ಸುರೇಶ್ ಪ್ರಭು ಉತ್ತಮ ಚಿಂತನೆಯ ಕೆಲಸಗಾರ, ಆದ್ರೆ ಈ ಬಾರಿ ರೈಲ್ವೆ ಬಜೆಟ್ ವಿಚಾರದಲ್ಲಿದೆ ಮೂಗುದಾರ

ಡಿಜಿಟಲ್ ಕನ್ನಡ ಟೀಮ್

ರೈಲ್ವೆ ಬಜೆಟ್ ಮಂಡನೆಯಾಗುತ್ತಲೇ ಹೊಸ ಮಾರ್ಗಗಳೇನು, ಯಾವ ರಾಜ್ಯಕ್ಕೆ ಎಷ್ಟು ಸಿಕ್ತು, ದರದಲ್ಲಿ ಹೆಚ್ಚಳ ಆಯ್ತಾ ಎಂಬಿತ್ಯಾದಿ ಅಂಶಗಳ ಸುತ್ತ ಚರ್ಚೆ ನಡೆಸಲಾಗುತ್ತದೆ.

ಇವೆಲ್ಲ ಮುಖ್ಯವೇ ಆದರೂ, ಭಾರತೀಯ ರೈಲ್ವೆ ಎಂಬ ಬೃಹತ್ ಜಾಲದಲ್ಲಿ ಹೊಸ ಮಾರ್ಗಗಳನ್ನು ಸೇರಿಸುವಷ್ಟೇ ಮುಖ್ಯವಾಗಿ ಈಗಿರುವ ವ್ಯವಸ್ಥೆಯನ್ನು ಸುಖಕರ ಮಾಡುವುದಕ್ಕೆ ಹಣ ವ್ಯಯಿಸಬೇಕಿರುವ ನಿಟ್ಟಿನಲ್ಲಿ ಚರ್ಚೆಗಳು ಹೆಚ್ಚಬೇಕಿವೆ. ಹಾಗೆ ನೋಡಿದರೆ, ರೈಲ್ವೆ ಸಚಿವರಾಗಿರುವ ಸುರೇಶ್ ಪ್ರಭು ಇಂಥದೇ ಚಿಂತನೆಯವರೇ. ಒಂದಿಷ್ಟು ರೈಲು ಮಾರ್ಗಗಳನ್ನು ಘೋಷಿಸಿ ಕೈ ತೊಳೆದುಕೊಳ್ಳುವ ಜಾಯಮಾನವೇನೂ ಅವರದ್ದಲ್ಲ.

ಆದರೆ… ಈ ಬಾರಿ ಜನಪ್ರಿಯ ವರಸೆಗೆ ವಿರುದ್ಧವಾದ ಯೋಜನೆಗಳನ್ನು ಹಮ್ಮಿಕೊಳ್ಳುವುದಕ್ಕೆ ಅವರಿಗೂ ಕಷ್ಟವಿದೆ. ಅವರೆದುರು ಸವಾಲುಗಳು ಹೀಗಿವೆ.

  • ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಎದುರಿಗಿದೆ. ಹೀಗಾಗಿ ಇರುವ ವ್ಯವಸ್ಥೆಯ ಆಧುನೀಕರಣಕ್ಕೆ ಹಣ ಹಾಕುವುದಕ್ಕಿಂತ ಹೆಚ್ಚಾಗಿ, ಈ ರಾಜ್ಯಗಳಿಗೆಲ್ಲ ಎಷ್ಟು ಹೊಸ ರೈಲುಗಳು ಸಿಕ್ಕವು ಎಂಬ ಜನಪ್ರಿಯ ಅಂಶಗಳೇ ಹೆಡ್ ಲೈನ್ ಆಕ್ರಮಿಸಿಬಿಡುತ್ತವೆ. ಇದನ್ನು ಸರಿತೂಗಿಸಬೇಕಾದ ಸಂಕಷ್ಟದಲ್ಲಿದ್ದಾರೆ ಸುರೇಶ್ ಪ್ರಭು. ಹಿಂದಿನ ಬಾರಿ ಒಂದೇ ಹೊಸಮಾರ್ಗವನ್ನೂ ಘೋಷಿಸದೇ ವಾಸ್ತವತೆಗೆ ಸ್ಪಂದಿಸುವ ಛಾತಿ ತೋರಿದ್ದ ಅವರಿಗೆ ಈ ಬಾರಿ ಅಂಥದೆಲ್ಲ ಸಾಧ್ಯವಾಗುವುದು ಕಷ್ಟ.
  • ಈ ವಿತ್ತವರ್ಷದಲ್ಲಿ ರೈಲ್ವೆ ಆದಾಯ ಶೇ. 5.8 ರಷ್ಟು ಏರಿಕೆ ಕಂಡಿದೆಯಾದರೂ ಈ ಹಿಂದಿನ ಎರಡಂಕಿ ಪ್ರಗತಿಗೆ ಹೋಲಿಸಿದರೆ ಇದು ಕಡಿಮೆ. ರೈಲ್ವೆಯ 20 ಲಕ್ಷಕ್ಕೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರ ವರ್ಗಕ್ಕೆ ಶೇ. 24ರ ವೇತನ ಹೆಚ್ಚಳ ಘೋಷಿಸಿರುವುದು ಖಜಾನೆ ಮೇಲೆ ಭಾರ ಬಿದ್ದಿದೆ.
  • ಪ್ರಯಾಣಿಕರು ಮತ್ತು ಸರಕುಗಳ ಸಾಗಣೆ ದರ ಹೆಚ್ಚಳಕ್ಕೂ ಇದು ಸಮಯವಲ್ಲ. ಏಕೆಂದರೆ ಅರ್ಥವ್ಯವಸ್ಥೆ ಕುಂಟುತ್ತಿದೆ ಹಾಗೂ ಚುನಾವಣೆಗಳು ಎದುರಿಗಿವೆ. ಸುರಕ್ಷತೆ, ವಿದ್ಯುದೀಕರಣ, ಬೋಗಿಯೊಳಗಿನ ಸೌಲಭ್ಯಗಳ ಸುಧಾರಣೆ ಇವೆಲ್ಲವೂ ತುರ್ತು ವಿಷಯಗಳೇ. ಜನ ಈ ಬಗ್ಗೆ ಮಾತಾಡುತ್ತಾರಾದರೂ, ಕೊನೆಗೂ ನಮ್ಮೂರಿಗೆ ರೈಲುಗಳೆಷ್ಟು ಘೋಷಣೆ ಆದವು ಎಂಬ ಆಧಾರದಲ್ಲಿ ಬಜೆಟ್ ಅಳೆಯಲಾಗುತ್ತದೆಯಾದ್ದರಿಂದ, ವಿಧಾನಸಭೆ ಚುನಾವಣೆಗಳನ್ನು ಎದುರಿಗಿರಿಸಿಕೊಂಡು ಜನಪ್ರಿಯ ಭಾವನೆಗಳಿಗೆ ನೀರೆರೆಯದೇ ಬಿಡಲಾಗುವುದಿಲ್ಲ.

Leave a Reply