ಮಾಸ್ಟರ್ ಕಾರ್ಡ್ ನ ಸೆಲ್ಫಿ ಸುರಕ್ಷೆ ಅಂತರ್ಜಾಲ ವಹಿವಾಟಿಗೆ ಹೊಸ ಮುನ್ನುಡಿ ಬರೆದೀತೇ?

ಡಿಜಿಟಲ್ ಕನ್ನಡ ಟೀಮ್

ಕಷ್ಟ ಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿಡುವುದೇ ದೊಡ್ಡ ಸವಾಲು. ಅದರಲ್ಲೂ ಇಂದಿನ ವೇಗದ ಜಗತ್ತಿನಲ್ಲಿ ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಾವು, ಸುಲಭ ಮಾರ್ಗ ಮತ್ತು ಕಡಿಮೆ ಅವಧಿಯಲ್ಲಿ ಕೆಲಸ ಮುಗಿಸಲು ಪ್ರಯತ್ನಿಸುತ್ತೇವೆ. ಇದಕ್ಕೆ ತಂತ್ರಜ್ಞಾನದ ಆಳವಡಿಕೆ ಸಹಕಾರಿಯಾಗಿದೆ. ಜೊತೆಗೆ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಆನ್ ಲೈನ್ ಬ್ಯಾಂಕಿಂಗ್ ವಹಿವಾಟಿನ ಸಮಯದಲ್ಲಿ ಹ್ಯಾಕರ್ ಗಳಿಂದ ಹಣ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ನಾವು ಎಷ್ಟೇ ಜಾಗರೂಕರಾಗಿದ್ದರೂ ಎಷ್ಟೇ ಕ್ಲಿಷ್ಟವಾದ ರಹಸ್ಯ ಪಾಸ್ ವರ್ಡ್ ಹೊಂದಿದ್ದರೂ “ಆನ್ ಲೈನ್ ಪಾವತಿ” ವೇಳೆ ಹಣ ಕಳವು ಆಗುತ್ತದೆ. ಆದರೆ ಇದನ್ನು ತಡೆಯಲು “ಮಾಸ್ಟರ್ ಕಾರ್ಡ್” ನೂತನ ವಿಧಾನವನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಅದುವೇ “ಸೆಲ್ಫೀ ಗುರುತು” ಮತ್ತು “ಬೆರಳಚ್ಚು” ಇದರ ಮೂಲಕ ಇನ್ಮುಂದೆ ಸುರಕ್ಷಿತವಾಗಿ ಆನ್ ಲೈನ್ ಪಾವತಿ, ವಹಿವಾಟು ಮಾಡಬಹುದು.

ಯುಎಸ್ ಮತ್ತು ನೆದರ್ ಲಾಂಡ್ ನಲ್ಲಿ ನೂತನ ವ್ಯವಸ್ಥೆಯ ಸೆಲ್ಫೀ ಸಾಫ್ಟ್ ವೇರ್ ಪರೀಕ್ಷೆ ನಡೆಯುತ್ತಿದ್ದು ಶೇ 92 ರಷ್ಟು ಬಳಕೆದಾರರು ಸೆಲ್ಫೀ ಗುರುತು ವ್ಯವಸ್ಥೆಗೆ ಆದ್ಯತೆ ನೀಡಿದ್ದಾರೆ. ಮಾಸ್ಟರ್ ಕಾರ್ಡ್ ಸಹ ಪಾಸ್ ವರ್ಡ್ ಗೆ ಪರ್ಯಾಯವಾಗಿರುವ ಸೆಲ್ಫೀಗುರುತು ಮತ್ತು ಬೆರಳಚ್ಚು ಗುರುತು ವ್ಯವಸ್ಥೆಯನ್ನು ಪ್ರಾರಂಭಿಸಲು ಒಪ್ಪಿಗೆ ಸೂಚಿಸಿದೆ. ಬಯೋಮೆಟ್ರಿಕ್ ಚೆಕ್ ಗಳಿಂದ ಸಂಭವಿಸಬಹುದಾದ ಮೋಸ ತಡೆಗಟ್ಟಬಹುದು ಎಂಬುದು ಭದ್ರತಾ ಪರಿಣತರ ಮಾತು.

ಮುಂದಿನ ದಿನಗಳಲ್ಲಿ ಯುಕೆ, ಯುಎಸ್, ಕೆನಡ, ನೆದರ್ ಲ್ಯಾಂಡ್, ಬೆಲ್ಜಿಯಂ, ಸ್ಪೈನ್, ಇಟಲಿ, ಫ್ರಾನ್ಸ್, ಜರ್ಮನಿ, ಸ್ವಿಡ್ಜರ್ಲೆಂಡ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ ಮತ್ತು ಡೆನ್ ಮಾರ್ಕ್ ರಾಷ್ಟಗಳಲ್ಲಿ ಇದೇ ರೀತಿಯ ತಂತ್ರಜ್ಞಾನವನ್ನು ಅಳವಡಿಸಲು ಮಾಸ್ಟರ್ ಕಾರ್ಡ್ ಯೋಜನೆ ರೂಪಿಸಿದ್ದು, ಬಳಕೆದಾರರು ಪಿಸಿ, ಟ್ಯಾಬ್ ಆಥವಾ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಬಹುದು.

ಕಳೆದ ವಾರವಷ್ಟೇ ಯುಕೆ ಗ್ರಾಹಕರಿಗೆ ಎಚ್ ಎಸ್ ಬಿಸಿ ಬ್ಯಾಂಕ್ ಧ್ವನಿ ಗುರುತಿಸುವಿಕೆಯ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಜೊತೆಗೆ ಬೆರಳಚ್ಚು ಗುರುತನ್ನು ಬಳಸಲು ಅವಕಾಶವಿದೆ. ಈ ತಂತ್ರಜ್ಞಾನ ಗ್ರಾಹಕನ ವೇಗದ ನಡವಳಿಕೆ, ದೂರವಾಣಿ ಕರೆ, ಉಚ್ಚಾರಣೆ ಸೇರಿದಂತೆ ವಿವಿಧ ನೂರು ಬಗೆಯ ಅಡ್ಡ ತಪಾಸಣೆ ಮಾಡುವ ವ್ಯವಸ್ಥೆ ಇದೆ. ಮೂಗಿನ ರಂಧ್ರಗಳ ರಚನೆ, ಗಾಯನ ಧ್ವನಿ ಹಾಗೂ ದೈಹಿಕ ದೃಷ್ಟಿಕೋನಗಳು ಇದರಲ್ಲಿ ಒಳಗೊಂಡಿವೆ.

Leave a Reply