ಸುದ್ದಿಸಂತೆ: ಪಂಚಾಯ್ತಿ ಫಲಿತಾಂಶ, ಖಾಲಿದ್ ಗೆ ಶರಣಾಗುವುದಕ್ಕೆ ಸೂಚನೆ… ನೀವು ತಿಳಿಯಲೇಬೇಕಾದ ಇತರ ಸುದ್ದಿಗಳು

ನಿರೀಕ್ಷೆ ಮುಟ್ಟದ ಕಾಂಗ್ರೆಸ್, ಬಿಜೆಪಿ ಸಮಾಧಾನಕರ, ಜೆಡಿಎಸ್ ನಿರಾಶೆ

2018ರ ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಗೆ ಮತದಾರ ನಿರಾಸೆಗೊಳಿಸಿದ್ದಾನೆ. ಪ್ರತಿಪಕ್ಷ ಬಿಜೆಪಿಗೆ ಸಾಧಾರಣವಾದ ಗೆಲುವು ನೀಡಿ ಪಕ್ಷಕ್ಕೆ ಉತ್ಸಾಹ ತುಂಬಿದ್ದರೆ ಜೆಡಿಎಸ್ ನೆಲ ಕಚ್ಚಿದೆ. ಸಾಮಾನ್ಯವಾಗಿ ಆಡಳಿತ ಪಕ್ಷದ ಕಡೆ ಮತದಾರನ ಒಲವು ಇರುತ್ತದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಲಭಿಸದೆ ಇರುವುದು ಮತದಾರನಿಗೆ ಸರ್ಕಾರ ಕಾರ್ಯವೈಖರಿ ತೃಪ್ತಿ ನೀಡಿಲ್ಲ ಎಂಬುದು ಸಾಬೀತಾಗಿದೆ.

2010 ರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಫಲಿತಾಂಶಕ್ಕೆ 2016ರ ಫಲಿತಾಂಶವನ್ನು ಹೋಲಿಸಿ ನೋಡಿದಾಗ ಅಧಿಕಾರದಲ್ಲಿ ಇಲ್ಲದಿದ್ದರು ಬಿಜೆಪಿ ಆಡಳಿತ ಪಕ್ಷ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಿದೆ. 30 ಜಿಲ್ಲಾ ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 10ರಲ್ಲಿ, ಬಿಜೆಪಿ 8ರಲ್ಲಿ ಮತ್ತು ಜೆಡಿಎಸ್ 2ರಲ್ಲಿ ಸ್ವತಂತ್ರವಾಗಿ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಉಳಿದ 10 ಜಿಲ್ಲಾ ಪಂಚಾಯಿತಿಗಳು ಅತಂತ್ರವಾಗಿದ್ದರೇ ಇನ್ನೂ 175 ತಾಲ್ಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ 58ರಲ್ಲಿ, ಬಿಜೆಪಿ 55ರಲ್ಲಿ, ಜೆಡಿಎಸ್ 21ರಲ್ಲಿ ಹಾಗೂ 41 ಅತಂತ್ರವಾಗಿವೆ. ಆಡಳಿತ ಪಡೆಯಲು ಕೊರತೆ ಇರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಯಾರ ಯಾರ ಸಹವಾಸ ಮಾಡಿ ಯಾವ ಪಕ್ಷ ಅಧಿಕಾರಕ್ಕೇರಲಿವೆ ಎಂಬುದು ಮುಂದಿನ ರಾಜಕೀಯ ಚದುರಂಗದಾಟ.

30 ಜಿಲ್ಲಾ ಪಂಚಾಯಿತಿಗಳ 1080 ಸ್ಥಾನಗಳಲ್ಲಿ ಕಾಂಗ್ರೆಸ್ ಗೆ 498, ಬಿಜೆಪಿಗೆ 406, ಜೆಡಿಎಸ್ ಗೆ 148 ಹಾಗೂ 29 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದರೆ, 175 ತಾಲ್ಲೂಕು ಪಂಚಾಯಿತಿಯ 3070 ಸ್ಥಾನಗಳಲ್ಲಿ ಕಾಂಗ್ರೆಸ್ 1708ರಲ್ಲಿ, ಬಿಜೆಪಿ 1362ತಲ್ಲಿ ಜೆಡಿಎಸ್ 608ರಲ್ಲಿ ಹಾಗೂ 204 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.

ಕಾಂಗ್ರೆಸ್ ಮೇಲೆ ನೋಟಾ ಮೇಲುಗೈ

ಈ ಬಾರಿಯ  ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನೋಟಾ ಸೌಲಭ್ಯ ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಮತ ಪಡೆದುಕೊಂಡಿರುವ ಕೌತುಕವೊಂದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಪಂಚಾಯ್ತಿಯ ಚಾರ್ವಾಕ ಒಂದನೇ ಬಾಕ್ಲ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 149 ಮತ ಚಲಾವಣೆಯಾಗಿದ್ದರೆ ನೋಟಾಗೆ 161 ಮತಗಳು ಲಭಿಸಿವೆ. ಈ ಮುಖಾಂತರ ರಾಷ್ಟ್ರೀಯ ಪಕ್ಷಕಿಂತ ನೋಟಗೆ ಹೆಚ್ಚು ಮತ ದೊರೆತಿರುವುದು ದೇಶದ ಇತಿಹಾಸದಲ್ಲೆ ಇದೇ ಮೊದಲು ಎನ್ನಬಹುದು. ಜೊತೆಗೆ ಬಿಜೆಪಿಗೆ 500 ಮತಗಳು ಲಭಿಸಿವೆ.

 ಶರಣಾಗಲು ಉಮರ್, ಅನಿರ್ಬಾನ್ ಗೆ ಹೈ ಸೂಚನೆ

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಆವರಣದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ವಿದ್ಯಾರ್ಥಿ ಉಮರ್ ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ರನ್ನು ನ್ಯಾಯಾಲಯಕ್ಕೆ ಶರಣಾಗುವಂತೆ ದೆಹಲಿ ಹೈ ಕೋರ್ಟ್ ಸೂಚನೆ ನೀಡಿದೆ. ಮತ್ತೊಂದೆಡೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ಹೆಚ್ಚಿನ ಭದ್ರತೆ ಒದಗಿಸುವಂತೆ ಅರ್ಜಿ ಸಲ್ಲಿಸಿದ್ದ ಉಮರ್ ಪರ ವಕೀಲರು, ಉಮರ್ ಜೆ ಎನ್ ಯು ಆವರಣದಲ್ಲೇ ನಿರ್ದಿಷ್ಟ ಸ್ಥಳದಲ್ಲಿ ಶರಣಾಗಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿತು. ದೆಹಲಿ ಪೊಲೀಸರು ಇದದಕ್ಕೆ ವಿರೋಧ ವ್ಯಕ್ತಪಡಿಸಿದರು. ಹೈಕೋರ್ಟ್ ಸಹ ಶರಣಾಗತಿಗೂ ಮುನ್ನ ಭದ್ರತೆ ಒದಗಿಸಲು ನಿರಾಕರಿಸಿತು. ಅಲ್ಲದೆ ಭದ್ರತೆಯ ಕುರಿತ ಅರ್ಜಿಯ ವಿಚಾರಣೆಯನ್ನು ಬುಧವಾರ ಕನ್ಹಯ್ಯಾ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಆಲಿಸಲಾಗುವುದು ಎಂದು ತಿಳಿಸಿದೆ.

ಇದೇ ವೇಳೆ ಮಂಗಳವಾರ ದೆಹಲಿ ಪೊಲೀಸರು ಜೆ ಎನ್ ಯು ಆವರಣದಲ್ಲಿ ರಾಷ್ಟ್ರ ವಿರೋಧಿ ಕೂಗಿನ ಪ್ರಕರಣದ ಕುರಿತು ವರದಿ ಸಲ್ಲಿಸಿದ್ದು, ಕನ್ಹಯ್ಯಾ ವಿರುದ್ಧ 4 ಸಾಕ್ಷ್ಯಾಧಾರ ಒಪ್ಪಿಸಿದ್ದಾರೆ. ಸಿಕ್ಕ ವಿಡಿಯೋ ಆಧಾರದ ಮೇಲೆ ಕನ್ಹಯ್ಯಾ ಸಹ ದೇಶ ವಿರೋಧ ಹೇಳಿಕೆ ಕೂಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನೀಡಿರುವ ವರದಿಯಲ್ಲಿನ ಪ್ರಮುಖ ಕನ್ಹಯ್ಯಾ ವಿರುದ್ಧದ ಪ್ರಮುಖ ಆರೋಪ ಹೀಗಿವೆ.

  • ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದಾಗಿ ತಪ್ಪು ಮಾಹಿತಿ ನೀಡಿಕೆ.
  • ಯಾವುದೇ ಅನುಮತಿ ಇಲ್ಲದೇ ಬಲವಂತವಾಗಿ ಈ ಕಾರ್ಯಕ್ರಮ ಆಯೋಜನೆ.
  • ಜೆ ಎನ್ ಯು ಆವರಣದಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಪರಿಸ್ಥಿತಿ ನಿರ್ಮಾಣ.
  • ಅಸಂವಿಧಾನಿಕ ಘೋಷ ಹಾಗೂ ಹೇಳಿಕೆ, ಅಸಂವಿಧಾನಿಕ ಬೆಳವಣಿಗೆಗೆ ನಿರ್ಮಾಣ.

ಒಂದೇ ಕುಟುಂಬದ ಐವರು ಆತ್ಮಹತ್ಯೆ

ಮನೆಯ ಅಳಿಯನ ಕಿರುಕುಳ ತಾಳಲಾರದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾರದೇವನ ಹಳ್ಳಿಯ ಕುಟುಂಬದ ಐವರು ಸದಸ್ಯರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ತಾಯಿ ಮಿನಾಕ್ಷಮ್ಮ (46) ಹಾಗೂ ನಾಲ್ವರು ಮಕ್ಕಳು ನೇಣಿಗೆ ಶರಣಾದವರು. ಇವರು ಆತ್ಮಹತ್ಯೆ ಪತ್ರದಲ್ಲಿ ತಮ್ಮ ಸಾವಿಗೆ ಅಳಿಯ ಉಮೇಶ ಮತ್ತು ನಳಿನಿ ಎಂಬಾಕೆ ಕಾರಣ ಎಂದು ಬರೆದಿಟ್ಟಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಚ್ಛತೆ ನಿರ್ವಹಣೆಯ ಅಧಿಕಾರಿಯೇ ತ್ರಿವೇಣಿ ಸಂಗಮಕ್ಕೆ ಮೂತ್ರ ಹಾಯಿಸಿದ್ರು

ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಮತ್ತು ಕ್ಲೀನ್ ಗಂಗಾದಂತಹ ಯೋಜನೆಗಳನ್ನು ರೂಪಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಅಧಿಕಾರಿಗಳೇ ಅದನ್ನು ಪಾಲಿಸುವಲ್ಲಿ ಎಡವುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಬುಧವಾರದಿಂದ ಆರಂಭವಾಗುವ ತ್ರಿವೇಣಿ ಮಹೋತ್ಸವದ ಆಯೋಜನೆಗೆ ನೇಮಿಸಲಾದ ಸರ್ಕಾರಿ ಅಧಿಕಾರಿ ಒ.ಪಿ ಶರ್ಮಾ ಈಗ ವಿವಾದದ ಕೇಂದ್ರ ಬಿಂದು. ಕಾರಣ, ಈತ ಸಾರ್ವಜನಿಕವಾಗಿ ಈ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಕುರಿತ ದೃಶ್ಯಾವಳಿಗಳನ್ನು ಇಂಡಿಯಾ ಟುಡೆ ವಾಹಿನಿ ಬಿತ್ತರಿಸಿದೆ. ಈ ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಶುಭ್ರೊ ಕಮಲ್ ಮುಖರ್ಜಿ (ಎಡದಿಂದ ಮೊದಲನೆಯವರು) ಮಂಗಳವಾರ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಶುಭ್ರೊ ಕಮಲ್ ಮುಖರ್ಜಿ (ಎಡದಿಂದ ಮೊದಲನೆಯವರು) ಮಂಗಳವಾರ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Leave a Reply