ಬಾಬಾ ರಾಮದೇವರ ಪತಂಜಲಿ ಉದ್ಯಮ ವಿದೇಶಿ ಸಂಸ್ಥೆಗಳಿಗೆ ಸೆಡ್ಡು ಹೊಡೆದದ್ದು ಹೇಗೆ..?

ಡಿಜಿಟಲ್ ಕನ್ನಡ ಟೀಮ್

ಭಾರತದ ಮಾರುಕಟ್ಟೆಯತ್ತ ವಿಶ್ವದ ಚಿತ್ತ ಸದಾ ನೆಟ್ಟಿರುತ್ತದೆ. ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ರಾಷ್ಟ್ರದಲ್ಲಿ ಉತ್ಪನ್ನಗಳ ಮಾರಾಟ ಸಹಜವಾಗಿ ಸುಲಭ ಎಂಬುದು ಇದರ ಲೆಕ್ಕಚಾರ. ಆದರೆ ಇಂತಹ ಬೃಹತ್ ಮಾರುಕಟ್ಟೆಯಲ್ಲಿ ಪ್ರತಿಮೂಲೆಗೂ ಉತ್ಪನ್ನವನ್ನು ಪರಿಚಯಿಸಲು ಜಾಹಿರಾತಿಗೆ ಮೊರೆ ಹೋಗುತ್ತಾರೆ. ಇದರಿಂದ ಸಹಜವಾಗಿ ಉತ್ಪನ್ನದ ಮೂಲ ಬೆಲೆಗಿಂತ ಶೇ 20 ರಿಂದ 30 ರಷ್ಟು ಏರಿಕೆಯಾಗಲಿದೆ. ಸ್ಪರ್ಧಾ ಮಾರುಕಟ್ಟೆಯಲ್ಲಿ ಗ್ರಾಹಕರು ಉತ್ಪನ್ನದ ಬೆಲೆ, ಗುಣಮಟ್ಟದ ಆಧಾರದಲ್ಲಿ ಖರೀದಿಸುವುದು ಹೆಚ್ಚು. ಆದರೆ ದೇಶದಲ್ಲಿ ಈಗ ಹೊಸ ಟ್ರೆಂಡ್ ಪ್ರಾರಂಭವಾಗಿದ್ದು ಸ್ವದೇಶಿ ಉತ್ಪನ್ನಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆಯುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿರುವುದು ಯೋಗಗುರು ಬಾಬಾ ರಾಮ್ ದೇವ್ ರ “ಪತಂಜಲಿ” ಬ್ರಾಂಡ್. ಈ ಸಂಚಲನಕ್ಕೆ ದೇಶದಲ್ಲಿ ಪ್ರಾಬಲ್ಯ ಮೆರೆದಿದ್ದ ಮತ್ತು ಬಿಡುಗಡೆಗೆ ಸಿದ್ದವಿದ್ದ ಹಲವು ನೂತನ ವಿದೇಶಿ ಬ್ರಾಂಡ್ ಗಳಿಗೆ ಭೀತಿ ಉಂಟಾಗಿರುವುದು ಸುಳ್ಳಲ್ಲ.

ಈಗಾಗಲೇ ದೇಶದ ಮಾರುಕಟ್ಟೆಯಲ್ಲಿ ತಮ್ಮ ಸಾಮ್ರಾಜ್ಯವನ್ನು ಭದ್ರಗೊಳಿಸಿಕೊಂಡಿದ್ದ ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆದ ಪತಂಜಲಿಯ ಈ ಯಶಸ್ಸಿಗೆ ಕಾರಣಗಳೇನು? ಇದರ ಹಿಂದೆ ಮತ್ಯಾರಿದ್ದಾರೆ? ರಾಮದೇವ್ ರ ಚಿಂತನೆಗಳೇ ಇದಕ್ಕೆ ಕಾರಣವಾ? ಈ ರೀತಿಯ ಹಲವು ಪ್ರಶ್ನೆಗಳು ಸಾಮಾನ್ಯರನ್ನಷ್ಟೇ ಅಲ್ಲದೇ ದಿಗ್ಗಜ ಕಂಪನಿಗಳ ಸಿಇಓಗಳನ್ನು ಚಿಂತೆಗೀಡುಮಾಡಿವೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿ ಸಿಗಲಿವೆ.

  • ಬಾಬಾರಾಮ್ ದೇವ್ ತಮ್ಮನ್ನು ಪ್ರಚಾರದ ಮೂಲಕ ಪ್ರಸಿದ್ಧರನ್ನಾಗಿ ಮಾಡಿಕೊಂಡಿದ್ದು, ಯೋಗವೆಂಬ ಅಸ್ತ್ರದ ಮೂಲಕ ಜನಪ್ರಿಯ ನಾಯಕನಾಗಿದ್ದು, ವಿದೇಶಿ ಔಷಧಗಳ ನಡುವೆ ಆಯುರ್ವೇದ ಔಷಧ ಪರಿಚಯಿಸಿ ಸ್ಪರ್ಧಾ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದು.
  • ದೇಶಾದ್ಯಂತ ಬಾಬಾ ರಾಮ್ ದೇವ್ ಯೋಗ ಕ್ಯಾಂಪ್ ಗಳನ್ನು ಆಯೋಜಿಸಿ ಜನರಿಗೆ ಹತ್ತಿರವಾಗಿದ್ದು, ಈ ಮೂಲಕ ತಮ್ಮ ಆಯುರ್ವೇದ ಚಿಕಿತ್ಸೆ ಮತ್ತು ಔಷಧೋತ್ಪನ್ನಗಳ ಬಗ್ಗೆ ಮಾಹಿತಿ ನೀಡಿ, ಕಡಿಮೆ ದರದಲ್ಲಿ ಲಭ್ಯತೆಗೆ ಅವಕಾಶ ನೀಡಿದ್ದು.
  • ಆಧ್ಯಾತ್ಮದ ಜೊತೆಗೆ ರಾಜಕೀಯದ ಚಿಂತನೆಗಳನ್ನೂ ಪ್ರಖರವಾಗಿ ಮಂಡಿಸಿದರು. ಇವು ಬಿಜೆಪಿಯ ಚಿಂತನೆಗಳಿಗೂ ಹತ್ತಿರವಿದ್ದ ಕಾರಣ ಪಕ್ಷದ ಅಲೆಯೊಂದಿಗೆ ಬೆರೆತುಕೊಂಡಿತು. ಇವರೆ ಮೊದಲ ಗ್ರಾಹಕರಾದರು ಮತ್ತು ಉತ್ಪನ್ನಗಳಿಗೆ ಸ್ವದೇಶಿ ಚಿಂತನೆಯ ಸ್ಥಳೀಯ ಹೆಸರಾದ “ಪತಂಜಲಿ” ಜನರನ್ನು ಆಕರ್ಷಿಸಿತು. ಇದರಿಂದ “ಪಿ ಆಂಡ್ ಜಿ” “ಹಿಂದುಸ್ತಾನ್ ಲಿವರ್” ಕಂಪನಿಗಳಿಗೆ ಪ್ರತಿಸ್ಪರ್ಧಿಯಾಗಿ ಬಹು ಬೇಗ ಯಶಸ್ವಿಯಾಯಿತು.
  • ಸಾಮಾನ್ಯ ವರ್ಗದ ಗ್ರಾಹಕರನ್ನು ಜೊತೆಗೂಡಿಸಿಕೊಂಡು, ಸಾಂಪ್ರದಾಯಿಕ ಮೌಲ್ಯಗಳನ್ನು ಜನರ ಜೀವನದೊಂದಿಗೆ ಆಳವಡಿಸಿ ಜೀವನಕ್ರಮದ ಬದಲಾವಣಿಗೆ ಒತ್ತು ನೀಡಿದರು. ಜೀವನದಲ್ಲಿ ಆಯುರ್ವೇದದಿಂದ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳುವುದರ ಬಗ್ಗೆ ಸಲಹೆ ನೀಡತೊಡಗಿದರು. ಸೌಂದರ್ಯವರ್ಧಕಗಳು, ಆಹಾರ ಪದಾರ್ಥಗಳು ಮತ್ತು ಔಷಧಗಳು ಪತಂಜಲಿ ಮಾರುಕಟ್ಟೆಯನ್ನು ವಿಸ್ತರಿಸಿದವು.
  • ಇತರ ಎಂಎನ್ ಸಿ ಕಂಪನಿಗಳಾದ ಕ್ಯಾಡ್ ಬರಿ, ಕೋಕಾಕೊಲ, ಪಾಂಡ್ಸ್ ಮತ್ತು ನೆಸ್ಲೆ ಪದಾರ್ಥಗಳ ಮೇಲಿನ ಗುಣಮಟ್ಟದ ಕಳಂಕಗಳು. ಇನ್ನೂ ಬಾಬಾ ರಾಮ್ ದೇವ್ ರ ಪತಾಂಜಲಿಯ ವೈಜ್ಞಾನಿಕ ತಳಹದಿಯ ಉತ್ಪನ್ನಗಳ ಬಗೆಗಿನ ಗುಣಮಟ್ಟದ ವಿರುದ್ಧ ಮಾತಾಡಿದ್ದು ಇವರೇ ಸೃಷ್ಟಿಸಿಕೊಂಡ ಸ್ವಯಂಕೃತ ಅಪರಾಧ. ಇದಕ್ಕೆ ರಾಮ್ ದೇವ್ ರವರು ನಿರೀಕ್ಷಿತ ರುಜುವಾತುಗಳನ್ನು ನೀಡಿದರು. ಬೇರೆ ಕಂಪನಿಗಳ ವಿರುದ್ಧ ಮಾಡಿದ್ದರೆ ಸಹಜ ವೃತ್ತಿ ಪೈಪೋಟಿ ಎಂಬ ಅರ್ಥ ಬರುತ್ತಿತ್ತು. ಆದರೆ ಇಲ್ಲಿ ಸ್ವದೇಶಿ, ದೇಶಾಭಿಮಾನದ ಜತೆ ಗುರುತಿಸಿಕೊಂಡಿರುವ ಬ್ರಾಂಡ್ ಅನ್ನು ಹತ್ತಿಕ್ಕುವ ಪ್ರಯತ್ನ ಎಂಬರ್ಥದಲ್ಲಿ ಸಂದೇಶ ಹೋಯಿತು. ಇದರಿಂದ ಮತ್ತಷ್ಟು ಪ್ರಚಾರ ದೊರೆತು ದೇಶಾಭಿಮಾನದ ಆಧಾರದಲ್ಲಿ ಹೆಚ್ಚು ಮಾರಾಟವಾಗತೊಡಗಿತು.
  • ಪತಾಂಜಲಿ ಅಂಗಡಿಗಳಲ್ಲಿ ಯಾವುದೇ ರೀತಿಯ ರಿಯಾಯಿತಿಯ ಸೌಲಭ್ಯ ನೀಡಿಲ್ಲ ಈ ಕಾರಣದಿಂದ ಗ್ರಾಹಕರ ಬಳಿ ಹೆಚ್ಚಿನ ವಸೂಲಿಯ ಸಮಸ್ಯೆ ಇಲ್ಲ. ರಾಮ್ ದೇವ್ ರ ಪ್ರತಿ ತಂತ್ರಗಳು ತರ್ಕಬದ್ಧವಾಗಿರುವುದು. ಆಯುರ್ವೇದದ ವ್ಯಾಕರಣದಂತೆ ಜಾಹಿರಾತು ವಿನ್ಯಾಸ, ಉತ್ತಮ ಶಿಸ್ತು, ವಾಸ್ತವತೆಯ ಆಧಾರ, ಪರಿಸರದ ಬಗೆಗಿನ ಕಾಳಜಿ, ಆಧ್ಯಾತ್ಮಿಕತೆ, ನೀತಿಶಾಸ್ತ್ರ ಪಾಲನೆ ಇವೆಲ್ಲವೂ ಪತಂಜಲಿಯ ಇಂದಿನ ಏಳಿಗೆಗೆ ಕಾರಣ.

ಆಚಾರ್ಯ ಬಾಲಕೃಷ್ಣ ಎಂಬವರು 2006 ರಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ ಹಟ್ಟುಹಾಕಿದರು. ರಾಮ್ ದೇವ್ ಅವರು ಮುಂದಾಳತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ದೇಶದ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಫ್ಯೂಚರ್ ಗ್ರೂಪ್ ನೊಂದಿಗೂ ಒಡಂಬಡಿಕೆ ಮಾಡಿಕೊಂಡಿದೆ. ಪ್ರಸ್ತುತ 13 ಸಾವಿರ ಕೋಟಿಯ ಸಂಪತ್ತು ಹೊಂದಿದ್ದು, 2011-12 ರಲ್ಲಿ 30 ಕೋಟಿ ಇದ್ದ ವಹಿವಾಟು 2014-15 ರಲ್ಲಿ 2500 ಕೋಟಿ ವಹಿವಾಟು ನಡೆಸಿದೆ. 2015-16ರಲ್ಲಿ 5 ಸಾವಿರ ಕೋಟಿ ಆದಾಯ ಗಳಿಸಿದೆ.

1 COMMENT

  1. ನೀವು ಬರೇದಿರೋದರಲ್ಲಿ ಅರ್ದವಶ್ಟೇ ಸತ್ಯವಾಗಿದೆ. ನೀವು ಬಾಬರಾಮ್ದೇವ್ ಯಶಸ್ಸಿಗೆ ಕಾರಣಕರ್ತರಾಗಿದ್ದ ರಾಜೀವ್ದೀಕ್ಶಿತ್ರವರನ್ನು ಉಲ್ಲೇಕಿಸಿಲ್ಲ. ಬಾಬರಾಮ್ದೇವರ ಉತ್ಪನ್ನಗಳಲ್ಲೊಂದಾದ ಕೇಶಕಾಂತಿ ಇದು ಶಾಂಪು, ಇದು ಬಹುರಾಶ್ಟ್ರೀಯ ಕಂಪನಿಯ ಶಾಂಪುಗಳಿಗಿಂತಲೂ ನೊರೆಯಿಂದ ಇರುವಂತದ್ದು ಮತ್ತು ಕೊಳೆ, ಜಿಡ್ಡುಗಳನ್ನು ತೊಲಗಿಸಲು ಅಶಕ್ತವಾದದ್ದು ಆಗಿದೆ.

Leave a Reply