ಸಿಎಂ ಟೈಮ್ ತೀರಾ ಕೆಟ್ಟೋದಂಗಿದೆ, ಅವರನ್ನೂ ಸೇರಿಸಿ ಸಂಪುಟಕ್ಕಾಗಲಿ ಮೇಜರ್ ಸರ್ಜರಿ ಅಂದವ್ರೆ ಹರಿಪ್ರಸಾದ್!

ಡಿಜಿಟಲ್ ಕನ್ನಡ ಟೀಮ್

ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಅನುಮತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಲ್ಲಿಗೆ ಹೋಗಿ ಕೂತಿದ್ದಾರೆ. ಆದರೆ ಬರೀ ಸಚಿವರ ಬದಲಾವಣೆ ಆದರೆ ಸಾಲದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಆಗಬೇಕು ಎಂದು ಬಾಂಬ್ ಸಿಡಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಕರ್ನಾಟಕದಿಂದ ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಸುತ್ತಿರುವ ಹರಿಪ್ರಸಾದ್ ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಪಾಲಿನ ಆಪತ್ಬಾಂಧವ ಆಗಿದ್ದವರು. ಜೆಡಿಎಸ್ ತೊರೆದು ಕಾಂಗ್ರೆಸ್ಸಿಗೆ ಬಂದು ಹಿರಿಯ ನಾಯಕರ ಅಸಹಕಾರದಿಂದ ತೊಳಲಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮಟ್ಟದಲ್ಲಿ ರಕ್ಷಿಸಿದವರು. ಅಂತಾ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯನವರ ನಡುವೆ ಸಂಬಂಧ ಇತ್ತೀಚೆಗೆ ಹಳಸಿ ಹೋಗಿತ್ತು. ಈ ಬಗ್ಗೆ ಡಿಜಿಟಲ್ ಕನ್ನಡ ಕಳೆದ ಜ. 27 ರಂದು ವಿಶೇಷ ವರದಿಯನ್ನೂ ಪ್ರಕಟಿಸಿತ್ತು.

ಇದೀಗ ಅದೇ ಹರಿಪ್ರಸಾದ್ ಅವರು ಸಿದ್ದರಾಮಯ್ಯ ಕೂಡ ಬದಲಾವಣೆಗೆ ಹೊರತಲ್ಲ ಎಂದು ಹೇಳಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ, ಸಿಎಂ ವಾಚ್ ಪ್ರಕರಣ, ಸಂಪುಟ ಪುನಾರಚನೆ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಅವರನ್ನು ಕರೆಸಿಕೊಂಡು ಒಂದು ಸುತ್ತಿನ ವಿವರ ಪಡೆದಿದ್ದರು. ಸಿದ್ದರಾಮಯ್ಯ ಶುಕ್ರವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮತ್ತೊಂದು ಸುತ್ತಿನ ಮಾಹಿತಿ ನೀಡಿರುವ ಬೆನ್ನಲ್ಲೇ ಹರಿಪ್ರಸಾದ್ ಈ ಬಾಂಬ್ ಹಾಕಿದ್ದಾರೆ.

ಹರಿಪ್ರಸಾದ್ ಅವರ ಪ್ರಕಾರ, ಸಂಪುಟಕ್ಕೆ ಮೇಜರ್ ಸರ್ಜರಿಗೆ ಕಾಲ ಪಕ್ವವಾಗಿದೆ. ಏಕೆಂದರೆ ಸಂಪುಟದ ತುಂಬಾ ಬರೀ ನಿಷ್ಕ್ರಿಯ ಸಚಿವರೇ ತುಂಬಿಕೊಂಡಿದ್ದಾರೆ. ಈ ಸರ್ಜರಿಗೆ ಸಿಎಂ ಕೂಡ ಹೊರತಲ್ಲ. ಈವರೆಗೂ ಮಂತ್ರಿ ಮಂಡಲದಲ್ಲಿರುವವರು ಮಾಡಿರೋ ಕೆಲಸ ಸಾಕು. ಅವರನ್ನು ಪಕ್ಷದ ಕೆಲಸಕ್ಕೆ ಹಚ್ಚಿ ಹೊಸಬರಿಗೆ ಅವಕಾಶ ಕೊಡಬೇಕು. ಅಂದರೆ ಹರಿಪ್ರಸಾದ್ ಅವರ ಗುರಿ ಸಿದ್ದರಾಮಯ್ಯ ಮತ್ತು ಸಂಪುಟದಲ್ಲಿರುವ ಅವರ ಆಪ್ತ ಬಳಗ ಎಂಬುದು ಸುಸ್ಪಷ್ಟ. ಸಿದ್ದರಾಮಯ್ಯ ಬಳಗವನ್ನು ನಿವಾರಿಸಿ ಬೇರೆಯವರನ್ನು ಸಂಪುಟಕ್ಕೆ ತರಬೇಕು ಎನ್ನುವುದು ಅವರ ಮಾತಿನ ಹಿಂದಿರುವ ಇಂಗಿತ.

ಎಸ್.ಎಂ. ಕೃಷ್ಣ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಜನಾರ್ದನ ಪೂಜಾರಿ ಅವರಂತಹ ಹಿರಿಯ ನಾಯಕರು ಸರಕಾರದ ಬಗ್ಗೆ ಅಲ್ಲಲ್ಲಿ ಟೀಕೆ ಮಾಡುತ್ತಾ ಬಂದಿದ್ದರೂ ಹರಿಪ್ರಸಾದ್ ಅವರಂತೆ ಮುಖ್ಯಮಂತ್ರಿ ಹುದ್ದೆ ಬುಡಕ್ಕೆ ಯಾರೂ ಕೈ ಹಾಕಿರಲಿಲ್ಲ. ಈಗ ಹರಿಪ್ರಸಾದ್ ಆಡಿರುವ ಮಾತು ಮೂರು ವರ್ಷದಿಂದ ಸಿದ್ದರಾಮಯ್ಯ ಅವರ ಬಗ್ಗೆ ಅಂತರಂಗದಲ್ಲಷ್ಟೇ ಕಾರಿಕೊಳ್ಳುತ್ತಿದ್ದ ನಾಯಕರಿಗೆ ಬಿಡೆ ಕಳೆದುಕೊಳ್ಳಲು ಇಂಬುಗೊಟ್ಟಿದೆ. ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯನವರಿಗೆ ಅರಿವಿದ್ದಿದ್ದರೆ ಹೆಬ್ಬಾಳ ಅಭ್ಯರ್ಥಿ ಬಗ್ಗೆ ಅಷ್ಟೆಲ್ಲ ಗೊಂದಲ ಮೂಡಿಸುತ್ತಿರಲಿಲ್ಲ. ಹಿಂದಿನ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ರೆಹಮಾನ್ ಷರೀಫ್ ಅವರು ಈ ಗೊಂದಲದಿಂದಾಗಿಯೇ ಸೋತಿದ್ದು, ಕಾಂಗ್ರೆಸ್ ತಮ್ಮಿಂದ ವಿಮುಖವಾಗಿದೆ ಎಂಬ ಸಂದೇಶವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ರವಾನಿಸಿದೆ ಎಂದೂ ಅವರೇಳಿರುವ ಮಾತಲ್ಲಿ, ಇದಕ್ಕೆ ಹೊಣೆಗಾರರಾದ ಸಿದ್ದರಾಮಯ್ಯನವರು ಪ್ರಶ್ನಾರ್ಹರು ಎಂಬ ಆಶಯ ಕೂಡ ಅಡಗಿದೆ. ಅಂದಹಾಗೆ ಸಿಎಂ ಪಟ್ಟು ಹಿಡಿದಿದ್ದ ಭೈರತಿ ಸುರೇಶ್ ಅವರಿಗೆ ಟಿಕೆಟ್ ತಪ್ಪಿಸಿದ ಹಿರಿಯ ಕಾಂಗ್ರೆಸ್ಸಿಗರ ಪೈಕಿ ಹರಿಪ್ರಸಾದ್ ಕೂಡ ಪ್ರಮುಖರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಮಯದಲ್ಲಿ ಹರಿಪ್ರಸಾದ್ ಹೇಳಿದವರಿಗೆ ಸಿದ್ದರಾಮಯ್ಯ ಟಿಕೆಟ್ ನೀಡಲಿಲ್ಲ ಎಂಬುದು ಇವರಿಬ್ಬರ ಸಂಬಂಧ ಕಿತ್ತುಕೊಂಡು ಹೋಗಿದ್ದರ ಟ್ರಿಗರಿಂಗ್ ಪಾಯಿಂಟ್. ಅಷ್ಟೆಲ್ಲ ಸಹಾಯ ಮಾಡಿದ ತಮಗೆ ಸಿದ್ದರಾಮಯ್ಯ ಈ ರೀತಿ ವಿಶ್ವಾಸ ದ್ರೋಹ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಹಾಗೆ ಗೊತ್ತಿದ್ದರೆ ಅವರನ್ನು ರಕ್ಷಿಸುವ ಗೋಜಿಗೇ ಹೋಗುತ್ತಿರಲಿಲ್ಲ ಎಂದು ಆಪ್ತವಲಯದಲ್ಲಿ ಆಗಾಗ್ಗೆ ಕಿಡಿಕಾರುತ್ತಿದ್ದ ಹರಿಪ್ರಸಾದ್ ಇದೀಗ ಬಹಿರಂಗ ಹೇಳಿಕೆ ನೀಡುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ. ಮುಂದೇನು ಎಂಬುದರ ಕುತೂಹಲವನ್ನೂ ಕಾಯ್ದಿಟ್ಟು.

Leave a Reply