ಚಿತ್ತಗೆಡದಂತೆ ಪ್ರತಿಪಕ್ಷಗಳನ್ನು ಕಟ್ಟಿಹಾಕಿದ ವಿತ್ತ ಸಚಿವ ಜೇಟ್ಲಿ ಜೆಂಟಲ್ ಸ್ಟೈಲ್ ಕೂಡ ಸ್ತುತ್ಯರ್ಹ

ಡಿಜಿಟಲ್ ಕನ್ನಡ ಟೀಮ್

ಲೋಕಸಭೆ ಕಲಾಪದ ಮೊದಲ ದಿನ ಸಚಿವೆ ಸ್ಮೃತಿ ಇರಾನಿ ಬ್ಯಾಟಿಂಗ್ ನಲ್ಲಿ ಸಾಕಷ್ಟು ಸಿಕ್ಸರ್ ಗಳಿದ್ದವು. ಇನ್ನು ಎರಡನೇ ದಿನ ಗುರುವಾರದ ಕಲಾಪದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರದು ಪ್ರತಿಪಕ್ಷಗಳನ್ನು ತಾಳ್ಮೆ ಕೆದರದಂತೆ ಮಣಿಸುವ ಡಿಫೆನ್ಸ್ ತಂತ್ರವಿತ್ತು.

ಜೇಟ್ಲಿ ವಾದದ ಮುಖ್ಯಾಂಶಗಳು ಹೀಗಿವೆ:

 • ವಿಶ್ವವಿದ್ಯಾಲಯಗಳಲ್ಲಿ ಮುಕ್ತತೆ ಮತ್ತು ಸ್ವಾತಂತ್ರ್ಯ ಮುಂದುವರಿಯಬೇಕೆ? ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇವಲ ಒಂದು ಸಿದ್ಧಾಂತ ಇರಬೇಕೆ? ಎನ್ ಡಿಎ ಆಗಿರಲಿ ಅಥವಾ ಯುಪಿಎ ಆಗಿರಲಿ ಈ ಬಗ್ಗೆ ಚರ್ಚಿಸುವುದು ಅಗತ್ಯ ಹಾಗೂ ಮಹತ್ವದ್ದು.
 • ಸಮಾಜದ ದುರ್ಬಲ ವಿಭಾಗಕ್ಕೆ ಸೇರಿದ ವಿದ್ಯಾರ್ಥಿ ಮಾನಸಿಕವಾಗಿ ಬಳಲಿದರೆ, ಆ ವಿಷಯ ಕುರಿತು ಗಂಭೀರ ಚರ್ಚೆಯಾಗಬೇಕು. ಆದರೆ ಅದರಿಂದ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಆಗಬಾರದು. ಯುವಕರು ಸಾಕಷ್ಟು ಬಾರಿ ಅತಿರೇಕದ ಕೆಲಸಗಳನ್ನು ಮಾಡುತ್ತಾರೆ. ಕ್ರಮೇಣ ಬೆಳೆಯುತ್ತಾ ಹೋದಂತೆಲ್ಲಾ ಪ್ರಬುದ್ಧರಾಗಿ ಆ ರೀತಿ ಮಾಡಬಾರದಿತ್ತು ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲ ಯುವಕರು ಮೂಲಭೂತವಾದಿಗಳ ಜತೆ ಒಡನಾಟ ಹೊಂದುವುದು ಸಹಜ. ಆದರೆ, ಅವರಲ್ಲಿ ದೇಶ ಮುರಿಯುವ ಸಿದ್ಧಾಂತ ಮನೆಮಾಡಿದರೆ ಸುಮ್ಮನಿರಬೇಕೆ?
 • ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಫ್ಜಲ್ ಗುರು ಉತ್ತಮ ವಿಚಾರಣೆಗೆ ಒಳಪಟ್ಟಿದ್ದಲ್ಲದೇ, ಸುಪ್ರೀಂ ಕೋರ್ಟ್ ನಲ್ಲಿ ಹಲವು ಸುತ್ತಿನ ಮೇಲ್ಮನವಿ ಅರ್ಜಿ ವಿಚಾರಣೆಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಅಷ್ಟಾಗಿಯೂ ಉಗ್ರನೊಬ್ಬನ ಸಾವು ಸ್ಮರಿಸುವಂತಹ ಕಾರ್ಯಗಳನ್ನು ಯಾರಾದರೂ ಒಪ್ಪುತ್ತೀರಾ?
 • ಫೆ.9 ರಂದು ವಿದ್ಯಾರ್ಥಿಗಳ ಕೆಲವು ಗುಂಪುಗಳು ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ, ‘ಎ ಕಂಟ್ರಿ ವಿತ್ ಔಟ್ ಪೋಸ್ಟ್ ಆಫಿಸ್’ ಮತ್ತು ‘ಜುಡಿಶಿಯಲ್ ಕಿಲ್ಲಿಂಗ್ ಆಫ್ ಅಫ್ಜಲ್ ಗುರು’ ಎಂಬ ಘೋಷ ವಾಕ್ಯಗಳಿದ್ದ ಭಿತ್ತಿಪತ್ರ ಹಂಚಿವೆ. ಅಲ್ಲದೆ ಇದರಲ್ಲಿ ಯುಪಿಎ ಸರ್ಕಾರದ ವಿರುದ್ಧದ ಘೋಷಣೆಗಳು ತುಂಬಿದ್ದವು. ‘ಕಾಶ್ಮೀರವೇನೂ ನೆಹರೂ ಆಸ್ತಿಯಲ್ಲ. ಅಲ್ಲದೆ, ಮನ್ ಮೋಹನ್ ಸಿಂಗ್ ಮತ್ತು ಮೋದಿಗೆ ಸಂಬಂಧಿಸಿದ್ದಲ್ಲ’ ಎಂಬುದೂ ಇತ್ತು. ಈ ಪ್ರಕರಣದ ಆರೋಪಿಗಳು ಎಡಪಂಥದ ಉಗ್ರ ಸಿದ್ಧಾಂತ ಹೊಂದಿದವರು. ನಾನು ಅವರ ಬಗ್ಗೆ ಏನನ್ನೂ ಹೇಳುವುದಿಲ್ಲ. ಕಾರಣ ನನ್ನ ಮಾತಿನಿಂದ ಪ್ರಕರಣದ ತನಿಖೆಯಲ್ಲಿ ಪೂರ್ವಾಗ್ರಹ ಬೀರಬಾರದು.
 • ಆ ದಿನ ಕಾರ್ಯಕ್ರಮದ ವೇಳೆ ಕೆಲವರು ಮುಸುಕು ಧರಿಸಿದ್ದರು. ಮಾವೊವಾದಿಗಳು ಮತ್ತು ಪ್ರತ್ಯೇಕವಾದಿಗಳು ಸಹ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದರು. ಇವರು ‘ಕಾಶ್ಮೀರ ಸ್ವಾತಂತ್ರ್ಯ ಆಗುವವರೆಗೂ, ಭಾರತ ಬರ್ಬಾದ್ ಮಾಡುವವರೆಗೂ ಹೋರಾಟ ನಡೆಸುತ್ತೇವೆ’ ಎಂದು ಘೋಷಣೆ ಹಾಕಿದ್ದರು. ಆಗ ಪೊಲೀಸರು ಏನು ಮಾಡಬೇಕಿತ್ತು?
 • ಇನ್ನು ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ನಡೆದ ಪುಂಡಾಟಿಕೆಯನ್ನು ಖಂಡಿಸುತ್ತೇನೆ. ಹಾಗೆ ಖಂಡಿಸುವಾಗ ದೇಶದ್ರೋಹವನ್ನು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ ಎಂದು ಹೇಳಲು ಹೇಗೆ ಸಾಧ್ಯ? ಇದು ಕೇವಲ ಎಡಪಂಥಿಯರ ಸಿದ್ಧಾಂತ. ಈ ರೀತಿಯ ದ್ವೇಷ ಸಾಧನೆಯನ್ನು ವಾಕ್ ಸ್ವಾತಂತ್ರದ ಹೆಸರಿನಲ್ಲಿ ಬಿಟ್ಟುಬಿಡಬೇಕೆ?
 • ಇಲ್ಲಿ ಪ್ರಮುಖವಾಗಿ ಉದ್ಭವಿಸುವ ಪ್ರಶ್ನೆ, ಈ ರೀತಿಯ ಕೃತ್ಯಕ್ಕೆ ಭಾರತೀಯ ಸಂವಿಧಾನದಲ್ಲಿ ಅವಕಾಶವಿದೆಯೇ? ಎಂದು. ಈ ರೀತಿ ವೈರುಧ್ಯಗಳೇ ಭಾರತದ ಮೇಲೆ ಭೌಗೋಳಿಕ ದಾಳಿ ನಡೆಯಲು ಪ್ರೇರಣೆ.
 • ದೇಶವನ್ನು ಛಿದ್ರ ಮಾಡುತ್ತೇವೆ ಎಂದು ಹೇಳಿದವರ ಬಗ್ಗೆ ಗೊತ್ತಿಲ್ಲದೇ ಸಮರ್ಥನೆ ನೀಡಬೇಡಿ. ದೇಶದ ಹೃದಯ ಭಾಗದಲ್ಲಿ ದೇಶದ್ರೋಹಿ ಕೂಗು ಕೇಳಿ ಬಂದಾಗ ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಲ್ಲಲು ಹೇಗೆ ಸಾಧ್ಯ? ಜೆಎನ್ ಯು ಭಾರತದ ಆಂತರಿಕ ಭಾಗ. ಇಲ್ಲಿ ಭಾರತದ ಪ್ರತಿ ಕಾನೂನು ಅನ್ವಯ. ಭಾರತೀಯ ದಂಡ ಸಂಹಿತೆಯ ಉಲ್ಲಂಘನೆಯಾದರೆ, ಸಹಜವಾಗಿ ಪೊಲೀಸರಿಗೆ ವಿವಿ ಆವರಣ ಪ್ರವೇಶಿಸುವ ಅಧಿಕಾರವಿದೆ. ದೇಶ ವಿರೋಧಿ ಕೂಗು ಕೇಳಿ ಬಂದಿರುವುದು ದುರಾದೃಷ್ಟ. ಇನ್ನು ಇಂತವರನ್ನು ರಾಷ್ಟ್ರೀಯ ಪಕ್ಷಗಳು ಸಮರ್ಥಿಸುತ್ತಿರುವುದು ಇನ್ನೂ ದೊಡ್ಡ ದುರಂತ.
 • ನಾನು ಹೇಳಲಿಚ್ಛಿಸುವುದಿಷ್ಟೆ… ಆರೋಪಿಗಳ ಬಂಧನವಾಗಿದೆ. ತನಿಖೆ ನಡೆಯುತ್ತಿದೆ. ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಬೇಡ. ಉಗ್ರವಾದಿಗಳಿಂದ ಕಾಂಗ್ರೆಸ್ ನ ಇಬ್ಬರು ಪ್ರಧಾನ ಮಂತ್ರಿಗಳು ಹತ್ಯೆಯಾಗಿದ್ದಾರೆ. ಹಾಗಾಗಿ ಉಗ್ರರ ಬಗ್ಗೆ ಮಾತನಾಡುವಾಗ ನಮಗಿಂತಲೂ ನೀವು ಹೆಚ್ಚು ಆಕ್ರೋಶ ಹೊಂದಿರಬೇಕು.ರಾಜ್ಯಸಭೆಯಲ್ಲಿ ಮುಂದುವರಿದ ಗದ್ದಲ

  ಜೆಎನ್ ಯು ವಿವಾದದ ಗದ್ದಲ ರಾಜ್ಯಸಭೆ ಕಲಾಪದಲ್ಲೂ ಗುರುವಾರ ಪ್ರತಿಧ್ವನಿಸಿದೆ. ಆಡಳಿತ ಮತ್ತು ಪ್ರತಿಪಕ್ಷ ನಾಯಕರ ವಾಗ್ವಾದ ಜೋರಾಗಿ ನಡೆದಿದೆ.

  ಹೈದರಾಬಾದ್ ವಿವಿ ಸಂಶೋಧನೆ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದ ಸಂಬಂಧ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆಯನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಅಜಾದ್ ಟೀಕಿಸಿದ್ದು, ಪ್ರಮುಖರ ಹೇಳಿಕೆಗಳು ಹೀಗಿವೆ:

  ಗುಲಾಮ್ ನಬಿ: ವೆಮುಲ ಎಷ್ಟು ಕಿರುಕುಳಕ್ಕೆ ಒಳಗಾಗಿರಬಹುದು ಎಂಬುದನ್ನು ನೀವು ಊಹಿಸಿಕೊಳ್ಳಿ. ಈತನನ್ನು ದೇಶವಿರೋಧಿ ಅಂತ ಕರೆದು ಹೊರಗೆ ಹಾಕಿದರು. ಎಬಿವಿಪಿಯವರು ದೆಹಲಿ ವಿವಿಗೇಕೆ ಹೋದರು? ಈ ಪ್ರಕರಣದಲ್ಲಿ ಯಾರು ದೇಶ ವಿರೋಧಿಗಳು, ಯಾರು ಅಲ್ಲ ಎಂಬುದನ್ನು ಸರಕಾರ ತಿಳಿಸಬೇಕು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯಬಾರದು. ನಾವು ಮಾನವ ಸಂಪನ್ಮೂಲ ಸಚಿವರಷ್ಟು ಶಕ್ತಿವಂತರಲ್ಲ. ಅವರಷ್ಟು ಸುದೀರ್ಘವಾಗಿ ಮಾತನಾಡುವ ಶಕ್ತಿ ನಮಗಿಲ್ಲ. ನಕಲಿ ವಿಡಿಯೋ ಸೃಷ್ಟಿಸಿದವರ ವಿರುದ್ದ ಕ್ರಮ ಕೈಗೊಳ್ಳಿ. ಅಲ್ಲಿ ಘೋಷಣೆ ಕೂಗಿದವರೇ ಪಟಿಯಾಲ ಕೋರ್ಟ್ ಆವರಣದಲ್ಲಿ ದಾಳಿ ನಡೆಸಿದ ಬಿಜೆಪಿ ಶಾಸಕನನ್ನು ಉಳಿಸಲು ಪ್ರಯತ್ನಿಸಿದ್ದಾರೆ.

  ನಜ್ಮಾ ಹೆಫ್ತುಲ್ಲಾ: ವಿವಿಯಲ್ಲಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರಾ..? ಸಂಸತ್ ಎಂಬುದು ದೇವಾಲಯ, ಇದನ್ನು ರಕ್ಷಿಸಲು ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಿರುವಾಗ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿರಾ?

Leave a Reply