ಹೊಸಬೆಳಕು ಮೂಡುತಿದೆ… ಭಾರತದಲ್ಲೊಂಥರ, ಪಾಕಿಸ್ತಾನದಲ್ಲೊಂಥರ

ಡಿಜಿಟಲ್ ಕನ್ನಡ ಟೀಮ್

ಸಂಸತ್ ಅಧಿವೇಶನ ಶುರುವಾಗಿದೆ. ಆರೋಪ- ಪ್ರತ್ಯಾರೋಪ ವರದಿ ಮಾಡಬೇಕಷ್ಟೆ. ಗದ್ದಲ ಬಿಟ್ಟರೆ ಬೇರೇನೂ ಆಗುವ ಸೂಚನೆಗಳಿಲ್ಲ.

ಇವನ್ನೆಲ್ಲ ಬಿಟ್ಟು ಹೊಸ ಬೆಳಕಿನ ಎರಡು ಪಾಸಿಟಿವ್ ನ್ಯೂಸ್ ಓದಿಕೊಂಡರೆ ಹೇಗೆ? ಒಂದು ಭಾರತದ್ದು, ಇನ್ನೊಂದು ಪಕ್ಕದ ಪಾಕಿಸ್ತಾನದ್ದು. ಒಳ್ಳೇ ಸುದ್ದಿ ಎಲ್ಲಿನದ್ದಾದರೆ ಏನಂತೆ…

ವಿದ್ಯುತ್ ಸಂಪರ್ಕ ಕಾಣದ ಹಳ್ಳಿಗಳನ್ನು ಬೆಳಗುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಕಳೆದ ವಾರ ಆರು ರಾಜ್ಯಗಳ 258 ಹಳ್ಳಿಗಳು ವಿದ್ಯುತ್ ಸಂಪರ್ಕ ಪಡೆದಿವೆ. ಈ ಪೈಕಿ ಒಡಿಶಾದ 120, ಜಾರ್ಖಂಡ್ ನ 64, ಅಸ್ಸಾಂನ 41, ಮಧ್ಯಪ್ರದೇಶದ 19, ರಾಜಸ್ಥಾನದ 8, ಛತ್ತೀಸಘಡದ 6 ಹಳ್ಳಿ ಸೇರಿವೆ. ಈವರೆಗೂ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದ 5,537 ಹಳ್ಳಿಗಳಿಗೆ ಕರೆಂಟ್ ತಲುಪಿಸಿದ್ದು, 2018ರ ಮೇ 1ರ ಒಳಗೆ ಉಳಿದ 18,452 ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವಾಲಯ ಮಾಹಿತಿ ನೀಡಿದೆ.

ಇನ್ನೊಂದೆಡೆ ಪಾಕಿಸ್ತಾನದ ಸಂಸತ್ತು ಸಂಪೂರ್ಣ ಸೌರ ವಿದ್ಯುದೀಕರಣಗೊಂಡಿದೆ. ಸೌರ ವಿದ್ಯುತ್ ನಿಂದಲೇ ಸಂಪೂರ್ಣವಾಗಿ ನಡೆಯುತ್ತಿರುವ ಸಂಸತ್ತು ಜಗತ್ತಿನಲ್ಲಿ ಪಾಕಿಸ್ತಾನದ್ದೇ ಪ್ರಥಮ. ಇಲ್ಲಿ 80 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ಅದರಲ್ಲಿ 62 ಮೆಗಾವ್ಯಾಟ್ ಸಂಸತ್ತಿಗೆ ಸಾಕಾಗುವುದರಿಂದ ಉಳಿದಿದ್ದನ್ನು ನ್ಯಾಷನಲ್ ಗ್ರಿಡ್ ಗೆ ಪೂರೈಸಲಾಗುತ್ತದೆ ಎಂದಿದ್ದಾರೆ ಪಾಕ್ ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಅಯಾಜ್ ಸಾಧಿಕ್. ಇದಕ್ಕೆ ವೆಚ್ಚವಾಗಿರುವ 55 ಮಿಲಿಯನ್ ಡಾಲರ್ ಗಳನ್ನು ಚೀನಾ ಕೊಟ್ಟಿದೆ ಅನ್ನೋದು ಮಾತ್ರ ಗಮನಿಸಬೇಕಾದ ಅಂಶ. ಈ ಅರ್ಥದಲ್ಲಿ ಭಾರತ ಇದನ್ನು ಡೇಂಜರ್ ಲೈಟಾಗಿಯೇ ಗ್ರಹಿಸಿದರೂ ಅಚ್ಚರಿ ಇಲ್ಲ.

ಅದೇನೇ ಇರಲಿ, ಮನೆ ಬೆಳಗುವ ಹಾಗೂ ನವೀಕೃತ ಮೂಲಗಳೆಡೆಗೆ ಸಾಗುವ ಪ್ರಯತ್ನಗಳನ್ನು ಜಗತ್ತು ಶ್ಲಾಘಿಸಬೇಕಿದೆ.

Leave a Reply