ಹೇ ಪ್ರಭು, ನೀನು ಬಂದುದೆಲ್ಲಿಂದ? ಏನು ನಿನ್ನ ಈ ಅಂದ-ಚೆಂದ..?!

 

ANANTHA PHOTO

ಟಿ.ಆರ್. ಅನಂತರಾಮು

ಈ ಚಿತ್ರ  ನೋಡಿದೊಡನೆ ನಿಮ್ಮ ಮನಸ್ಸಿನಲ್ಲಿ ಗೊಂದಲವಾಗಬಹುದು. ಎಲ್ಲೋ ನೋಡಿದ್ದೇನಲ್ಲ ಎಂದು ನಿಮಗನ್ನಿಸಿದರೆ ಅದು ಸುಳ್ಳು. ನೀವು ನೋಡಿರಲು ಸಾಧ್ಯವೇ ಇಲ್ಲ, ಯಾವ ಮ್ಯೂಸಿಯಂನಲ್ಲೂ ಇದನ್ನು ಪ್ರದರ್ಶನಕ್ಕಿಟ್ಟಿಲ್ಲ. ಮೊದಲು ಇದರ ಅಡ್ರೆಸ್ ಹೇಳುವುದು ವಾಸಿ. ಈ ಪ್ರಾಣಿಗೂ ನಾಮಕರಣವಾಗಿದೆ. ಹೆಸರು ಪರೈಯೋಸಾರಸ್. ಉಚ್ಚಾರಣೆಗೆ ನಾಲಗೆ ತೊಡರುತ್ತದೆ. ಈ ವಿಜ್ಞಾನಿಗಳೇ ಹೀಗೆ. ನಾಲಗೆ ಹೊರಳದ ಇಂಥ ಹೆಸರನ್ನೇ ಕೊಡುತ್ತಾರೆ. ಇರಲಿ ಬಿಡಿ, ಗ್ರೀಕ್ ಭಾಷೆಯಲ್ಲಿ ಹೀಗೆಂದರೆ `ಭರ್ಜರಿ ಕೆನ್ನೆ ಇರುವ ಹಲ್ಲಿ’ಯಂತೆ!

ಇದು ಬಂದದ್ದು ಇಂಥ ಜಾಗದಿಂದ ಎಂದು ಹೇಳುವ ಬದಲು ಸದ್ಯಕ್ಕೆ ಇಂಥ ಖಂಡದಿಂದ ಎಂದು ಹೇಳಬಹುದು. ರಷ್ಯ, ಚೀನ, ಸೌತ್ ಆಫ್ರಿಕ ಯಾವುದೇ ಆಗಿರಬಹುದು. ಇದರ ಅಜ್ಜ, ಮುತ್ತಜ್ಜ, ದಾಯಾದಿಗಳು, ವಾರಗೆಯವರು ಬಂಧುಗಳು ಎಲ್ಲರದ್ದೂ ಇದೇ ಅಡ್ರೆಸ್. ಆದರೆ ಇಂಥ ಅಮೂರ್ತ ಅಡ್ರೆಸ್ ಹಿಡಿದು ನೀವು ಇದನ್ನು ಹುಡುಕಲು ಹೊರಟರೆ ಪ್ರಯೋಜನವಿಲ್ಲ. ಈ ಪ್ರಾಣಿ ಸತ್ತು ಇಪ್ಪತ್ಮೂರು ಕೋಟಿ ವರ್ಷಗಳಾಗಿವೆ. ಅಂದರೆ ನೀವು ಕಾಣುತ್ತಿರುವುದು ಅದರ ಅಸ್ಥಿಪಂಜರದಿಂದ ಕಂಡ ವಿವರಗಳಿಂದ ಪೂರ್ಣ ಪ್ರಮಾಣದ ಪ್ರಾಣಿ ಹೇಗಿತ್ತು ಎಂದು ಕಲ್ಪಿಸಿದ ಚಿತ್ರ. ಇದನ್ನು ನೋಡಲೇಬೇಕು ಎಂದರೆ ಸುಲಭವಲ್ಲ. ಅವುಗಳ ಸಮಾಧಿ ಇರುವ ಸ್ಥಳಗಳನ್ನು ಹುಡುಕಬೇಕು, ಮೇಲೆತ್ತಬೇಕು. ಆಗ ಮಾತ್ರ ಅಸ್ಥಿಪಂಜರ ಸಿಕ್ಕೀತು, ನಿಮ್ಮ ಕಣ್ಣುಗಳು ಚುರುಕಾಗಿದ್ದರೆ. ಈ ಕೆಲಸವನ್ನು ಪಳೆಯುಳಿಕೆ ತಜ್ಞರು ಮಾಡುತ್ತಾರೆ, ಬಿಡಿ.

ಒಂದಂತೂ ನಿಜ. ನೋಡಿದೊಡನೆ ಇದನ್ನು ಹೋಲುವ ಇನ್ನೊಂದು ಪ್ರಾಣಿಯನ್ನು ನೆನಪಿಸಿಕೊಳ್ಳಬೇಕಲ್ಲ. ಘೇಂಡಾಮೃಗ, ನೀರಾನೆ, ಬೆನ್ನುಬ್ಬಿಸಿದ ಮೊಸಳೆ? ಯಾವುದೂ ಅಲ್ಲ, ಡೈನೋಸಾರ್? ನಿಜ, ಸ್ವಲ್ಪ ಹೋಲಿಕೆ ಇದೆ. ಆರೂವರೆ ಕೋಟಿ ವರ್ಷಗಳ ಹಿಂದೆ ಇಡೀ ಜಗತ್ತೇ ತನ್ನದು ಎಂದು ಆಳಿ ಅಳಿದುಹೋದುವಲ್ಲ, ಈ ಮಹಾ ಉರಗಗಳು. ಜ್ಯೂರಾಸಿಕ್ ಪಾರ್ಕ್ ಸಿನಿಮಾ ನೋಡಿದ ದೊಡ್ಡವರು ಗಾಬರಿಯಾಗಿದ್ದರು. ಚಿಕ್ಕವರು ಬೆಚ್ಚಿದ್ದರು, ಇನ್ನೂ ಚಿಕ್ಕವರು ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರು. ಭಯಂಕರ ಚಿತ್ರ ಅದು. ಈ ಪ್ರಾಣಿ ಓಡಾಡಿದ್ದು 230 ಕೋಟಿ ವರ್ಷಗಳ ಹಿಂದೆ. ಆಗ ಡೈನೋಸಾರ್‍ಗಳು ಇನ್ನೂ ಕಾಣಿಸಿಕೊಂಡಿರಲಿಲ್ಲ. ಮನುಷ್ಯ-ಬಿಡಿ, ಕಾಣಿಸಿಕೊಳ್ಳುವ ಕುರುಹುಗಳೂ ಇರಲಿಲ್ಲ. ನಮ್ಮ ರಾಜರು, ಚಕ್ರವರ್ತಿಗಳ ಆಡಳಿತ ನೆನೆಸಿಕೊಂಡರೆ, ಕೆಲವರದ್ದು ಷಾರ್ಟ್ ಪೀರಿಯಡ್, ಇನ್ನು ಕೆಲವರದ್ದು ಲಾಂಗ್ ಪೀರಿಯಡ್-ಗುಪ್ತರ ಸಾಮ್ರಾಜ್ಯದ ಹಾಗೆ. ಪರೈಯೋಸಾರಸ್ ವಂಶ ಈ ಭೂಮಿಯಲ್ಲಿ ಮೆರೆದಾಡಿದ್ದು ಹತ್ತು ದಶಲಕ್ಷ ವರ್ಷಗಳ ಕಾಲ. ನೀವು ಅಬ್ಬಬ್ಬಾ ಎನ್ನಬಹುದು, ಆದರೆ ಪ್ರಾಚೀನ ಜೀವಿವಿಜ್ಞಾನಿಗಳಿಗೆ ಇದು ಷಾರ್ಟ್ ಪೀರಿಯಡ್- ಅವರದ್ದೆಲ್ಲ ಕೋಟಿ ಕೋಟಿ ವರ್ಷಗಳ ಲೆಕ್ಕಾಚಾರ.

ಸದ್ಯಕ್ಕೆ ಚೀನಾದಲ್ಲಿ ಸಿಕ್ಕಿರುವ ಇದರ ಪಳೆಯುಳಿಕೆಯನ್ನು ಆಧರಿಸಿ ಹೇಗಿತ್ತು ಈ ಪ್ರಾಣಿ ಎಂದು ಊಹಿಸಿ ಪೂರ್ತರೂಪ ಸೃಷ್ಟಿಸಿದ್ದಾರೆ. ಹೆಚ್ಚು ಕಡಿಮೆ ತಾಕತ್ತಾಗಿ ಬೆಳೆದ ಹಿಪೋಪೊಟಮಸ್ ಗಾತ್ರ ಎನ್ನಬಹುದು, 500 ಕೆ.ಜಿ. ತೂಕ. ಮುಂಗಾಲು ಗಿಡ್ಡ, ತಲೆ ಚಿಕ್ಕದು, ಮೈಯೆಲ್ಲ ಗುಪ್ಪುಗಪ್ಪು, ಅಲ್ಲಿಂದ ಗುರಾಣಿಗಳು ಸುತ್ತ ಬೆಳೆದಿದ್ದವಂತೆ. ಯಾವ ಎದುರಾಳಿಯೂ ಸುಲಭವಾಗಿ ಅಟ್ಯಾಕ್ ಮಾಡಬಾರದು ಎಂದು. ಇದರ ಕಾಲುಗಳನ್ನು ನೋಡಿದರೆ ಯಾರೋ ಸ್ಪೇರ್ ಪಾರ್ಟ್ಸ್ ತಂದು ಫಿಕ್ಸ್ ಮಾಡಿದ ಹಾಗೆ. ವಿಶೇಷವೆಂದರೆ ಈ ಮಹಾಶಯ ಪ್ಯೂರ್ ವೆಜಿಟೇರಿಯನ್. ವಿಜ್ಞಾನಿಗಳು ಮಾತ್ರ ತೀರ `ಅಗ್ಲಿ ಕಂಡ್ರಿ ಇವು’ ಎನ್ನುತ್ತಿದ್ದಾರೆ. ಇಂಥ ಕುರೂಪಿ ಸರೀಸೃಪದ ಪಳೆಯುಳಿಕೆಯನ್ನು ನಾವು ನೋಡೇ ಇಲ್ಲ ಎಂದು ಮೂಗುಮುರಿಯುತ್ತಿದ್ದಾರೆ. ಆದರೆ ಹೀಗೆ ಹೇಳುತ್ತಲೇ ಪ್ರೀತಿಯಿಂದ ಅದರ ಅಸ್ಥಿಪಂಜರ ತಡವುತ್ತಾರೆ. ಚಿನ್ನದ ಗಣಿ ಸಿಕ್ಕಷ್ಟು ಸಂತೋಷ ಅವರಿಗೆ. ಯಾಕೆ? ಏನಾಯಿತು? ಎಲ್ಲ ಇದ್ದಕ್ಕಿದ್ದಂತೆ ಕಣ್ಮರೆಯಾದುವಲ್ಲ! ಇದು ಬದುಕಿದ್ದ ಕಾಲವನ್ನು ವಿಜ್ಞಾನಿಗಳು `ಪರ್ಮಿಯನ್’ ಅಂಥ ಕರೀತಾರೆ. ಈಗಿನಿಂದ ಹಿಂದಕ್ಕೆ 30 ಕೋಟಿ ವರ್ಷಗಳಿಂದ 23 ಕೋಟಿ ವರ್ಷಗಳ ನಡುವಿನ ಕಾಲ. ದಿಢೀರ್ ಅಂತ ರಷ್ಯದ ಹತ್ತಿರ ಪ್ರಳಯಾಂತಕ ಜ್ವಾಲಾಮುಖಿ ಸ್ಫೋಟಿಸಿ ಇವಕ್ಕೆ ತಿನ್ನಲು ಏನೂ ಸಿಗದಂತೆ ಮಾಡಿ ಗೊಟಕ್ ಎನ್ನಿಸಿತ್ತು ಆ ಜ್ವಾಲಾಮುಖಿ. ಇವುಗಳ ಜೊತೆಗಿನ ಪ್ರಾಣಿಗಳಲ್ಲಿ ಶೇ.90 ಭಾಗ ನಿರ್ನಾಮವಾದವು.

ಇನ್ನು ಭೂಖಂಡಗಳು ಹೇಗಿದ್ದವು? ಅವೆಲ್ಲ ಒಂದುಗೂಡಿದ್ದವು. ಆಫ್ರಿಕ, ದಕ್ಷಿಣ ಅಮೆರಿಕದೊಂದಿಗೆ ಕೂಡಿಕೊಂಡಿತ್ತು. ಇಂಡಿಯ, ಅಂಟಾರ್ಟಿಕ ಮತ್ತು ಆಸ್ಟ್ರೇಲಿಯಕ್ಕೆ ಹೊಂದಿಕೊಂಡಿತ್ತು. ಬಿಡಿ, ಅದೇ ಒಂದು ದೊಡ್ಡ ಕಥೆ. ಈಗಂತೂ ಅಮೆರಿಕ, ಇಂಗ್ಲೆಂಡುಗಳಲ್ಲಿ ಈ ಪರೈಯೋಸಾರಸ್ ದೇ ಭರ್ಜರಿ ಕಥೆ. ಎಲ್ಲ ಮಾಧ್ಯಮಗಳೂ ಇದರತ್ತ ಗಮನಕೊಟ್ಟಿವೆ. ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದೆ.

(ಲೇಖಕರು ಭೂವಿಜ್ಞಾನಿ, ಕನ್ನಡದ ಜನಪ್ರಿಯ ವಿಜ್ಞಾನ ಬರಹಗಾರರು. ಐವತ್ತಕ್ಕೂ ಹೆಚ್ಚು ಪುಸ್ತಕಗಳ ಕೃತಿಕಾರರು)

Leave a Reply