ಬೇರೆಯವರನ್ನು ಪಕ್ಕಕ್ಕಿಡಿ, ನಿಮ್ಮ ಜತೆ ನೀವೇ ಸ್ಪರ್ಧಿಸಿ; ಪರೀಕ್ಷೆ ಕಾಲದ ಮಕ್ಕಳಿಗೆ ಮೋದಿ ಪಾಠ

 

ಡಿಜಿಟಲ್ ಕನ್ನಡ ಟೀಮ್

ಪ್ರಧಾನಿ ನರೇಂದ್ರ ಮೋದಿ ಅವರ ಆ ಬಾರಿಯ ‘ಮನ್ ಕಿ ಬಾತ್’ ತುಂಬಿಕೊಂಡದ್ದು ದೇಶದ ಮಕ್ಕಳು. ಈಗ ಮಕ್ಕಳು ಪರೀಕ್ಷೆಯ ಒತ್ತಡ ಎದುರಿಸುವ ಕಾಲ. ಹೀಗಾಗಿ ಮೋದಿ ಈ ಬಾರಿ ತಮ್ಮ ಬಜೆಟ್ ಮಂಡನೆ ಪರೀಕ್ಷೆಯನ್ನೇ ಸಮೀಕರಿಸಿ ದೇಶದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಭಾನುವಾರದ ಮನ್ ಕಿ ಬಾತ್ ಮುಖ್ಯಾಂಶಗಳು ಹೀಗಿವೆ:

  • ಮಕ್ಕಳ ಪರೀಕ್ಷೆ ಸಮಯವಿದು. ಮಾರ್ಚ್ ನಲ್ಲಿ 1 ರಿಂದ 10 ನೇ ತರಗತಿವರೆಗೆ ಪರೀಕ್ಷೆಗಳು ನಡೆಯಲಿವೆ. ನಿಮ್ಮ ಮನಸ್ಸು ಇಲ್ಲಿ ಕೇಂದ್ರೀಕೃತವಾಗಬೇಕು. ನಿಮ್ಮೊಂದಿಗೆ ನಾನಿದ್ದೇನೆ.
  • ನಾವು ನೋಡುವ ರೀತಿ ಬದಲಾದರೆ, ಚಿಂತೆ ದೂರ ಓಡುತ್ತದೆ. ಪರೀಕ್ಷೆ ಕೇವಲ ಶಾಲೆ, ಪೋಷಕರು ಮತ್ತು ಮಕ್ಕಳಿಗೆ ಸೀಮಿತವಾದುದಲ್ಲ. ಪರೀಕ್ಷೆ ಸಂದರ್ಭ ಬೇರೆಯವರ ಜತೆ ಸ್ಪರ್ಧೆಗಿಳಿದು ಸಮಯ ಹಾಳು ಮಾಡಬೇಡಿ. ನಿಮ್ಮ ಜತೆ ನೀವೇ ಸ್ಪರ್ಧಿಸಬೇಕು. ನಿಮ್ಮ ಹಿಂದಿನ ದಾಖಲೆಯನ್ನು ನೀವೇ ಮುರಿಯಬೇಕು. ಆಗ ನಿಮ್ಮನ್ನು ಯಾರೂ ತಡೆಯಲಾರರು.
  • ಪರೀಕ್ಷೆ ಅಂಕಗಳ ಆಟವಲ್ಲ. ಒಂದು ಮಹತ್ವ ಉದ್ದೇಶದೊಂದಿಗೆ ಜೀವನ ರೂಪಿಸಿಕೊಳ್ಳಿ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಲ್ಲಿ ಎರಡು ಬಗೆ. ಒಬ್ಬರು ನಾನು ಏನು ಓದಿದ್ದೇನೆ, ಏನು ಕಲಿತಿದ್ದೇನೆ. ನನ್ನ ಸಾಮರ್ಥ್ಯ ಏನು ಎಂದು ಚಿಂತಿಸುತ್ತಾರೆ. ಇನ್ನೊಬ್ಬರು ಪ್ರಶ್ನೆ ಪತ್ರಿಕೆ ಸುಲಭವಾಗಿರುತ್ತೋ, ಕಷ್ಟವಾಗಿರುತ್ತೊ, ನಾನು ಓದಿದ್ದು ಬರುತ್ತೋ, ಇಲ್ಲವೋ ಎಂದು ಯೋಚಿಸುತ್ತಾರೆ. ಈ ರೀತಿ ನಕಾರಾತ್ಮಕ ಚಿಂತನೆ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆ ನಾವು ಯೋಚಿಸಬೇಕು. ಅದರ ಮೇಲೆ ನಂಬಿಕೆ ಇಡಬೇಕು.
  • ಸದಾ ನಗುತ್ತಿರಿ. ಮನದಲ್ಲಿ ಶಾಂತಿ ಮೂಡುತ್ತದೆ. ಬಹುತೇಕರು ಸ್ನೇಹಿತರೊಂದಿಗೆ ಮಾತೂ ಆಡದೇ, ಸಾಕಷ್ಟು ಪುಸ್ತಕಗಳನ್ನು ಅಂತಿಮ ಕ್ಷಣದಲ್ಲಿ ತಿರುವಿ ಹಾಕುತ್ತಾರೆ. ನಿಮಗೊಂದು ಉದಾಹರಣೆ ಕೊಡುತ್ತೇನೆ. ನೀವು ನದಿಯ ಮೇಲೆ ನಿಂತು ನೀರಿನ ಒಳಗಿ ನೋಡಿ. ನಿಮ್ಮ ಕಣ್ಣಿಗೆ ದೊಡ್ಡ ಗಾತ್ರದ ವಸ್ತು ಕಾಣಿಸಬಹುದು. ಆದರೆ ಅದೇ, ನೀರಿಗೆ ಕಲ್ಲು ಹಾಕಿ ಕದಡಿದಾಗ ಆ ವಸ್ತು ಕಾಣಿಸುವುದಿಲ್ಲ. ಇದೇ ರೀತಿ ಮನಸ್ಸು ಸಹ ಗಾಬರಿಗೊಂಡಾಗ ವರ್ಷಗಟ್ಟಲೇ ಓದಿ ಮಿದುಳಿನಲ್ಲಿ ಇಳಿಸಿಕೊಂಡ ಮಾಹಿತಿ ಅಗತ್ಯ ಸನ್ನಿವೇಶದಲ್ಲಿ ನೆನಪಿಗೆ ಬರುವುದಿಲ್ಲ.
  • ಪರೀಕ್ಷೆ ನಂತರ ನಾನು ಏನು ಬರೆದೆ, ಬರೆದಿದ್ದು ತಪ್ಪೇ, ಅಯ್ಯೋ ಆ ಉತ್ತರ ಗೊತ್ತಿತ್ತು, ಹಾಳಾದ್ದು ನೆನಪಿಗೆ ಬರಲಿಲ್ಲ ಎಂದು ಕೊರಗಬೇಡಿ. ನಿಮ್ಮ ಜೀವನ ಕ್ರಮದಲ್ಲಿ ಯೋಗಾಭ್ಯಾಸ ಬೆಳೆಸಿಕೊಳ್ಳಿ. ಪರೀಕ್ಷೆ ದಿನ ಗಾಬರಿಯಿಂದ ಯಾವುದೇ ಕೆಲಸ ಮಾಡಬೇಡಿ. ಪ್ರಶ್ನೆ ಪತ್ರಿಕೆ ಸರಿಯಾಗಿ ಓದಿಕೊಳ್ಳಿ. ಇದರಿಂದ ಸಮಯ ವ್ಯಯ ಆಗುವುದಿಲ್ಲ. ಇದಕ್ಕಾಗಿ ಐದು ನಿಮಿಷ ಮೀಸಲಿಡಿ. ಒಂದೆರಡು ಬಾರಿ ಓದಿ. ಪ್ರಶ್ನೆ ಅರ್ಥ ಮಾಡಿಕೊಳ್ಳಿ. ಆರಂಭದಲ್ಲಿ ಕಠಿಣ ಪ್ರಶ್ನೆ ಎನಿಸಿದ್ದು, ಅರ್ಥವಾದ ನಂತರ ಸುಲಭ ಎನಿಸುತ್ತದೆ. ಪ್ರಶ್ನೆಯನ್ನು ನಿಮ್ಮ ಉತ್ತರದೊಂದಿಗೆ ಜೋಡಿಸುತ್ತಾ ಸಾಗಿ. ಬರವಣಿಗೆ ಸುಲಭವಾಗುತ್ತದೆ.
  • ನಾವು ವಿಜ್ಞಾನ ಕ್ಷೇತ್ರದಲ್ಲಿ ಮುನ್ನುಗ್ಗಿ, ಯಶಸ್ಸು ಸಾಧಿಸಬೇಕು. ಇಂದು ರಾಷ್ಟ್ರೀಯ ವಿಜ್ಞಾನ ದಿನ. ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದ್ದೇವೆ. ಇತ್ತೀಚೆಗೆ ವಿಜ್ಞಾನಿಗಳು ಗುರುತ್ವದ ಅಲೆ ಕಂಡು ಹಿಡಿದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಇರುವುದು ಹೆಮ್ಮೆಯ ವಿಷಯ. ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಸಲು ಭಾರತದಲ್ಲಿ ಲೇಜರ್ ವ್ಯತೀಕರಣಮಾಪಕ ಗುರುತ್ವಾಕರ್ಷಣ ಅಲೆ ನಿಗಾ (ಎಲ್ಐಜಿಒ) ಕೇಂದ್ರ ಸ್ಥಾಪನೆಗೆ ನಾವು ನಿರ್ಧರಿಸಿದ್ದೇವೆ.
  • ನಾನೂ ಸಹ ನಾಳೆ ಪರೀಕ್ಷೆಗೆ ಕೂರುತ್ತಿದ್ದೇನೆ. ಬಜೆಟ್ ಮಂಡನೆಯಲ್ಲಿ ನೂರಾರು ಕೋಟಿ ಭಾರತೀಯರ ನಿರೀಕ್ಷೆ ಹೊತ್ತು ಪರೀಕ್ಷೆ ಬರೆಯುತ್ತಿದ್ದೇನೆ. ನಾನು ಸಾಕಷ್ಟು ಆತ್ಮ ವಿಶ್ವಾಸದಿಂದ ಇದ್ದೇನೆ. ನಾವೆಲ್ಲರೂ ಈ ಪರೀಕ್ಷೆಯಲ್ಲಿ ಯಶಸ್ವಿಯಾಗೋಣ. ಆಗ ದೇಶವೂ ಯಶಸ್ವಿಯಾಗುತ್ತದೆ. ನಿಮಗೆಲ್ಲ ಶುಭವಾಗಲಿ.

ಕೇವಲ ಮೋದಿ ಅವರೊಬ್ಬರೇ ಅಲ್ಲದೇ ವಿಶ್ವ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ಶಿಕ್ಷಕ ಮತ್ತು ಚಿಂತಕ ರಾಮ್ ಚರಿತ್ ಮಾನಸ್ ಹಾಗೂ ವಿಜ್ಞಾನಿ ಸಿಎನ್ ಆರ್ ರಾವ್ ಕೂಡ ಮಕ್ಕಳಿಗೆ ತಮ್ಮ ಸಂದೇಶದ ಮೂಲಕ ಸಲಹೆ ನೀಡಿದ್ದಾರೆ. ಅವರ ಮಾತು ಹೀಗಿವೆ:

ಸಚಿನ್ ತೆಂಡೂಲ್ಕರ್- ಸದ್ಯದಲ್ಲೇ ಪರೀಕ್ಷೆ ಆರಂಭವಾಗ್ತಿದೆ. ಸಾಕಷ್ಟು ಮಕ್ಕಳು, ಪೊಷಕರು ಒತ್ತಡದಲ್ಲಿದ್ದೀರಿ. ನನ್ನ ಒಂದೇ ಒಂದು ಸಲಹೆ ಅಂದರೆ, ನಿಮ್ಮ ಮೇಲೆ ನಿಮ್ಮ ಪೋಷಕರು, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಶಿಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ಪ್ರತಿಯೊಬ್ಬರು ನಿಮ್ಮ ತಯಾರಿ ಹೇಗಿದೆ? ಎಷ್ಟು ಪರ್ಸೆಂಟ್ ಗುರಿ ಇದೆ? ಎಂದು ಪ್ರಶ್ನಿಸುವುದು ಸಾಮಾನ್ಯ. ನಾನು ಹೇಳೋದು, ನೀವು ನಿಮ್ಮದೇ ಆದ ಗುರಿ ಇಟ್ಟುಕೊಳ್ಳಿ. ಬೇರೊಬ್ಬರ ನಿರೀಕ್ಷೆಯ ಒತ್ತಡಕ್ಕೆ ಸಿಲುಕಬೇಡಿ. ಎಷ್ಟು ಅಂಕ ಪಡೆಯಲು ಸಾಧ್ಯ ಎಂದು ನಿಮಗನಿಸುತ್ತದೋ ಆ ಗುರಿ ಮುಟ್ಟಲು ಪ್ರಯತ್ನಪಡಿ. ನಾನು ಕ್ರಿಕೆಟ್ ಆಡುತ್ತಿದ್ದಾಗಲೂ ಇದೇ ಸೂತ್ರ ಪಾಲಿಸಿದೆ. ನೀವು ಉತ್ತಮವಾಗಿ ಯೋಚಿಸಿದರೆ, ಮೇಲಿನವನು ಉತ್ತಮ ಫಲ ನೀಡುತ್ತಾನೆ. ಯಾವುದೇ ಒತ್ತಡವಿಲ್ಲದೇ, ಪರೀಕ್ಷೆ ಬರೆಯಿರಿ. ಉತ್ತಮ ಫಲಿತಾಂಶ ಪಡೆಯಿರಿ. ನಿಮಗೆ ಶುಭವಾಗಲಿ.

ವಿಶ್ವನಾಥನ್ ಆನಂದ್- ನಾನು ನಿಮ್ಮಂತೆ ಸಮಸ್ಯೆ ಅನುಭವಿಸಿದ್ದೇನೆ. ಅದಕ್ಕೆ ಮೊದಲು ಉತ್ತಮ ವಿಶ್ರಾಂತಿ ಪಡೆಯಬೇಕು. ರಾತ್ರಿ ಅಗತ್ಯದಷ್ಟು ಮಲಗಬೇಕು. ಹೊಟ್ಟೆ ತುಂಬಾ ಊಟ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಒತ್ತಡವಿರಬಾರದು. ಚೆಸ್ ಕ್ರೀಡೆಯಲ್ಲೂ ಅಷ್ಟೇ. ಯಾವಾಗ ಯಾವ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಯಾವ ಪ್ರಶ್ನೆ ಬರುತ್ತದೆ ಎಂದು ಗೊತ್ತಿರುವುದಿಲ್ಲ. ನೀವು ತಾಳ್ಮೆಯಿಂದ ಯೋಚಿಸಿದಾಗ, ನಿಮ್ಮ ಮೆದುಳು ಸರಿಯಾದ ಉತ್ತರ ಯೋಚಿಸುತ್ತದೆ. ಹೆಚ್ಚಿನ ನಿರೀಕ್ಷೆ ಹೊಂದಬೇಡಿ. ಅತಿ ಆತ್ಮವಿಶ್ವಾಸ ಬೇಡ, ಅನುಮಾನವೂ ಬೇಡ.

ಸಿಎನ್ ಆರ್ ರಾವ್- ಪರೀಕ್ಷೆ ಬಗ್ಗೆ ಚಿಂತೆ ಬಿಡಿ. ನಿಮಗೆ ಸಾಧ್ಯವಾದಷ್ಟು ಮಾಡಿ. ಇದು ಮಕ್ಕಳಿಗೆ ನನ್ನ ಪ್ರಾಮಾಣಿಕ ಸಲಹೆ. ದೇಶದಲ್ಲಿ ಸಾಕಷ್ಟು ಅವಕಾಶಗಳಿವೆ. ಜೀವನದಲ್ಲಿ ಏನಾಗಬೇಕು ಎಂಬುದನ್ನು ಮೊದಲು ನಿರ್ಧರಿಸಿ. ಅದಕ್ಕೆ ಪ್ರಯತ್ನ ಹಾಕಿ. ಪ್ರಯತ್ನ ನಿರಂತರವಾಗಿರಲಿ. ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಕೈಬಿಡಬೇಡಿ. ಶ್ರದ್ಧೆ, ಕಠಿಣ ಪರಿಶ್ರಮ ಪರೀಕ್ಷೆಯಲ್ಲಿ ನಿಮ್ಮ ಯಶಸ್ಶಿನ ಗಣಿ. ನಿಮಗೆ ಶುಭವಾಗಲಿ.

ರಾಮ್ ಚರಿತ್ ಮಾನಸ್- ಪರೀಕ್ಷೆ ವೇಳೆ ಮಿದುಳಿಗೆ ಅತಿಯಾದ ಒತ್ತಡ ಕೊಡಬೇಡಿ. ಮನಸ್ಸನ್ನು ತಾಳ್ಮೆ ಹಾಗೂ ಶಾಂತವಾಗಿರಿಕೊಳ್ಳಿ. ಆಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಪ್ರಪಂಚದಲ್ಲಿ ಎಲ್ಲರಿಗೂ ಯಸಸ್ಸು ಸಿಗುವುದಿಲ್ಲ. ವೈಫಲ್ಯಗಳ ಜತೆ ಜೀವನ ಸಾಗಿಸುವುದನ್ನು ಕಲಿಯಿರಿ. ನಿಮಗೆ ಒಳ್ಳೆಯದಾಗಲಿ.

Leave a Reply