ಸೋಲಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಹೊಣೆ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಈಗೇನಂತಾರೆ?

author-thyagaraj (1)ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮುನ್ನಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಮಾತು ಹೇಳಿದ್ದರು. ಪಕ್ಷಕ್ಕೆ ಸೋಲಾದರೆ ಆಯಾ ಜಿಲ್ಲೆ ಉಸ್ತುವಾರಿ ಸಚಿವರನ್ನೇ ಹೊಣೆಗಾರರನ್ನಾಗಿ ಮಾಡಿ, ಚುನಾವಣೆ ನಂತರ ಸಂಪುಟಕ್ಕೇ ಮಾಡುವ ಮೇಜರ್ ಸರ್ಜರಿಯಲ್ಲಿ ಪ್ರತಿಫಲ ಬಡಿಸಲಾಗುವುದು ಎಂದು. ಈಗ ಅವರ ಸ್ವಂತ ಜಿಲ್ಲೆ ಮೈಸೂರಿನಲ್ಲೇ ಕಾಂಗ್ರೆಸ್ ಬಹುಮತ ಪಡೆದಿಲ್ಲ. ಹಾಗಾದರೆ ಇದರ ಹೊಣೆಗಾರರು ಯಾರು?

ಖಂಡಿತವಾಗಿಯೂ ಸಿದ್ದರಾಮಯ್ಯನವರೇ! ಇದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯನವರಂತೆ ಹಲವು ಸಚಿವರ ಜಿಲ್ಲೆಗಳಲ್ಲೂ ಕಾಂಗ್ರೆಸ್ ಮಖಾಡೆ ಮಲಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಸೋಲಿನ ಊಟ ಬಡಿಸುವುದಾದರೆ, ಅವರ ತಟ್ಟೆಯಲ್ಲೇ ಸಿದ್ದರಾಮಯ್ಯನವರೂ ಊಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಬೇರೆ ದಾರಿಯೇ ಇಲ್ಲ. ಏಕೆಂದರೆ ಸ್ವಂತ ಜಿಲ್ಲೆಯಲ್ಲೇ ಪಕ್ಷವನ್ನು ಉಳಿಸಿಕೊಳ್ಳಲು ಆಗದವರು ಉಳಿದ ಮಂತ್ರಿಗಳ ತಲೆಗೆ ಸೋಲಿನ ರುಮಾಲು ಸುತ್ತುವುದಾದರೂ ಹೇಗೆ? ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಫುಲ್ ಸೇಫು. ಮೈಸೂರು ‘ಅರಸ’ನ ಸೋಲಿನ ನೆರಳಿನಲ್ಲಿ!

ಹೆಬ್ಬಾಳ ಮರುಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಸಿದ್ದರಾಮಯ್ಯನವರ ಪಾಲಿನ ಕಪ್ಪು ಅಭಿಷೇಕ. ಸುಖಾ ಸುಮ್ಮನೆ ಅಭ್ಯರ್ಥಿ ಆಯ್ಕೆ ಸಂಬಂಧ ಪ್ರತಿಷ್ಠೆ ಕೋಟೆ ಕಟ್ಟಿ, ನಂತರ ಮೈಮೇಲೆ ಕೆಡವಿಕೊಂಡಿದ್ದ ಸಿದ್ದರಾಮಯ್ಯನವರು ಆ ಚುನಾವಣೆ ಸೋಲಿನಿಂದ ಮಾನಸಿಕವಾಗಿ ಜರ್ಝರಿತರಾಗಿರುವುದು ಸುಳ್ಳಲ್ಲ. ಆ ಚುನಾವಣೆಗೆ ಮುನ್ನ ಅವರ ಕೈ ಸುತ್ತಿಕೊಂಡ ಡೈಮಂಡ್ ವಾಚೆಂಬ ಹಾವು ಕಕ್ಕುತ್ತಿರುವ ವಿಷ ಇನ್ನೂ ನಿಂತಿಲ್ಲ. ಗೋಸುಂಬೆಯಂತೆ ದಿನಕ್ಕೊಂದು ಬಣ್ಣ ಪಡೆದು ಈ ಪ್ರಕರಣ ಕಾಡುತ್ತಿರುವ ಸಂದರ್ಭದಲ್ಲೇ ಸಿದ್ದರಾಮಯ್ಯನವರು ಮತ್ತೊಂದು ಸೋಲಿಗೆ ಮುಖಾಮುಖಿ ಆಗಿದ್ದಾರೆ. ಪಕ್ಷದ ಒಳಗೆ ಮತ್ತು ಹೊರಗೆ ಅಸಹಿಷ್ಣುತೆ ಹರಳುಗಟ್ಟುತ್ತಿರುವಾಗ ಈ ಸೋಲು ಸಿದ್ದರಾಮಯ್ಯನವರನ್ನು ಎಲ್ಲಿಗೆ ಕರೆದೊಯ್ದು ನಿಲ್ಲಿಸುತ್ತದೆ ಎಂಬುದು ಕೌತುಕದ ವಿಚಾರ.

ಏಕೆಂದರೆ ಸಿದ್ದರಾಮಯ್ಯನವರ ನಾಗಾಲೋಟಕ್ಕೆ ಹೆಬ್ಬಾಳ ಟಿಕೆಟ್ ವಿಚಾರ ಕಡಿವಾಣ ಹಾಕಿತ್ತು. ಮೊತ್ತ ಮೊದಲ ಬಾರಿಗೆ ಹೈಕಮಾಂಡ್ ಸಿದ್ದರಾಮಯ್ಯನವರ ಬಯಕೆಯನ್ನು ಪಕ್ಕಕ್ಕೆ ಸರಿಸಿತ್ತು. ಹಿರಿಯ ನಾಯಕರ ಮಾತಿಗೆ ಕಿಮ್ಮತ್ತು ಕೊಟ್ಟಿತ್ತು. ಅಷ್ಟಕ್ಕೆ ಪುಳಕಗೊಂಡಿರುವ ನಾಯಕರು ಸಿದ್ದರಾಮಯ್ಯನವರಿಗೆ ಹೆಡೆಮುರಿಗೆ ಕಟ್ಟಲು ಮನಸ್ಸಿನಲ್ಲೇ ಸನ್ನಿವೇಶದ ನೆರಿಗೆ ಎಣೆಯುತ್ತಿರುವಾಗಲೇ ಈ ಸೋಲು ಅವರ ಕೈಗೆ ಕೋಲಾಗಿ ಬಂದಿದೆ. ಹೈಕಮಾಂಡ್ ಕೊಟ್ಟ ಒಂದೇ ಒಂದು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ನಾಯಕರು ಇದ್ದದ್ದು, ಇಲ್ಲದ್ದು ಎಲ್ಲ ಸೇರಿಸಿ ಸಿದ್ದರಾಮಯ್ಯನವರ ಮೇಲೆ ದೂರುಗಳ ಮೆದೆಯನ್ನೇ ಕಟ್ಟಿದ್ದಾರೆ. ಈಗ ಈ ಸೋಲನ್ನು ಯಾವ ರೀತಿ ದಾಟಿಸುತ್ತಾರೆ ಎಂಬುದು ಊಹೆ ಮೀರಿದ ವಿಚಾರ.

ಇಲ್ಲಿ ಸಿದ್ದರಾಮಯ್ಯ ಅವರೊಬ್ಬರೇ ಅಲ್ಲ, ಅವರ ಪಕ್ಷದ ಹಿರಿಯ ನಾಯಕರು ಪ್ರತಿನಿಧಿಸುವ ಜಿಲ್ಲೆಗಳಲ್ಲೂ ಕಾಂಗ್ರೆಸ್ ಕುಸಿದು ಕುಳಿತಿದೆ. ಹಾಗೆ ಅದು ಸೋಲಿನ ರುಚಿ ತೋರುವಾಗ ಮೂಲ ನಿವಾಸಿಗಳು ಹಾಗೂ ವಲಸಿಗರು ಎಂಬ ಬೇಧ ತೋರದಿರುವುದು ಪಕ್ಷದ ಹೆಗ್ಗಳಿಕೆ. ಲೋಕಸಭೆಯಲ್ಲಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪಾರುಪತ್ಯದ ಕಲಬುರಗಿ, ಮಹಿಳಾ ಅಧಿಕಾರಿ ವರ್ಗಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಅಷ್ಟೆಲ್ಲ ಮುತುವರ್ಜಿ ವಹಿಸಿ ಸಮರ್ಥಿಸಿಕೊಂಡಿದ್ದ ಸಚಿವ ಪರಮೇಶ್ವರ ನಾಯ್ಕ್ ಪ್ರಾತಿನಿಧ್ಯದ ಬಳ್ಳಾರಿ, ಹೀಗೆ ಹಲವು ಹತ್ತು ಕಡೆ ಪಕ್ಷ ಘನತೆ ಕಳೆದುಕೊಂಡಿದೆ.

ಅದು ಯಾವುದೇ ಪಕ್ಷದ್ದಿರಲಿ, ಒಂದು ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆವ ಎಲ್ಲ ಚುನಾವಣೆಗಳಲ್ಲೂ ಆ ಪಕ್ಷವೇ ಪ್ರಾಬಲ್ಯ ಮೆರೆಯುವುದು ವಾಡಿಕೆ. ಆ ಪರಂಪರೆ ಈಗಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಢಾಳಾಗಿ ಕಾಣಬೇಕಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ, ಅದು ಪಡೆದ ಒಟ್ಟಾರೆ ಮತಗಳು, ಗಳಿಸಿದ ಸ್ಥಾನಗಳಿಗೆ ಹೋಲಿಸಿ ನೋಡಿದಾಗ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕಬಳಿಸಿರುವುದೇ ಹೆಚ್ಚು. ಅಂದರೆ ವಿಧಾನಸಭೆ ಚುನಾವಣೆಗೆ ಎರಡೂಕಾಲು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ಗಳಿಸಿದ ಮತಪ್ರಮಾಣಕ್ಕೆ ಎದುರಾಳಿಗಳು ಸೆಳೆದಿರುವ ಮತಗಳನ್ನು ಸಮೀಕರಿಸಿ ನೋಡಿದಾಗ ಎಲ್ಲೋ ಒಂದು ಕಡೆ ಆಡಳಿತವಿರೋಧಿ ಅಲೆ ಶುರುವಾಗಿರುವುದು ಗೋಚರವಾಗುತ್ತದೆ. ಸಾಮಾನ್ಯವಾಗಿ ಚುನಾವಣೆಗೆ ವರ್ಷ ಮೊದಲು ಮಾತ್ರ ಆಡಳಿತವಿರೋಧಿ ಅಲೆ ಕಾಣಸಿಗುವುದು ಪ್ರತೀತಿ. ಆದರೆ ಸಿದ್ದರಾಮಯ್ಯನವರ ಸರಕಾರದ ವಿಚಾರದಲ್ಲಿ ಅದು ಸ್ವಲ್ಪ ಆತುರ ತೋರಿರುವಂತೆ ಕಾಣುತ್ತಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸ್ವರೂಪಕ್ಕೂ ವಿಧಾನಸಭೆ ಚುನಾವಣೆ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ. ಇದನ್ನು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಕರೆದರೂ ವಾಸ್ತವದಲ್ಲಿ ಈ ಎರಡೂ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಅಂಶಗಳೇ ಬೇರೆ-ಬೇರೆ. ಸ್ಥಳೀಯ ರಾಜಕೀಯ ಸ್ಥಿತಿಗತಿ, ಕ್ಷೇತ್ರದ ಜನರ ಜತೆ ನಾಯಕರ ಒಡನಾಟ, ಅವರ ರಾಜಕೀಯ ಹಿಡಿತ ಒಂದು ಚೌಕಟ್ಟಿನೊಳಗೇ ಕೆಲಸ ಮಾಡುತ್ತದೆ. ವಿಧಾನಸಭೆಗೆ ಮರುಆಯ್ಕೆ ಬಯಸುವವರು, ಹಿಂದಿನ ಚುನಾವಣೆಯಲ್ಲಿ ಸೋಲು ಅನುಭವಿಸಿರುವವರು ಮುಂದಿನ ಚುನಾವಣೆ ಅಖಾಡ ನಿರ್ಮಾಣಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವೇದಿಕೆ ಮಾಡಿಕೊಳ್ಳುವುದು ವಾಡಿಕೆ. ಆದರೆ ಹಿಂದೆಲ್ಲ ಅದಕ್ಕೊಂದು ಇತಿಮಿತಿ ಇರುತ್ತಿತ್ತು. ಆದರೆ ಈ ಬಾರಿ 45 ಕ್ಕೂ ಹೆಚ್ಚು ಶಾಸಕರ ಹತ್ತಿರದ ಸಂಬಂಧಿಗಳು ಈ ಚುನಾವಣೆ ಕಣಕ್ಕಿಳಿದಿದ್ದರು. ಅವರ ಮೂಲಕ ಕ್ಷೇತ್ರದಲ್ಲೊಂದು ಮತಹಿಡಿತ ಸಾಧಿಸುವುದು ಅವರೆಲ್ಲರ ಇರಾದೆ ಆಗಿತ್ತು. ಆದರೆ ಈಗಿನ ಚುನಾವಣೆಯಲ್ಲಿ ಮತದಾರ ಸುಖಾಸುಮ್ಮನೆ ಇವರೆಲ್ಲರ ಕೈ ಹಿಡಿದಿಲ್ಲ. ಮಂತ್ರಿಗಳು, ಶಾಸಕರು, ಸಂಸದರ ಮುಖ ನೋಡಿಕೊಂಡು ವೋಟು ಮಾಡಿಲ್ಲ. ತತ್ಪರಿಣಾಮವಾಗಿ ಈ ರೀತಿ ಕಣಕ್ಕಿಳಿದಿದ್ದ ಸಂಬಂಧಿಗಳ ಪೈಕಿ ಶೇಕಡಾ 50 ರಷ್ಟು ಮಂದಿಯನ್ನು ಮನೆಗೆ ಕಳುಹಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಕೋಲಾರದಿಂದ ಸತತ ಆರು ಬಾರಿ ಲೋಕಸಭೆ ಪ್ರವೇಶಿಸಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರ ಪುತ್ರಿ ರೂಪಾ, ಸಚಿವ ಪರಮೇಶ್ವರ ನಾಯ್ಕ್ ಪುತ್ರ , ಬಿಜೆಪಿ ಶಾಸಕ ವಿಶ್ವನಾಥ್ ಪತ್ನಿ ವಾಣಿ ವಿಶ್ವನಾಥ್, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಪತ್ನಿ ಲಲಿತಾ – ಹೀಗೆ ಆ ಪಕ್ಷ, ಈ ಪಕ್ಷ, ಈ ನಾಯಕ, ಆ ನಾಯಕ ಅಂತಾ ಮುಖಮೂತಿ ನೋಡದೆ ಸೋಲಿಸಿದ್ದಾರೆ. ಅದೇ ರೀತಿ ಗೆದ್ದವರೂ ಉಂಟು. ದೇವೇಗೌಡರ ಇಚ್ಛೆಗೆ ವಿರುದ್ಧ ಸ್ಪರ್ಧಿಸಿದ್ದ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಪುತ್ರ ಕಾಂತೇಶ್, ಸಚಿವ ಎ. ಮಂಜು ಪುತ್ರ ಮಂಥರ್ ಗೌಡ, ಮಾಜಿ ಸಂಸದ ಎಚ್. ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಗೆದ್ದು ಮುನ್ನಡೆದಿದ್ದಾರೆ.

ಇಲ್ಲಿ ಗಮನಿಸಬೇಕಾದ ಬಹುಮುಖ್ಯ ವಿಚಾರವೊಂದಿದೆ. ವಾಸ್ತವವಾಗಿ ಬೇರುಮಟ್ಟದಿಂದ ಪಕ್ಷಕ್ಕೆ ದುಡಿದವರಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಟಿಕೆಟ್ ಮೀಸಲು ಇಡುತ್ತಿದ್ದುದು ಸಂಪ್ರದಾಯ. ಆದರೆ ಒಂದಿಲ್ಲೊಂದು ಅಧಿಕಾರ ಅನುಭವಿಸುತ್ತಿರುವವರ ಸಂಬಂಧಿಕರು ಇಂಥ ಪಕ್ಷನಿಷ್ಠ ಕಾರ್ಯಕರ್ತರ ಅವಕಾಶವನ್ನು ಆಪೋಶನ ತೆಗೆದುಕೊಂಡಿದ್ದಾರೆ. ಅವರ ರಾಜಕೀಯ ಭವಿಷ್ಯಕ್ಕೆ ಅಖಾಡವಾಗಬೇಕಿದ್ದ ಈ ಚುನಾವಣೆಯನ್ನು ಪ್ರಭಾವಿಗಳೇ ಹೈಜಾಕ್ ಮಾಡಿರುವುದು ದುರಂತ. ಹಾಗೆಂದು ನಿಷ್ಠಾವಂತ ಕಾರ್ಯಕರ್ತರು ಸನ್ಯಾಸಿಗಳೇನೂ ಅಲ್ಲವಲ್ಲ. ಇಂದಿಲ್ಲ, ನಾಳೆ ಅವಕಾಶ ಸಿಗುತ್ತದೆ ಎಂದು ದುಡಿದಿದ್ದ ಅವರೆಲ್ಲ ತಮ್ಮ ಅವಕಾಶ ಕಬಳಿಸಿದವರ ವಿರುದ್ಧ ಕೆಲಸ ಮಾಡಿದ ಪ್ರಯುಕ್ತ ಅಲಲ್ಲಿ ಮತ ಚದುರಿ ಹಲವು ನಾಯಕರ ಕರುಳಬಳ್ಳಿಗಳು ಸೋಲನ್ನು ಹಾಸೊದ್ದು ಮಲಗಿವೆ.

ಕೋಲಾರದ ಕೆ.ಎಚ್. ಮುನಿಯಪ್ಪ ಪುತ್ರಿ ಸೋಲಿನಲ್ಲಿ ಒಂದು ಅದ್ಭುತ ಪಾಠ ಆಡಗಿದೆ. ಕುತಂತ್ರ ರಾಜಕಾರಣಕ್ಕೆ ಹೆಸರುವಾಸಿಯಾದ ಮುನಿಯಪ್ಪ ತಮ್ಮದೇ ಪಕ್ಷದ ನಾಯಕರನ್ನು ಪರಸ್ಪರ ಎತ್ತಿಕಟ್ಟಿ ರಾಜಕೀಯ ಏಳ್ಗೆ ಕಂಡವರು. ಬೆಣ್ಣೆಯಲ್ಲಿ ಬ್ಲೇಡಿಟ್ಟು ನಂಬಿದವರ ಕುತ್ತಿಗೆ ಕುಯ್ಯುತ್ತಿದ್ದ ಮುನಿಯಪ್ಪನವರ ಬೂದಿ ಮುಚ್ಚಿದ ಕೆಂಡದಂತಹ ಆಟಾಟೋಪಕ್ಕೆ ಹಲವು ರಾಜಕೀಯ ಕುಡಿಗಳು ಬೂದಿಯಾಗಿ ಹೋಗಿದ್ದವು. ದೇವೇಗೌಡರು ಒಂದೇ ಕಲ್ಲಲ್ಲಿ ಮೂರ್ನಾಲ್ಕು ಹಕ್ಕಿ ಹೊಡೆದುರುಳಿಸಿದರೆ, ಮುನಿಯಪ್ಪನವರು ಒಂದು ಹೂವಲ್ಲೇ ಆ ಕೆಲಸ ಮಾಡಿ, ಮುಗಿಸುತ್ತಿದ್ದರು. ಇದರಿಂದ ಅಧಿನಾಯಕರೆಲ್ಲ ರೋಸತ್ತು ಹೋಗಿದ್ದರು. ಪ್ರಖಾಂಡ ಪಂಡಿತ ಮುನಿಯಪ್ಪ ಇದರ ಸುಳಿವರಿತು ದೂರ ಸರಿದಿದ್ದ ನಾಯಕರನ್ನೆಲ್ಲ ಇತ್ತೀಚೆಗೆ ಬಾಚಿ ತಬ್ಬಿಕೊಂಡಿದ್ದರು. ಆದರೆ ಇದರಲ್ಲೂ ಕುತ್ಸಿತ ಲೆಕ್ಕಾಚಾರ ಎಣಿಸಿದ ನಾಯಕರು ಅದೇ ಮುನಿಯಪ್ಪನವರ ಶೈಲಿಯಲ್ಲೇ ರಾಜಕೀಯ ಕಲೆ ಪ್ರದರ್ಶಿಸಿದ ಪ್ರಯುಕ್ತ ಅವರ ಮಗಳು ರೂಪಾ ಸೋತಿದ್ದಾರೆ. ಮುನಿಯಪ್ಪ ತಬ್ಬಿಬ್ಬುಗೊಂಡಿದ್ದಾರೆ. ಇಂಥ ನಿದರ್ಶನಗಳು ಎಲ್ಲ ಪಕ್ಷವನ್ನೂ ಅಲ್ಲಲ್ಲಿ ಅಣಕಿಸುತ್ತಿವೆ.

ಈಗಿನ ಪಕ್ಷವಾರು ಅಂಕಿ-ಅಂಶಗಳನ್ನು ತೆಗೆದುಕೊಂಡು ಅಧಿಕಾರ ರಾಜಕೀಯ ಹೀಗೇ ಸಾಗುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಸುಮಾರು 10 ಕಡೆ ನಿರ್ಮಾಣ ಆಗಿರುವ ಅತಂತ್ರ ಸ್ಥಿತಿ ಅವಕಾಶವಾದ ರಾಜಕಾರಣದ ವೈಭವೀಕರಣಕ್ಕೆ ಇಂಬುಗೊಡುತ್ತದೆ. ಅಧಿಕಾರ ಹಂಚಿಕೆಯಲ್ಲಿ ಯಾವುದೇ ಎಂಜಲು, ಮೈಲಿಗೆ ಎಂಬುದಿರುವುದಿಲ್ಲ. ಉದಾಹರಣೆಗೆ ಕಳೆದ ಬಾರಿ ಮೈಸೂರಿನಲ್ಲಿ ಆರಂಭದ ಇಪ್ಪತ್ತು ತಿಂಗಳು ಜೆಡಿಎಸ್-ಬಿಜೆಪಿ, ನಂತರದ ಹತ್ತು ತಿಂಗಳು ಜೆಡಿಎಸ್-ಕಾಂಗ್ರೆಸ್, ತದನಂತರದ ಇಪ್ಪತ್ತು ತಿಂಗಳು ಕಾಂಗ್ರೆಸ್ ವೊಂದೇ ಅಧಿಕಾರದಲ್ಲಿತ್ತು. ಯಾರು ಯಾರಿಗೆ ಯಾವಾಗ ಚೂರಿ ಹಾಕುತ್ತಾರೆ, ಯಾರು ಯಾವಾಗ ಯಾರ ಜತೆ ಕೂಡಿಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಬರುವುದಿಲ್ಲ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಾವು-ಮುಂಗುಸಿಯಂತೆ ಕಿತ್ತಾಡುವ ಬೇರೆ-ಬೇರೆ ಪಕ್ಷಗಳ ನಾಯಕರು ಇಲ್ಲಿ ಅಧಿಕಾರ ಹಂಚಿಕೆ ಮಾಡಿಕೊಳ್ಳುವಾಗ ಖುಷಿಯಿಂದಲೇ ಜಾತಿಗೆಡುತ್ತಾರೆ. ಮಾನ-ಮರ್ಯಾದೆ ಎಂಬುದನ್ನು ಗಾವುದ ದೂರ ಬೀಸಿ ಒಗೆದು. ಹೀಗಾಗಿ ಈಗಿನ ಫಲಿತಾಂಶಕ್ಕೂ ಮುಂದಾಗುವ ಅಧಿಕಾರ ರಾಜಕೀಯ ಸಮೀಕರಣಕ್ಕೂ ಸಂಬಂಧವೇ ಇರುವುದಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ರಾಜಕೀಯಕ್ಕೂ, ಉಳಿದ ಸ್ಥಳೀಯ ಸಂಸ್ಥೆಗಳ ರಾಜಕೀಯಕ್ಕೂ, ವಿಧಾನಸಭೆ ನಿಮಿತ್ತದ ರಾಜಕೀಯ ಸ್ವರೂಪಕ್ಕೂ ಅಜಗಜಾಂತರ ಎಂದು ಹೇಳಿದ್ದು ಇದೇ ಕಾರಣಕ್ಕೆ. ರಾಜ್ಯ ಮಟ್ಟದಲ್ಲಿ ಎರಡು ಪಕ್ಷಗಳ ನಾಯಕರು ಕಿತ್ತಾಡಿಕೊಂಡಿದ್ದರೆ, ಇಲ್ಲಿ ಮಾತ್ರ ಅದೇ ಪಕ್ಷದ ಅಧಿಕಾರ ಉಳುಮೆದಾರರು ಪರಸ್ಪರ ಹೆಗಲ ಮೇಲೆ ಕೈ ಹಾಕಿರುತ್ತಾರೆ. ಈ ರಾಜಕೀಯದ ಸೌಂದರ್ಯವೇ ಹಾಗೇ.

ಇಲ್ಲಿ ಇನ್ನೂ ಒಂದು ವಿಷಯವಿದೆ. ಕಾಂಗ್ರೆಸ್ ತನಗಾಗಿರುವ ನಷ್ಟವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷರ ಮೀಸಲು ನಿಗದಿಯಲ್ಲಿ ಸರಿದೂಗಿಸಿಕೊಳ್ಳುವ ಪ್ರಯತ್ನ ಮಾಡದಿರದು. ತನಗೆ ಅನುಕೂಲ ಆಗುವ ಕಡೆ ಪಕ್ಷ ಪ್ರತಿನಿಧಿಸುವ ಸದಸ್ಯರ ಜಾತಿ, ವರ್ಗಕ್ಕೆ ಮೀಸಲಿಟ್ಟು ವಿರೋಧಿಗಳನ್ನು ಹಣಿಯಬಹುದು. ಹಾಗಾದಾಗ ಬಹುಮತ ಇದ್ದರೂ ಪ್ರತಿಪಕ್ಷಗಳು ಕೆಲವು ಕಡೆ ಅಧಿಕಾರ ವಂಚಿತವಾಗಿ, ಮೌನ ರೋದನಕ್ಕೆ ಶರಣಾಗಬೇಕಾಗುತ್ತದೆ.

ಕೊನೆಗೊಂದು ಮಾತು. 2010 ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿತ್ತು. 30 ಜಿಲ್ಲಾ ಪಂಚಾಯಿತಿಗಳ ಪೈಕಿ ಆಡಳಿತರೂಢ ಬಿಜೆಪಿ 12, ಪ್ರತಿಪಕ್ಷ ಕಾಂಗ್ರೆಸ್ 7, ಜೆಡಿಎಸ್ 3 ಸ್ಥಾನ ಗೆದ್ದಿತ್ತು. 8 ಕಡೆ ಅತಂತ್ರ ಸ್ಥಿತಿ ಇತ್ತು. ಚುನಾವಣೆಗೆ ಹೋಗುವ ಪೂರ್ವದಲ್ಲಿ ಕಾಂಗ್ರೆಸ್ 11 ಕಡೆ ಅಧಿಕಾರ ವಿಸ್ತರಿಸಿಕೊಂಡಿತ್ತು. ಈಗ ಆಡಳಿತರೂಢ ಕಾಂಗ್ರೆಸ್ 10 , ಪ್ರತಿಪಕ್ಷ ಬಿಜೆಪಿ 7, ಜೆಡಿಎಸ್ 2 ರಲ್ಲಿ ಗೆದ್ದಿದೆ. 11 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಯಾರು ಏನೇ ಹೇಳಿದರೂ ಮೂರೂ ಪಕ್ಷಗಳು ಇಳಿಮುಖವಾಗಿರುವುದು ಸುಳ್ಳಲ್ಲ. ಈಗ ಅತಂತ್ರದಲ್ಲಿ ತಂತ್ರ ಕೆಲಸ ಮಾಡಲಿದೆ. ಈ ತಂತ್ರ ಅಂಕಿ-ಅಂಶಗಳ ಆಟ ಆಡಲಿದೆ.

ಇರಲಿ, ಈ ಅಂಕಿಅಂಶಗಳ ಹೋಲಿಕೆ ಏನೇ ಇದ್ದರೂ ಈಗ ಆಗುತ್ತಿರುವ ಬೆಳವಣಿಗೆಗಳು ಇದರ ಮಿತಿ ದಾಟಿ ಬದಲಾವಣೆಯನ್ನು ಕೈ ಬೀಸಿ ಕರೆಯುತ್ತಿರುವುದು ಸುಳ್ಳಲ್ಲ.

Leave a Reply