ಸುದ್ದಿಸಂತೆ 27: ಅನಂತ್ ಕುಮಾರ್ ಗೆ ಮೋದಿ ಅಭಿನಂದನೆ, ರೈತರ ಸಾಲ ಮನ್ನಾ ಇಲ್ಲ ಎಂದ ಸಿದ್ದರಾಮಯ್ಯ, ಫ್ರೀಡಂ 251 ಬಗ್ಗೆ ಇಡಿ ತನಿಖೆ…

ಡಿಜಿಟಲ್ ಕನ್ನಡ ಟೀಮ್

ರಸಗೊಬ್ಬರ ಮಾರಾಟ ಭ್ರಷ್ಟಾಚಾರ ತಡೆಗಟ್ಟಿದ ಕೀರ್ತಿ ಸಹೋದ್ಯೋಗಿ ಸಚಿವ ಅನಂತ್ ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಕರ್ನಾಟಕದಲ್ಲಿ ರಸಗೊಬ್ಬರ ವಿಚಾರದಲ್ಲಿ ರೈತರ ಮೇಲೆ ಲಾಠಿಚಾರ್ಚ್ ನಡೆದಿದೆ. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಆಗುತ್ತಿತ್ತು. ಇದರಿಂದ ರೈತರಿಗೆ ಸಾಕಷ್ಟು ಅನ್ಯಾಯ ಆಗುತ್ತಿತ್ತು, ಇವೆಲ್ಲದ್ದಕ್ಕೂ ಕಡಿವಾಣ ಹಾಕಲಾಗಿದೆ. ಇನ್ನು ಮುಂದೆ ಸುಲಭವಾಗಿ ರೈತರಿಗೆ ರಸಗೊಬ್ಬರ ಲಭ್ಯವಿರುವ ಹಾಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ರಸಗೊಬ್ಬರಕ್ಕಾಗಿ ಹಿಂದಿನ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಭಾರಿ ಪತ್ರ ಬರೆದಿದ್ದರು. ಆದರೆ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈಗ ಎಲ್ಲರಿಗೂ ಕಾಲಕಾಲಕ್ಕೆ ವಿತರಣೆ ಆಗುತ್ತಿದೆ. ಇದಕ್ಕೆ ಅನಂತ್ ಕುಮಾರ್ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.

ಫಸಲ್ ವಿಮಾ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ತಮ್ಮ ಸರ್ಕಾರದ ಖಜಾನೆ ಖಾಲಿ ಆದರೂ ಚಿಂತೆಯಿಲ್ಲ. ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಬೆಳೆ ನಷ್ಟದ ಸಂದರ್ಭದಲ್ಲಿ ಇದು ನಿಮ್ಮ ಕೈಹಿಡಿಯಲಿದೆ ಎಂದು ಬೃಹತ್ ಪ್ರಮಾಣದಲ್ಲಿ ನೆರೆದಿದ್ದ ರೈತರಿಗೆ ಕಿವಿಮಾತು ಹೇಳಿದರು.

ನಾನು ಪ್ರಧಾನ ಸೇವಕನಾಗಿ ಕಾರ್ಯ ಪ್ರಾರಂಭಿಸಿದ ವೇಳೆ ದೇಶದಲ್ಲಿ ಸಾಕಷ್ಟು ಭ್ರಷ್ಟಚಾರ ತಾಂಡವಾಡುತ್ತಿತ್ತು, ಈಗ ಸರ್ಕಾರದ ಮೇಲೆ ಯಾವುದೇ ಭ್ರಷ್ಟಚಾರ ಆರೋಪ ಇಲ್ಲ. ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಹಿಂಜರಿತವಾಗಿದ್ದರೂ ದೇಶದಲ್ಲಿ ಪ್ರತಿಕೂಲ ಸ್ಥಿತಿ ನಿರ್ಮಾಣವಾಗಿಲ್ಲ. ಇದಕ್ಕೆ ನಮ್ಮ ಧೃಡ ಮುಂದಾಲೋಚನೆ ಕ್ರಮಗಳೇ ಕಾರಣ ಎಂದು ತಮ್ಮ ಸರ್ಕಾರದ ಬೆನ್ನು ತಟ್ಟಿಕೊಂಡರು. ಅದೇ ಕಾಲಕ್ಕೆ ಕೇಂದ್ರ ನೀಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕ ಬಳಕೆ ಮಾಡದೆ, ಖಜಾನೆಯಲ್ಲೆ ಕೊಳೆಯುವಂತೆ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು.

ರೈತರ ಸಾಲಮನ್ನ ಇಲ್ಲ ಎಂದ ಸಿಎಂ

ಸದ್ಯಕ್ಕೆ ರೈತರ ಕೃಷಿ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಾಲ ಮನ್ನಾ ಬೇಡಿಕೆಯೊಂದಿಗೆ ವಿಧಾನಸೌಧದಕ್ಕೆ ಶನಿವಾರ ಆಗಮಿಸಿದ್ದ ರೈತ ಮುಖಂಡರ ನಿಯೋಗಕ್ಕೆ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಸಾಲ ಮನ್ನಾ ಸಾಧ್ಯವಿಲ್ಲ ಎಂದು ತಿಳಿಸಿದರು. ಕೃಷಿ ಪತ್ತಿನ ಬ್ಯಾಂಕ್ ಗಳಲ್ಲಿ ರೈತರು 10 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ. ಇಷ್ಟೊಂದು ಮೊತ್ತದ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಆದರೆ, ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಫ್ರೀಡಂ 251 ವಿರುದ್ಧ ಇಡಿ ತನಿಖೆ

ಅತಿ ಅಗ್ಗದ ಸ್ಮಾರ್ಟ್ ಫೋನ್ ಎಂದು ಸದ್ದು ಮಾಡಿದ್ದ ಫ್ರೀಡಂ 251 ಈಗ ವಿವಾದಕ್ಕೆ ಸಿಲುಕಿದೆ. ಈ ಫೋನ್ ಉತ್ಪಾದಕ ಕಂಪನಿ ರಿಂಗಿಂಗ್ ಬೆಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿದೆ. ನೊಯಿಡಾದಲ್ಲಿರುವ ಕಂಪನಿಯ ಬ್ಯಾಂಕ್ ಖಾತೆ ಮತ್ತಿತರ ದಾಖಲೆಗಳ ಪರಿಶೀಲನೆ ನಡೆಸಿದೆ. ಅಲ್ಲದೆ ಈಗಾಗಲೇ ಬುಕ್ಕಿಂಗ್ ಮಾಡಿರುವ ಗ್ರಾಹಕರ ಹಣದೊಂದಿಗೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ಪಟ್ಟಿದ್ದಾರೆ. ಮತ್ತೊಂದೆಡೆ ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್, ಕಂಪನಿ ನಿಗದಿತ ದಿನಾಂಕದ ಒಳಗೆ ಈ ಪ್ರಮಾಣದ ಫೋನ್ ಉತ್ಪಾದನೆ ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರ ವಿರುದ್ಧ ಕನ್ಹಯ್ಯಾ ದೂರು

ದೇಶದ್ರೋಹ ಪ್ರಕರಣದಲ್ಲಿ ಬಂಧಿತನಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ್ ಕನ್ಹಯ್ಯಾ ಪೊಲೀಸರ ವಿರುದ್ಧ ದೂರಿದ್ದಾರೆ. ‘ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ನಡೆದ ದಾಳಿಯ ವೇಳೆ ಕೆಲ ವಕೀಲರು ನನ್ನ ಮೇಲೆ ಹಲ್ಲೆ ನಡೆಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಸುಪ್ರೀಂ ಕೋರ್ಟ್ ನಿಯೋಜಿಸಿರುವ ವಕೀಲರ ತನಿಖಾ ಸಮಿತಿಗೆ ತಿಳಿಸಿದ್ದಾರೆ. ಮತ್ತೊಂದೆಡೆ ರಾಷ್ಟ್ರದ್ರೋಹ ಪ್ರಕರಣದ ಮತ್ತೊಬ್ಬ ಆರೋಪಿ, ಜೆಎನ್ ಯು ವಿದ್ಯಾರ್ಥಿ ಆಶುತೋಶ್ ಕುಮಾರ್ ಶನಿವಾರ ದೆಹಲಿ ಪೊಲೀಸರಿಗೆ ಶರಣಾಗಿದ್ದಾನೆ.

ಸುಭಾಷ್ ಆಡಿ ಪದಚ್ಯುತಿ ನಿರ್ಣಯ ಹೈಕೋರ್ಟ್ ಸಿಜೆಗೆ ರವಾನೆ

ಉಪಲೋಕಾಯುಕ್ತ ಸುಭಾಷ್ ಬಿ ಆಡಿ ಅವರ ಪದಚ್ಯುತಿ ಸಂಬಂಧ ವಿಧಾನಮಂಡಲ ಕೈಗೊಂಡ ನಿರ್ಣಯವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಶನಿವಾರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ರವಾನಿಸಿದ್ದಾರೆ. ಇದರೊಂದಿಗೆ ಲೋಕಾಯುಕ್ತರ ರಾಜೀನಾಮೆಯ ಬೆನ್ನಲ್ಲೇ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಉಪಲೋಕಾಯುಕ್ತರ ಪದಚ್ಯುತಿ ಪ್ರಕರಣಕ್ಕೆ ಮತ್ತೆ ಜೀವ ಬಂದಂತಾಗಿದೆ. ಈ ಪ್ರಕರಣದ ಬಗ್ಗೆ ಮಾಹಿತಿಯನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿದೆ. ಮುಂದೇನಿದ್ದರೂ ಅವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

Leave a Reply