ಗುಜರಾತ್ ಗಲಭೆ ಬಗ್ಗೆ ಎಗ್ಗಿಲ್ಲದೇ ಬರೆದವರಿಗೆ ಈಗ ಸಂಕಷ್ಟ, ತಮ್ಮ ಲೇಖನಕ್ಕೆ ಕ್ಷಮೆ ಕೇಳ್ತೇನಂದ್ರು ಆಶೀಷ್ ನಂದಿ

 

ಡಿಜಿಟಲ್ ಕನ್ನಡ ಟೀಮ್

ಗೋಧ್ರೋತ್ತರ ಗಲಭೆಗಳನ್ನು ಇಟ್ಟುಕೊಂಡು 2002ರಿಂದಲೂ ಬುದ್ಧಿಜೀವಿ ಗಣದ ಹಲವರಿಂದ ಟೀಕಾಪ್ರವಾಹಗಳು ಬಂದಿವೆ. ಅವೆಲ್ಲದರ ಗುರಿ ಆಗಿನ ಮುಖ್ಯಮಂತ್ರಿ, ಈಗಿನ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಗುರಿಯಾಗಿಸಿಕೊಂಡಿತ್ತು ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲವಷ್ಟೆ.

ಆಗೇನೋ ಟೀಕಿಸುವ ಭರದಲ್ಲಿ ಲೇಖಕರು, ಸೆಕ್ಯುಲರ್ ವಾದಿಗಳೆಲ್ಲ ಏನೇನೋ ಆರೋಪಗಳನ್ನು ಹೊರೆಸಿದ್ದರು. ಇದೀಗ ನ್ಯಾಯದಾನ ಪ್ರಕ್ರಿಯೆಯಲ್ಲಿ ತಕ್ಕಡಿ ತೂಗೋ ಸಮಯ. ತಥಾಕಥಿತ ಸೆಕ್ಯುಲರ್ ಸಮೂಹದ ಆದರ್ಶ ಚಿಂತಕ ಆಶೀಶ್ ನಂದಿ ಅವರಿಗೆ ಇದರ ಮೊದಲ ಬಿಸಿ. 2008ರಲ್ಲಿ ಗುಜರಾತ್ ಬಗ್ಗೆ ಬರೆದ ಲೇಖನಕ್ಕೆ ತಾವು ಕ್ಷಮೆ ಕೇಳಲು ಸಿದ್ಧವಿರುವುದಾಗಿ ತಮ್ಮ ವಕೀಲತ ಮೂಲಕ ಸುಪ್ರೀಂ ಕೋರ್ಟ್ ಎದುರು ಮಂಗಳವಾರ ಹೇಳಿದ್ದಾರೆ ನಂದಿ.

ರಾಜಕೀಯ ವಿಶ್ಲೇಷಕರು, ಎಡ ಸಿದ್ಧಾಂತವಾದಿ ಎನಿಸಿಕೊಂಡಿರುವ ಆಶೀಶ್, 2007ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸತತ ಎರಡನೇ ಅವಧಿಗೆ ಅಧಿಕಾರ ಗಳಿಸಿದ ಕುರಿತು ಲೇಖನ ಬರೆದಿದ್ದರು. ಲೇಖನದಲ್ಲಿ ಗೋದ್ರಾ ಹತ್ಯಾಕಾಂಡದ ಹೊರತಾಗಿಯೂ ಮೋದಿ ಸತತ ಎರಡನೇ ಅವಧಿಗೆ ಅಧಿಕಾರ ಪಡೆದ ಬಗ್ಗೆ ಲೇಖನದ ಕಟುವಾದ ಟೀಕೆ, ವ್ಯಾಪಕ ವಿರೋಧಕ್ಕೆ ತುತ್ತಾಯಿತು. ಗುಜರಾತ್ ಘನತೆಗೆ ಧಕ್ಕೆ ತರಲಾಗಿದೆ ಎಂದು ವಿ.ಕೆ ಸಕ್ಸೇನಾ (ಖಾಡಿ ಅಂಡ್ ವಿಲೇಜ್ ಇಂಡಸ್ಟ್ರಿ ಕಮಿಷನ್ ಮುಖ್ಯಸ್ಥ ಹಾಗೂ ಅಹಮದಾಬಾದ್ ನ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟಿಸ್ ಅಧ್ಯಕ್ಷ) ಇವರ ವಿರುದ್ಧ ದೂರು ಕೊಟ್ಟರು. ಈ ಲೇಖನ ಕೋಮುಗಲಭೆಗೆ ದಾರಿ ಮಾಡಿಕೊಟ್ಟಿತೆಂದು ಇವರ ವಿರುದ್ಧ ಅಪರಾಧ ಪ್ರಕರಣ ದಾಖಲಾಯಿತು. ಇದನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ನಲ್ಲಿ ನಂದಿ ಸಲ್ಲಿಸಿದ್ದ ಅರ್ಜಿಗೆ ಪುರಸ್ಕಾರ ಸಿಗಲಿಲ್ಲ.

ಮಂಗಳವಾರ ನಡೆದ ವಿಚಾರಣೆ ವೇಳೆ, ಆಶೀಶ್ ಪರ ವಾದಿಸುತ್ತಿರುವ ಹಿರಿಯ ವಕೀಲರ ಅನುಪಸ್ಥಿತಿಯಲ್ಲಿ, ಕಿರಿಯ ನ್ಯಾಯವಾದಿ ಪೀಠದ ಮುಂದೆ- ‘ನಂದಿ ತಮ್ಮ ಬರವಣಿಗೆಗೆ ಕ್ಷಮಾಪಣೆ ಕೇಳಲು ಸಿದ್ಧರಿದ್ದಾರೆ. ಈ ಹಿಂದೆ ಲೇಖನ ಪ್ರಕಟವಾಗಿದ್ದ ಪತ್ರಿಕೆಯಲ್ಲೇ ಅದನ್ನು ಪ್ರಕಟಿಸಬಹುದಾಗಿದೆ’ ಎಂದರು. ಈ ವಾದ ಆಲಿಸಿದ ಪೀಠ, ಈ ಬಗ್ಗೆ ಮುಂದಿನ ವಾರ ನಡೆಯಲಿರುವ ವಿಚಾರಣೆ ವೇಳೆ ತಮ್ಮ ನಿರ್ಧಾರ ತಿಳಿಸುವಂತೆ ಗುಜರಾತ್ ಸರ್ಕಾರ ಮತ್ತು ಆಶೀಶ್ ವಿರುದ್ಧ ದೂರು ನೀಡಿದ್ದ ಸಕ್ಸೇನಾ ಪರ ವಕೀಲರಿಗೆ ಸೂಚನೆ ನೀಡಿದೆ.

Leave a Reply