ಸಂಜು ಬಾಬಾ ಬಿಡುಗಡೆ, ಆತ ಜೈಲಲ್ಲಿ ಇದ್ದಿದ್ದಾದ್ರೂ ಎಷ್ಟು ದಿನ.. ನೀವೇ ಲೆಕ್ಕ ಹಾಕಿ

ಸೋಮಶೇಖರ ಪಿ. ಭದ್ರಾವತಿ

ಬಾಲಿವುಡ್ ನಟ ಸಂಜಯ್ ದತ್ 1993ರ ಮುಂಬೈ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ, ಗುರುವಾರ ಯರವಾಡ ಜೈಲಿನಿಂದ ಬಿಡುಗಡೆಯಾದರು.

ಈ ಮಧ್ಯೆಯೂ ಸಂಜು ಸಾಕಷ್ಟು ಸುದ್ದಿ ಮಾಡಿದ್ದು ಪೆರೋಲ್ ವಿಚಾರದಲ್ಲಿ. ಪ್ರಕರಣದ ವಿಚಾರಣೆ ನಡೆಸಿ 2013ರಲ್ಲಿ ಸಂಜಯ್ ದತ್ ಗೆ ವಿಧಿಸಿದ್ದು 60 ತಿಂಗಳು ಜೈಲು ಶಿಕ್ಷೆ. ಈವರೆಗೂ ಸುಮಾರು ಮೂರು ವರ್ಷ ಅವಧಿ ಕಳೆದಿದೆ. ಈ ಅವಧಿಯಲ್ಲಿ ಸಂಜಯ್ ದತ್, ಪೆರೋಲ್ ಪಡೆದು ಜೈಲಿನಿಂದ ಹೊರಗಿದ್ದ ಕಾಲಾವಧಿ ಸುಮಾರು 5 ತಿಂಗಳು. ಈಗ ಮಹಾರಾಷ್ಟ್ರ ಸರ್ಕಾರ ಅವರಿಗೆ ಕ್ಲೀನ್ ಚಿಟ್ ನೀಡಿದ್ದರ ಜತೆ ಶಿಕ್ಷೆಯ ಪ್ರಮಾಣ ಕಡಿತಗೊಂಡು ಸಂಜಯ್ ಪೂರ್ಣ ಸ್ವಾತಂತ್ರನಾದ.

ಸಂಜಯ್ ದತ್ ಪೂರ್ಣ ಪ್ರಮಾಣದಲ್ಲಿ ಶಿಕ್ಷೆ ಅನುಭವಿಸಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ, ಈ ಪ್ರಕರಣದಲ್ಲಿ ಆತನ ಹೋರಾಟ ಬರೋಬ್ಬರಿ 23 ವರ್ಷ. ಇಷ್ಟು ವರ್ಷಗಳ ನಂತರ ಸಂಜಯ್ ದತ್ ಗೆ ಪರಿಪೂರ್ಣವಾದ ನೆಮ್ಮದಿ ಸಿಕ್ಕಿದೆ. ಇದೇ ಕಾರಣಕ್ಕೆ ಸಂಜಯ್ ದತ್ ಜೈಲಿನಿಂದ ಹೊರ ಬಂದಾಗ ಹೇಳಿದ ಮಾತು, ‘ಸ್ವತಂತ್ರವಾಗುವುದು ಸುಲಭದ ಮಾತಲ್ಲ’.

ಸಂಜಯ್ ದತ್ ಗೆ ವಿಧಿಸಿದ ಜೈಲು ಅವಧಿ, ಅವರಿಗೆ ಸಿಕ್ಕ ವಿವಿಧ ವಿನಾಯಿತಿಯ ಬಗ್ಗೆ ಇಲ್ಲಿ ನೀವೇ ಲೆಕ್ಕ ಹಾಕಿ..

  • ಸಂಜಯ್ ದತ್ ಗೆ ವಿಧಿಸಲಾದ ಜೈಲು ಶಿಕ್ಷೆ ಐದು ವರ್ಷ. ಅಲ್ಲಿಗೆ ಒಟ್ಟು 60 ತಿಂಗಳು.
  • ಪ್ರಕರಣದ ವಿಚಾರಣೆಯಲ್ಲಿ ಸಂಜಯ್ 18 ತಿಂಗಳು ಕಳೆದಿದ್ದ ಹಿನ್ನೆಲೆಯಲ್ಲಿ, 60ರಲ್ಲಿ 18 ಕಳೆದು ಒಟ್ಟು 42 ತಿಂಗಳು ಜೈಲಲ್ಲಿ ಇರಬೇಕಿತ್ತು.
  • ಈ 42 ತಿಂಗಳ ಪೈಕಿ, ಉತ್ತಮ ವರ್ತನೆ ಹಾಗೂ ಜೈಲಿನಲ್ಲಿ ರೆಡಿಯೋ ನಡೆಸಿಕೊಟ್ಟಿದ್ದು ಹಾಗೂ ಇತರೆ ಚಟುವಟಿಕೆಯಲ್ಲಿ ಭಾಗಿಯಾಗಿ ಪ್ರತಿ ತಿಂಗಳಿಗೆ 7 ದಿನಗಳ ಕಾಲ ಶಿಕ್ಷೆ ವಿನಾಯಿತಿ ಪಡೆದ. ಆ ಮೂಲಕ 5 ವರ್ಷದಲ್ಲಿ 420 ದಿನ ಎಗರಿತು.
  • ಅಲ್ಲಿಗೆ, ಸಂಜು ಬಾಬಾ ಜೈಲಿನಲ್ಲಿ ಉಳಿಯಬೇಕಾಗಿದ್ದು 840 ದಿನ. ಇದರಲ್ಲಿ ಪ್ರತಿ ವರ್ಷಕ್ಕೆ 28 ದಿನ ಬಿಡುವು ಎಂದು 84 ದಿನ ಮತ್ತೆ ಕಟ್.
  • ಆ ಮೂಲಕ ಸಂಜಯ್ ದತ್ ಜೈಲಿನಲ್ಲಿದ್ದದ್ದು, 756 ದಿನ. ಅಂದರೆ 25.2 ತಿಂಗಳು ಮಾತ್ರ.

ಸಂಜಯ್ ದತ್ ಬಿಡುಗಡೆಯಾದ ಸುದ್ದಿ ಗುರುವಾರ ಎಷ್ಟರ ಮಟ್ಟಿಗೆ ಸುದ್ದಿಯಾಯಿತೆಂದರೆ, ಲೋಕಸಭೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಬಜೆಟ್ ಮಂಡನೆಯೂ ಸ್ವಲ್ಪ ಮಟ್ಟಿಗೆ ಮಂಕಾಯಿತು. ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿದ್ದರಿಂದ ಹಿಡಿದು, ಆತ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿದ್ದು, ಅಲ್ಲಿಂದ ತನ್ನ ತಾಯಿಯ ಸಮಾಧಿಗೆ ಹೋಗಿದ್ದು, ನಂತರ ಮನೆ ತಲುಪಿದ್ದು, ಆತನ ಪತ್ರಿಕಾಗೋಷ್ಠಿ ಹೀಗೆ ಪ್ರತಿಯೊಂದು ಹೆಜ್ಜೆಯ ನೇರ ಪ್ರಸಾರದಲ್ಲಿ ಮಾಧ್ಯಮಗಳು ಮುಳುಗಿದವು. ಸಂಜಯ್ ದತ್ ಜೈಲಿನ ಪ್ರಕರಣ, ಜೆಎನ್ ಯು ಪ್ರಕರಣದಲ್ಲಿ ಕನ್ಹಯ್ಯಾ ಕುಮಾರ್ ಜಾಮೀನು, ಉಮರ್ ಖಲೀಲ್ ಬಂಧನ ಈ ಎಲ್ಲ ಬೆಳವಣಿಗೆಗಳನ್ನು ಮಾಧ್ಯಮಗಳು ಬಿಂಬಿಸುತ್ತಿರುವ ಪರಿ ಯಾವ ಮಟ್ಟಿಗೆ ಇದೆ ಎಂದರೆ, ನಾವು ಸುದ್ದಿಯಾಗಬೇಕು ಅಂದ್ರೆ ಒಳ್ಳೆ ಕೆಲಸವಷ್ಟೇ ಮಾಡಬೇಕಿಲ್ಲ; ಜೈಲಿಗೆ ಹೋದರೂ ಸಖತ್ ಸುದ್ದಿಯಾಗುವುದು ಅನುಮಾನವಿಲ್ಲ ಎಂಬ ವಾತಾವರಣ ನಿರ್ಮಿಸಿದೆ.

Leave a Reply