
ಡಿಜಿಟಲ್ ಕನ್ನಡ ಟೀಮ್
ಪಂಚಾಯಿತಿ ಚುನಾವಣೆ ನಂತರದ ‘ಪಂಚಾಯಿತಿ’ ಭಾರೀ ಜೋರಾಗಿದೆ.
ವಿಧಾನಸಭೆ ಮರುಚುನಾವಣೆ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೇಲಿ ಪಕ್ಷದ ಕಳಪೆ ಪ್ರದರ್ಶನಕ್ಕೆ ವಿವರ ಕೊಡಿ ಅಂತ ವರಿಷ್ಠರು ಸಿದ್ದರಾಮಯ್ಯನವರನ್ನು ದಿಲ್ಲಿಗೆ ಬರಹೇಳಿದ್ದು, ಅವರು ಅಲ್ಲಿಗೆ ಶುಕ್ರವಾರ ತೆರಳುತ್ತಿದ್ದಾರೆ. ಇನ್ನೊಂದೆಡೆ ಅತಂತ್ರ ಸ್ಥಿತಿ ನಿರ್ಮಾಣ ಆಗಿರುವ 11 ಕಡೆ ಅಧಿಕಾರ ಹಿಡಿಯೋದು ಹೇಗೆ ಅಂತ ಮೂರೂ ಪಕ್ಷಗಳೂ ತಂತ್ರ ರಚನೆಯಲ್ಲಿ ಮುಳುಗಿ ಹೋಗಿವೆ.
ಇತ್ತೀಚಿನ ಎರಡೂ ಚುನಾವಣೆಗಳಲ್ಲೂ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡಿಲ್ಲ. ಅದಕ್ಕೆ ಮುನ್ನಾ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲೂ ಪಕ್ಷ ಮುಗ್ಗರಿಸಿತ್ತು. ಅಧಿಕಾರ ಹಿಡಿಯಲು ಜೆಡಿಎಸ್ ಮೊರೆ ಹೋಗಬೇಕಾಯ್ತು. ಮೊನ್ನೆ ಮರುಚುನಾವಣೆ ಆದಾಗಲೇ ಸಿಎಂ ಹೈಕಮಾಂಡ್ ಗೆ ವರದಿ ಕೊಡಬೇಕಿತ್ತು. ಸಮೀಪದಲ್ಲೇ ಇದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಗಿಸಿಕೊಂಡು ಒಟ್ಟಿಗೆ ವಿವರ ಕೊಡುವುದು ಯೋಜನೆಯಾಗಿತ್ತು. ಪ್ರದೇಶ ಕಾಂಗ್ರಸ್ ಅಧ್ಯಕ್ಷರೂ ಆಗಿರುವ ಡಾ. ಜಿ. ಪರಮೇಶ್ವರ್ ಫಲಿತಾಂಶ ಬಂದ ಮಂಗಳವಾರವೇ ದಿಲ್ಲಿಗೆ ಹೋಗಿ ವರಿಷ್ಠರಿಗೆ ಒಂದು ಸುತ್ತಿನ ಮಾಹಿತಿ ನೀಡಿದ್ದಾರೆ. ಅವರು ಏನೇನು ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಬರಹೇಳಿದೆ. ಅವರೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಹಮದ್ ಪಟೇಲ್ ಮತ್ತು ದಿಗ್ವಿಜಯ್ ಸಿಂಗ್ ಅವರಿಗೆ ವಿವರ ನೀಡಬೇಕಿದೆ. ಹೆಬ್ಬಾಳ ಅಭ್ಯರ್ಥಿ ಆಯ್ಕೆ ನೆಪದಲ್ಲಿ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಒಂದು ಹಂತದ ಹಿಡಿತ ಸಾಧಿಸಿರುವ ಹಿರಿಯ ನಾಯಕರು ಚುನಾವಣೆ ಫಲಿತಾಂಶದ ಬಗ್ಗೆ ಈಗಾಗಲೇ ವರಿಷ್ಠರಿಗೆ ಕಿವಿಯೂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ವರಿಷ್ಠರ ಭೇಟಿ ಕುತೂಹಲಕ್ಕೂ ಕಾರಣವಾಗಿದೆ.
ಇನ್ನು ಪಂಚಾಯಿತಿ ಚುನಾವಣೆಯಲ್ಲಿ ಮೂರು ಪಕ್ಷಗಳಿಗಿಂತಲೂ ಅತಂತ್ರ ಸ್ಥಿತಿಯೇ ಅತಿ ಹೆಚ್ಚು ಸ್ಥಾನಗಳನ್ನು (11) ಗಳಿಸಿದ್ದು, ನಿರ್ಣಾಯಕ ಸ್ಥಾನದಲ್ಲಿರುವ ಜೆಡಿಎಸ್ ಜತೆ ಕೂಡಿಕೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ. ಆಯಾ ಜಿಲ್ಲಾ ನಾಯಕರ ಸಲಹೆ-ಸೂಚನೆ ಅನ್ವಯ ರಾಜ್ಯ ನಾಯಕರು ಜೆಡಿಎಸ್ ಸ್ಥಳೀಯ ಹಾಗೂ ವರಿಷ್ಠ ನಾಯಕರ ಜತೆ ಅಧಿಕಾರ ಸಂಧಾನ ಮಾತುಕತೆ ಆರಂಭಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಎರಡು ವರ್ಷ ಮಾತ್ರ ಬಾಕಿ ಉಳಿದಿರುವ ಸಂದರ್ಭದಲ್ಲಿ ಪಂಚಾಯಿತಿ ಅಧಿಕಾರ ಕೂಡ ಪ್ರಾಮುಖ್ಯ ಪಡೆದಿದ್ದು, ನಿರ್ಣಾಯಕ ಸ್ಥಾನದಲ್ಲಿರುವ ಜೆಡಿಎಸ್ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಆಟಗಾರರಂತೆ ಹರಾಜು ಕೂಗಿಗೆ ಕಿವಿಯಾನಿಸಿದೆ. ಇಲ್ಲೆಲ್ಲ ಬಿಜೆಪಿ-ಜೆಡಿಎಸ್ ಸದಸ್ಯರ ಜಾತಿ/ವರ್ಗ ಹೊರತುಪಡಿಸಿದ ಸಮುದಾಯಗಳಿಗೆ ಅಧ್ಯಕ್ಷ ಸ್ಥಾನ ಮೀಸಲು ನಿಗದಿ ತಂತ್ರಗಾರಿಗೆ ಮೂಲಕ ಒಂದಷ್ಟು ಜಿಲ್ಲೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದ್ದರೆ, ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಜೆಡಿಎಸ್ ಹೊಂದಿಕೊಳ್ಳುವ ಅಳತೆಯ ಪಾತ್ರೆ ನಿರ್ಮಾಣದಲ್ಲಿ ನಿರತವಾಗಿದೆ.
ಬಿಬಿಎಂಪಿ ಅಧಿಕಾರ ಹಿಡಿಯುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದ್ದ ಪ್ರೀತಿಯಲ್ಲಿ ಈಗ ಉಂಟಾಗಿರುವ ಕೊರತೆ ಮೈತ್ರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೆಬ್ಬಾಳ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮಾಡಿರುವ ವಾಗ್ದಾಳಿ ದೇವೇಗೌಡರನ್ನು ಕೆರಳಿಸಿದ್ದು, ಅದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ. ಇದರ ಎಳೆ ಹಿಡಿದಿರುವ ಬಿಜೆಪಿ ನಾಯಕರು ಜೆಡಿಎಸ್ ಜತೆ ಹಳೇ ಮೈತ್ರಿ ನವೀಕರಣಕ್ಕೆ ಮುಂದಾಗಿದ್ದು, ಹೊಸ ಬೆಳವಣಿಗೆಗಳ ನಿರೀಕ್ಷೆಗೆ ಅವಕಾಶ ಕೊಟ್ಟಿದೆ.
ಸರ್ ನಾನು ತುಂಬಾ ವರ್ಷಗಳಿಂದ ನಿಮ್ಮ ಸುದ್ದಿ ಬರಹಗಳನ್ನು ಓದುತ್ತಾ ಓದುತ್ತಾ ಸಾಕಷ್ಟು ಕಲಿತಿದ್ದೇನೆ. ಅದರಲ್ಲೂ ಮುದ್ರಣ ಮಾಧ್ಯಮದಿಂದ ಹೊರಬಂದು ನೀವು ಇಟ್ಟ ದಿಟ್ಟ ಹೆಜ್ಜೆ ನಿಜಕ್ಕೂ ನಿರೀಕ್ಷೆಯನ್ನು ಮೀರಿದೆ. ಇಡೀ ದೇಶದ ವಿದ್ಯಾಮಾನಗಳನ್ನು ಅರ್ಥಗರ್ಭಿತವಾಗಿ ಸುದ್ದಿ ಹಾಗೂ ವಿಮರ್ಶೆಗಳನ್ನು ಕೊಡುತ್ತಿದ್ದೀರಿ. ನಿಜಕ್ಕೂ ನಿಮಗೆ ನೀವೇ ಸರಿಸಾಟಿ.
ಪುಟ್ಟಸ್ವಾಮಿ, ಕಸ್ತೂರಿ ನ್ಯೂಸ್24 ಜಿಲ್ಲಾ ವರದಿಗಾರ, ಚಿತ್ರದುರ್ಗ.