ಸ್ಕೂಲಲ್ಲಿ ಕದಿಯೋ ಮಕ್ಕಳಿಗೆ ಪೋಷಕರು ಶಿಕ್ಷೆ ಕೊಡೋದಕ್ಕಿಂತ ಶಿಕ್ಷಣ ಕೊಡೋದೆ ಹೆಚ್ಚು ಪರಿಣಾಮಕಾರಿ

author-shamaಟ್ಯೂಷನ್ ಮುಗಿಸಿ ಬಂದ ಗೌರವ್ ಬ್ಯಾಗಿನಲ್ಲಿ ಹೊಚ್ಚ ಹೊಸ ಪೆನ್ಸಿಲ್. ತಾವು ಕೊಡಿಸಿದ್ದಲ್ಲ ಎಂದು ಗೊತ್ತಿದ್ದ ವಿನುತಾ ಕೇಳಿದರೆ “ಇವತ್ತು ನಾನು ಎಲ್ಲರಿಗಿಂತ ಮೊದಲೇ ಹೋಮ್ವರ್ಕ್ ಮುಗಿಸಿದ್ದಕ್ಕೆ ಟೀಚರ್ ಕೊಟ್ಟರು ಅಮ್ಮಾ” ಎಂದ. ನಿಜವಿರಬೇಕೆಂದು ಸುಮ್ಮನಾದಳು. ಅದಾಗಿ ಎರಡು ದಿನಕ್ಕೆ ಒಂದು ಪೆನ್ನು ಬ್ಯಾಗಿಗೆ ಬಂದಿತ್ತು. ಹೀಗೇ ವಾರವೊಂದರಲ್ಲಿ ಎರಡು ಮೂರು ವಸ್ತುಗಳು ಸಿಕ್ಕಿದಾಗ ಯಾಕೋ ಸಂಶಯ ಬಂದು ಟ್ಯೂಷನ್ ಟೀಚರನ್ನ ಕೇಳಿದಾಗಲೇ ಸತ್ಯ ಗೊತ್ತಾಗಿದ್ದು. ಅವೆಲ್ಲವೂ ಅವನು ಓರಗೆಯವರಿಂದ ಕದ್ದಿದ್ದ. ಬೇಕಾದ್ದೆಲ್ಲವೂ ಇದ್ದರೂ ಮಗ ಹೀಗೆ ಕದ್ದಿದ್ದು ತಾಯಿ ತಂದೆಯರನ್ನ ಕಂಗೆಡಿಸಿತ್ತು. ಆದರೆ ತಾಳ್ಮೆಗೆಡದೆ ಅವನನ್ನು ಕೂರಿಸಿಕೊಂಡು ನಯವಾಗಿ ಕೇಳಿದಾಗ ತಪ್ಪೊಪ್ಪಿಕೊಂಡು ಎಲ್ಲವನ್ನೂ ಹಿಂತಿರುಗಿಸಿದ್ದ. ಆದರೆ ಕಳ್ಳತನ ಮಾಡುವ ಮಕ್ಕಳೆಲ್ಲರ ಸಮಸ್ಯೆಗಳೂ ಇಷ್ಟು ಸುಲಭವಾಗಿ ಬಗೆಹರಿಯುತ್ತವೆ ಎಂದು ಹೇಳಲಾಗದು.

ದಿನೇ ದಿನೇ ಬದಲಾಗುತ್ತಿರುವ ನಮ್ಮ ಮಾಡರ್ನ್ ಸಮಾಜದಲ್ಲಿ ಇದೊಂದು ಗುರುತರ ಸಮಸ್ಯೆಯಾಗುತ್ತಿದೆ. ಸಣ್ಣಪುಟ್ಟ ಕಳ್ಳತನಗಳನ್ನು ಗಂಭೀರ ಅಪರಾಧವೆಂದು ಪರಿಗಣಿಸಲು ಕೆಲವೊಮ್ಮೆ ಸಾಧ್ಯವಾಗದಿದ್ದರೂ ನಿರ್ಲಕ್ಷಿಸುವುದಂತೂ ಖಂಡಿತ ಆಗದು. ಹಾಗೇ ಬಿಟ್ಟರೆ ಮುಂದೊಂದು ದಿನ ಈ ಅಭ್ಯಾಸವೇ ಜೈಲಿಗಟ್ಟೀತು ಎಂಬುದೂ ಸುಳ್ಳಲ್ಲ.

ನಿಜ ಹೇಳಬೇಕೆಂದರೆ ಮಕ್ಕಳಿಗೆ “ಕಳ್ಳತನ” ಗೊತ್ತೇ ಇರುವುದಿಲ್ಲ; ಪ್ರಚೋದನೆಯ ನಂತರ ಆಸೆಗಳನ್ನು ಹಿಡಿದಿಟ್ಟುಕೊಂಡು ಅದನ್ನು ವ್ಯಕ್ತಪಡಿಸಿ ಒಪ್ಪಿಗೆ ಪಡೆದು ನಂತರ ತೆಗೆದುಕೊಳ್ಳುವಷ್ಟು ನಿಯಂತ್ರಣವೂ ಅವರಲ್ಲಿರುವುದಿಲ್ಲ. ಇದು ಬೆಳವಣಿಗೆಯ ಹಂತದಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ವಭಾವ. ಅದು ಕೇವಲ ತನಗೆ ಬೇಕೆಂದು ಕಂಡ ವಸ್ತುವನ್ನು ತೊಗೋಳೋ ಪ್ರಕ್ರಿಯೆ. ಆದರೆ ಬೆಳೆದ ನಂತರವೂ ಇದೊಂದು ಚಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದು.

ಮಕ್ಕಳು ಕಳ್ಳತನ ಮಾಡಲು ಹಲವಾರು ಕಾರಣಗಳಿರುತ್ತವೆ; ಹಾಗೆಯೇ ಅವರನ್ನು ತಿದ್ದಲೂ ಕೂಡ ಭಿನ್ನ ಮಾರ್ಗಗಳು. ಸುಮಾರು ಐದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ವಸ್ತುವಿನ ‘ಮಾಲೀಕತ್ವ’ದ (Ownership) ಸ್ಪಷ್ಟ ಪರಿಕಲ್ಪನೆಯೇ ಇರುವುದಿಲ್ಲ. ಹಾಗಾದಾಗ ಅವರಿಗೆ ತೆಗೆದುಕೊಂಡಿದ್ದು ಕಳ್ಳತನ ಎನಿಸುವುದೂ ಇಲ್ಲ. ಇತರರ ವಸ್ತುವನ್ನು ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳುವುದು ತಪ್ಪೆಂಬ ಅರಿವೂ ಅಷ್ಟಾಗಿ ಬಂದಿರುವುದಿಲ್ಲ. ಪ್ರಾಥಮಿಕ ಶಾಲೆಗೆ ಸೇರುವಷ್ಟರಲ್ಲಿ ಮಗುವಿಗೆ ಸುಮಾರಾಗಿ ಈ ತಿಳಿವಳಿಕೆ ಬರುತ್ತದೆಯಾದರೂ ಆ ವಯಸ್ಸಿನಲ್ಲಿ ಸ್ವ ನಿಯಂತ್ರಣ (Self Control) ಅವರಲ್ಲಿಲ್ಲದ ಕಾರಣ ಕಳ್ಳತನ ಮಾಡುವುದುಂಟು. ಮಾಧ್ಯಮಿಕ ಶಾಲಾ ವಯಸ್ಸಿನ  ಮಕ್ಕಳು ಥ್ರಿಲ್^ಗೋಸ್ಕರ ಅಥವಾ ಇತರ ಮಿತ್ರರ ಅನುಕರಣೆಗಾಗಿ ಕದ್ದರೆ ಹದಿಹರೆಯದವರು ಭಾವನಾತ್ಮಕ ಅಥವಾ ಮಾನಸಿಕ ಏರುಪೇರುಗಳ ಕಾರಣದಿಂದ ಕದಿಯಬಹುದು. ಕಾರಣ ಏನೇ ಇರಲಿ ಮಕ್ಕಳನ್ನು ಸರಿಯಾದ ಸಮಯದಲ್ಲಿ ಮತ್ತು ರೀತಿಯಲ್ಲಿ ತಿದ್ದುವುದು ಅತ್ಯವಶ್ಯಕ. ಈ ಅಭ್ಯಾಸದ ಹಿಂದೆ ಹಲವು ಕಾರಣಗಳಿರುತ್ತವೆಯೆಂದು ತಜ್ಞರಾದ ಆಂಟನಿ ಕೀನ್ ಅಭಿಪ್ರಾಯ ಪಡುತ್ತಾರೆ.

 • ಮಗುವಿಗೆ ಸ್ವ-ನಿಯಂತ್ರಣವಿಲ್ಲದಿರುವುದು : ಕಳ್ಳತನ ತಪ್ಪೆಂದು ತಿಳಿದಿದ್ದರೂ ಚಿಕ್ಕಮಕ್ಕಳಲ್ಲಿ ಸಹಜವಾಗೇ ಮನೋ ನಿಯಂತ್ರಣ ಕಡಿಮೆಯಿರುವ ಕಾರಣ ಕದಿಯಬಹುದು. ಮಗುವಿಗೆ ಬೇಕಾಗಿದ್ದನ್ನು ಸರಿಯಾದ ರೀತಿಯಲ್ಲಿ ಒದಗಿಸುವುದು ಮತ್ತು ಆಸೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವಂತೆ ಪೋಷಕರು ನೋಡಿಕೊಳ್ಳುವುದು ಒಳ್ಳೆಯದು.
 • ಮಗುವಿನ ಮೂಲಭೂತ ಅವಶ್ಯಕತೆಗಳು ಈಡೇರದಿರುವುದು : ಸಂಪಾದನೆ ಆರಂಭಿಸುವ ಮುನ್ನ ಮಕ್ಕಳು ಪ್ರತಿಯೊಂದಕ್ಕೂ ಪೋಷಕರ ಮೇಲೇ ಅವಲಂಬಿತರಾಗಿರುತ್ತಾರೆ. ತನ್ನ ಮೂಲಭೂತ ಅವಶ್ಯಕತೆಗಳನ್ನು ಪೋಷಕರು ಈಡೇರಿಸದಿದ್ದಾಗ ಮಕ್ಕಳು ಕ್ರಮೇಣ ತಮಗೆ ಬೇಕಾದ್ದನ್ನು ತಾವೇ ಪೂರೈಸಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಆಗ ಕಳ್ಳತನ ಅತಿ ಸುಲಭದ ದಾರಿಯಾಗಿ ಕಾಣುತ್ತದೆ. ತಾಯ್ತಂದೆಯರು ಮಗುವಿನ ಅಷ್ಟೂ ಅಗತ್ಯಗಳನ್ನ ಪೂರೈಸಿದ್ದಾಗಿ ಅಂದುಕೊಂಡಿದ್ದರೂ ಮಗುವಿಗೆ ನಿಜಕ್ಕೂ ಇನ್ನೇನೋ ಅಗತ್ಯವಿರಬಹುದು. ಅಲ್ಲದೆ ಬೇರೆ ಬೇರೆ ಮಕ್ಕಳ ಆಸೆಗಳು ಬೇರೆ ತೆರನಾಗೇ ಇರುತ್ತವೆ.
 • ಹೆಚ್ಚು ಕಾಳಜಿಯ ಅಗತ್ಯ : ದಿನನಿತ್ಯದ ಜಂಜಡಗಳ ನಡುವೆ ಮಕ್ಕಳ ಕಡೆ ಸಾಕಷ್ಟು ಗಮನ ಕೊಡಲು ತಾಯ್ತಂದೆಯರಿಗೆ ಸಾಧ್ಯವಾಗದೇ ಇರಬಹುದು. “ನಾವು ಹಗಲು ರಾತ್ರಿ ಕಷ್ಟಪಟ್ಟು ದುಡಿಯೋದು ಮಕ್ಕಳಿಗೋಸ್ಕರವೇ ತಾನೇ” ಅನ್ನುವುದು ಮಕ್ಕಳಿಗೆ ಅರ್ಥವಾಗದು. ಅಪ್ಪ ಅಮ್ಮ ತಮಗೆ ಬೇಕಾದಷ್ಟು ಸಿಗೋದಿಲ್ಲ ಎಂದಷ್ಟೆ ಅವರ ವೇದನೆ. ಅವರು ತಮ್ಮನ್ನು ಪ್ರೀತಿಸುತ್ತಿಲ್ಲವೆಂಬ ಭಾವ. ಭಾವನಾತ್ಮಕ ಅವಶ್ಯಕತೆಗಳನ್ನು ಪೂರೈಸಿಲ್ಲವೆಂಬುದನ್ನು ಹೇಳಿ ಅರ್ಥ ಮಾಡಿಸುವಷ್ಟು ಬೆಳೆದಿಲ್ಲದ ಮನಸ್ಸು, ವಯಸ್ಸು. ಇಂಥ ಸಂದರ್ಭಗಳಲ್ಲಿ ಗಮನ ಸೆಳೆಯೋದಕ್ಕೆ ಕಂಡುಕೊಳ್ಳುವ ಮತ್ತು ಅಸಮಾಧಾನವನ್ನು ಹೊರಹಾಕುವ ಮಾರ್ಗ ಕಳ್ಳತನ. ಹೀಗಾದರೂ ಅಪ್ಪ ಅಮ್ಮ ತಮ್ಮ ಬಳಿ ಬರಲಿ ಅನ್ನೋದರ ಹೊರತು ಇನ್ಯಾವ ಉದ್ದೇಶವೂ ಅವರಲ್ಲಿರುವುದಿಲ್ಲ.
 • ಸ್ವಾವಲಂಬನೆಯ ತವಕ : ಬೆಳವಣಿಗೆಯ ಒಂದು ಹಂತದಲ್ಲಿ ಕೆಲವು ಮಕ್ಕಳಿಗೆ ತಾವು ಎಲ್ಲಕ್ಕೂ ಪೋಷಕರನ್ನು ಅವಲಂಬಿಸುತ್ತಿದ್ದೇವೆಂಬ ಭಾವವೇ ಸಣ್ಣ ಅಸಮಾಧಾನವನ್ನು ಉಂಟುಮಾಡುತ್ತದೆ. ಹಾಗಂತ ದುಡಿದು ಸಂಪಾದನೆಯನ್ನೂ ಮಾಡಲಾರರು. ಇಂಥ ಸಂದರ್ಭದಲ್ಲಿ ಮಕ್ಕಳು ತಮಗೆ ಬೇಕಾದ್ದನ್ನು ತಾವೇ ಪಡೆದುಕೊಳ್ಳುವುದಕ್ಕೆ ಕಳ್ಳತನದ ದಾರಿ ಹಿಡಿಯುವುದುಂಟು. ಇದು ಅವರಲ್ಲಿ ಒಂದು ರೀತಿಯ ಸ್ವಾವಲಂಬನೆಯ ಭಾವವನ್ನು ತರುತ್ತದೆ. ಸ್ವಾವಲಂಬನೆಯ ದಾರಿ ಕಳ್ಳತನವಲ್ಲ ಎಂಬ ವಿವೇಕ, ವಿವೇಚನೆ ಅವರಲ್ಲಿನ್ನೂ ಹುಟ್ಟಿರುವುದಿಲ್ಲ.
 • ಸಹವರ್ತಿಗಳ ಒತ್ತಡ : ಎಳವೆಯಲ್ಲಿ ಪೋಷಕರ ಮಾತಿಗಿಂತ ಗೆಳೆಯರ ಮಾತು ಹೆಚ್ಚು ಪ್ರಿಯ. ಜತೆಗಿರುವವರು ಕಳ್ಳತನ, ಅವರು ತಂದ ವಸ್ತುಗಳು ಬಹುತೇಕ ಮಕ್ಕಳಿಗೆ ಸುಲಭವಾಗಿ ಪ್ರೇರಣೆ ನೀಡುತ್ತವೆ. ಆ ಕ್ಷಣದಲ್ಲಿ ಆಕರ್ಷಕವಾಗಿಯೂ ಸುಲಭವಾಗಿಯೂ ಕಾಣುವ ಈ ಕ್ರಿಯೆಯ ಪರಿಣಾಮದ ಅರಿವು ಅವರಿಗಿರದು. ಬಹಳಷ್ಟು ಸಾರ್ತಿ ದೊಡ್ಡ ಮಕ್ಕಳು ಚಿಕ್ಕವರನ್ನು ಕರೆದುಕೊಂಡು ಹೋಗಿ ಕಳ್ಳತನ ಮಾಡಿಸುವುದುಂಟು. ಇನ್ನು ಗೆಳೆಯರ ನಡುವೆ ತನ್ನ ಶೌರ್ಯ ಪ್ರದರ್ಶನಕ್ಕಾಗಿಯೂ ಕಳ್ಳತನ ಮಾಡುವ ಮಕ್ಕಳಿದ್ದಾರೆ.

ಹೀಗಾದಾಗ ಪೋಷಕರ ಪಾತ್ರ ಬಹಳ ಮಹತ್ವದ್ದಾಗುತ್ತದೆ. ಭಾವನೆಗಳಿಗೇ ತುಂಬ ಪ್ರಾಧಾನ್ಯತೆ ಕೊಟ್ಟು ಇದನ್ನು ಬಿಡಿಸಬೇಕೇ ಹೊರತು ಶಿಕ್ಷೆಗಳ ಮೂಲಕ ಸರಿದಾರಿಗೆ ತರುವುದು ಕಷ್ಟ. ಮಗು ಕಳ್ಳತನ ಮಾಡುತ್ತಿರಬಹುದೆಂಬ ಸಂಶಯ ಬಂದಾಗ ಶಾಂತವಾಗಿದ್ದು ಗಮನಿಸುವುದು ಮುಖ್ಯವೇ ಹೊರತು ಅಪರಾಧ ಜಗತ್ತಿಗೆ ಕಾಲಿಟ್ಟಿರಬಹುದೆಂಬ ಭಾವ ವ್ಯಕ್ತಪಡಿಸುವುದು ತರವಲ್ಲ. ಬದಲಾಗಿ ಮಗುವನ್ನು ಕೂರಿಸಿ ಅರ್ಥ ಮಾಡಿಸುವುದೊಳಿತು. “ನಿನ್ನ ಗೊಂಬೆಯನ್ನೋ ಕಾರನ್ನೋ ಬೇರೆಯವರು ತೊಗೊಂಡು ಹೋದ್ರೆ ಏನಾಗುತ್ತೆ? ನಿಂಗೆ ಬೇಜಾರಾಗುತ್ತೆ ಅಲ್ವಾ ? ಹಾಗೇ ನೀನು ಅವರ ವಸ್ತು ತೊಗೊಂಡು ಬಂದರೂ ಅವರಿಗೆ ನೋವಾಗುತ್ತೆ; ಹಾಗೆ ಮಾಡಬಾರದು” ಅಂತ ಹೇಳಿ ಜತೆಯಲ್ಲೇ ಹೋಗಿ ವಿವರಿಸಿ ವಾಪಸ್ ಕೊಟ್ಟು ಬಂದರೆ ಮಗುವಿಗೆ ಅರಿವಾಗುವುದು ಮಾತ್ರವಲ್ಲ, ತನಗೆ ಅವಮಾನ ಮಾಡುತ್ತಿದ್ದಾರೆನಿಸದು. ಅಲ್ಲದೇ ತಪ್ಪು ಮಾಡಿದಾಗ ಕ್ಷಮೆ ಕೇಳುವುದು ಸನ್ನಡತೆ ಎಂಬುದು ಕೂಡ ಗೊತ್ತಾಗುತ್ತದೆ.

ಪೋಷಕರನ್ನು ಸೆಳೆಯುವುದಕ್ಕಾಗಿಯೇ ಕಳ್ಳತನಕ್ಕಿಳಿದಿದ್ದರೆ ಬೇರೆಲ್ಲ ಬಿಟ್ಟು ಮಕ್ಕಳ ಜತೆಯಲ್ಲಿದ್ದರಾಯ್ತು. ಅವರಿಗೆ ಬೇಕಿರುವುದು ಮಮತೆಯ ಮಡಿಲು. ಗರಿಷ್ಟ ಸಮಯವನ್ನು ಅಪ್ಪ ಅಮ್ಮನ ಜತೆ ಕಳೆದಾಗ ಮಕ್ಕಳಿಗೆ ಸಹಜವಾಗಿ ಅಭದ್ರತೆ ದೂರಾಗಿ ಸರಿ ದಾರಿಗೆ ಬರುತ್ತಾರೆ. ದೈಹಿಕ ಅಥವಾ ಮಾನಸಿಕ ಯಾವುದೇ ರೀತಿಯ ಶಿಕ್ಷೆ ನೀಡುವುದು ಮಕ್ಕಳಲ್ಲಿ ಇನ್ನಷ್ಟು ಹಠಮಾರಿತನ ಹೆಚ್ಚಿಸಬಹುದು. “ನಾನು ಹೀಗೇ ಮಾಡ್ತೀನಿ ಏನ್ ಮಾಡ್ತೀರ ?” ಎಂಬ ಭಾವ ಹುಟ್ಟಿ ಮತ್ತದೇ ಮುಂದುವರಿಯುವ ಸಾಧ್ಯತೆಗಳೂ ಇರುತ್ತವೆ. ಶಿಕ್ಷೆಗಿಂತ ಶಿಕ್ಷಣ ಹೆಚ್ಚು ಪರಿಣಾಮಕಾರಿ.

ಇವೆಲ್ಲಕ್ಕಿಂತ ಹೆಚ್ಚಾಗಿ ಆಗಬೇಕಿರುವುದು ಸ್ಪಷ್ಟವಾದ ರೋಲ್ ಮಾಡೆಲಿಂಗ್. ಮನೆಯ ಹಿರಿಯರು ಮಾಡಿದ್ದನ್ನೇ ಮಕ್ಕಳು ಅನುಕರಿಸುವುದರಲ್ಲಿ ಎರಡು ಮಾತಿಲ್ಲ. ತಾನು ಆಫೀಸಿನಿಂದ ಬಾಸ್ ಗಮನಕ್ಕೆ ಬರದ ಹಾಗೆ ತಂದ ಬಿಳಿ ಹಾಳೆಗಳ ಬಂಡಲ್ ಬಗ್ಗೆ, ವೈಯಕ್ತಿಕ ಮಾತಿಗೆ ಆಫೀಸ್ ಫೋನ್ ಬಳಸಿದ್ದರೂ ಸಿಕ್ಕಿ ಬೀಳದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೆ ಪ್ರಾಮಾಣಿಕತೆಯ ಬೆಲೆ ಮಗುವಿಗೆ ಅರಿವಾಗದು. ಮತ್ತು ಕಳ್ಳತನ ಸಹಜವೆಂಬ ಸಂದೇಶವೂ ಸುಲಭವಾಗಿ ರವಾನೆಯಾಗುತ್ತದೆ. ಕೈಲಾಸಂ ಅವರು “ಮಕ್ಕಳಿಸ್ಕೂಲ್ ಮನೇಲಲ್ವೇ” ಅಂತ ಸುಮ್ಮನೆ ಹೇಳಿಲ್ಲ. ಮೊದಲ ಪಾಠಶಾಲೆ ಮನೆ ಮೌಲಿಕವಾಗಿರುವುದನ್ನಷ್ಟೇ ಎರಕ ಹೊಯ್ದರೆ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯ ಬಾರದು. ಪೋಷಕರು ಮಕ್ಕಳನ್ನರಿಯುವ ಮನಸ್ಸು, ಜಾಣ್ಮೆ ಅವಶ್ಯಕತೆಗೆ ತಕ್ಕಷ್ಟು ತಾಳ್ಮೆ ರೂಢಿಸಿಕೊಳ್ಳಬೇಕು.

3 COMMENTS

 1. ಚೆನ್ನಾಗಿ ಬರೆದಿದ್ದೀರಿ ಶಮಾ. ಅತೀ ಚಿಕ್ಕದದೆಂದು ನಾವು ಗೌಣವಾಗಿಸುವ ವಿಚಾರ ಮುಂದೆ ದೊಡ್ಡವರಾಗುವ ಮಕ್ಕಳ ಬದುಕಲ್ಲಿ ಪ್ರಮುಖ ಪಾತ್ರ ವಹಿಸಬಹುದು.

  ‘ಸ್ಕೂಲ್ ಮಾಸ್ಟರ್’ ಎಂಬ 50ರ ದಶಕದಲ್ಲಿ ಮೂಡಿಬಂದ ಬಿ. ಆರ್. ಪಂತುಲು ಅವರ ಚಿತ್ರದಲ್ಲಿ ನೀವು ಹೇಳಿದ ವಿಚಾರ ಒಂದು ವಿಶಿಷ್ಟ ಕಥೆಯ ಎಳೆಯಾಗಿಯೇ ರೂಪುಗೊಂಡಿದೆ.

 2. ???? ??? ??????????.
  ???? ????????????? ???????? ??????? ?????? ????? ??????????? ??????????? ???????? ??????????? ?????????? ???????? ????????????????! ??? ?????? ???????????????. – ?????? ????? ???? ?????.
  ???? ???? ?????????? ?????????:
  ???????? ???? ???????? ?????? ???? ??????????:” ?????????? ??? ??????. ??? ????? ??? ??????????! ????????? ???? ????????? ????????????????????!”
  – ??. ??. ????

 3. T. S. Sridhara, ನಿಮ್ಮ ಸಹೃದಯತೆಗೆ ವಂದೇ. yes… ಆ ಚಿತ್ರದ ಬಗ್ಗೆ ನಮ್ಮಮ್ಮ ಹೇಳಿದ್ದು ನೆನೆಪಿದೆ. ನೋಡಬೇಕು ಎಂದುಕೊಂಡರೂ ನೋಡಲಾಗಲಿಲ್ಲ.

Leave a Reply