆಲ್ಲಾ ಇದ್ದರೂ ಈ ವಕೀಲರು, ಯಾವುದೇ ಹೆದರಿಕೆ ಇಲ್ಲದೇ ರಾಜಾರೋಷವಾಗಿ ಅಡ್ಡಾಡಿಕೊಂಡಿರುವುದೇಕೆ ? ವಕೀಲರು ಮಾತ್ರ ಕಾನೂನು ಚೌಕಟ್ಟಿನಿಂದಾಚೆಗೆ ವರ್ತಿಸಬಹುದೇ? ಕನ್ಹಯ್ಯಾ ಅವರನ್ನು ಕಾನೂನು ಉಲ್ಲಂಘನೆ ಆರೋಪದಲ್ಲಿ ಬಂಧಿಸಿದಂತೆ ಈ ವಕೀಲರನ್ನು ಏಕೆ ಬಂಧಿಸುತ್ತಿಲ್ಲ?

‘ಪೊಲೀಸರ ಸಮ್ಮುಖದಲ್ಲೇ ನಾವು ಕನ್ಹಯ್ಯಾ ಅವರನ್ನು ಥಳಿಸಿದ್ದೇವೆ. ಪೊಲೀಸರು ಸಹ ನಮಗೆ ಬೆಂಬಲಿಸಿದರು’ ಎಂದಿರುವುದೂ ತನಿಖೆಗೊಳಬೇಕಾಗಿರುವ ಸಂಗತಿಯೇ. ದೆಹಲಿ ಪೋಲೀಸ್ ಆಯುಕ್ತರೂ ಟಿವಿ ವಾಹಿನಿಗಳ ಸಂದರ್ಶನದಲ್ಲಿ ಇದಕ್ಕೆ ಸಮರ್ಪಕ ಉತ್ತರ ಹೇಳಿಲ್ಲ. ಒಂದೆಡೆ ತಾವು ದಾಳಿ ಮಾಡಿರುವ ಬಗ್ಗೆ ವಕೀಲರೇ ಕ್ಯಾಮರಾ ಎದುರು ಜಂಬ ಕೊಚ್ಚಿಕೊಳ್ಳುತ್ತಿದ್ದರೂ ಪೋಲೀಸ್ ಆಯುಕ್ತರು ಮಾತ್ರ ಈ ಕುರಿತು ತನಿಖೆ ಪ್ರಕ್ರಿಯೆಗಳಾಗಬೇಕು, ಗೂಂಡಾಗಿರಿ ತೋರಿದ ವಕೀಲರು ಯಾರು ಎಂಬುದನ್ನು ಮೊದಲು ಗುರುತಿಸೋ ಕೆಲಸ ಆಗಬೇಕು ಅಂತ ರಾಗ ಎಳೀತಿದಾರೆ!

ನ್ಯಾಯಾಲಯದಲ್ಲಿ ವಾದ ಮಾಡುವಾಗ ಯಾರೊಬ್ಬರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ವಾದ ಮಾಡುವ ವಕೀಲರು, ‘ದೇಶದ ವಿರುದ್ಧ ಕೂಗುವವರಿಗೆ ತಕ್ಕ ಪಾಠ ಕಲಿಸಲು ಈ ರೀತಿ ಮಾಡಿದೆವು. ದೇಶದ ಬಗ್ಗೆ ಮಾತನಾಡಿದರೆ, ಸುಮ್ಮನಿರಲು ಸಾಧ್ಯವಿಲ್ಲ’ ಎಂದು ತಮ್ಮ ವರ್ತನೆಗೆ ಕೊಟ್ಟಿರುವ ಸಮಜಾಯಷಿ. ಈ ಎಲ್ಲಾ ಬೆಳವಣಿಗೆಗಳು ಪಟಿಯಾಲಾ ಕೋರ್ಟ್ ಆವರಣದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಎಂದು ಗೋಚರಿಸುವುದಂತೂ ಸ್ಪಷ್ಟ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ.. ಎಂದು ಆಗಾಗ ಬೊಬ್ಬೆ ಹಾಕುತ್ತಿದ್ದರೂ, ಅದು ಸುಳ್ಳು ಎಂಬುದನ್ನು ಈ ರೀತಿಯ ಪ್ರಕರಣಗಳು ಸಾಬೀತು ಮಾಡಿವೆ.

1 COMMENT

  1. ಪಿಕ್ ಪಾಕೆಟ್ ಮಾಡಿ ಸಿಕ್ಕಿಕೊಂಡವನಿಗೆ ಧರ್ಮದೇಟು ಕೊಟ್ಟವರನ್ನು ಅರೆಸ್ಟ್ ಮಾಡಿ ಎಂದು ಹೇಳದ ಜನ ರಾಷ್ಟ್ರ ದ್ರೋಹಿಗೆ ಧರ್ಮದೇಟು ಕೊಟ್ಟಿದ್ದನ್ನು ಪ್ರಶ್ಣಿಸುತ್ತಿದ್ದಾರೆ ಅವರನ್ನು ಅರೆಸ್ಟ್ ಮಾಡಿ ಎಂದು ಕೂಗಾಡುತ್ತಿರುವುದನ್ನು ನೋಡಿದರೆ ದೇಶವಿರೋಧಿ ಶಕ್ತಿಗಳ ಮತ್ತು ದೇಶವಿರೋಧಿ ಮಾಧ್ಯಮಗಳ ಪ್ರಭಾವ ಲೇಖಕರ ಮೇಲೂ ಆಗಿರುವುದು ವೇದ್ಯ.

Leave a Reply