ಆಸ್ಕರ್ ಸಿಗದೇ ಹೋದ ಬೇಸರವನ್ನು ಈ ಗಿಫ್ಟ್ ಬ್ಯಾಗ್ ನಲ್ಲಿ ಮರೆಯಬಹುದೇನೋ.. ಏಕೆಂದರೆ ಇದರ ಮೌಲ್ಯ ಬರೊಬ್ಬರಿ ₹ 1.59 ಕೋಟಿ..!

ಡಿಜಿಟಲ್ ಕನ್ನಡ ಟೀಮ್

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯಾದರೂ ಲಿಯೋನಾರ್ಡೊ ಡಿಕ್ಯಾಪ್ರಿಯೊ ಮುಡಿಗೆ ಈ ಗರಿ ಏರುತ್ತಾ ಅನ್ನೋದು ಅಭಿಮಾನಿಗಳ ಕುತೂಹಲ. ಪ್ರಶಸ್ತಿ ಯಾರಿಗೆ ಸಿಗಬಹುದು ಅಂತ ಪ್ರೆಡಿಕ್ಟ್ ಮಾಡೊದನ್ನು ಪಕ್ಕಕ್ಕಿಡೋಣ. ಈಗ ಹೇಳುತ್ತಿರೋ ವಿಷಯ ಏನಪ್ಪಾ ಅಂದ್ರೆ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನೀಡೊ ಭರ್ಜರಿ ಗಿಫ್ಟ್ ಬ್ಯಾಗ್ ಬಗ್ಗೆ. ಆಸ್ಕರ್ ಪ್ರಶಸ್ತಿ ಅಂದ್ರೆ ಬರಿ ಬಂಗಾರ ಬಣ್ಣದ ಮನುಷ್ಯನ ಪ್ರತಿಮೆಯಷ್ಟೇ ಅಲ್ವಾ, ಗಿಫ್ಟ್ ಬ್ಯಾಗ್ ಬೇರೆ ಕೊಡ್ತಾರಾ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹೌದು, ಪ್ರತಿ ವರ್ಷ ಈ ಪ್ರಶಸ್ತಿಯ ಕೆಲ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದವರಿಗೆ ಗಿಫ್ಟ್ ಬ್ಯಾಗ್ ನೀಡೋದು ವಾಡಿಕೆ. ಅತ್ಯುತ್ತಮ ನಟ, ನಟಿ, ನಿರ್ದೇಶಕ, ಪೋಷಕ ನಟ ಇಂತಹ ಕೆಲ ವಿಭಾಗದವರಿಗೆ ಮಾತ್ರ ಇದನ್ನು ಕೊಡಲಾಗುತ್ತದೆ.

ಗಿಫ್ಟ್ ಬ್ಯಾಗ್ ಅಂದರೇ ಏನು ಮಹಾ.., ಒಂದೆರಡು ಕೂಪನ್ನೊ, ನೆನಪಿನ ಕಾಣಿಕೆನೊ, ಅಬ್ಬಾಬ್ಬಾ ಅಂದ್ರೆ ಒಂದು ದುಬಾರಿ ವಾಚೊ, ಫೋನೊ ಇರುತ್ತೆ, ಅದರಲ್ಲೇನು ಮಹಾ ಅಂತ ಮೂಗು ಮುರಿಬೇಡಿ. ಈ ಗಿಫ್ಟ್ ಬ್ಯಾಗ್ ನಲ್ಲಿರೋ ವಸ್ತುಗಳು ಮತ್ತು ಅವುಗಳ ಮೊತ್ತ ಕೇಳಿದರೆ ನಿಮಗೆ ಗಾಬರಿ ಆಗಬಹುದು. ಅದರಲ್ಲೂ

ಈ ಬಾರಿ ಕೊಡ್ತಿರೊ ಗಿಫ್ಟ್ ಬ್ಯಾಗ್ ಹೊಸ ದಾಖಲೆ ಬರೆದಿದೆ. ಕಾರಣ ಇದರ ಮೊತ್ತ ಬರೋಬ್ಬರಿ ₹ 1.59 ಕೋಟಿ (2.32 ಲಕ್ಷ ಅಮೆರಿಕನ್ ಡಾಲರ್). 2015 ರಲ್ಲಿ ಇದರ ಮೊತ್ತ ₹1.15 ಕೋಟಿ, 2014 ರಲ್ಲಿ ₹  55 ಲಕ್ಷ. ಗಿಫ್ಟ್ ಬ್ಯಾಗ್ ನಲ್ಲಿರೊದು ಬರೊಬ್ಬರಿ 42 ವಸ್ತುಗಳು. ಈ ಪೈಕಿ ಪ್ರಮುಖ ವಸ್ತುಗಳು, ಅವುಗಳ ಮೌಲ್ಯ ಹೀಗಿವೆ:

– 10 ದಿನಗಳ ಕಾಲ ಪ್ರಥಮ ದರ್ಜೆ ಗುಣಮಟ್ಟದ ಇಸ್ರೇಲ್ ಪ್ರವಾಸ (₹ 37.83 ಲಕ್ಷ)

– ಜಪಾನ್ ನಲ್ಲಿ 15 ದಿನಗಳ ನಡಿಗೆ ಪ್ರವಾಸ (₹ 37.15 ಲಕ್ಷ)

– ‘ಸಿಲ್ವರ್ಸ್ ಕಾರ್’ ನಲ್ಲಿ ನಿಮಗೆ ಬೇಕಾದಾಗ ಆಡಿ ಕಾರ್ ಬಾಡಿಗೆ ಪಡೆಯಬಹುದು. ಇದರ ವ್ಯಾಲಿಡಿಟಿ ಒಂದು ವರ್ಷ (₹ 30.95 ಲಕ್ಷ)

– ಜೀವನಪೂರ್ತಿ ಲಿಜೊರಿಯಾ ಕಂಪನಿಯಿಂದ ಸ್ಕಿನ್ ಕೇರ್ ಕ್ರೀಮ್ ಲಭ್ಯ (₹ 21.46 ಲಕ್ಷ)

– ಅಲ್ಟಿಮೆಟ್ ಫಿಟ್ನೆಸ್ ಪ್ಯಾಕೇಜ್ (₹ 4.30 ಲಕ್ಷ)

– ಹ್ಯಾಲೊ ನ್ಯಾಚುರಲ್ ಪೆಟ್ ಫುಡ್ ನಿಂದ ಸಾಕುಪ್ರಾಣಿಗೆ ಉಚಿತ ಆಹಾರ (₹ 4.33 ಲಕ್ಷ)

– ಮನೆಯಲ್ಲೇ ಸ್ಟೀಮ್ ಸ್ಪಾ (₹ 3.48 ಲಕ್ಷ)

– ಇಟಲಿಯ ಖ್ಯಾತ ಗ್ರ್ಯಾಂಡ್ ಹೋಟೆಲ್ ಎಕ್ಲೆಲ್ಸಿಯರ್ ನಲ್ಲಿ ಭೋಜನ (₹ 3.43 ಲಕ್ಷ)

– ಕ್ಯಾಲಿಫೋರ್ನಿಯಾದಲ್ಲಿ ಗೋಲ್ಡನ್ ಸ್ಪಾ (₹ 3.30 ಲಕ್ಷ)

– ಫಿಟ್ನೆಸ್ ತಜ್ಞ ಜೇಯ್ ಕಾರ್ಡೆಲ್ಲೊರಿಂದ ಫಿಟ್ನೆಸ್ ತರಬೇತಿ (₹ 96 ಸಾವಿರ)

ಈ ಎಲ್ಲದರ ಜತೆಗೆ ವಿವಿಧ ಬ್ರ್ಯಾಂಡ್ ಕಂಪನಿಗಳ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಸ್, ಉಡುಗೆ, ಸೌಂದರ್ಯ ವರ್ಧಕ, ಮೊಮೆಂಟೊ, ತಿನಿಸು, ವೊಡ್ಕಾ ಹೀಗೆ ಹಲವು ವಸ್ತುಗಳು ಈ ಗಿಫ್ಟ್ ಬ್ಯಾಗ್ ನಲ್ಲಿವೆ.

ಒಟ್ಟಾರೆ 25 ಜನರಿಗೆ ಈ ಬಾರಿ ಗಿಫ್ಟ್ ಬ್ಯಾಗ್ ಸಿಗುತ್ತೆ. ಆಸ್ಕರ್ ಪ್ರಶಸ್ತಿ ಸಿಗದ ಬೇಸರವನ್ನು ಈ ದುಬಾರಿ ಗಿಫ್ಟ್ ನಲ್ಲಿ ಮರೆಯಬಹುದೋ, ಇಲ್ಲವೊ ಎಂಬುದಕ್ಕಿಂತ ಬರಿಗೈಲಿ ಮನೆಗೆ ಹೋಗುವುದಕ್ಕಿಂತ ವಾಸಿ ಎಂಬುದರಲ್ಲಿ ಅನುಮಾನವಿಲ್ಲ.

Leave a Reply