ಸುದ್ದಿ ಸಂತೆ: ಸ್ಮೃತಿ ವಿರುದ್ಧ ತಿರುಗಿಬಿದ್ದ ವೆಮುಲ ತಾಯಿ, ಸನದಿಗೆ ಪಂಪ ಪ್ರಶಸ್ತಿ, ಕಾರ್ಪೊರೇಟರ್ ಅವ್ವ ಮಾದೇಶಗೆ ಜೀವಾವಧಿ ಶಿಕ್ಷೆ

ಡಿಜಿಟಲ್ ಕನ್ನಡ ಟೀಮ್

ಲೋಕಸಭೆಯಲ್ಲಿ ಪ್ರತಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿರುದ್ಧ ರೋಹಿತ್ ವೆಮುಲ ಕುಟುಂಬ ತಿರುಗಿ ಬಿದ್ದಿದೆ. ಲೋಕಸಭೆಯಲ್ಲಿ ಸಚಿವೆ ಹೇಳಿದ ಮಾತುಗಳು ಅಪ್ಪಟ ಸುಳ್ಳು ಎಂದು ಆರೋಪಿಸಿದೆ.

‘ಸ್ಮೃತಿ ಇರಾನಿ ಅವರು ಸುಳ್ಳು ಹೇಳಿ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಏಳು ತಿಂಗಳ ಕಾಲ ರೋಹಿತ್ ಗೆ ವಿದ್ಯಾರ್ಥಿ ವೇತನ ನೀಡಿರಲಿಲ್ಲ. ಮಾನವ ಸಂಪನ್ಮೂಲ ಸಚಿವಾಲಯ ಕಳುಹಿಸಿದ್ದ ಪತ್ರದಲ್ಲಿ ರೋಹಿತ್ ನನ್ನು ದೇಶದ್ರೋಹಿ ಮತ್ತು ಬಂಡಾಯವಾದಿ ಎಂದು ಬಿಂಬಿಸಿತ್ತು. ಮೋದಿಯವರು ದೇಶ ತನ್ನ ಮಗನೊಬ್ಬನನ್ನು ಕಳೆದುಕೊಂಡಿದೆ ಎಂದಿದ್ದರು. ಅವರು ಹೇಳಿರುವಂತೆ ಭಾರತ ನಿಜಕ್ಕೂ ಒಬ್ಬ ಮಗನನ್ನು ಕಳೆದುಕೊಂಡಿದ್ದೇ ಆಗಿದ್ದರೆ, ಆ ಮಗನನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸಿದ್ದೇಕೆ ಎಂದು ಪ್ರಧಾನಿಯವರನ್ನು ಕೇಳುತ್ತೇನೆ. ಈ ರೀತಿ ಬಿಂಬಿಸಿದವರ ವಿರುದ್ಧ ಏನು ಕ್ರಮ ಕೈಗೊಳ್ಳುವಿರಿ ಎಂದು ಕೇಳುತ್ತೇನೆ’ ಎಂದು ರೋಹಿತ್ ತಾಯಿ ರಾಧಿಕಾ ವೆಮುಲ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿ ಮುಂದುವರಿದ ಸ್ಮೃತಿ- ಮಾಯಾವತಿ ಫೈಟ್ 

ರಾಜ್ಯಸಭೆಯಲ್ಲಿ ಶುಕ್ರವಾರ ಮತ್ತೆ ಸಚಿವೆ ಸ್ಮೃತಿ ಇರಾನಿ ಮತ್ತು ಬಿಎಸ್ ಪಿ ನಾಯಕಿ ಮಾಯಾವತಿ ನಡುವೆ ವಾಗ್ಯುದ್ಧ ನಡೆದಿದೆ. ‘ಸಚಿವೆ ನಾನು ನೀಡುವ ಉತ್ತರದಿಂದ ನಿಮಗೆ ತೃಪ್ತಿಯಾಗದಿದ್ದರೆ ನನ್ನ ತಲೆ ಕತ್ತರಿಸಿಕೊಳ್ಳುತ್ತೇನೆ’ ಎಂದು ಬುಧವಾರ ಹೇಳಿದ್ದರು. ವೆಮುಲ ಆತ್ಮಹತ್ಯೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯಲ್ಲಿ ದಲಿತ ಪ್ರತಿನಿಧಿ ಇದ್ದಾರೆಯೇ ಎಂದು ನಾನು ಕೇಳಿದ್ದೆ. ಈ ಪ್ರಶ್ನೆಗೆ ಸಚಿವರು  ಈವರೆಗೂ ಉತ್ತರಿಸಿಲ್ಲ. ಅಲ್ಲದೆ ಅವರು ಕೊಟ್ಟಿರುವ ಉತ್ತರ ಕೂಡ ತೃಪ್ತಿ ತಂದಿಲ್ಲ. ಹಾಗಿದ್ದರೆ ಇರಾನಿ ಅವರು ಈಗ ತಲೆ ಕತ್ತರಿಸಿಕೊಳ್ಳುವರೇ’ ಎಂದು ಮಾಯಾವತಿ ಪ್ರಶ್ನಿಸಿದಾಗ ಸಚಿವರಿಂದ ಖಾರವಾದ ಪ್ರತಿಕ್ರಿಯೆ ಬಂತು.

‘ಒಂದು ಕೆಲಸ ಮಾಡಿ. ನನ್ನ ತಲೆ ಕತ್ತರಿಸಿಕೊಂಡು ಹೋಗಲು ನಿಮ್ಮ ಕಾರ್ಯಕರ್ತರಿಗೆ ಆದೇಶಿಸಿ’ ಎಂದರು. ಅಲ್ಲದೇ, ಹಿಂದೂ ದೇವತೆ ದುರ್ಗಾಮಾತೆ ಕುರಿತು ಜೆಎನ್ ಯು ವಿದ್ಯಾರ್ಥಿಗಳು ಭಿತ್ತಿಪತ್ರದಲ್ಲಿ ಸಹಿ ಮಾಡಿದ ಅವಹೇಳನಕಾರಿ ಮಾಹಿತಿಯನ್ನು ಇರಾನಿ ಸದನದಲ್ಲಿ ಓದಿದಾಗ ಪ್ರತಿಪಕ್ಷಗಳ ಸದಸ್ಯರಿಂದ ತೀವ್ರ ಆಕ್ಷೇಪ ಬಂತು. 

ಜೋಡಿ ಕೊಲೆ: ಕಾರ್ಪೋರೇಟರ್ ಸೇರಿ 10 ಮಂದಿಗೆ ಜೀವಾವಧಿ ಶಿಕ್ಷೆ

 ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೈಸೂರು ಪಾಲಿಕೆ ಜೆಡಿಎಸ್ ಸದಸ್ಯ ಮಾದೇಶ ಅಲಿಯಾಸ್ ಅವ್ವ ಮಾದೇಶ ಸೇರಿ ಎಲ್ಲಾ 10 ಮಂದಿ ಆರೋಪಿಗಳಿಗೆ ಮೈಸೂರಿನ 2ನೇ ಹೆಚ್ಚುವರಿ ಸತ್ರ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಎಂಟು ವರ್ಷಗಳ ಸುದೀರ್ಘ ವಿಚಾರಣೆ ನಂತರ ನ್ಯಾಯಾಲಯವು ಆರೋಪಿಗಳಿಗೆ ಈ ಶಿಕ್ಷೆ ಮತ್ತು ಪ್ರಮುಖ ಆರೋಪಿಗೆ 3 ಲಕ್ಷ ರುಪಾಯಿ ಹಾಗೂ ಉಳಿದವರಿಗೆ ತಲಾ 1 ಲಕ್ಷ ರುಪಾಯಿ ದಂಡ ವಿಧಿಸಿದೆ. ಈ ಹಣದಲ್ಲಿ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. 2008 ರಲ್ಲಿ ಇಲ್ಲಿನ ಹುಣಸೂರು ರಸ್ತೆಯ ಫಾರ್ಮ್ ಹೌಸ್ ಒಂದರಲ್ಲಿ ರಾಜೇಶ್ ಮತ್ತು ರಾಮು ಎಂಬುವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.

ಡಾ.ಬಿ ವಿ ಸನದಿ ಅವರಿಗೆ ಪಂಪ ಪ್ರಶಸ್ತಿ

 ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವವರಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ 2015 ರ ಪಂಪ ಪ್ರಶಸ್ತಿಗೆ ಸಾಹಿತಿ ಡಾ. ಬಿ. ಎ. ಸನದಿ ಅವರು ಆಯ್ಕೆಯಾಗಿದ್ದಾರೆ. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ನೇಮಿಚಂದ್ರ ಅವರು ಭಾಜನರಾದರೆ ಗಡಿನಾಡ ಸಾಹಿತ್ಯ ಪ್ರಶಸ್ತಿ ಎಂ ಎಸ್ ಸಿಂಧೂರ ಅವರಿಗೆ ಸಂದಿದೆ. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ರಾಯಚೂರಿನ ಜಂಬಣ್ಣ ಅಮರಚಿಂತ ಅವರು ಅಯ್ಕೆಯಾಗಿದ್ದಾರೆ.

ಮುಂಬೈ ಮುಡಿಗೆ 41ನೇ ರಣಜಿ ಗರಿ

ಭಾರತದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿಯಲ್ಲಿ ಮುಂಬೈ ಮತ್ತೊಮ್ಮ ತನ್ನ ಪಾರುಪತ್ಯ ಮೆರೆದಿದೆ. ಶುಕ್ರವಾರ ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಇನಿಂಗ್ಸ್ ಹಾಗೂ 21 ರನ್ ಅಂತರದ ಭರ್ಜರಿ ಜಯ ಸಾಧಿಸಿತು. ಆ ಮೂಲಕ 41ನೇ ಬಾರಿಗೆ ರಣಜಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಂಬೈ ಪರ ಆಕರ್ಷಕ ಶತಕ ದಾಖಲಿಸಿದ ಶ್ರೇಯಸ್ ಐಯ್ಯರ್ (117) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮಹಿಳೆಯರಿಗೆ ಕ್ಲೀನ್ ಸ್ವೀಪ್ ಜಯ

ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ವನಿತೆಯರ ತಂಡ 3-0 ಅಂತರದಿಂದ ಗೆದ್ದುಕೊಂಡಿದೆ. ಶುಕ್ರವಾರ ರಾಂಚಿಯಲ್ಲಿ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ ಗಳಿಂದ ಲಂಕಾ ಪಡೆಯನ್ನು ಮಣಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 89 ರನ್ ಬಾರಿಸಿತು. ಭಾರತ 13.5 ಓವರ್ ಗಳಲ್ಲಿ 1 ವಿಕೆಟ್ ಗೆ 91 ರನ್ ದಾಖಲಿಸಿ ಜಯ ಸಾಧಿಸಿತು. ಆ ಮೂಲಕ ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಸಾನಿಯಾ ಹಿಂಗೀಸ್ ಅಜೇಯ ಯಾತ್ರೆಗೆ ಬ್ರೇಕ್

ವಿಶ್ವದ ಅಗ್ರ ಶ್ರೇಯಾಂಕಿತ ಭಾರತದ ಸಾನಿಯಾ ಮಿರ್ಜಾ ಮತ್ತು ಮಾರ್ಟೀನಾ ಹಿಂಗೀಸ್ ಮಹಿಳಾ ಟೆನ್ನಿಸ್ ಜೋಡಿಯ ಅಜೇಯ ಯಾತ್ರೆ ಅಂತ್ಯಗೊಂಡಿದೆ. ಸತತ 41 ಪಂದ್ಯಗಳ ಗೆಲುವಿಗೆ ಶುಕ್ರವಾರ ಬ್ರೇಕ್ ಬಿದ್ದಿದೆ. ಕತಾರ್ ಓಪನ್ ನ ಕ್ವಾಟರ್ ಫೈನಲ್ ಪಂದ್ಯದಲ್ಲಿ ಇಂಡೊ-ಸ್ವಿಸ್ ಜೋಡಿ 6-2, 4-6,5-10 ಸೆಟ್ ಗಳಿಂದ ರಷ್ಯಾದ ಎಲೆನಾ ವೆಸ್ನೀನಾ ಮತ್ತು ಡಾರಿಯಾ ಕಸಟ್ಕಿನಾ ಜೋಡಿ ವಿರುದ್ಧ ಪರಾಭವಗೊಂಡಿತು.

ಜಾಟ್ ಪ್ರತಿಭಟನೆ: ಸಾವಿನ ಸಂಖ್ಯೆ 30ಕ್ಕೆರಿಕೆ, 133 ಮಂದಿ ಬಂಧನ

ಹರ್ಯಾಣದಲ್ಲಿ ಕಳೆದೆರಡು ವಾರಗಳಿಂದ ನಡೆಯುತ್ತಿರುವ ಜಾಟ್ ಸಮುದಾಯದ ಮೀಸಲಾತಿ ಹೋರಾಟದಲ್ಲಿ 30 ಮಂದಿ ಮೃತಪಟ್ಟು, 200 ಕ್ಕೂ ಹಚ್ಚು ಮಂದಿಗೆ ಗಾಯಗಳಾಗಿವೆ. ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವಿನ ತೀವ್ರ ಸ್ವರೂಪದ ಸಂಘರ್ಷದಲ್ಲಿ ಸುಮಾರು 30 ಸಾವಿರ ಕೋಟಿ ಮೌಲ್ಯದ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟವಾಗಿದೆ. ಮಾಹಿತಿ ಆಧಾರದಲ್ಲಿ 713 ಮಂದಿ ಮೇಲೆ ಎಫ್ ಐ ಆರ್ ದಾಖಲಿಸಿದ್ದು ಇಲ್ಲಿಯವರೆಗೆ 133 ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಡಿಜಿಪಿ ವೈ.ಜಿ ಸಿಂಘಾಲ್ ತಿಳಿಸಿದ್ದಾರೆ.

Leave a Reply