ಸುಖಾಸುಮ್ಮನೆ ಭಾರತೀಯ ಸೇನೆ ಬಗ್ಗೆ ಆರೋಪ ಮಾಡೋರು ಉಗ್ರನ ಮಗನ ರಕ್ಷಣೆ ಪ್ರಕರಣದತ್ತ ಒಮ್ಮೆ ನೋಡಿ..

ಡಿಜಿಟಲ್ ಕನ್ನಡ ಟೀಮ್

ಕಳೆದ ಶನಿವಾರ ಜಮ್ಮು ಕಾಶ್ಮೀರದ ಎಂಟರ್ ಪ್ರೆನೊರ್ಶಿಪ್ ಡೆವಲಪ್ಮೆಂಟ್ ಇನ್ಸ್ ಟಿಟ್ಯೂಟ್ (ಇಡಿಐ) ನಲ್ಲಿ ಮೂವರು ಉಗ್ರವಾದಿಗಳ ದಾಳಿ, ಭಾರತೀಯ ಸೇನೆ ಸುದೀರ್ಘ ಕಾರ್ಯಚರಣೆ, ನೂರಾರು ಒತ್ತೆಯಾಳುಗಳ ರಕ್ಷಣೆ, ಮೂವರು ಉಗ್ರರ ಹತ್ಯೆ, ಭಾರತದ ಮೂವರು ಯೋಧರು, ಇಬ್ಬರು ಅಧಿಕಾರಿಗಳು ಹುತಾತ್ಮರಾಗಿದ್ದು ತಿಳಿದಿರುವುದೇ. ಆದರೆ, ಈಗ ನಾವು ಹೇಳುತ್ತಿರೋದು, ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ಪಾಕಿಸ್ತಾನದ ಹಿಜಿಬ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಾಹುದ್ದೀನ್ ಕಿರಿಯ ಪುತ್ರನನ್ನು ರಕ್ಷಿಸಿದ ಬಗ್ಗೆ.

ಅರೆ, ಉಗ್ರನ ಮಗನನ್ನು ಭಾರತೀಯ ಸೇನೆ ರಕ್ಷಿಸಿದ್ದೇಕೆ? ಎಂಬ ಪ್ರಶ್ನೆ ಮೂಡುವುದು ಸಹಜ. ಸಲಾಹುದ್ದೀನ್ ಕೊನೆಯ ಪುತ್ರ ಸಯ್ಯದ್ ಮೊಯಿನ್ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಇಡಿಐನಲ್ಲಿ ಕಂಪೂಟರ್ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಉಗ್ರರ ದಾಳಿಯ ವೇಳೆ ಒತ್ತೆಯಾಳಾಗಿದ್ದವರ ಪೈಕಿ ಈತನೂ ಒಬ್ಬ.

ಪಾಕ್ ನಲ್ಲಿ ನೆಲೆಸಿರುವ ಉಗ್ರನ ಮಕ್ಕಳು ಭಾರತದಲ್ಲಿ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಉಗ್ರ ಸಂಘಟನೆ ಮುಖ್ಯಸ್ಥ ಸಲಾಹುದ್ದೀನ್ ಗೂ ಭಾರತದಲ್ಲಿ ನೆಲೆಸಿರುವ ಆತನ ಮಕ್ಕಳಿಗೂ ಈಗ ಯಾವುದೇ ರೀತಿಯ ಸಂಪರ್ಕವಿಲ್ಲ. ಕಾರಣ, 1990ರಲ್ಲೇ ಸಲಾಹುದ್ದೀನ್ ತನ್ನ ಕುಟುಂಬವನ್ನು (ಒರ್ವ ಪುತ್ರಿ, ನಾಲ್ವರು ಪುತ್ರರು) ಕಾಶ್ಮೀರದಲ್ಲೇ ಬಿಟ್ಟು ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ. ನಂತರ ಅವನು ಇಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿ ಮಾಡಿಯೇ ಇಲ್ಲ. ಕುಟುಂಬದವರೂ ಅಷ್ಟೇ.  ಉಗ್ರರ ನಂಟಿಲ್ಲದೇ ಭಾರತದಲ್ಲೇ ಉಳಿದುಕೊಂಡರು. ಈಗ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಉದ್ಯೋಗದಲ್ಲಿದ್ದಾರೆ.

ಸಲಾಹುದ್ದೀನ್ ಪುತ್ರರ ಪೈಕಿ ಒಬ್ಬ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ. ಮತ್ತೊಬ್ಬ ಆಸ್ಪತ್ರೆ ಪ್ರಯೋಗಾಲಯದ ಸಿಬ್ಬಂದಿ. ಪುತ್ರಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೊನೆಯವನೇ ಈ ಮೊಯಿನ್.

ಕಾರ್ಯಾಚರಣೆ ನಂತರ ಭಾರತೀಯ ಸೇನೆಗೆ ಮೊಯಿನ್ ಒಬ್ಬ ಉಗ್ರನ ಮಗ ಎಂದು ತಿಳಿದರೂ ಯಾವುದೇ ರೀತಿ ತೊಂದರೆ ಕೊಡಲಿಲ್ಲ. ಈ ಬಗ್ಗೆ ಸ್ವತಃ ಮೊಯಿನ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೀಗೆ: ‘ಭದ್ರತಾ ದಳ ನನ್ನ ಬಗ್ಗೆ ಪೂರ್ಣ ಮಾಹಿತಿ ತಿಳಿದರೂ ಯಾವುದೇ ರೀತಿಯ ವಿಚಾರಣೆ ಮಾಡಲಿಲ್ಲ, ಕಿರುಕುಳ ನೀಡಲಿಲ್ಲ. ಉಳಿದ ನೂರಾರು ಒತ್ತೆಯಾಳುಗಳ ಪೈಕಿ ಒಬ್ಬನಂತೆ ನನ್ನನ್ನೂ ರಕ್ಷಿಸಿತು.’

ಇಲ್ಲಿ ಗಮನಿಸಬೇಕಿರುವ ಪ್ರಮುಖ ಅಂಶ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಕಾರ್ಯವೈಖರಿ. ಈ ಹಿಂದಿನಿಂದಲೂ ಸೋ ಕಾಲ್ಡ್ ಸೆಕ್ಯುಲರ್ ವಾದಿಗಳು ಕಾಶ್ಮೀರದಲ್ಲಿ ಸೇನೆ ನಿಯೋಜನೆ ಬೇಡ. ಸೈನಿಕರಿಂದ ಸ್ಥಳೀಯರಿಗೆ ಹೆಚ್ಚು ತೊಂದರೆಯಾಗ್ತಿದೆ. ಅವರಿಂದಲೇ ಹೆಚ್ಚು ಅನಾಚಾರಗಳು ನಡೆಯುತ್ತಿವೆ, ಸಿಕ್ಕಾಪಟ್ಟೆ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ನಿರಂತರ. ಅದರಲ್ಲೂ ಜೆಎನ್ ಯು ಪ್ರಕರಣದ ನಂತರ ಈ ಗುಂಪಿನ ವಾದ ತೀವ್ರವಾಗಿಯೇ ಇದೆ. ಈ ಆರೋಪಗಳಿಗೆ ಮೊಯಿನ್ ಪ್ರಕರಣ ತಕ್ಕ ಉತ್ತರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ವಿನಾಕಾರಣ ಯೋಧರ ಬಗ್ಗೆಯೇ ನಿರಾಧಾರ ಅರೋಪ ಮಾಡುವವರು ಈ ಪ್ರರಕಣದತ್ತ ನೋಡಬೇಕು.

Leave a Reply