ಅಗ್ಗದ ಮೊಬೈಲ್ ಫೋನ್ ಗೂ ಮೇಕ್ ಇನ್ ಇಂಡಿಯಾಕ್ಕೂ ಸಂಬಂಧವಿಲ್ಲ, ಸರ್ಕಾರವೂ ಮೊಳಗಿಸಿದೆ ಪರೋಕ್ಷ ಎಚ್ಚರಿಕೆ ಗಂಟೆ!

ಡಿಜಿಟಲ್ ಕನ್ನಡ ಟೀಮ್
ಫ್ರೀಡಂ 251 ಬಗ್ಗೆ ಇದ್ದ ಹೈಪುಗಳೆಲ್ಲ ಒಂದೊಂದಾಗಿ ಕರಗಿ ಅನುಮಾನಗಳಾಗಿ ಪರಿವರ್ತಿತವಾಗುತ್ತಿರುವ ಕ್ಷಣವಿದು.
ಇನ್ನೂ ಪ್ರಾರಂಭವೇ ಆಗಿರದ ಉತ್ಪಾದನಾ ಘಟಕಗಳ ನಕ್ಷೆಯನ್ನಿಟ್ಟುಕೊಂಡು ಮೊಬೈಲ್ ಫೋನ್ ಗಳಿಗೆ ಆರ್ಡರ್ ಪಡೆದಿದ್ದು ಸರಿಯೇ ಎಂಬುದೇ ಮೊದಲಿಗೆ ಕಾಡಿದ ಅನುಮಾನ. ಆರ್ಡರ್ ಬಂದಿರುವ 25 ಲಕ್ಷ  ಫ್ರೀಡಂ 251 ಸೆಲ್ ಫೋನ್ ಗಳನ್ನು ವಿತರಿಸುವುದಕ್ಕೆ ನಾಲ್ಕು ತಿಂಗಳ ಕಾಲಾವಕಾಶ ತೆಗೆದುಕೊಂಡಿರುವ ಕಂಪನಿಗೆ ಈ ಮೊದಲು ಎಲೆಕ್ಟ್ರಾನಿಕ್ ವಸ್ತು ಉತ್ಪಾದನೆ ಕ್ಷೇತ್ರದಲ್ಲಿ ಏನೇನೂ ಅನುಭವ ಇಲ್ಲ ಅನ್ನೋದು, ಇವರು ನಿಜಕ್ಕೂ ಡೆಡ್ ಲೈನ್ ಮೀಟ್ ಮಾಡ್ತಾರಾ ಎಂಬ ಅನುಮಾನ ಮತ್ತೆ ಬಲವಾಗುವಂತೆ ಮಾಡಿದೆ. ಸೆಲ್ ಫೋನ್ 251 ರುಪಾಯಿಗಳಿಗೇ ಕೊಟ್ಟು ಚಾರ್ಜರ್ ಗೆ ಸಾವಿರಾರು ರುಪಾಯಿ ನಿಗದಿಪಡಿಸಲಾಗಿದೆ ಅಂತ ಇತ್ತೀಚೆಗೆ ಸುದ್ದಿ ಬಂತು.
ಹಿಂಗೆ ಫ್ರೀಡಂ 251ರ ಉತ್ಪಾದನಾ ಕಂಪನಿ ರಿಂಗಿಂಗ್ ಬೆಲ್ ದಿನಕ್ಕೊಂದು ವರಸೆ ತೆಗೆದಿರೋದನ್ನು ನೋಡಿ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಇವರ ಕಂಪನಿಗೂ ಹಾಗೂ ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳಿಗೂ ಯಾವ ಸಂಬಂಧವೂ ಇಲ್ಲ ಅಂತ ‘ಇಂಡಸ್ಟ್ರಿಯಲ್ ಪಾಲಿಸಿ ಅಂಡ್ ಪ್ರಮೋಷನ್ ಡಿಪಾರ್ಟ್ ಮೆಂಟ್ ’ನ ಕಾರ್ಯದರ್ಶಿ ಅಮಿತಾಭ್ ಕಾಂತ್ ಗುರುವಾರ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಜಗತ್ತಿನ ಅತಿ ಅಗ್ಗದ ಸ್ಮಾರ್ಟ್ ಫೋನ್ ಎಂದು ಪ್ರಚಾರ ಗಿಟ್ಟಿಸಿಕೊಂಡ ಫ್ರೀಡಂ 251 ಬಿಡುಗಡೆಯಲ್ಲಿ ಸಚಿವ ಮನೋಹರ ಪರಿಕರ್ ಭಾಗವಹಿಸಿದ್ದರು. ಅಲ್ಲದೇ, ಅಷ್ಟು ಅಗ್ಗಕ್ಕೆ ಸ್ಮಾರ್ಟ್ ಫೋನ್ ಪೂರೈಸುವುದಕ್ಕೆ ಸಬ್ಸಿಡಿ ನೆರವೂ ಸಾಥ್ ನೀಡಲಿದೆ ಅಂತ ರಿಂಗಿಂಗ್ ಬೆಲ್ ಹೇಳಿತ್ತು. ಸರ್ಕಾರದ ಸಬ್ಸಿಡಿ ಎಂದರೆ ಅದು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯೇ ದೊರೆತಿರಬಹುದು ಎಂಬ ಅಂದಾಜಿತ್ತು. ಇಷ್ಟಕ್ಕೂ ಸರ್ಕಾರದ ಸಬ್ಸಿಡಿ ದೊರೆತಿರುವುದು ಯಾವ ಆಧಾರದಲ್ಲಿ ಎಂಬುದಿನ್ನೂ ಸ್ಪಷ್ಟವಿಲ್ಲ. ಆದರೆ ರಿಂಗಿಂಗ್ ಬೆಲ್ ನ ಎಚ್ಚರಿಕೆ ಗಂಟೆಗಳನ್ನು ಗ್ರಹಿಸಿರುವ ಸರ್ಕಾರ, ಅದರೊಂದಿಗೆ ಸಮೀಕರಿಸದಂತೆ ಜಾಗ್ರತೆ ವಹಿಸುತ್ತಿರುವುದು ಸ್ಪಷ್ಟವಾಗಿದೆ. ಫೆಬ್ರವರಿ 23ರಂದು ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ಸಹ ಈ ಬಗ್ಗೆ ಮಾತನಾಡಿ, ಇಷ್ಟು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ಒದಗಿಸುವುದು ನಿಜಕ್ಕೂ ಸಾಧ್ಯವೇ ಅಂತ ಕೇಳಿದ್ದೇವೆ. ರಿಂಗಿಂಗ್ ಬೆಲ್ ನ ಒಟ್ಟಾರೆ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಲಾಗುವುದು. ಯಾವುದೇ ಲೋಪಗಳು ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದಿದ್ದಾರೆ.
ಅಲ್ಲಿಗೆ ರಿಂಗಿಂಗ್ ಬೆಲ್ ಕುರಿತ ಎಚ್ಚರಿಕೆ ಗಂಟೆಯ ಸದ್ದು ಮತ್ತಷ್ಟು ದೃಢವಾಗಿದೆ.

Leave a Reply