ಅಯ್ಯಯ್ಯೋ.., ಸಿದ್ದರಾಮಯ್ಯನವರ ವಾಚ್ ಕದ್ದಿದ್ದಂತೆ.. ಕುಮಾರಸ್ವಾಮಿ ಹಾಕವ್ರೆ ಹೊಸ ಬಾಂಬ್!

ಡಿಜಿಟಲ್ ಕನ್ನಡ ಟೀಮ್

ಯಾಕೋ, ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಈ ವಾಚು ಕಳೆದೊಂದು ತಿಂಗಳಿಂದ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಅದರಿಂದ ಬಿಡಿಸಿಕೊಳ್ಳಲು ಗುರುವಾರವಷ್ಟೇ ಸಿಎಂ ಪತ್ರಿಕಾಗೋಷ್ಠೀಲಿ ಸ್ಪಷ್ಟನೆ ನೀಡಿ ಇನ್ನೇನು ಕೈ ತೊಳಕೋಬೇಕು ಅನ್ನುವಷ್ಟರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಇನ್ನೊಂದು ಬಾಂಬ್ ಸ್ಫೋಟಿಸಿದ್ದಾರೆ. ‘ಸಿಎಂ ಕಟ್ಟಿದ್ದ ವಾಚ್ ಗಿಫ್ಟ್ ಕೊಟ್ಟಿದ್ದಲ್ಲ, ಅದು ಕದ್ದಿದ್ದು’ ಅಂತ.

ಕುಮಾರಸ್ವಾಮಿ ಹೇಳಿದ್ದು: ‘ಸಿದ್ದರಾಮಯ್ಯ ತಮ್ಮ ಬಳಿ ಇರೋ ವಾಚು ದುಬೈ ಸ್ನೇಹಿತ ಡಾ. ಗಿರೀಶ್ ಚಂದ್ರ ವರ್ಮಾ ಕೊಟ್ಟಿದ್ದು ಅಂತ ಹೇಳಿದ್ದಾರೆ. ಆದರೆ, ಈ ವಾಚ್ ನ ನಿಜವಾದ ಮಾಲೀಕ ಕುಂದಾಪುರ ಮೂಲದ, ಬೆಂಗಳೂರಿನ ರೆಸ್ಟ್ ಹೌಸ್ ರಸ್ತೆಯ ಮೊಹಿಸಿ ಅಪಾರ್ಟ್ ಮೆಂಟ್ ವಾಸಿ ಡಾ. ಸುಧಾಕರ ಶೆಟ್ಟಿ ಎಂಬವರು. ಕಳೆದ ವರ್ಷ ಜುಲೈ 7 ರಂದು ಡಾ.ಸುಧಾಕರ ಶೆಟ್ಟಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ತಮ್ಮ ಮನೆಯಲ್ಲಿ ನಾಲ್ಕು ವಾಚು, ಚಿನ್ನಾಭರಣ ಕಳುವಾಗಿದೆ ಎಂದು ದೂರು ನೀಡಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುವ ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸುಧಾಕರ ಶೆಟ್ಟಿ ಅವರ ಕಾರು ಚಾಲಕ ಆನಂದ್ ಪೂಜಾರಿ, ಮನೆ ಕೆಲಸದಾಕೆ ಮತ್ತು ಯಶೋಧ ಎಂಬುವರ ವಿಚಾರಣೆ ನಡೆಸಲಾಗಿತ್ತು. ಈಗ ಸಿಎಂ ಧರಿಸುತ್ತಿರುವ ವಾಚು ಸುಧಾಕರ ಶೆಟ್ಟಿ ಅವರ ಮನೆಯಿಂದ ಕಳುವಾಗಿದ್ದುದು ಎಂಬ ಅನುಮಾನವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು.’

‘ಈ ಬಗ್ಗೆ ನಾನು ಸುಧಾಕರ್ ಶೆಟ್ಟಿ ಅವರಿಂದ ಮಾಹಿತಿ ಪಡೆದ ನಂತರ ಅವರು ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಹೋಗಿದ್ದಾರೆ. ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ.’

ಕುಮಾರಸ್ವಾಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡುತ್ತಿದ್ದಂತೆ, ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ ಶೆಟ್ಟಿ, ‘ಸಿಎಂ ಬಳಿ ಇರೋ ವಾಚ್ ನಂದಲ್ಲ. ಕಳೆದು ಹೋದ ವಾಚ್ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ವಿನಾಕಾರಣ ಸುಳ್ಳು ಹೇಳಿ ಮುಂಖ್ಯಮಂತ್ರಿಯವರ ಹೆಸರು ಕೆಡಿಸಬಾರದು. ನಮ್ಮ ಮನೆಯಲ್ಲಿ ಕಳ್ಳತನವಾಗಿದ್ದು 3 ವಾಚ್ ಗಳು. ಕುಮಾರಸ್ವಾಮಿ ಹೇಳಿರುವ ವಾಚ್ ನನ್ನದಲ್ಲ’ ಎಂದಿದ್ದಾರೆ.

ಸಿಎಂ ಪ್ರತಿಕ್ರಿಯಿಸಿದ್ದು ಹೀಗೆ: ‘ಕುಮಾರಸ್ವಾಮಿ ಏನು ಹೇಳಿದ್ದಾನೆ ಅಂತ ನಂಗೆ ಗೊತ್ತಿಲ್ಲ. ಆತ ಮಾಡುವ ಆರೋಪ ಬೇಸ್ ಲೆಸ್. ಅವನ ಮಾತು ಹಿಟ್ ಅಂಡ್ ರನ್ ಕೇಸ್ ಇದ್ದಹಾಗೆ. ಸತ್ಯಾಂಶ ಇಲ್ಲದೇ ಆರೋಪ ಮಾಡುತ್ತಾನೆ. ವಾಚ್ ಬಗ್ಗೆ ನಿನ್ನೆಯೇ ಎಲ್ಲ ಸ್ಪಷ್ಟವಾಗಿ ಹೇಳಿದ್ದೇನೆ. ಕಳೆದ 23 ರಂದು ಸ್ವತಃ ಗಿರಿಶ್ ಚಂದ್ರ ವರ್ಮಾ ವಾಚ್ ಗಿಫ್ಟ್ ಕೊಟ್ಟಿರುವ ಬಗ್ಗೆ ಪ್ರಮಾಣಪತ್ರ ಸಹ ನೀಡಿದ್ದಾರೆ. ಅವರು ತುಂಬಾ ಬ್ಯುಸಿಯಾಗಿದ್ರು. ಅದಕ್ಕೆ ತಡವಾಗಿ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯ್ತಿ ಚುನಾವಣೆ ಇದ್ದಿದ್ರಿಂದ ಡಿಸ್ ಕ್ಲೋಸ್ ಮಾಡಿರ್ಲಿಲ್ಲ.’

ಯಾರು ಏನಾದರೂ ಹೇಳಲಿ, ಈ ವಾಚ್ ಪ್ರಕರಣ ಮಾತ್ರ ದಿನೇ ದಿನೇ ಕಗ್ಗಂಟಾಗುತ್ತಿದೆ. ಹೊಸ, ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಈ ಮೂವರ ಹೇಳಿಕೆ ಒಂದೊಂದು ರೀತಿ ಇದೆ. ಸದ್ಯಕ್ಕೆ ಈ ಪ್ರಕರಣ ಅಲ್ಲಾವುದ್ದೀನ್ ನ ಮಾಯ ದೀಪದಂತಾಗಿದೆ. ಮುಂದ್ಯಾವ ದಿಕ್ಕೋ ನೋಡಬೇಕು.

Leave a Reply