ಅಲ್ರೀ.., ಸಿಎಂ ಪೋಸ್ಟೇನು ಸೆಕೆಂಡ್ ಹ್ಯಾಂಡ್ ವಾಚ್ ಗಿಫ್ಟ್ ತಗೊಳ್ಳುವಷ್ಟು ಚೀಪೇ…?!

ಡಿಜಿಟಲ್ ಕನ್ನಡ ಟೀಮ್

ಅಂತೂ-ಇಂತೂ ಸಿದ್ದರಾಮಯ್ಯನವರಿಗೆ ವಾಚ್ ಕೊಟ್ಟಿದ್ದು ಯಾರು ಅಂತ ಗೊತ್ತಾಗಿದೆ. ಮೂವತ್ತು ವರ್ಷದ ಸ್ನೇಹಿತರೂ ಆಗಿರುವ ಕೇರಳ ಮೂಲದ ಡಾ. ಗಿರೀಶ್ ಚಂದ್ರ ವರ್ಮಾ ಅವರು ಏಳು ತಿಂಗಳ ಹಿಂದೆ ದುಬೈನಿಂದ ಈ ವಾಚ್ ತಂದುಕೊಟ್ಟಿದ್ರಂತೆ. ಹಂಗಂತ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ.

ಅಂದಹಾಗೆ ಖ್ಯಾತ ಹೃದ್ರೋಗ ತಜ್ಞರೂ ಆಗಿರುವ ಗಿರೀಶ್ ಚಂದ್ರ ವರ್ಮಾ ಕೊಟ್ಟಿರುವ ಈ ವಜ್ರಖಚಿತ ಹ್ಯೂಬ್ಲಾಟ್ ವಾಚ್ ‘ಸೆಕೆಂಡ್ ಹ್ಯಾಂಡ್’ ಅಂತೆ. ಅದರ ಬೆಲೆ 75 ಸಾವಿರ ಧಿರಂಸ್ ಅಂತೆ. ಅಂದ್ರೆ ಭಾರತದ ಮೌಲ್ಯದಲ್ಲಿ 14.07 ಲಕ್ಷ ರುಪಾಯಿ. (ಒರಿಜಿನಲ್ ವಾಚ್ ಬೆಲೆ 68 ಲಕ್ಷ ರುಪಾಯಿ) ಬೇಡ-ಬೇಡ ಅಂದ್ರೂ ಬಿಡದೆ ಕೈಗೆ ವಾಚ್ ಕಟ್ಟಿದರಂತೆ. ಇವರು ಸ್ನೇಹ-ಸೌಜನ್ಯ ಅಂತ ಸುಮ್ಮನಾದರಂತೆ. ಈಗ ಗಿಫ್ಟ್ ಟ್ಯಾಕ್ಸ್ ಕಟ್ಟಿ ಆದಾಯ ತೆರಿಗೆ ಇಲಾಖೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ವಿವರ ಕೊಡ್ತಾರಂತೇ. ಎಲ್ಲಕ್ಕಿಂತ ಮಿಗಿಲಾಗಿ ಇದನ್ನು ರಾಜ್ಯ ಸರಕಾರದ ಆಸ್ತಿಯಾಗಿ ಘೋಷಣೆ ಮಾಡಿ, ವಿಧಾನೌಧದ ಸಂಪುಟ ಸಭಾಂಗಣದಲ್ಲಿ ಇಡ್ತಾರಂತೆ.

ಇರಲಿ, ಮೂರು ವಾರ ಅದ ಮೇಲಾದ್ರೂ ಸಿಎಂಗೆ ವಾಚ್ ವಿವರ ಕೊಡ್ಬೇಕು ಅಂತ ಅನ್ನಿಸಿರೋದೇ ಮುಖ್ಯ. ಯಾಕೆ, ಏನು ಅನ್ನೋದು ಬೇರೆ ವಿಚಾರ. ಸ್ನೇಹಿತ ಗಿಫ್ಟ್ ಕೊಟ್ಟ ಅಂತ ಕುಮಾರಸ್ವಾಮಿ ಆಪಾದನೆ ಮಾಡಿದ ದಿನವೇ ಹೇಳಿದ್ರೆ ಇಷ್ಟೆಲ್ಲ ರಗಳೇ ಇರ್ತಾ ಇರ್ಲಿಲ್ಲ. ಅದ್ಯಾಕೆ ತಡಮಾಡಿದರೋ, ಸುತ್ತಮುತ್ತಾ ಇರೋ ಬೃಹಸ್ಪತಿಗಳೆಲ್ಲ ಯಾಕಿಷ್ಟು ತಡವಾಗಿ ಗೈಡೆನ್ಸ್ ಕೊಟ್ಟರೋ ಗೊತ್ತಿಲ್ಲ. ಆದರೆ ಇವರ ಮೂವತ್ತು ವರ್ಷದ ಫ್ರೆಂಡ್ ಅದೂ ಒಬ್ಬ ಖ್ಯಾತ ಡಾಕ್ಟರ್ ಇವರಿಗೇಕೆ ಸೆಕೆಂಡ್ ಹ್ಯಾಂಡ್ ವಾಚ್ ಗಿಫ್ಟ್ ಕೊಟ್ರೋ ಗೊತ್ತಾಗಲಿಲ್ಲ. ಮುಖ್ಯಮಂತ್ರಿಗಳಿಗೆ ಯಾರಾದ್ರೂ ಸೆಕೆಂಡ್ ಹ್ಯಾಂಡ್ ವಾಚ್ ಗಿಫ್ಟ್ ಕೊಡ್ತಾರೆಯೇ? ಅದೂ ಕೊಟ್ಟೋರು ಅಷ್ಟೊಂದು ದೊಡ್ಡ ಪಾರ್ಟಿ ಆಗಿರುವಾಗ. ಚೀಫ್ ಮಿನಿಸ್ಟರ್ ಪೋಸ್ಟ್ ಏನು ಸೆಕೆಂಡ್ ಹ್ಯಾಂಡ್ ವಾಚ್ ತಗೊಳ್ಳುವಷ್ಟು ಚೀಪೇ..? ಯಾರೋ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಸುಳ್ಳು ಹೇಳೋದನ್ನು ಹೇಳಿಕೊಟ್ಟಿಲ್ಲ. ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರ ಅಡ್ವೈಸ್ ತಗೊಂಡಿದ್ರೆ ಚನ್ನಾಗಿರ್ತಿತ್ತೇನೋ..?

ಅದೆಲ್ಲ ಇರಲಿ. ಮೂರು ವಾರದಿಂದ ರಾಜಕೀಯವಾಗಿ, ಮಾನಸಿಕವಾಗಿ ಪ್ರಾಣ ಹಿಂಡುತ್ತಿದ್ದ ಈ ಪ್ರಕರಣದಿಂದ ಬಚಾವಾಗಲು ಸಿದ್ದರಾಮಯ್ಯನವರು ಒದ್ದಾಡುತ್ತಿದ್ದರು. ಪ್ರತಿಪಕ್ಷಗಳು ಸಿಕ್ಕಸಿಕ್ಕಲ್ಲಿ ಡಿಶುಂ, ಡಿಶುಂ ಅನ್ನುತ್ತಿದ್ದವು. ವರಿಷ್ಠ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಜನಾರ್ಧನ ಪೂಜಾರಿ ಅವರಂಥವರ ಬಹಿರಂಗ ಟೀಕೆಗೂ ಗುರಿಯಾಗಿದ್ದರು. ಬಿಜೆಪಿಯವರು ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲು ನಿರ್ಧಾರ ಮಾಡಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ವರಿಷ್ಠರಿಗೆ ವಿವರಣೆ ನೀಡಲು ಸಿಎಂ ಶುಕ್ರವಾರ ದಿಲ್ಲಿಗೆ ತೆರಳುತ್ತಿದ್ದಾರೆ. ಅದಕ್ಕೆ ಮುನ್ನಾದಿನ ಹ್ಯೂಬ್ಲಾಟ್ ವಾಚ್ ನ  ‘ಟೈಮ್ ಸೆಟ್’ ಮಾಡಿಕೊಂಡಿರುವುದಕ್ಕೆ ಸಹಜ ಪ್ರಾಮುಖ್ಯವಿದೆ.

Leave a Reply