ಕರ್ನಾಟಕ ಕಾಂಗ್ರೆಸ್ ಕಾಯೋ ದಿಗ್ವಿಜಯ್ ಮನೆಬಾಗಿಲನ್ನು ಪೊಲೀಸ್ರು ಅರೆಸ್ಟ್ ವಾರೆಂಟ್ ಹಿಡ್ಕೊಂಡು ಕಾಯ್ತಾಯಿದ್ರು ಅಂದ್ಮೇಲೆ…!

ಡಿಜಿಟಲ್ ಕನ್ನಡ ಟೀಮ್

ಕರ್ನಾಟಕ ಕಾಂಗ್ರೆಸ್ ಹಣೆಬರಹವೇ ಸರಿಯಿಲ್ಲ. ಪಾಪ, ಕರ್ನಾಟಕದಲ್ಲಿ ಕಾಂಗ್ರೆಸ್ ತಲೆ ಕಾಯುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮನೆಬಾಗಿಲನ್ನು ಅರೆಸ್ಟ್ ವಾರೆಂಟ್ ಹಿಡಿದುಕೊಂಡಿದ್ದ ಪೊಲೀಸರು ಶುಕ್ರವಾರದಿಂದ ಕಾಯುತ್ತಿದ್ದರು. ಶನಿವಾರ ಕೋರ್ಟ್ ಗೆ ಸರೆಂಡರ್ ಆದ ದಿಗ್ವಿಜಯ್ ಅವರು ಬೇಲ್ ತಗೊಂಡು ಉಸ್ಸಪ್ಪಾ ಅಂದಿದ್ದಾರೆ.

ದಿಗ್ವಿಜಯ್ ಸಿಎಂ ಆಗಿದ್ದಾಗ ಮಧ್ಯಪ್ರದೇಶ ವಿಧಾನಸಭೆ ಸಚಿವಾಲಯ ನೇಮಕದಲ್ಲಿ ಅಕ್ರಮ ಎಸಗಿದ್ದರು ಎಂಬುದು ಆರೋಪ. ವಂಚನೆ, ಪೋರ್ಜರಿ, ಸಂಚು, ಅಧಿಕಾರ ದುರುಪಯೋಗ, ವಯಸ್ಸು-ವಿದ್ಯಾರ್ಹತೆ ಇಲ್ಲದವರ ನೇಮಕ, ನಂತರ ಪ್ರಮೋಷನ್ ಕೊಟ್ಟು ಫಲಭರಿತ ಇಲಾಖೆಗಳಿಗೆ ವರ್ಗ, ಇದರಿಂದೆ ಭಾರೀ ಭ್ರಷ್ಟಾಚಾರ ಎಂಬುದು ಎಫ್ಐಆರ್ ಅಲಂಕರಿಸಿರುವ ದೂರು. ಇಂಥ ದಿಗ್ವಿಜಯ್ ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ!

ಯಾವ ರೀತಿ ಅನ್ನುವುದಕ್ಕೆ ಒಂದೆರಡು ಸ್ಯಾಂಪಲ್. ವಿಧಾನಸಭೆ ಮರುಚುನಾವಣೇಲಿ ಹೆಬ್ಬಾಳ ಅಭ್ಯರ್ಥಿ ಆಯ್ಕೆ ಮಾಡೋಕೆ ದಿಲ್ಲಿಯಿಂದ ಬೆಂಗಳೂರಿಗೆ ಓಡಿಬಂದಿದ್ದರು. ಸಿಎಂ ಸಿದ್ದರಾಮಯ್ಯ ತಾಳಕ್ಕೆ ಕುಣಿದು ಭೈರತಿ ಸುರೇಶ್ ಗೆ ಜೈ ಎಂದಿದ್ದರು. ಬೇರೆ ವರಿಷ್ಠರ ವರಸೆ ಚೇಂಜ್ ಆದಾಗ ಕೈ ಎತ್ತಿದ್ದರು. ಸಿದ್ದರಾಮಯ್ಯ ವಾಚ್ ಪ್ರಕರಣದ ಬಗ್ಗೆ ಕೇಳಿದಾಗ ನಾನಂತೂ ಆ ವಾಚ್ ನೋಡಿಲ್ಲ ಅಂದಿದ್ರು. ರಾಹುಲ್ ಗಾಂಧಿ ಕಣ್ಣಿಗೆ ಬಿದ್ದ ವಾಚ್ ಇವರ ಕಣ್ಣಿಗೆ ಯಾಕೆ ಬೀಳಲಿಲ್ಲ ಅಂದ್ರೆ, ಸಿಎಂ ಅಷ್ಟು ಚೆನ್ನಾಗಿ ಅವರ ಕಣ್ಣಿಗೆ ಬಟ್ಟೆ ಕಟ್ಟಿದ್ದರು ಅಂತ್ಲೇ ಅರ್ಥ.

ಇರಲಿ, ಇವರದೇ ಟೈಮ್ ಸರಿ ಇಲ್ಲದಿರುವಾಗ ಇನ್ನು ಸಿದ್ದರಾಮಯ್ಯನವರ ಟೈಮ್ ಬಗ್ಗೆ ಹೇಳೋದಾದ್ರೂ ಹೇಗೆ. ಹಾಗಲಕಾಯಿ ಬಗ್ಗೆ ಬೇವಿನಕಾಯಿ ಸಾಕ್ಷಿ ಕೇಳಿದಂತೆ, ಕಳ್ಳರು, ಕಳ್ಳರು ಒಟ್ಟಿಗೆ ಸಂತೆಗೋದಂತೆ. ಮೇಟಿನೇ ಸರಿ ಇಲ್ಲ ಅಂತಾದಮೇಲೆ ಉಳಿದವರನ್ನು ಹೇಳೋದು-ಕೇಳೋದು ಹೇಗೆ. ಅದೂ ಅತ್ಲಾಗಿರಲಿ, ಎಐಸಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ‘ನಿಮ್ಮನ್ನೂ ಸೇರಿಸಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಆಗಬೇಕು ಅಂತ ಹೇಳವ್ರಲ್ಲ’ ಅಂತಾ ಮೀಡಿಯಾದವರು ಕೇಳಿದಾಗ ಸಿದ್ದರಾಮಯ್ಯನವರು, ‘ನನಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಬಿಟ್ಟು ಬೇರೇ ಯಾರೂ ನಾಯಕರಲ್ಲ’ ಅಂತ ಸೀದಾಸಾದಾ ಹೇಳಿದ್ದಾರೆ. ಹಾಗಿದ್ರೆ ದಿಗ್ವಿಜಯ್ ಸಿಂಗ್ ರೋಲ್ ಏನೂ ಅಂತ ಗೊತ್ತಾಗಿಲ್ಲ. ಇನ್ನು ಮುಂದೆ ಅವರೇನು ಕರ್ನಾಟಕ ಕಾಂಗ್ರೆಸ್ ನಲ್ಲಿ ಹಪ್ಪಳ ತಟ್ತಾರಾ ಅಂತಾನೂ ಗೊತ್ತಾಗಿಲ್ಲ.

ಇಲ್ಲಿ ಇನ್ನೊಂದು ಕಡೆ, ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆಯಲ್ಲಿ ಮೈಮೇಲೆ ರಾಡಿ ಎರಚಿಕೊಂಡಿದ್ದ ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಕೂಡ ಸಿದ್ದರಾಮಯ್ಯ ಸ್ಟೈಲಲ್ಲೇ, ಆದರೆ ಸ್ವಲ್ಪ ಬೇರೆ ಸ್ವರೂಪದಲ್ಲಿ ಧಿಮಾಕು ಪ್ರದರ್ಶಿಸಿದ್ದಾರೆ. ‘ಯಾರಿಗೂ ಹೆದರಬೇಡ, ನಾನಿದ್ದೇನೆ. ನಿನಗೆ ಯಾರೂ ಏನೂ ಮಾಡಕ್ಕಾಗಲ್ಲ ಅಂತ ಸಿದ್ದರಾಮಯ್ಯನವರೇ ಖುದ್ದು ಅಭಯ ಕೊಟ್ಟಿದ್ದಾರೆ’ ಅಂತ ಜಂಭ ಕೊಚ್ಚಿಕೊಂಡು ತಿರುಗುತ್ತಿರುವ ಆಡಿಯೋ ಹರಿದಾಡುತ್ತಿದೆ. ಯಾರು ಏನೇ ತಪ್ಪು ಮಾಡಲಿ ಅವರಿಗೆ ಯಾರೂ ಏನೂ ಮಾಡಕ್ಕಾಗಲ್ಲ ಅನ್ನೋದೇ ಕಾಂಗ್ರೆಸ್ ಬ್ಯೂಟಿ. ಇದಕ್ಕೆ ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಪರಮೇಶ್ವರ ನಾಯ್ಕ್ ಯಾರೂ ಹೊರತಲ್ಲ. ಇದು ರಾಜಕೀಯ ಅಣಕ.

Leave a Reply