ಸೊಮಾಲಿಯಾ ಅಂದ್ರೆ ಬರೀ ಕಿತ್ತು ತಿನ್ನೋ ಬಡತನ ಮಾತ್ರವಲ್ಲ, ಅದು ಡಿಜಿಟಲೀಕರಣದ ಸಂಕೇತವೂ ಹೌದು!

ಡಿಜಿಟಲ್ ಕನ್ನಡ ಟೀಮ್

ಸೊಮಾಲಿಯಾ ಅಂದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಕಿತ್ತು ತಿನ್ನುವ ಬಡತನ, ಮೈಚಕ್ಕಳ ಕಾಣುವ ನಿಸ್ತೇಜಮುಖಿ ಜನ. ಜನಾಂಗೀಯ ಕಲಹ, ಶೋಷಣೆ, ರಾಜಕೀಯ ಅರಾಜಕತೆಯಿಂದ ನಲುಗಿ ಕಂಗಲಾಗಿರುವ ಈ ದೇಶವನ್ನು ಜಗತ್ತು ನೋಡುವುದು ಬಡತನದ ಪ್ರತೀಕವೆಂದೇ.

ಆದರೆ ಇತ್ತೀಚಿಗೆ ಈ ದೇಶ ಬದಲಾವಣೆಗೆ ತೆರೆದುಕೊಂಡಿದೆ. ಯುದ್ಧಗಳು ಕಡಿಮೆಯಾಗಿ, ಶಾಂತಿಯ ಅಲೆ ಬೀಸಲಾರಂಭಿಸಿದೆ. ಜನ ನಿರ್ಭೀತಿಯನ್ನು ಉಸಿರಾಡಲು ಶುರುಮಾಡಿದ್ದಾರೆ. ಅದರ ಜತೆಗೆ ಜನಸಾಮಾನ್ಯರು ನಿತ್ಯ ವ್ಯವಹಾರಗಳಿಗೆ ತ್ವರಿತಗತಿಯಲ್ಲಿ ಡಿಜಿಟಲಿಕರಣದ ಮೊರೆ ಹೋಗುತ್ತಿರುವುದು ನಿಜಕ್ಕೂ ಪ್ರಶಂಸನೀಯ.

ವಿಶ್ವದ ಹಲವು ಪ್ರಗತಿಪರ ರಾಷ್ಟ್ರಗಳು ಡಿಜಿಟಲಿಕರಣ ಅಪ್ಪಿಕೊಂಡಿವೆ. ಭಾರತ ಕೂಡ ಈ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಿದೆ. ಈ ದೇಶಗಳು ಹಿಂದಿನಿಂದಲೂ ಬದಲಾವಣೆ ಜತೆ ನಡೆಯುತ್ತಿರುವುದರಿಂದ ಅದರಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನೂ ಇಲ್ಲ. ಆದರೆ, ಸೊಮಾಲಿಯಾದಂತ ತೀರಾ ಹಿಂದುಳಿದ ದೇಶ ಡಿಜಿಟಲಿಕರಣದತ್ತ ಮುಖ ಮಾಡಿರುವುದು ಅಚ್ಚರಿಯೇ ಸರಿ.

ಹೌದು, ಸೊಮಾಲಿಯಾದಲ್ಲಿ ಬ್ಯಾಂಕ್ ಗಳ ಸಂಖ್ಯೆ ಕಡಿಮೆ. ಆದರೆ, ಮೊಬೈಲ್ ಬ್ಯಾಂಕಿಂಗ್ ವ್ಯಾಪಕವಾಗಿದೆ. ಕಾರಣ ದರೋಡೆಕೋರರ ಭೀತಿ. ಕರೆನ್ಸಿ ಬಳಸಿದರೆ ತಾನೇ ಕಿತ್ತೊಯ್ಯುವ, ಕದ್ದೊಯ್ಯುವ ಭೀತಿ. ಅದರ ಸಹವಾಸವೇ ಬೇಡ ಎಂದು ಜನ ಜೇಬಿನಲ್ಲಿ ಹಣ ಇಟ್ಟುಕೊಂಡು ತಿರುಗಾಡುವುದನ್ನೇ ಬಿಡುತ್ತಿದ್ದಾರೆ. ಹೀಗಾಗಿ ಮೊಬೈಲ್ ಬ್ಯಾಂಕಿಂಗ್ ಮೂಲಕವೇ ನಿತ್ಯ ವ್ಯವಹಾರ. ಅದು ತರಕಾರಿ, ದಿನಸಿ ಅಂಗಡಿಯಿಂದ ಹಿಡಿದು ಒಡವೆ-ವಸ್ತ್ರ ಮಳಿಗೆಗಳವರೆಗಿನ ಎಲ್ಲ ವ್ಯವಹಾರದಲ್ಲೂ ಇದರದೇ ಪಾರುಪತ್ಯ. ಸೊಮಾಲಿಯಾ ರಾಜಧಾನಿ ಮೊಗಡಿಶುವಿನಲ್ಲಿ ಬಹುತೇಕ ಮಳಿಗೆಗಳು ನಗದು ಸ್ವೀಕಾರ ನಿಲ್ಲಿಸಿವೆ. ಇಲ್ಲೇನಿದ್ದರೂ ಮೊಬೈಲ್ ಪೇಮೆಂಟ್ ಮಾತ್ರ.

ಇದು ಬರೀ ಸೊಮಾಲಿಯಾ ಮಾತಲ್ಲ. ಕೀನ್ಯಾ ಸಹ ಇತರೆ ಪ್ರಗತಿಪರ ರಾಷ್ಟ್ರಗಳಿಗಿಂತ ವೇಗವಾಗಿ ಈ ಡಿಜಿಟಲೀಕರಣ ಆಗುತ್ತಿದೆ. ಆರು ವರ್ಷಗಳ ಹಿಂದೆ ಪೂರ್ವ ಆಫ್ರಿಕಾ ದೇಶಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಶುರುವಾಯ್ತು. ಮೂರು ವರ್ಷಗಳ ಹಿಂದೆ ಶೇಕಡಾ 22 ಮಂದಿ ಮೊಬೈಲ್ ಪಾವತಿ ಮಾಡುತ್ತಿದ್ದರು. ಈಗ ಅದು ಶೇಕಡಾ 51 ಕ್ಕೆ ವಿಸ್ತರಣೆ ಆಗಿದೆ. ವಿಶ್ವಬ್ಯಾಂಕ್ ನ 2014 ರ ಅಂಕಿ-ಅಂಶದ ಪ್ರಕಾರ ಶೇ.40 ರಷ್ಟು ವಯಸ್ಕರು ಮೊಬೈಲ್ ಬ್ಯಾಂಕಿಂಗ್ ಖಾತೆ ಹೊಂದಿದ್ದಾರೆ.

ಯೆಸ್. ಇದು ಡಿಜಿಟಲ್ ಯುಗದ ಸ್ವಾರಸ್ಯವೇ ಸರಿ.

Leave a Reply