ಸಿದ್ದರಾಮಯ್ಯನವರ ಕುರ್ಚಿಗೆ ಕುತ್ತು ಬಂದಿದೆ ಎಂಬುದೇನೋ ಸರಿ, ಆದರೆ ಹಿಂದುಳಿದವರನ್ನು ಕೆಳಗಿಳಿಸಿದ್ದು ಹಿಂದುಳಿದವರೇ..!

ಡಿಜಿಟಲ್ ಕನ್ನಡ ಟೀಮ್

ಕೊನೆಗೂ ತಮ್ಮ ಕುರ್ಚಿಗೆ ಕುತ್ತು ಬಂದಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಕೊಂಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ನಡೆದಿದೆ ಎಂದು ದಿಲ್ಲಿಯಿಂದ ಬೆಂಗಳೂರಿಗೆ ಬಂದ ನಂತರ ತಾವಾಗಿಯೇ ಮಾಧ್ಯಮದವರ ಬಳಿ ಸಾರಿ ಶನಿವಾರ ಅಲವತ್ತುಕೊಂಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹಿಂದುಳಿದ ವರ್ಗದ ಮುಖ್ಯಮಂತ್ರಿಗಳನ್ನು ಅರ್ಧಾವಧಿಗೆ ಇಳಿಸುವ ಹುನ್ನಾರ ನಡೆಯುತ್ತದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಗಲ ಮೇಲೆ ಬಂದೂಕಿಟ್ಟು ವರಿಷ್ಠರಿಗೆ ಪರೋಕ್ಷವಾಗಿ ಗುಂಡು ಹೊಡೆದಿದ್ದಾರೆ. ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿದ್ದ ಸಂದರ್ಭದಲ್ಲೇ ಅಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಸಿಎಂ ಸೇರಿ ಸಂಪುಟಕ್ಕೆ ಮೇಜರ್ ಸರ್ಜರಿ ಆಗಬೇಕು ಅಂದಿದ್ದರು. ಅದೇ ಕಾಲಕ್ಕೆ ಬೆಂಗಳೂರಲ್ಲಿ ಕುಮಾರಸ್ವಾಮಿ ಅವರು ಸಿಎಂ ಕೈಲಿರುವ ವಜ್ರಖಚಿತ ವಾಚು ಕದ್ದದ್ದು ಎಂದು ಆರೋಪಿಸಿದ್ದರು. ಪಕ್ಷದ ಒಳಗೆ ಮತ್ತು ಹೊರಗೆ ತಮ್ಮ ವಿರುದ್ಧ ಏಕಕಾಲಿಕ ದಾಳಿ ನಡೆದಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಈ ಹೇಳಿಕೆ ಅವರಲ್ಲಿ ಹರಳುಗಟ್ಟುತ್ತಿರುವ ಹತಾಶೆ ಮತ್ತು ಅಧೀರತೆಗೆ ಕನ್ನಡಿ ಹಿಡಿದಿದೆ.

ಹಿಂದುಳಿದ ವರ್ಗಗಳಿಗೆ ಸೇರಿದ ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಎರಡ್ಮೂರು ವರ್ಷ ಮುಖ್ಯಮಂತ್ರಿ ಅವಧಿ ದಾಟಲು ಬಿಡಲಿಲ್ಲ. ಈಗ ಕ್ಷುಲ್ಲಕ ಕಾರಣ ಮುಂದೊಡ್ಡಿ, ತಮಗೆ ನಿತ್ಯ ಹಿಂಸೆ ಕೊಟ್ಟು ಅಧಿಕಾರದಿಂದ ಕೆಳಗಿಳಿಸುವ ಯತ್ನ ನಡೆದಿದೆ. ನನ್ನ ಕೈಲಿರುವ ವಾಚು ತಮ್ಮದಲ್ಲ ಎಂದು ಡಾ. ಸುಧಾಕರ ಶೆಟ್ಟಿ ಹೇಳಿದ್ದಾರೆ. ಅದರೂ ತಮ್ಮ ತೇಜೋವಧೆ ಮಾಡಲಾಗುತ್ತಿದೆ. ನಾನು ಬೆಳ್ಳಿ ತಟ್ಟೆ, ಲೋಟ, ಚಮಚ ಜತೆಯಲ್ಲಿಟ್ಟುಕೊಂಡು ತಿರುಗುತ್ತೇನೆ, ಅದರಲ್ಲೇ ಊಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿರುವುದು ನನ್ನನ್ನು ತೇಜೋವಧೆ ಮಾಡುವ, ವಿಚಲಿತಗೊಳಿಸುವ, ಸರಕಾರ ಅಸ್ಥಿರಗೊಳಿಸುವ ಸಂಚು ಎಂದು ಕಿಡಿಕಾರಿದ್ದಾರೆ.

ಹಾಗೆ ನೋಡಿದರೆ ಪ್ರತಿಪಕ್ಷಕ್ಕೆ ಸೇರಿದ ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೊಪ್ಪು ಹಾಕಬೇಕೆಂದೇನೂ ಇಲ್ಲ. ಏಕೆಂದರೆ ಹೈಕಮಾಂಡ್ ಗೆ ಕುಮಾರಸ್ವಾಮಿಗಿಂತ ಸಿದ್ದರಾಮಯ್ಯನವರೇ ಮುಖ್ಯರಾಗುತ್ತಾರೆ. ಆದರೆ ಅವರದೇ ಪಕ್ಷದಲ್ಲಿ ಸಿಡಿದು ನಿಂತಿರುವ ಹರಿಪ್ರಸಾದ್, ಜಾಫರ್ ಷರೀಫ್ ಬಗ್ಗೆ ಯಾರೇನು ಮಾಡಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯನವರೂ ಒಪ್ಪಲೇಬೇಕಾದ ಮಾತು. ಏಕೆಂದರೆ ಹಿಂದೆ ಮಿತ್ರರಾಗಿದ್ದ ಹರಿಪ್ರಸಾದ್ ಈಗ ಶತ್ರುವಾಗಲು ಬೇರಾರೂ ಕಾರಣರಲ್ಲ. ಅದಕ್ಕೆ ಯಾರಾದರೂ ಕಾರಣರಾಗಿದ್ದರೆ ಅದು ಸಿದ್ದರಾಮಯ್ಯನವರೇ.

ಇನ್ನು ಸಿದ್ದರಾಮಯ್ಯನವರು ಹೇಳಿರುಂತೆ ಹಿಂದುಳಿದ ವರ್ಗದವರ ಅಧಿಕಾರ ಕಸಿಯುವ ವಿಚಾರ. ಬಂಗಾರಪ್ಪ ಅವರಿಗಂತ ಮೊದಲು ಮೇಲ್ವರ್ಗದ, ವೀರಶೈವ ಸಮುದಾಯಕ್ಕೆ ಸೇರಿದ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಈಗ ತಮ್ಮ ಮೊಮ್ಮಗನ ಸೋಲಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಹಲ್ಲು ಮಸೆಯುತ್ತಿರುವ ಜಾಫರ್ ಷರೀಫ್ ಆಗ ಬಂಗಾರಪ್ಪನವರ ಜತೆ ಕೈ ಜೋಡಿಸಿದ್ದರು. ಬಂಗಾರಪ್ಪನವರನ್ನು ಕೆಳಗಿಳಿಸಲು ಹಿಂದುಳಿದ ವರ್ಗದವರೇ ಆದ ವೀರಪ್ಪ ಮೊಯ್ಲಿ ಸಂಚು ನಡೆಸಿದ್ದರು. ಈ ಮೂರು ಮಂದಿ ಸಿದ್ದರಾಮಯ್ಯನವರು ಆರಾಧಿಸಿದ ‘ಅಹಿಂದ’ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ವೀರಪ್ಪ ಮೊಯ್ಲಿ ಅವರು ಅಧಿಕಾರ ಪೂರ್ಣಗೊಳಿಸಿದ ನಂತರ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಿ ಕಾಂಗ್ರೆಸ್ ನಾಮಾವಶೇಷ ಆಗಿತ್ತು. ಈಗ ಸಿದ್ದರಾಮಯ್ಯನವರ ವಿರುದ್ಧ ಪಕ್ಷದೊಳಗೆ ಸಿಡಿದು ನಿಂತಿರುವ ಹರಿಪ್ರಸಾದ್, ಜಾಫರ್ ಷರೀಫ್ ಕೂಡ ಅಹಿಂದ ವರ್ಗಕ್ಕೇ ಸೇರಿದವರು ಎಂಬುದು ಗಮನಿಸಬೇಕಾದ ವಿಚಾರ.

Leave a Reply