ಸಂಸತ್ತಿನಲ್ಲಿ ಬುಧವಾರ ಸಚಿವೆ ಸ್ಮೃತಿ ಇರಾನಿ ದಿನ, ವೆಮುಲಾ, ಜೆಎನ್ ಯು ಅಸ್ತ್ರ ಪ್ರತಿಪಕ್ಷಗಳಿಗೆ ಆಯಿತು ತಿರುಗುಬಾಣ!

ಡಿಜಿಟಲ್ ಕನ್ನಡ ಟೀಮ್

ಲೋಕಸಭೆಯಲ್ಲಿ ಬುಧವಾರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ದಿನ..!

ನಿಜ, ಬುಧವಾರ ಆರಂಭವಾದ ಲೋಕಸಭೆಯಲ್ಲಿ ನಿರೀಕ್ಷೆಯಂತೆ ತಾಂಡವವಾಡಿದ್ದು ಹೈದರಾಬಾದ್ ವಿಶ್ವವಿದ್ಯಾಯಲದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಮತ್ತು ಜೆಎನ್ ಯು ಕ್ಯಾಂಪಸ್ ನ ದೇಶವಿರೋಧಿ ಮತ್ತು ದೇಶಭಕ್ತರ ನಡುವಣ ಗಲಾಟೆ. ಪ್ರತಿಪಕ್ಷಗಳು ಈ ವಿಷಯಗಳನ್ನು ಪ್ರಖರ ರಾಜಕೀಯ ಅಸ್ತ್ರಗಳಾಗಿ ಮಾರ್ಪಡಿಸಿ ಸರಕಾರವನ್ನು ಕಟ್ಟಿಹಾಕಲು ಪ್ರಯತ್ನಿಸಿದ್ದು ಸುಳ್ಳಲ್ಲ. ಆದರೆ ಅಷ್ಟೇ ಪ್ರಬಲವಾಗಿ ಸಚಿವೆ ಸ್ಮೃತಿ ಇರಾನಿ ಏಕಾಂಗಿಯಾಗಿ ದಾಖಲೆ ಸಮೇತ ಕೊಟ್ಟ ದಿಟ್ಟ ಉತ್ತರಗಳು ಪ್ರತಿಪಕ್ಷಗಳನ್ನು ದಿಕ್ಕುಗೆಡಿಸಿದ್ದೂ ದಿಟ. ಸ್ಮೃತಿ ಅವರ ಉತ್ತರದಲ್ಲಿದ್ದ ಒಂದೊಂದು ಕೂರಂಬುಗಳು ಪ್ರತಿಪಕ್ಷ ಸದಸ್ಯರನ್ನು ನಿಶ್ಯಸ್ತ್ರರನ್ನಾಗಿ ಮಾಡಿದ ಮೋಡಿಗೆ ಇಡೀ ಸದನವೇ ತಲೆದೂಗಿತ್ತು. ಪ್ರತಿಪಕ್ಷ ಸದಸ್ಯರನ್ನೂ ಸೇರಿಸಿಕೊಂಡು.

ಸ್ಮೃತಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ:

– ಹೈದರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೆಮುಲಾ ಅವರನ್ನು ಅದಕ್ಕೂ ಮೊದಲು ಅಮಾನತು ಮಾಡಿದ್ದ ಸಮಿತಿಯನ್ನು ನೇಮಕ ಮಾಡಿದ್ದುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ.  ನೇಣು ಬಿಗಿದುಕೊಂಡಿದ್ದ ವೆಮುಲಾರನ್ನು ಬದುಕುಳಿಸಲು ಯಾವುದೇ ಪ್ರಯತ್ನ ನಡೆದಿಲ್ಲ. ಸ್ನೇಹಿತರು, ಪೊಲೀಸರು, ವೈದ್ಯರು – ಹೀಗೆ ಯಾರನ್ನೂ ಬೆಳಗಿನ ಜಾವ 6.30 ರವರೆಗೂ ಕೊಠಡಿಯೊಳಗೆ ಹೋಗಲು ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಅವರ ಮೃತದೇಹ ಮಾತ್ರ ರಾಜಕೀಯ ಅಸ್ತ್ರವಾಗಿ ಬಳಕೆಯಾಗಿದೆ. ರೋಹಿತ್ ಆತ್ಮಹತ್ಯೆ ಪತ್ರದಲ್ಲಿ ಸಾವಿಗೆ ಯಾರೂ ಕಾರಣರಲ್ಲ ಎಂದಿದೆ. ತೆಲಂಗಾಣ ಪ್ರತಿಭಟನೆಯಲ್ಲಿ 600 ವಿದ್ಯಾರ್ಥಿಗಳು ಮೃತಪಟ್ಟರು. ರಾಹುಲ್ ಗಾಂಧಿ ಒಮ್ಮೆಯಾದರೂ ಅಲ್ಲಿಗೆ ಹೋಗಿದ್ದರೇ? ಆದರೆ, ರೊಹಿತ್ ಪ್ರಕರಣದಲ್ಲಿ ಮಾತ್ರ ಯಥೇಚ್ಛ ರಾಜಕೀಯ ಬೆಳೆ ತೆಗೆಯಲು ನೋಡಿದರು.

– ಜೆಎನ್ ಯುದಲ್ಲಿ ಉಮರ್ ಖಲೀದ್ ಕಾವ್ಯವಾಚನ ಕಾರ್ಯಕ್ರಮ ಮಾಡುವುದಾಗಿ ಆಡಳಿತ ಮಂಡಳಿಗೆ ತಪ್ಪು ಮಾಹಿತಿ ನೀಡಿ, ಅನುಮತಿ ಪಡೆದಿದ್ದ. ಆದರೆ ಅಲ್ಲಿ ನಡೆದದ್ದು ದೇಶದ್ರೋಹದ ಕೆಲಸ. ದೇಶದ್ರೋಹಿ ಅಫ್ಜಲ್ ಗುರುವಿನ ಸಂಸ್ಮರಣೆ.  ಎಲ್ಲಕ್ಕಿಂತ ಮಿಗಿಲಾಗಿ ಜೆಎನ್ ಯು ಅಧಿಕಾರಿಗಳೇ ಕನ್ಹಯ್ಯಾ ಕುಮಾರ್, ಉಮರ್ ಮತ್ತಿತರ ಅಮಾನತಿಗೆ ಶಿಫಾರಸ್ಸು ಮಾಡಿದ್ದಾರೆ. ಜತೆಗೆ ಪ್ರಕರಣದ ವಿಡಿಯೋ ಸಾಕ್ಷಿ ಕೂಡ ಇದೆ.

– ಶಿಕ್ಷಣ ಸಂಸ್ಥೆಯನ್ನು ರಾಜಕೀಯ ರಣರಂಗ ಮಾಡಬೇಡಿ. ನಮ್ಮ ಮಕ್ಕಳು ವೊಟ್ ಬ್ಯಾಂಕ್ ಗಳಲ್ಲ. ನಾನು ರೋಹಿತ್ ಬಗ್ಗೆ ಮಾತನಾಡುತ್ತೇನೆ ಎಂದರೆ ಅದು ಒಂದು ಮುಗ್ದ ಮಗುವಿನ ಜತೆ ಮಾತನಾಡಿದಂತೆಯೇ ಹೊರತು ಅಲ್ಲಿ ದಲಿತ, ಬಲಿತ ವಿದ್ಯಾರ್ಥಿ ಎಂಬ ಪ್ರಶ್ನೆ ಬರುವುದೇ ಇಲ್ಲ. ದೇಶದ ಸಾಕಷ್ಟು ವಿವಿಗಳಲ್ಲಿ ಯುಪಿಎ ಸರ್ಕಾರ ನೇಮಿಸಿದ ಕುಲಪತಿಗಳಿದ್ದಾರೆ. ಅವರಲ್ಲಿ ಒಬ್ಬರೇ ಒಬ್ಬರು ನಾನು ಶಿಕ್ಷಣವನ್ನು ಕೇಸರಿಕರಣ ಮಾಡುತ್ತಿದ್ದೇನೆ ಎಂದು ಹೇಳಿದರೂ ರಾಜಕೀಯ ತೊರೆಯಲು ಸಿದ್ಧ.

– ಯುವ ಜೀವಗಳ ಸಾವಿನ ಮೇಲೆ ನಡೆಯುವ ರಾಜಕೀಯ ಈ ದೇಶವನ್ನು ದುಸ್ಥಿತಿಗೆ ತಳ್ಳುತ್ತದೆ.   ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಗದ್ದಲ ಮಾಡಿದವರನ್ನು ಕ್ಷಮಿಸುವುದಿಲ್ಲ, ಕ್ಷಮಿಸುವ ಪ್ರಶ್ನೆಯೇ ಇಲ್ಲ.

ಇದಕ್ಕೂ ಮುನ್ನ ಲೋಕಸಭೆಯಲ್ಲಿ ಕಾವಿನ ವಾತಾವರಣ ನಿರ್ಮಾಣ ಮಾಡಿದ್ದ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯ ಮತ್ತು ಬಿಜೆಪಿಯ ಅನುರಾಗ್ ಠಾಕೂರ್ ನಡುವಣ ವಾಗ್ವಾದ ಹೀಗಿದ್ದವು:

Jyotiraditya Scindia

ಜ್ಯೋತಿರಾದಿತ್ಯ ಸಿಂಧ್ಯ- ‘ರೋಹಿತ್ ವೆಮುಲಾ ಆತ್ಮಹತ್ಯೆ ಮತ್ತು ಜೆಎನ್ ಯು ಗಲಾಟೆಗೆ ಕೇಂದ್ರ ಸರಕಾರ ಕಾರಣವಾಗಿದ್ದು, ಇದರಿಂದ ದೇಶಕ್ಕೆ ಕಳಂಕ ಬಂದಿದೆ. ಸಂವಿಧಾನಕ್ಕೆ ಅಪಚಾರವಾಗಿದೆ. ಈ ಸರ್ಕಾರ ದಲಿತ ವಿರೋಧಿ. ಶೋಷಿತರ ವಿರೋಧಿ. ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟಿಲ್ಲ. ಅಸಹಿಷ್ಣು ವಾತಾವಾರಣ ನಿರ್ಮಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಮುಂದುವರಿದಿದೆ. ಆರೆಸ್ಸಸ್ ಸಿದ್ದಾಂತವನ್ನು ಪ್ರತಿ ವಿಚಾರದಲ್ಲೂ ಹೇರುವ ಪ್ರಯತ್ನ ನಡೆಸಿದೆ.’

ಅನುರಾಗ್ ಠಾಕೂರ್- ‘ನೀವು ಕಾಂಗ್ರೆಸ್ಸಿಗರು ಉಗ್ರರ ಪರವಾಗಿದ್ದೀರಾ? ಅದನ್ನು ನೇರವಾಗಿಯೇ ದೇಶದ ಜನರಿಗೆ ತಿಳಿಸಿಬಿಡಿ. ಸಂಸತ್ತು ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದ್ದ ಅಫ್ಜಲ್ ಗುರುವಿನ ಬೆಂಬಲಕ್ಕೆ ನಿಂತಿದ್ದೀರಾ, ಹೇಳಿ. ಕುಟುಂಬ ಮೊದಲು, ಪಕ್ಷ ನಂತರ, ದೇಶ ಕೊನೆಯದು ಎಂಬುದು ನಿಮ್ಮ ಸಿದ್ಧಾಂತ. ರಾಹುಲ್ ಗಾಂಧಿ ಹಿಂದೆ-ಮುಂದೆ ಯೋಚನೆ ಮಾಡದೇ ದೇಶ ವಿರೋಧಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ದೇಶ ಭಾಗವಾಗುವುದನ್ನು ನೋಡಲು ಅವರು ಸಿದ್ಧರಿರಬಹುದು, ಆದರೆ ನಾವು ಸಿದ್ಧರಿಲ್ಲ.’

ಇನ್ನು ರಾಜ್ಯಸಭೆಯ ಕಲಾಪವನ್ನು ಇದೇ ವಿಚಾರ ತಿಂದು ಹಾಕಿತು. ಬಿಎಸ್ ಪಿ ನಾಯಕಿ ಮಾಯಾವತಿ ಮತ್ತು ಸ್ಮೃತಿ ಇರಾನಿ ನಡುವಣ ವಾಗ್ವಾದ ತಾರಕಕ್ಕೇರಿತ್ತು.

Leave a Reply