ಲಕ್ಷಾಂತರ ಜೀವಗಳನ್ನು ಉಳಿಸಲಿದೆ ಮಾಳವ್ ಸಾಂಘ್ವಿಯ ಈ ಸ್ಟಾರ್ಟ್ ಅಪ್ ಐಡಿಯಾ!

 

ಡಿಜಿಟಲ್ ಕನ್ನಡ ಟೀಮ್

ಸ್ಟಾರ್ಟ್ ಅಪ್- ನವೋದ್ದಿಮೆ. ಹೀಗೊಂದು ಪದಪುಂಜದಲ್ಲಿ ಭಾರತವೇ ಮಿಂದೇಳುತ್ತಿದೆ.

ಆದರೆ ಜನಸಾಮಾನ್ಯ ಮಟ್ಟದಲ್ಲಿ ನವೋದ್ದಿಮೆ ಎಂದಕೂಡಲೇ ನಾವು ಕೊಡುವ ಉದಾಹರಣೆಗಳು ಫ್ಲಿಪ್ ಕಾರ್ಟ್, ಪೇಟಿಎಂ, ಬುಕ್ ಮೈ ಶೋ ಇಂಥವುಗಳಾಗಿವೆ. ಖಂಡಿತ, ದಿನನಿತ್ಯದ ಬದುಕಿನೊಂದಿಗೆ ಬೆಸೆದುಕೊಂಡಿರುವ ಅವೆಲ್ಲ ಮುಖ್ಯವೇ. ಆದರೆ ಸ್ಟಾರ್ಟ್ ಅಪ್ ಅಂತಂದ್ರೆ
ಇ ಕಾಮರ್ಸ್ ಶುರು ಮಾಡೋದು ಎಂಬಷ್ಟರಮಟ್ಟಿಗೆ ನವೋದ್ದಿಮೆಯ ಅರ್ಥ ಸಂಕುಚಿತಗೊಳ್ಳೋದು ಉತ್ತಮ ಲಕ್ಷಣವೇನೂ ಅಲ್ಲ.

ಹಾಗಾದರೆ ಸ್ಟಾರ್ಟ್ ಅಪ್ ತಲೆ ಎತ್ತಬೇಕಿರೋದು, ಪ್ರಚಾರ ಪಡಿಬೇಕಿರೋದು ಯಾವ ವಿಭಾಗದಲ್ಲಿ? ಇದೋ ಇಲ್ಲಿದೆ ನೋಡಿ ಉದಾಹರಣೆ. ಲಂಡನ್ ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ಸ್ಟಾರ್ಟ್ ಅಪ್ ಐಡಿಯಾಗಳ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಲಂಡನ್ ನಲ್ಲೇ ಓದ್ತಿರೋ ಭಾರತೀಯ ಮಾಳವ್ ಸಾಂಘ್ವಿ ಅವರ ಐಡಿಯಾಕ್ಕೆ ಮೂರನೇ ಬಹುಮಾನ ಬಂದಿದೆ. ಅವರು ಪ್ರದರ್ಶಿಸಿದ ಅನ್ವೇಷಣೆ ಇದೆಯಲ್ಲ… ಇದು ಅಭಿವೃದ್ಧಿಶೀಲ ಮತ್ತು ಬಡರಾಷ್ಟ್ರಗಳ ನವಜಾತ ಶಿಶುಗಳನ್ನು ಉಳಿಸಿಕೊಳ್ಳುವುದಕ್ಕೆ ಮಹಾನ್ ಕೊಡುಗೆ ನೀಡುವಂತದ್ದಾಗಿದೆ.

ಅವಧಿಗೆ ಮೊದಲೇ ಮಗು ಹುಟ್ಟಿತಂತೆ, ಪೆಟ್ಟಿಗೇಲಿಟ್ಟಿದಾರಂತೆ ಅಂತಲೋ, ತೂಕ ಕಡಿಮೆ ಇದೆ ಅಂತ ವಿಶೇಷ ಪೆಟ್ಟಿಗೆಯಲ್ಲಿಟ್ಟಿದಾರಂತೆ ಅಂತಲೋ ಮಗುವಿನ ಜನನ ಸಂದರ್ಭಕ್ಕೆ ತಳುಕು ಹಾಕಿಕೊಂಡಿರುವ ಇಂಥ ಸುದ್ದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಇಂಥ ಸಂದರ್ಭಗಳಲ್ಲಿ ನವಜಾತ ಶಿಶುವನ್ನು ಇನ್ ಕ್ಯುಬೇಟರ್ ನಲ್ಲಿ ಇಡಬೇಕಾಗುತ್ತದೆ. ಈ ಉಪಕರಣ ದುಬಾರಿಯದ್ದು. ಹಾಗೆಂದೇ ಎಲ್ಲ ಆಸ್ಪತ್ರೆಗಳಲ್ಲೂ ಇದು ಲಭ್ಯವಿಲ್ಲ.

ಇಲ್ಲೇ ಮಾಳವ್ ಸಾಂಘ್ವಿ ಅನ್ವೇಷಣೆ ಬಹಳ ಮುಖ್ಯವೆನಿಸುತ್ತದೆ. ಅವರಿಗೆ ಬಹುಮಾನ ಲಭಿಸಿರೋದು ಬೇಬಿಲೈಫ್ ಬಾಕ್ಸ್ ಎಂಬ ಅತಿ ಕಡಿಮೆವೆಚ್ಚದ ಇನ್ ಕ್ಯುಬೇಟರ್ ಅಭಿವೃದ್ಧಿಪಡಿಸಿರುವುದಕ್ಕೆ. ಕಾರ್ಡ್ ಬೋರ್ಡ್ ಉಪಯೋಗಿಸಿಕೊಂಡು ಮಾಳವ್ ಅಭಿವೃದ್ಧಿಪಡಿಸಿರೋ ಈ ಇನ್ ಕ್ಯುಬೇಟರ್ ಉತ್ಪಾದನಾ ವೆಚ್ಚ ಸುಮಾರು 2 ಲಕ್ಷ ರುಪಾಯಿಗಳು. ಈಗಿರುವ ಇನ್ ಕ್ಯುಬೇಟರ್ ಗಳ ಶೇ. 70ಕ್ಕಿಂತ ಕಡಿಮೆ ಮೌಲ್ಯವಿದು. ಹಾಗೆಂದೇ, ಮಾಳವ್ ಅವರ ಈ ಬೇಬಿಲೈಫ್ ಬಾಕ್ಸ್ ವ್ಯಾಪಕ ಮಟ್ಟದಲ್ಲಿ ಉತ್ಪಾದನೆಯಾಗುವುದು ಸಾಧ್ಯವಾದರೆ ಭಾರತದಂಥ ರಾಷ್ಟ್ರಗಳ ಸಣ್ಣ ಪಟ್ಟಣಗಳ ಆಸ್ಪತ್ರೆಗಳೂ ಇದನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಲಕ್ಷಾಂತರ ನವಜೀವಗಳು ಉಳಿಯುವಂತಾಗುತ್ತವೆ.

ಮಾಳವ್ ಸಾಂಘ್ವಿ ಅನ್ವೇಷಣೆಯ ಪ್ರಾಮುಖ್ಯ ಎಂಥಾದ್ದು ಎಂಬುದು ಅರ್ಥವಾಗಬೇಕಾದರೆ ಒಂದು ಅಂಕಿಅಂಶ ಮನನ ಮಾಡಿಕೊಂಡ್ರೆ ಸಾಕಾಗುತ್ತೆ. ಭಾರತದಲ್ಲಿ ತೂಕ ವ್ಯತ್ಯಯ ಮತ್ತು ಅವಧಿಗೆ ಪೂರ್ವ ಜನನದಿಂದ ಪ್ರತಿವರ್ಷ ಸುಮಾರು 3 ಲಕ್ಷ ನವಜಾತ ಶಿಶುಗಳು ಸಾಯುತ್ತಿವೆ. ಕಡಿಮೆ ಖರ್ಚಿನ ಇನ್ ಕ್ಯುಬೇಟರ್ ದೊರೆತಿದ್ದೇ ಆದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಬಹುದಾಗಿದೆ.

ಇದೀಗ ಮಾಳವ್ ಸಾಂಘ್ವಿ ತಮ್ಮ ಐಡಿಯಾಕ್ಕೆ ಹೂಡಿಕೆದಾರರನ್ನು ಒಟ್ಟುಗೂಡಿಸುತ್ತಿದ್ದಾರೆ. ನಂತರ ಇವರ ಇನ್ ಕ್ಯುಬೇಟರ್ ಗಳನ್ನು ವೈದ್ಯಕೀಯ ಪ್ರಯೋಗಗಳಿಗೆ ಒಳಪಡಿಸಬೇಕು. ಅಹಮದಾಬಾದಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನ ಪದವೀಧರರಾಗಿರುವ ಮಾಳವ್, ಈಗ ಇಂಪಿರಿಯಲ್ ಕಾಲೇಜ್ ಆಫ್ ಲಂಡನ್ ಮತ್ತು ರಾಯಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ ಇನ್ನೋವೇಷನ್ ಡಿಸೈನ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.

ತಮ್ಮ ಸಂಬಂಧಿಯೊಬ್ಬರ ಮಗುವನ್ನು ಇನ್ ಕ್ಯುಬೇಟರ್ ನಲ್ಲಿಟ್ಟು ರಕ್ಷಿಸಿಕೊಳ್ಳಬೇಕಾದಾಗ ಮಾಳವ್ ಯೋಚಿಸಿದರಂತೆ- ನಾವೇನೋ ವೆಚ್ಚ ಭರಿಸುವಷ್ಟು ಶಕ್ತರು. ಆದರೆ ಭಾರತದ ಹಳ್ಳಿಮೂಲೆಗಳಲ್ಲಿ ಇಂಥದ್ದನ್ನೆಲ್ಲ ನಿಭಾಯಿಸುವ ಪರಿ ಎಂತು ಎಂದು. ಆಗಲೇ ಅವರಿಗೆ ಕಡಿಮೆ ವೆಚ್ಚದ ಇನ್ ಕ್ಯುಬೇಟರ್ ಐಡಿಯಾ ಮೊಳೆತಿದ್ದು.

ಇಂಥ ಸಂವೇದನೆ, ಯೋಚನೆ, ಯೋಜನೆಗಳೇ ಭಾರತವನ್ನೂ ಜಗತ್ತನ್ನೂ ಪೊರೆಯಲಿವೆ. ಇದುವೇ ನಿಜಾರ್ಥದಲ್ಲಿ ನವೋದ್ದಿಮೆ.

Leave a Reply