ಈ ರೈಲ್ವೆ ಬಜೆಟ್ ನಲ್ಲಿ ಲೆಕ್ಕ ಹಾಕಬೇಕಿರುವುದು ಯೋಜನೆಗಳನ್ನಲ್ಲ, ಸಂವೇದನೆಗಳನ್ನು!

ಚೈತನ್ಯ ಹೆಗಡೆ

ಪುಂಖಾನುಪುಂಖ ಹೊಸ ಘೋಷಣೆಗಳನ್ನೇನೂ ಮಾಡದೇ, ಇರುವ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವ ರೈಲ್ವೆ ಬಜೆಟ್ ಗುರುವಾರ ಮಂಡನೆಯಾಗಿದೆ. ಪ್ರಯಾಣ ದರದಲ್ಲೇನೂ ಏರಿಕೆ ಆಗದಿರುವುದು ಜನಸಾಮಾನ್ಯರಿಗೆ ತಕ್ಷಣದಿಂದ ನಿರಾಳ ಒದಗಿಸುವ ಅಂಶ.

ಹಾಗೆಂದು ಹೊಸ ಯೋಜನೆಗಳೇ ಇಲ್ಲವೆಂದಲ್ಲ. 5300 ಕಿ.ಮೀ ವ್ಯಾಪ್ತಿಯ 44 ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಪ್ರತಿದಿನಕ್ಕೆ 7 ಕಿ.ಮೀ ಹೊಸ ರೈಲ್ವೆ ಮಾರ್ಗ ನಿರ್ಮಾಣವೆಂಬುದು ಅತಿದೊಡ್ಡ ಗುರಿ. 40 ಸಾವಿರ ಕೋಟಿ ರುಪಾಯಿಗಳ ವೆಚ್ಚದಲ್ಲಿ 2 ಲೋಕೊ ಫ್ಯಾಕ್ಟರಿಗಳನ್ನೂ ಘೋಷಿಸಲಾಗಿದೆ.

ಉಳಿದಂತೆ ಈ ರೈಲ್ವೆ ಬಜೆಟ್ ನಲ್ಲಿ ಯೋಜನೆಗಳ ಮಳೆಗಿಂತ ಹೆಚ್ಚಾಗಿ ವ್ಯಕ್ತಗೊಂಡಿರುವುದು ಸಂವೇದನೆ ಅಂತ ವ್ಯಾಖ್ಯಾನಿಸಬಹುದು. ರೈಲ್ವೆ ನಿಲ್ದಾಣದಲ್ಲಿ ದಿನನಿತ್ಯದ ಶ್ರಮದ ಕೆಲಸದಲ್ಲಿ ತೊಡಗಿಸಿಕೊಂಡಿರುವವರನ್ನು ‘ಕೂಲಿ’ಗಳೆನ್ನದೇ ಸಹಾಯಕರೆಂದು ಕರೆಯಲಾಗುವುದೆಂಬ ನಿರ್ಣಯ ಇದೆಯಲ್ಲ… ಇದರಿಂದ ಬರುವ ಆದಾಯವೆಷ್ಟು ಎಂಬ ಪ್ರಶ್ನೆ ಅಪ್ರಸ್ತುತ. ಅಥವಾ ಇದೊಂದು ಖರ್ಚಿಲ್ಲದ ಘೋಷಣೆ ಅಂತಲೂ ವ್ಯಂಗ್ಯವಾಡಿಬಿಡಬಹುದು. ಆದರೆ ಹಣದೊಂದಿಗೆ ಆತ್ಮಸಮ್ಮಾನ ಎಂಬ ಅಂಶವೂ ಬದುಕಲ್ಲಿ ಮುಖ್ಯ ಎಂಬುದನ್ನು ಅರಿತರೆ ಇದೊಂದು ಸಣ್ಣ ಆದರೆ ಸಂವೇದನಾಶೀಲ ನಡೆ.

ಇದೇ ಸಂವೇದನೆ ಬಜೆಟ್ ನ ಬಹುಭಾಗವನ್ನು ಆವರಿಸಿದೆ. ನನ್ನ ಕೋಚ್ ಸ್ವಚ್ಛಗೊಳಿಸಿ ಅಂತ ಎಸ್ಸೆಮ್ಮೆಸ್ ನಲ್ಲಿ ಕೇಳಬಹುದಾದ ಸೌಲಭ್ಯ, ರೈಲ್ವೆ ನಿಲ್ದಾಣಗಳ ಸೌಂದರ್ಯವರ್ಧನೆ, ರೈಲುಗಳಲ್ಲಿ ಕಂದಮ್ಮಗಳನ್ನು ಕೂರಿಸುವಂಥ ವ್ಯವಸ್ಥೆಯ ಅಭಿವೃದ್ಧಿ, ಓಡುತ್ತಿರುವ ರೈಲಿನಿಂದ ಹೊರತಳ್ಳಿದ ಘಟನೆಗಳೇ ವರದಿಯಾಗುತ್ತಿರುವ ದಿನಗಳಲ್ಲಿ ಅಟೊಮ್ಯಾಟಿಕ್ ಬಾಗಿಲುಗಳನ್ನು ಜೋಡಿಸುವ ಘೋಷಣೆ, ನಿಲ್ದಾಣಗಳಲ್ಲಿ ಹಾಲು ಮತ್ತು ಬಿಸಿನೀರು ಅಗತ್ಯವಾಗಿ ಸಿಗುವಂತೆ ಕ್ರಮ, ದಿವ್ಯಾಂಗರಿಗೆ ಅನುವಾಗುವಂಥ ಶೌಚಾಲಯ ವ್ಯವಸ್ಥೆ, 17 ಸಾವಿರ ಬಯೊ ಶೌಚಾಲಯಗಳು… ಇವೆಲ್ಲವೂ ಮೇಲ್ನೋಟಕ್ಕೆ ಮಹಾ ಯೋಜನೆಗಳೇನಲ್ಲ ಅಂತನ್ನಿಸಿಬಿಡಬಹುದು. ಆದರೆ ಈ ಎಲ್ಲ ಕ್ರಮಗಳಲ್ಲೂ ಒಂದು ತೀವ್ರ ಸಂವೇದನೆ ಇದೆ. ಆಯಾ ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆ- ಕೌಶಲದ ಅಭಿವ್ಯಕ್ತಿ ಇರಬೇಕೆಂದು ಯೋಜನೆ ಹಮ್ಮಿಕೊಳ್ಳುವುದಿದೆಯಲ್ಲ, ಇದು ಕೇವಲ ಹಣಕಾಸಿನ ಅಂಕಿಅಂಶಗಳಲ್ಲಿ ಮುಳುಗಿದರೆ ಸಿಗುವ ಪರಿಕಲ್ಪನೆ ಅಲ್ಲವೇ ಅಲ್ಲ. ಗೊತ್ತಿರಲಿ, ಬಜೆಟ್ ನಲ್ಲಿ ಘೋಷಣೆಯಾದ ಈ ಕ್ರಮ ಈ ಮೊದಲೇ ಅನುಷ್ಠಾನಕ್ಕೆ ಬಂದು, ರಾಜಸ್ಥಾನದ ಹಲವು ನಿಲ್ದಾಣಗಳು ನಳನಳಿಸಿರುವ ವರದಿಗಳು ಬಂದಿವೆ.

ಈಶಾನ್ಯ ಭಾರತದ ರಾಜ್ಯಗಳನ್ನು, ಗಡಿ ಪ್ರದೇಶಗಳನ್ನು ರೈಲ್ವೆ ಜಾಲದೊಂದಿಗೆ ಬೆಸೆಯುವುದಕ್ಕೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ತೊಡಗಿಸಿರುವುದು ಸದ್ಯಕ್ಕೆ ಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೇನೂ ಸಹಾಯ ಮಾಡುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ದೇಶದ ಭದ್ರತೆ ಮತ್ತು ಬೆಸುಗೆಯ ದೃಷ್ಟಿಯಿಂದ ಇಟ್ಟಿರುವ ದಿಟ್ಟ ಹೆಜ್ಜೆ ಇದು.

ರೈಲ್ವೆ ಬಜೆಟ್ ಎಂದೊಡನೆ ಇಂತಿಂಥ ರಾಜ್ಯಗಳಿಗೆ ಇಷ್ಟಿಷ್ಟು ಹೊಸರೈಲು, ಮತ್ಯಾವುದೋ ಸ್ಪೀಡ್ ರೈಲು, ಬುಲೆಟ್ ರೈಲುಗಳ ಕನಸು ಎಂಬ ಜಾಯಮಾನಕ್ಕೆ ಲಾಗಾಯ್ತಿನಿಂದ ಒಗ್ಗಿಕೊಂಡವರು ನಾವು. ರೈಲ್ವೆ ಬಜೆಟ್ ಅಂದರೆ ಹೊಸ ಮಾರ್ಗಗಳ ಭರಪೂರ ಘೋಷಣೆ ಆಗಿಬಿಡಬೇಕು. ನಂತರ ಅವುಗಳಲ್ಲಿ ಅರ್ಧದಷ್ಟಾದರೂ ಈಡೇರದಿದ್ದರೂ ಕೇಳುವವರಿಲ್ಲ! ಈ ಮನಸ್ಥಿತಿಯಿಂದ ಬಿಡಿಸಿಕೊಂಡು ನೋಡಿದಾಗ ಸುರೇಶ್ ಪ್ರಭುರವರ ಸಂವೇದನಾಶೀಲ ರೈಲ್ವೆ ಬಜೆಟ್ ನಮ್ಮನ್ನು ತಾಗೀತು.

Leave a Reply