ಜಾಟರ ಈ ಹಿಂಸಾತ್ಮಕ ಮಾದರಿ ಮುಂದೊಮ್ಮೆ ಭಾರತವನ್ನೇ ಆವರಿಸಿಕೊಳ್ಳುವ ಅಪಾಯ ಇಲ್ಲ ಅಂತೀರಾ?

ಪ್ರವೀಣ್ ಕುಮಾರ್

ಹರ್ಯಾಣದ ಪ್ರಬಲ ಸಮುದಾಯ ಜಾಟರು ತಮ್ಮನ್ನು ಇತರೆ ಹಿಂದುಳಿದ ವರ್ಗಗಳಿಗೆ ಸೇರಿಸಿ ಮೀಸಲು ಸೌಲಭ್ಯಗಳು ಸಿಗುವಂತೆ ಮಾಡುವುದಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಿಂದ ಆ ರಾಜ್ಯ ಹಿಂಸಾಗ್ರಸ್ತವಾಗಿದೆ. ಸಾವಿರಾರು ಕೋಟಿ ರುಪಾಯಿಗಳ ನಷ್ಟ, 11 ಜೀವಹಾನಿ, 150ಕ್ಕೂ ಹೆಚ್ಚು ಗಾಯಾಳುಗಳು – ಇದು ಆ ರಾಜ್ಯದಲ್ಲಿ ಆಡಳಿತವೇ ಕುಸಿದುಬಿದ್ದಿರುವುದಕ ಪ್ರತೀಕ.

ಜಾಟರು ಒಬಿಸಿಗೆ ಸೇರಬೇಕೆಂದು ಹಪಹಪಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅವರಿಗೆ ಒಬಿಸಿ ಕೋಟಾದಂಥದೇ ಸ್ಥಾನಮಾನ ನೀಡಲು ಮುಂದಾದಾಗ ಅದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿರಲಿಲ್ಲ. ಆದರೆ ಈ ಬಾರಿಯ ಹಿಂಸಾರೂಪದ ಪ್ರತಿಭಟನೆ ಮಾತ್ರ ಏನೇ ಆದರೂ, ಕಾನೂನನ್ನೇ ಬದಲಿಸಿಯಾದರೂ ತಾವು ಸೌಲಭ್ಯ ಪಡೆದೇ ಸಿದ್ಧ ಎಂಬಷ್ಟು ಉಗ್ರವಾಗಿದೆ.

ಕೇವಲ ಹರ್ಯಾಣ ಮಾತ್ರವಲ್ಲದೇ ಭಾರತವೇ ತಲೆಕೆಡಿಸಿಕೊಳ್ಳಬೇಕಾದ ಸಂಗತಿ ಇದು. ಏಕೆಂದರೆ ಇವರಿಗೆ ಈ ಕ್ಷಣಕ್ಕೆ ಏನೋ ಸೌಲಭ್ಯ ನೀಡಿ ಸಮಾಧಾನಪಡಿಸುವುದಕ್ಕೆ ಹೋದರೆ ಮುಂದಿನ ಹಲವು ಬಂಡಾಯಗಳಿಗೆ ಅದು ಮುನ್ನುಡಿ ಆದೀತು. ಗುಜರಾತ್ ನ ಪಟೇಲ್ ಸಮುದಾಯವೂ ಸೇರಿದಂತೆ ನಾನಾ ರಾಜ್ಯಗಳ ಹಲವು ಪ್ರಬಲ ಸಮುದಾಯಗಳು ತಮ್ಮನ್ನೂ ಒಬಿಸಿಗೆ ಸೇರಿಸಿ ಎನ್ನುತ್ತಿರುವ ಧ್ವನಿ ಬಿರುಸಾದೀತು. ಅದು ಯಾವುದೇ ಸಮುದಾಯವಿರಬಹುದು… ಅದನ್ನು ಶ್ರೀಮಂತ ಇಲ್ಲವೇ ಬಡವ ಅಂತ ಸಮೀಕರಿಸಲಾಗದ ಸ್ಥಿತಿ ಇದೆ. ಅರ್ಥಾತ್ ಎಲ್ಲ ಸಮುದಾಯಗಳಲ್ಲೂ ಒಂದಿಷ್ಟು ಸಿರಿವಂತರು ಮತ್ತಷ್ಟು ಬಡವರ ಇದ್ದೇ ಇರುತ್ತಾರೆ.

ಆದರೆ ಜಾಟರ ವಿಷಯದಲ್ಲಿ ಅವರನ್ನು ಹಿಂದುಳಿದವರೆಂದು ಒಪ್ಪಿಕೊಳ್ಳಲು ಕಷ್ಟವಾಗಿರುವ ಪ್ರಮುಖಾಂಶವೇನು? ಸರಳ ಉತ್ತರ- ಹರ್ಯಾಣದ ಭೂಮಾಲಿಕರ ಪೈಕಿ ಹೆಚ್ಚಿನವರು ಜಾಟರೇ ಆಗಿದ್ದಾರೆ. ಇವರನ್ನು ಭೂರಹಿತ ಶ್ರಮಿಕ ವರ್ಗದೊಂದಿಗೆ ತೂಗೋದು ಯಾವ ಸಾಮಾಜಿಕ ನ್ಯಾಯ ಎಂಬ ಪ್ರಶ್ನೆ. ಇದಕ್ಕೆ ಸಹಾಯಕವೆಂಬಂತೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಐಷಾರಾಮಿ ಕಾರುಗಳನ್ನೇ ರಸ್ತೆಗಡ್ಡವಾಗಿ ನಿಲ್ಲಿಸಿ ಪ್ರತಿಭಟಿಸುತ್ತಿರೋ ಜಾಟರು ಹಿಂದುಳಿದವರು ಹೇಗಾಗ್ತಾರೆ? ಹರ್ಯಾಣ ಕಂಡಿರುವ ಹತ್ತು ಮುಖ್ಯಮಂತ್ರಿಗಳ ಪೈಕಿ ಏಳು ಮಂದಿ ಜಾಟ್ ಸಮುದಾಯದಿಂದಲೇ ಬಂದಿರುವವರು. ಇಂಥವರು ಕೋಟಾ ಕೇಳಿದರೆ ಹೇಗೆ? ಈ ಬಗೆಯ ಹಲವು ಪ್ರಶ್ನೆಗಳಿವೆ.

ಇವ್ಯಾವವಕ್ಕೂ ಜಗ್ಗದೇ ಹಿಂಸೆಯಾದರೂ ಸರಿ ಎಂಬಂತೆ ಪ್ರತಿಭಟನೆಯಲ್ಲಿ ತೊಡಗಿರುವ ಜಾಟ್ ಸಮುದಾಯ ಕೇವಲ ಯಾವುದೋ ರಾಜಕೀಯ ಅಂಶಕ್ಕೆ ಹಿಂಗೆಲ್ಲ ಮಾಡ್ತಿದೆಯೇ? ಖಂಡಿತ, ಜಾಟರ ಪ್ರತಿಭಟನೆಯಲ್ಲಿ ರಾಜಕೀಯವಿದೆ, ಆದರೆ ಅದೇ ಈ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಮುಖ್ಯ ಬಲವೇನಲ್ಲ. ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಹೂಡಾ ಅವರ ಸಲಹೆಗಾರ ಪ್ರತಿಭಟನೆ ತೀವ್ರಗೊಳಿಸುವಂತೆ ಖಾಪ್ ಮುಖ್ಯಸ್ಥರಲ್ಲಿ ಕೇಳಿಕೊಂಡಿರುವ ಆಡಿಯೋ ಟೇಪ್
ಹೊರಬಿದ್ದು, ಜಾಟರ ಪ್ರತಿಭಟನೆಗಿರುವ ರಾಜಕೀಯ ಆಯಾಮವೂ ನಿಚ್ಚಳವಾಗಿದೆ ಎಂಬುದೇನೋ ಸರಿ. ಆದರೆ, ಈ ಪ್ರಮಾಣದಲ್ಲಿ ಪ್ರತಿಭಟನೆಗೆ ಇಳಿದಿರುವ ಎಲ್ಲರನ್ನೂ ಕಾಂಗ್ರೆಸ್ ಪರವೆಂದೋ, ಬಿಜೆಪಿ ವಿರೋಧಿಗಳೆಂದೋ ವಿಶ್ಲೇಷಿಸಲಾಗುವುದಿಲ್ಲ.

ಹಾಗಾದರೆ ಆಗುತ್ತಿರುವುದೇನು? ಜಾಟರ ಪ್ರತಿಭಟನೆಗೆ ಈ ಪರಿ ಬಿಸಿ ಹೆಚ್ಚಿಸಿರುವ ಅಂಶವಾದರೂ ಯಾವುದು? ಅದುವೇ ಇಕನಾಮಿಕ್ಸ್… ಸ್ಪಷ್ಟವಾಗಿ ಹೇಳಬೇಕೆಂದರೆ ಕೃಷಿ ಬಿಕ್ಕಟ್ಟು. ಜಾಟರು ಭೂಮಾಲಿಕ ವರ್ಗದವರು ಎಂಬುದೇನೋ ಖರೆ. ಆದರೆ ಕೃಷಿ ಭೂಮಿ ಒಡೆತನ ಎಂಬುದು ಈಗ ಹೆಗ್ಗಳಿಕೆ ವಿಷಯವಾಗಿ ಉಳಿದಿಲ್ಲ. ಅದರಲ್ಲೂ ರಾಜ್ಯವನ್ನು ಕಾಡಿದ ಎರಡು ಬರಗಾಲಗಳ ನಂತರವಂತೂ ನಿಜಕ್ಕೂ ಕೃಷಿ ನೆಚ್ಚಿಕೊಂಡಿದ್ದವರ ಬದುಕು ಹೈರಾಣಾಗಿದೆ. ಫಸಲೇ ಕೈಗೆ ಹತ್ತುತ್ತಿಲ್ಲ ಅನ್ನೋದು ಒಂದೆಡೆಯಾದರೆ, ಮತ್ತೊಂದೆಡೆ ಕೃಷಿಗೆ ಕಾರ್ಮಿಕರು ಸಿಗುತ್ತಿಲ್ಲ. ಕೆಲ ವರ್ಷಗಳಿಂದ ಇದರ ಬಿಸಿ ಮುಟ್ಟಿಸಿಕೊಳ್ಳುತ್ತಿರುವ ಸಮುದಾಯಕ್ಕೆ, ಇನ್ನು ಮುಂದೆ ಹೋದಂತೆಲ್ಲ ಭೂಮಿಯೇ ತಮಗೆ ಭಾರವಾಗಿ ನಿಜಕ್ಕೂ ಹಿಂದುಳಿದವರಾಗಿಬಿಡುವ ಆತಂಕ ಕಾಡಿದೆ. ಹಾಗೆಂದೇ ಒಬಿಸಿ ಮೀಸಲು ಕೇಳುತ್ತಿದ್ದಾರೆ.

ಮೀಸಲಿನ ಮೂಲಕ ಇವರು ಕಣ್ಣಿಡುತ್ತಿರುವುದು ಸರ್ಕಾರಿ ನೌಕರಿಗಳ ಮೇಲೆ. ಇವತ್ತು ಬರದ ನಾಡಲ್ಲಿ ಭೂಮಿ ಹೊಂದಿದವನಿಗಿಂತ ಸರ್ಕಾರಿ ನೌಕರಿಯಲ್ಲಿರುವವನ ವರಮಾನ ಹಲವು ಪಟ್ಟು ಚೆನ್ನಾಗಿದೆ. ಇದಲ್ಲದೇ ಖಾಸಗಿ ನೌಕರಿ ಹುಡುಕಿಕೊಳ್ಳುವುದಕ್ಕೆ ಹೋದರೆ, ಮೇಲುಹಂತದ ನೌಕರಿಗಳು ಭರವಸೆ ಮೂಡಿಸಬಹುದಾಗಲಿ, ಕೆಳಹಂತದ ನೌಕರಿಗಳಲ್ಲಿ ವಿಪರೀತ ದುಡಿಮೆ- ಪಗಾರು ಅಷ್ಟಕ್ಕಷ್ಟೆ ಎಂಬಂತಿದೆ. ಉದಾಹರಣೆಗೆ, ಖಾಸಗಿಯಲ್ಲಿ ಸೆಕ್ಯುರಿಟಿ ಸೂಪರ್ ವೈಸ್ ಆಗಿ ಇದ್ದ ಟೆನ್ಶನ್ ಗಳನ್ನೆಲ್ಲ ಮೈಮೇಲೆ ಹಾಕಿಕೊಂಡು, ಸಮಯ ಮಿತಿ ಮೀರಿ ದುಡಿಯಬೇಕಾದ ಸ್ಥಿತಿ ಇದ್ದರೆ, ಇವಿಷ್ಟೇ ಶೈಕ್ಷಣಿಕ ಅರ್ಹತೆ ಇಟ್ಟುಕೊಂಡು ಸರ್ಕಾರಿ ಗುಮಾಸ್ತನಾದರೆ ಅಲ್ಲಿನ ನಿರಾಳತೆ ದೊಡ್ಡದು. ಕೃಷಿ ವಲಯದ ಬಿಕ್ಕಟ್ಟು ಇಂಥದ್ದನ್ನೆಲ್ಲ ಯೋಚಿಸುವಂತೆ ಬಲವಂತ ಮಾಡುತ್ತಿದೆ.

ಪುರುಷರು ಮತ್ತು ಮಹಿಳೆಯರ ಲಿಂಗಾನುಪಾತದಲ್ಲಿ ಹರ್ಯಾಣದ್ದು ಅತಿಕೆಟ್ಟ ದಾಖಲೆ ಎಂಬುದು ನಿಮಗೆ ತಿಳಿದೇ ಇರುತ್ತದೆ. ಹೀಗಿರುವಾಗ, ಮದುವೆ ವಿಷಯ ಬಂದಾಗ ಸಾಮಾಜಿಕ- ಆರ್ಥಿಕ ಸ್ಥಾನಮಾನಗಳು ಆಯ್ಕೆಯ ಮುಖ್ಯ ಅಂಶಗಳಾಗುತ್ತವೆ. ಜಮೀನ್ದಾರಿಕೆ ಎಂಬುದು ಗತವೈಭವದ ಶಬ್ದವಾಗಿರಬಹುದಾದರೂ ಈಗ ಆರ್ಥಿಕ- ಸಾಮಾಜಿಕ ಗಟ್ಟಿತನ ಸೂಚಿಸುವ ಸೂಚ್ಯಂಕವಾಗಿ ಉಳಿದಿಲ್ಲ. ಹಾಗೆಂದೇ ಸರ್ಕಾರಿ ನೌಕರಿ ಇದ್ದವನಿಗೆ ಹೆಣ್ಣನ್ನು ವರಿಸುವ ಅವಕಾಶ ಹೆಚ್ಚು. ಸರ್ಕಾರಿ ನೌಕರಿ ಕೋಟಾದ ಜತೆ ತಳುಕು ಹಾಕಿಕೊಂಡಿದೆಯಾದ್ದರಿಂದ, ತಾವು ಒಬಿಸಿಗೆ ಸೇರಿಯೇ ಸಿದ್ಧ ಅಂತ ಜಾಟರು ಹೂಂಕರಿಸುತ್ತಿದ್ದಾರೆ.

ಇವಿಷ್ಟು ಜಾಟರ ಕತೆ ಕೇಳಿಕೊಂಡು ತುಸು ಯೋಚಿಸೋಣ. ಕೃಷಿ ವಲಯವು ಅನಿಶ್ಚಿತತೆಯಿಂದ ಹೊರಬಂದು ಲಾಭದಾಯಕ ಹಾಗೂ ಸಮ್ಮಾನಪೂರ್ಣ ಅಂತನಿಸುವ ಯೋಜನೆಗಳು ಇಲ್ಲದಿದ್ದರೆ ಇವತ್ತು ಜಾಟರನ್ನು ಕಾಡುತ್ತಿರುವ ಆಕ್ರೋಶ ನಾಳೆ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಪ್ರಬಲ ಸಮುದಾಯಗಳನ್ನು ಕಾಡುವ ದಿನಗಳು ಬಂದರೆ ಅಚ್ಚರಿ ಇದೆಯೇ? ಹರ್ಯಾಣದಂಥ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಜನರ ಕೌಶಲ ಹೆಚ್ಚು ಹಾಗೂ ಅದಕ್ಕೆ ತಕ್ಕಂತೆ ಖಾಸಗಿ ವಲಯದ ಕೆಲವು ಉದ್ಯೋಗಗಳು ಪೊರೆಯುತ್ತಿವೆಯಾದ್ದರಿಂದ ದೊಡ್ಡ ವರ್ಗವೊಂದಕ್ಕೆ ಅಸುರಕ್ಷತೆ ಕಾಡಿಲ್ಲ. ಅದಿಲ್ಲದಿದ್ದರೆ ನಮ್ಮಲ್ಲೂ ಕೃಷಿಕನಿಗೆ ಮದುವೆಯಾಗುವುದು ಕಷ್ಟ ಎಂಬಂಥ ದಿನಗಳು ಆಗಲೇ ಬಂದಿವೆ ತಾನೇ? ಜಮೀನು ಚೆನ್ನಾಗಿಯೇ ಇದ್ದವನಿಗೂ ಕೆಲಸಗಾರರು ಇಲ್ಲವೇ ಇಲ್ಲ ಎಂಬಂತಾಗಿ ಕಂಗಾಲಾಗಿರುವ ಸ್ಥಿತಿ ನಮ್ಮ ನೆಲದಲ್ಲೂ ಅಪರಿಚಿತವೇನಲ್ಲವಲ್ಲ.

ಕೃಷಿ ವಲಯದ ಬಿಕ್ಕಟ್ಟುಗಳು ಮುಂದುವರಿದಿದ್ದೇ ಆದರೆ ನಾಳೆ ಮೀಸಲು ಕೋಟಾ ಕೊಟ್ಟರೂ ಸರ್ಕಾರ ಜನರನ್ನು ಶಾಂತಗೊಳಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಬರಲಿದೆ. ಏಕೆಂದರೆ 1992-93ರಲ್ಲಿ ದೇಶದ ಜನಸಂಖ್ಯೆ 83 ಕೋಟಿ ಚಿಲ್ಲರೆ ಇದ್ದಾಗ ಲಭ್ಯವಿದ್ದ ಸರ್ಕಾರಿ ಉದ್ಯೋಗಗಳ ಸಂಖ್ಯೆ 1 ಕೋಟಿ 95 ಲಕ್ಷದಷ್ಟು. ಈಗ ಜನಸಂಖ್ಯೆ 120 ಕೋಟಿ ಆಗಿರುವಾಗ ಲಭ್ಯವಿರೋ ಸರ್ಕಾರಿ ಉದ್ಯೋಗಗಳು 1 ಕೋಟಿ 70 ಲಕ್ಷಗಳ ಅಜಮಾಸು. ಎಂಥ ಪತನ! ಅಲ್ಲಿಗೆ ಸರ್ಕಾರ ನೌಕರಿ ಸೃಷ್ಟಿಸುವ ಶಕ್ತಿಯನ್ನು ಯಾವತ್ತೋ ಕಳೆದುಕೊಂಡಿದೆ. ಖಾಸಗಿ ವಲಯ- ತಂತ್ರಜ್ಞಾನ ವಲಯಕ್ಕೆ ಎಲ್ಲ ಕೆಲಸದ ವರ್ಗವನ್ನು ಶಿಫ್ಟ್ ಮಾಡಿಬಿಡುತ್ತೇವೆ ಎಂಬಂಥ ಸ್ಥಿತಿಯೂ ಇಲ್ಲ. ಏಕೆಂದರೆ ಆ ಉದ್ಯೋಗಗಳು ನಿರ್ದಿಷ್ಟ ಕೌಶಲ ಬೇಡುತ್ತಿವೆ ಹಾಗೂ ದುರದೃಷ್ಟವಶಾತ್ ಈ ವಲಯದ ಬೇಡಿಕೆಗೆ ತಕ್ಕಂತೆ ಶ್ರಮಿಕವರ್ಗ ರೂಪಿಸುವಲ್ಲಿ ಶಿಕ್ಷಣ ವ್ಯವಸ್ಥೆ ಸಮಗ್ರವಾಗಿ ಅಪ್ ಡೇಟ್ ಆಗಿಲ್ಲ.

ವಲಸೆ, ಸಾಂಸ್ಕೃತಿಕ ಸಂಘರ್ಷ ಇವನ್ನೆಲ್ಲ ತಪ್ಪಿಸಿ ಇದ್ದ ಜಾಗದಲ್ಲೇ ಅನ್ನ ಕೊಡುವ ಶಕ್ತಿ ಇರುವ ವಲಯ ಬೇಸಾಯ ಮಾತ್ರ. ಇದರಲ್ಲಿ ಸಾಮಾಜಿಕ ಶಕ್ತಿ- ಆರ್ಥಿಕ ಶಕ್ತಿಗಳು ನೆಲೆಗೊಳ್ಳದಿದ್ದರೆ, ಸರ್ಕಾರಗಳಿಂದ ಆ ಬಗೆಯ ಪ್ರಯತ್ನಗಳಾಗದಿದ್ದರೆ, ಜಾಟರು ನಡೆಸುತ್ತಿರುವಂಥದ್ದೇ ಹಿಂಸಾತ್ಮಕ ಹೋರಾಟಗಳು ದೇಶದ ಹತ್ತು ಹಲವೆಡೆಗಳಲ್ಲಿ ನಡೆಯುವ ದಿನಗಳು ತುಂಬ ದೂರವೇನೂ ಇಲ್ಲ.

Leave a Reply