ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ ಯಾವುದು ಸರಿ, ಯಾವುದು ತಪ್ಪು ಎಂಬುದು ಮುಖ್ಯವಾದರೆ ಮಾತ್ರ ಸಂಸಾರ

author-geethaಹೆಣ್ಣು ವಿದ್ಯಾವಂತಳಾಗುತ್ತಾ, ಆರ್ಥಿಕವಾಗಿ ಸಬಲಳಾಗುತ್ತಾ ಸಾಗಿರುವುದು ನಾವೆಲ್ಲರೂ ಹೆಮ್ಮೆ ಪಡುವಂತ ವಿಷಯ. ಮನೆಯ ಮೂಲೆಯಲ್ಲಿ, ಅಡಿಗೆಯ ಮನೆಯಲ್ಲಿ ಜೀವಮಾನ ಪೂರಾ ಕೊಳೆಯುವುದನ್ನು ಬಿಟ್ಟು ತನ್ನ ಕಾಲ ಮೇಲೆ ತಾನು ನಿಂತು ಸಾಧಿಸುತ್ತಿರುವ ಹೆಣ್ಣು ನಮ್ಮ ಮೆಚ್ಚುಗೆಗೆ ಅರ್ಹಳು.

ಆದರೆ ಇದರ offshoot ಅಂದರೆ ಹೆಣ್ಣು ಸ್ವಾವಲಂಬನೆ ಬೆಳೆಸಿಕೊಂಡಂತೆ ವಿಚ್ಛೇದನೆಗಳು ಜಾಸ್ತಿ ಆಗುತ್ತಿವೆ ಎಂಬುದು ಒಂದು ಸರ್ವೆಯಿಂದ ದೊರೆತ ಮಾಹಿತಿ. ಇದರ ಬಗ್ಗೆ ಈಗ ಮಾತನಾಡುತ್ತಿರುವವರು ಅವಿದ್ಯಾವಂತ ಅಜ್ಜಿಯರಲ್ಲ. ವಿದ್ಯಾವಂತ, ಪ್ರತಿಭಾವಂತ ಲೇಖಕರೊಬ್ಬರು ಪ್ರಮುಖ ಆಂಗ್ಲ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದಾರೆ.

‘ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು’ ಎಂಬ ಗಾದೆ ಈ ಕಾಲಕ್ಕೆ ಪ್ರಸ್ತುತವಲ್ಲ ಎಂದು ಅದನ್ನು ಎಸೆದು ಆಚೆ ಹಾಕಿದರೆ ಒಳಿತು ಎಂದುಕೊಳ್ಳುತ್ತಿರುವಾಗ ಹೆಣ್ಣಿನ ಮೇಲೆ ಈ ಬಗೆಯ ಅಪವಾದ ಬಂದಿರುವುದು ಶೋಚನೀಯ.

ಹಿಂದೆ ಸಂಸಾರಗಳು ಚೆನ್ನಾಗಿದ್ದವು. ಮನೆ ನಂದಗೋಕುಲದಂತೆ ಇತ್ತು. ಹೆಣ್ಣು ಗೃಹಲಕ್ಷ್ಮಿಯಂತೆ, ಕ್ಷಮಯಾಧರಿತ್ರಿಯಂತೆ ಇದ್ದಳು. ಆದರೆ ಈಗ ವಿಚ್ಛೇದನಗಳು ಹೆಚ್ಚಿವೆ. ಆರ್ಥಿಕವಾಗಿ ಸ್ವತಂತ್ರಳಾಗಿರುವ ಹೆಣ್ಣು ಶಾಂತಿ, ಸಹನೆ, ತಾಳ್ಮೆ ಇಲ್ಲದೆ ಸಂಸಾರವನ್ನು ಸಲೀಸಾಗಿ ಬಿಟ್ಟುಬಿಡುತ್ತಲಿದ್ದಾಳೆ. ಪ್ರಸ್ತುತ ಸಮಾಜದಲ್ಲಿ ವಿಚ್ಛೇದನಗಳು ಹೆಚ್ಚಾಗಲು ವಿದ್ಯಾವಂತ, ಉದ್ಯೋಗಸ್ಥ ಮಹಿಳೆಯೇ ಕಾರಣ ಎಂಬುದು ಆಪಾದನೆಯ ಸಾರ. ಈ ಕುರಿತು ನಾನು ವಿಚಾರ ಮಾಡಿದೆ.

ವಿದ್ಯಾವಂತಳಲ್ಲದ, ಹೊರಗಿನ ಪ್ರಪಂಚದ ಅರಿವಿರದ, ಆರ್ಥಿಕವಾಗಿ ಗಂಡಿನ ಮೇಲೆ ಅವಲಂಬಿತಳಾದ ಹೆಣ್ಣು ಈ ಹಿಂದೆ ತನ್ನ ಗಂಡನ ಹಿಂದೆಯೇ ನಡೆಯುತ್ತಿದ್ದಳು. ‘ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ’ ಎಂಬ ನಾಣ್ನುಡಿಯಂತೆ ಅವನ ಯಶಸ್ಸಿಗೆ ಸಹಕರಿಸುತ್ತಾ, ಅವನು ನಡೆದ ಹಾದಿಯಲ್ಲಿಯೇ ನಡೆಯುತ್ತಾ ಅವನ ನೆರಳಾಗಿದ್ದಳು. ಗಂಡು ತನ್ನ ಸರ್ವಾಧಿಕಾರದಲ್ಲಿ, ಸ್ವಾತಂತ್ರ್ಯದಲ್ಲಿ ನೆಮ್ಮದಿಯಿಂದ ಇದ್ದ. ಮೂಲತಃ ಒಳ್ಳೆಯವನಾಗಿದ್ದರೆ ಹೆಂಡತಿಯನ್ನು ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದ. ಇಲ್ಲದಿದ್ದರೆ ತೊತ್ತಿನಂತೆ ನಡೆಸಿಕೊಳ್ಳುತ್ತಿದ್ದ. ‘ಹೊಟ್ಟೆ ಬಟ್ಟೆಗೆ ತತ್ವಾರ ಮಾಡಲಿಲ್ಲವಲ್ಲ’ ಎಂಬುದು ಸಂತಸದ ವಿಷಯವಾಗಿತ್ತು. ತಂದೆಯ ಬೆನ್ನ ಹಿಂದೆಯಿಂದ ಗಂಡನ ಬೆನ್ನ ಹಿಂದೆಗೆ ರವಾನೆ ಆಗುತ್ತಿದ್ದ ಹೆಣ್ಣು ಗಂಡನ ಸಾರ್ವಭೌಮತ್ವವನ್ನು ತಲೆತಗ್ಗಿಸಿ ಒಪ್ಪಿಕೊಂಡಿದ್ದಳು.

ಆದರೆ ವಿದ್ಯೆ ಹಾಗೂ ಆರ್ಥಿಕ ಸಬಲತೆ ಹಿಂದೆ ನಡೆಯುತ್ತಿದ್ದ ಹೆಣ್ಣನ್ನು ಗಂಡಿನ ಪಕ್ಕ ತಂದು ನಿಲ್ಲಿಸಿದೆ. (ಸಂಪಾದಿಸುತ್ತಿದ್ದರೂ ದುಡಿದ ದುಡ್ಡನ್ನೆಲ್ಲ ಗಂಡಿನ ಕೈಗೆ ಹಾಕಿ ಅವನ ಹಿಂದೆಯೇ ಉಳಿದಿರುವ ಆಧುನಿಕ ಸಮಾಜದ ಮಹಿಳೆಯರಿಗೇನು ಕಮ್ಮಿಯಿಲ್ಲ. ಅಂಥವಳನ್ನು ‘ಹೆಣ್ಣು ಹೀಗಿರಬೇಕು, ಸಾವಿರಗಟ್ಟಲೆ ದುಡಿದರೂ ಅಹಂಕಾರವಿಲ್ಲ’ ಎಂದು ಹೊಗಳುವುದನ್ನು ನಾನೇ ಕೇಳಿದ್ದೇನೆ!)

ಇದುವರೆಗೂ ಗಂಡಿನ ಬೆನ್ನು ನೋಡುತ್ತಾ ಅವನು ತೋರಿದ ಹಾದಿಯಲ್ಲಿ ನಡೆದ ಹೆಣ್ಣು, ಅವನ ಪಕ್ಕ ಬಂದಾಗ ಅವಳಿಗೆ ಹೊಸ ಪ್ರಪಂಚ, ಹಲವು ಹಾದಿಗಳು ಗೋಚರಿಸಿದೆ. ನಿರ್ಧಾರ ತೆಗೆದುಕೊಳ್ಳುವ ವಿವೇಚನೆ ತನ್ನಿಂತಾನೆ ಅವಳದಾಗಿದೆ. ಯಶಸ್ಸಿನ ಹಿಂದಷ್ಟೇ ಅಲ್ಲ ಯಶಸ್ಸು ಅವಳದೇ ಆಗುವ ಸಂಭವ ಹೆಚ್ಚಿದೆ. ಅವಳ ವ್ಯಕ್ತಿತ್ವಕ್ಕೆ ಪೂರಕವಾದ ಈ ಬದಲಾವಣೆ ಹಾಗೂ ಬೆಳವಣಿಗೆಯನ್ನು ಅವಳು ಒಪ್ಪಿಕೊಂಡಿದ್ದಾಳೆ. ಆದರೆ ಸಾರ್ವಭೌಮನಂತೆ ಇದ್ದ ಗಂಡು ಇದನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾನೆ. ಆದರೆ ಅರ್ಥ ಮಾಡಿಕೊಂಡು ಹೆಣ್ಣನ್ನು ಸಹಧರ್ಮಿಣಿಯಾಗಿ, ಸಹವರ್ತಿಯಾಗಿ ಸ್ವೀಕರಿಸಿರುವ ಗಂಡಸರು, ಸಂತೋಷದಿಂದಲೇ ದಾಂಪತ್ಯ ನಡೆಸುತ್ತಿದ್ದಾರೆ.

ಆರ್ಥಿಕವಾಗಿ ಸಬಲಳಾಗಿರುವ ಹೆಣ್ಣಿನಿಂದಲ್ಲ, ತನಗೆ ಸರಿಸಮಾನಳಾಗಿ ನಿಂತಿರುವ ಹೆಣ್ಣನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಗಂಡಿನ ಅಹಂನಿಂದಾಗಿಯೇ ಸಂಸಾರ ಒಡೆಯುತ್ತಲಿದೆ.

ಹೆಣ್ಣು ಎಲ್ಲಾ compromise ಗಳನ್ನು ಮಾಡಿಕೊಳ್ಳುತ್ತಿದ್ದಳು, ಆರ್ಥಿಕವಾಗಿ ಗಂಡಿನ ಮೇಲೆ ಅವಳು ಅವಲಂಭಿಸಿದ್ದಾಗ. ಆಗ ಮದುವೆ, ಸಂಸಾರ ಒಬ್ಬರ ಮಾತಿನಂತೆ ನಡೆದುಕೊಂಡು ಹೋಗುತ್ತಿತ್ತು. ಒಬ್ಬರ ಕೈಯಿ ಬಾಯಿ ಕಟ್ಟಿಹಾಕಿ ಒಬ್ಬರೇ ಆಡಳಿತ ನಡೆಸುತ್ತಾ ಎಲ್ಲಾ ಸುಂದರವಾಗಿದೆ, ಎಂದಿದ್ದಾಗ ಒಡೆಯದೆ ಇದ್ದ ಆ ಸಂಸಾರ ಸುಂದರವೇ?

ಇಬ್ಬರೂ ಅಂದರೆ ಗಂಡ, ಹೆಂಡತಿ ಇಬ್ಬರೂ ಸಮಾನ ಮನಸ್ಕರಾದಾಗ ಹೊಂದಾಣಿಕೆ ಮಾಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಏಳುತ್ತಿದೆ. ವಿಷಯ ಇಬ್ಬರಿಗೂ ಸೂಕ್ತವಾಗುವಂತೆ ಹೇಗೆ ಇತ್ಯರ್ಥವಾಗುತ್ತದೆ ಎಂಬುದು ಮುಖ್ಯವಾದಾಗ ಸಂಬಂಧ ಉಳಿಯುತ್ತದೆ. ಅಹಂನಿಂದ ಮೂಲೆ ಹಿಡಿದು ನಿಂತರೆ ಸಂಸಾರ ಒಡೆಯುತ್ತದೆ.

‘ಸಂಸಾರ ಚೆನ್ನಾಗಿರಬೇಕು ಅಂದರೆ ಒಬ್ಬರ ಮಾತು ನಡೆಯಬೇಕು. ಇಲ್ಲದಿದ್ದರೆ ದಿನಬೆಳಗಾದರೆ ಬರೀ ಜಗಳ. ಹೆಣ್ಣಿಗೆ ತಾಳ್ಮೆ ಮುಖ್ಯ’ ಎಂಬ ಮಾತು ಸವಕಲಾಗಿದೆ. ‘ಜಗಳವಾಡುತ್ತಾ, ವಾದ ಮಾಡುತ್ತಾ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಬೇಕು’ ಎಂಬುದು ಇಂದಿನ ಕಿವಿಮಾತು.

‘ಆರ್ಥಿಕ ಸಬಲತೆ ಹೆಣ್ಣಿಗೆ ಧೈರ್ಯ ಕೊಡಬೇಕು. ಆಹಂ ಬೆಳೆಸಬಾರದು. ಗಂಡಿನ ತಪ್ಪುಗಳನ್ನು ಎತ್ತಿಯಾಡುತ್ತಾ ಆಡುತ್ತಾ ದುಡಿಯುವ ಮಹಿಳೆ ತಾನೂ ಒಬ್ಬ ಗಂಡಸಿನಂತೆ ಆಗಿಬಿಡಬಾರದು ಅಲ್ಲವೇ? ಹಾಗೆಯೇ ಗಂಡಸು ‘ಅಹಂ’ ತನ್ನ ಮೂಲಭೂತ ಗುಣ ಎಂಬಂತೆ ವರ್ತಿಸುವುದನ್ನು ಬಿಡಬೇಕು. ಸಮಾಜದ, ಹಿರಿಯರ, ಮಕ್ಕಳ ಹಿತದೃಷ್ಟಿಯಿಂದ ನೋಡಿದರೆ, ಗಂಡು ಹಾಗು ಹೆಣ್ಣಿಗೆ ಮಾನಸಿಕವಾಗಿ ಅದು ಕೊಡುವ ಭದ್ರತೆಯನ್ನು ನೋಡಿದರೆ ಸಂಸಾರ ಎನ್ನುವುದು ನಮ್ಮ ಸಮಾಜದ ದೊಡ್ಡ ಅಂಗ. ಬಲು ಮುಖ್ಯ ಅಂಗ. ಯಾರು ತಪ್ಪು, .ಯಾರು ಸರಿ ಎನ್ನುವುದಕ್ಕಿಂಥ ಯಾವುದು ತಪ್ಪು, ಯಾವುದು ಸರಿ ಎಂದು ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡು ನೆಮ್ಮದಿಯಿಂದ ಬದುಕುವುದು ಮುಖ್ಯವಲ್ಲವೇ? ಸಂಸಾರ ಎನ್ನುವುದು ಒಬ್ಬರು ನಾಯಕರಿರಬೇಕು ಎನ್ನುವ ದಂಡಲ್ಲ.

Leave a Reply