ಸೈನಿಕನಾಗಿ ಉಗ್ರರ ಹೊಡಿತೀನಿ ಅಂತ ಶಾಲಾದಿನಗಳಲ್ಲೇ ಹೇಳಿದ್ದ ತುಷಾರ್, ನಮ್ಮೆದೆಗಳಲ್ಲಿ ಇರಬೇಕು ಈತನ ಬದುಕಿನ ಚಿತ್ರ

ಡಿಜಿಟಲ್ ಕನ್ನಡ ಟೀಮ್

ಜಮ್ಮು ಮತ್ತು ಕಾಶ್ಮೀರದ ಎಂಟ್ರೆಪ್ರೆನೊರ್ಶಿಪ್ ಡೆವಲಪ್ಮೆಂಟ್ ಇನ್ಸ್ ಟಿಟ್ಯೂಟ್ ನಲ್ಲಿ ಅಡಗಿದ್ದ ಉಗ್ರಗಾಮಿಗಳ ಸದೆ ಬಡೆಯುವ ಕಾರ್ಯಾಚರಣೆಯಲ್ಲಿ ಸೋಮವಾರ ಇತರ ಯೋಧರ ಜತೆ ಕ್ಯಾಪ್ಟನ್ ತುಷಾರ್ ಮಹಾಜನ್ ಹುತಾತ್ಮರಾದರು. ವಿಷಾದದೊಂದಿಗೆ ಅವರ ಬದುಕಿನ ಬಿಂಬಗಳನ್ನು ಆಯ್ದುಕೊಳ್ಳಬೇಕಾದ ಸಮಯ ಇದು.

ಉಧಂಪುರದ ನಿವೃತ್ತ ಪ್ರಾಂಶುಪಾಲ ದೇವರಾಜಗುಪ್ತ ಹಾಗೂ ಆಶಾ ರಾಣಿ ಪುತ್ರ ತುಷಾರ್.

ಚಿಕ್ಕ ವಯಸ್ಸಿನಲ್ಲಿ ಕಂಡ ಕನಸನ್ನು ನನಸಾಗಿಸಿ ಪ್ರಾಣಬಿಟ್ಟ ಈ ವೀರ ಯೋಧ ನಡೆದು ಬಂದ ಹಾದಿ, ಆತನ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ.. ಹೌದು, ಚಿಕ್ಕ ಹುಡುಗನಾಗಿದ್ದಾಗಲೇ ತಾನು ಯೋಧನಾಗಬೇಕು, ಉಗ್ರಗಾಮಿಗಳನ್ನು ಕೊಲ್ಲಬೇಕೆಂಬ ಕನಸು ಹೊತ್ತವ ಈ ತುಷಾರ್ ಮಹಾಜನ್.

ಒಂದು ದಿನ ಶಾಲೆಯಲ್ಲಿ ಶಿಕ್ಷಕರು, ನೀವು ಭವಿಷ್ಯದಲ್ಲಿ ಏನಾಗುತ್ತೀರಾ ಎಂಬುದರ ಬಗ್ಗೆ ಪ್ರಬಂಧ ಬರೆಯಿರಿ ಎಂದು ಕೇಳಿದರು. ಆಗ ತರಗತಿಯಲ್ಲಿನ ಪ್ರತಿ ವಿದ್ಯಾರ್ಥಿಯೂ ತನ್ನದೇ ಆದ ಕನಸಿನ ಬಗ್ಗೆ ಬರೆದರೆ, ತುಷಾರ್ ಬರೆದ ಪ್ರಬಂಧ ಇತರರಿಗಿಂತ ಭಿನ್ನವಾಗಿತ್ತು. ಕಾರಣ, ಭಾರತೀಯ ಸೇನೆಗೆ ಸೇರಿ ಉಗ್ರಗಾಮಿಗಳ ಎದೆ ಬಗೆಯುವ ಆಸೆ ವ್ಯಕ್ತಪಡಿಸಿದ್ದು ತುಷಾರ್ ಮಾತ್ರ. ಆ ತರಗತಿಯ ಇತರೆ ಮಕ್ಕಳಲ್ಲಿ ಕೆಲವರಿಗೆ ಉಗ್ರಗಾಮಿಗಳು ಎಂದರೆ ಯಾರು ಎಂಬ ಪರಿಕಲ್ಪನೆಯೇ ಇಲ್ಲವಾಗಿತ್ತು.

12ನೇ ತರಗತಿಯ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿ ಎ) ಸೇರಿದ. ಜುಡೊ ಹಾಗೂ ಕರಾಟೆ ಕಲೆಗಳನ್ನು ಮೈಗೂಡಿಸಿಕೊಂಡ. ಎನ್ ಡಿ ಎನ 116ನೇ ಬ್ಯಾಚ್ ಹಾಗೂ ನಂತರ ಇಂಡಿಯನ್ ಮಿಲಿಟರಿ ಅಕಾಡೆಮಿ (ಐ ಎಂ ಎ)ನ 126ನೇ ಬ್ಯಾಚ್ ನಲ್ಲಿ ತೇರ್ಗಡೆಯಾಗಿ ಸೇನೆ ಸೇರಿದ.

ತುಷಾರ್ ಮಹಾಜನ್, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಂದ ಸ್ಫೂರ್ತಿಯಾದವ. ತಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೊನಲ್ಲಿ ಭಗತ್ ಸಿಂಗ್ ಅವರ ಚಿತ್ರ ಹಾಕಿದ್ದ. ಇನ್ನು ತುಶಾರ್ ಜ.26ರ ಗಣರಾಜ್ಯೋತ್ಸವದಂದು ತಮ್ಮ ವಾಟ್ಸ್ ಆ್ಯಪ್ ಸ್ಟೇಟಸ್ ಬದಲಿಸುತ್ತಾರೆ. ಅದು ಅವರ ಕಡೇಯ ಸ್ಟೇಟಸ್ ಸಹ ಹೌದು. ‘ನಾಳೆ, ರಾಷ್ಟ್ರಧ್ವಜವನ್ನು ಮಡಚಿದಾಗ ದೇಶಭಕ್ತಿ ಸಹ ಮಲಗುತ್ತೆ. ಈ ದೇಶಭಕ್ತಿ ಕೆಲವು ದಿನಗಳು ಮಾತ್ರ ಎಚ್ಚರವಾಗುತ್ತದೆ’. ಪ್ರಸ್ತುತ ಸಂದರ್ಭದಲ್ಲಿ ಈ ಸ್ಟೇಟಸ್ ನಮ್ಮೆಲ್ಲರನ್ನು ಕಾಡದೇ ಇರಲಾರದು. ಕಾರಣ, ಸೈದ್ಧಾಂತಿಕ ತಿಕ್ಕಾಟ, ಅಭಿವ್ಯಕ್ತಿ ಸ್ವಾತಂತ್ರ ಹೆಸರಿನಲ್ಲಿ ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯೋಧರ ಮನಸ್ಥಿತಿಯನ್ನು ನಮ್ಮ ಮುಂದೆ ತಂದು ನಿಲ್ಲಿಸಿದೆ.

ಮಗನ ಕಳಕೊಂಡ ದುಃಖ...
ಮಗನ ಕಳಕೊಂಡ ದುಃಖ…

Leave a Reply