ಅಂತೂ ಆರನೇ ಪ್ರಯತ್ನದಲ್ಲಿ ಡಿಕ್ಯಾಪ್ರಿಯೊ ಮುಡಿಗೇರಿತು ಆಸ್ಕರ್.. ಬ್ರೀ ಲಾರ್ಸನ್ ಅತ್ಯುತ್ತಮ ನಟಿ, ಮತ್ತೇ ವರ್ಣಬೇಧ ವಿವಾದ!

ಡಿಜಿಟಲ್ ಕನ್ನಡ ಟೀಮ್

ನೀಲಿ ಕಂಗಳ ಜಗತ್ಪ್ರಸಿದ್ಧ ನಟ ಲಿಯೊನಾರ್ಡೋ ಡಿಕ್ಯಾಪ್ರಿಯೊ ನಿರೀಕ್ಷೆಯಂತೆ ಪ್ರತಿಷ್ಠಿತ ಆಸ್ಕರ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಆಸ್ಕರ್ ಪ್ರಸ್ತಾಪ ಶುರುವಾದಾಗಿನಿಂದಲೂ ಪ್ರಪಂಚಾದ್ಯಂತದ ಕೋಟ್ಯಂತರ ಡಿಕ್ಯಾಪ್ರಿಯೊ ಅಭಿಮಾನಿಗಳು ತಮ್ಮ ನೆಚಿನ ನಟನ ಮುಡಿಗೇ ಈ ಪ್ರಶಸ್ತಿ ಗರಿಯೇರಬೇಕು ಎಂದು ತುಡಿಯುತ್ತಿದ್ದರು. ಡಿಕ್ಯಾಪ್ರಿಯೊ ಅವರ ನಿರೀಕ್ಷೆ ಹುಸಿಗೊಳಿಸಿಲ್ಲ. ‘ದ ರೆವೆನೆಂಟ್’ ಚಿತ್ರದಲ್ಲಿ ಅಮೋಘ ಅಭಿನಯಕ್ಕಾಗಿ ಡಿಕ್ಯಾಪ್ರಿಯೊಗೆ 2016 ನೇ ಸಾಲಿನ ಆಸ್ಕರ್ ಪ್ರಶಸ್ತಿ ಲಭಿಸಿದೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನ ಡಾಲ್ಫಿ ಥಿಯೇಟರ್ ನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 7.30 ಕ್ಕೆ ನಡೆದ ವರ್ಣರಂಜಿತ 88ನೇ ಅಕಾಡೆಮಿ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಕೊಡಮಾಡಲಾಯಿತು. ಅದೇ ರೀತಿ ರೂಮ್ ಚಿತ್ರ ನಾಯಕಿ ಬ್ರೀ ಲಾರ್ಸನ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇವರಿಬ್ಬರ ಹೆಸರು ಘೋಷಣೆಯಾದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಆದರೆ ಈ ಬಾರಿಯೂ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಒಬ್ಬರೇ ಒಬ್ಬರು ಕರಿಯರಿಗೆ ಅವಕಾಶ ಕೊಡದೇ ವರ್ಣಬೇಧ ನೀತಿ ಅನುಸರಿಸಲಾಗಿದೆ ಎಂಬ ವಿವಾದ ಒಡಮೂಡಿದ್ದು ಈ ಸಮಾರಂಭಕ್ಕೊಂದು ಕಪ್ಪುಚುಕ್ಕೆ.

ವಿಶ್ವದ ಪ್ರತಿಷ್ಠಿತ ಸಿನೆಮಾ ಪ್ರಶಸ್ತಿ ಆಸ್ಕರ್ ಪಡೆಯುವುದು ಪ್ರತಿಯೊಬ್ಬ ಕಲಾವಿದನ ಕನಸು. ಈ ಪ್ರಶಸ್ತಿಯ ಹಂಬಲಿಕೆಗೆ ಮೇರೆಯೇ ಇಲ್ಲ. ಐದು ಬಾರಿ ಈ ಪ್ರಶಸ್ತಿ ಹೊಸ್ತಿಲಲ್ಲಿ ಮುಗ್ಗರಿಸಿದ್ದ ಲಿಯೊನಾರ್ಡೊ ಕೊನೆಗೂ ಇದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಬಾರಿಯಾದರೂ ನೆಚ್ಚಿನ ನಟ ಆಸ್ಕರ್ ಗೌರವ ಧಕ್ಕಿಸಿಕೊಳ್ಳುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ದುಗುಡ ತಂದಿತ್ತು. ನಿಸರ್ಗ ಮತ್ತು ಮನುಷ್ಯ ಸಂಬಂಧ ಸಮೀಕರಣವನ್ನು ‘ದ ರೆವೆನೆಂಟ್’ ಚಿತ್ರ ಹೃದಯಸ್ಪರ್ಶಿಯಾಗಿ ಸಾದರಪಡಿಸಿತ್ತು.

ಪಾತ್ರಕ್ಕೆ ನೈಜತೆ ತುಂಬಲೆಂದು ಈ ಚಿತ್ರದಲ್ಲಿ ಕಾಡುಕೋಣದ ಯಕೃತ್ ಅನ್ನು ಹಸಿಹಸಿಯಾಗಿಯೇ ತಿನ್ನುವ ಮೂಲಕ ಡಿಕ್ಯಾಪ್ರಿಯೊ ಪಾತ್ರಕ್ಕೆ ಸಾಮರ್ಥ್ಯ ಮೀರಿ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದರು. ಅವರ ಪರಿಶ್ರಮಕ್ಕೆ ತಕ್ಕ ಫಲ ಸಂದಿದೆ. ಪ್ರಶಸ್ತಿ ಪಡೆದ ಡಿಕ್ಯಾಪ್ರಿಯೊ ಹೇಳಿದ್ದು, ‘ಪ್ರಸ್ತುತ ಜಾಗತೀಕ ತಾಪಮಾನ ಏರಿಕೆ ನಮ್ಮನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಇಂತಹ ಸಂದರ್ಭದಲ್ಲಿ ‘ದ ರೆವೆನೆಂಟ್’ ಪ್ರಯತ್ನ ಉತ್ತಮವಾಗಿದೆ. ನಾನು ಈ ರಾತ್ರಿಯನ್ನಷ್ಟೇ ಅಲ್ಲ, ಈ ನಿಸರ್ಗವನ್ನೂ ಎಂದೆಂದಿಗೂ ಮರೆಯುವುದಿಲ್ಲ’ ಎಂದು.

ಡಿಕ್ಯಾಪ್ರಿಯೊ ಜತೆ ಈ ಪ್ರಶಸ್ತಿಯ ರೇಸ್ ನಲ್ಲಿದ್ದವರು ಬ್ರಿಯಾನ್ ಕ್ರಾಂಸ್ಟನ್ (ಟ್ರಂಬೊ), ಮೈಕಲ್ ಫಾಸ್ಬೆಂಡರ್ (ಸ್ಟೀವ್ ಜಾಬ್ಸ್), ಮ್ಯಾಟ್ ಡಾಮೊನ್ (ದ ಮಾರ್ಟೀನ್), ಎಡ್ಡಿ ರೆಡ್ಮೆನ್ (ದ ಡ್ಯಾನಿಶ್ ಗರ್ಲ್).

ಲಿಯೊನಾರ್ಡೊ ಡಿಕ್ಯಾಪ್ರಿಯೊ ಈ ಪ್ರಶಸ್ತಿ ಪಡೆಯಲು ಈ ಹಿಂದೆಯೂ ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಹಿಂದೆ ಆಸ್ಕರ್ ಪ್ರಶಸ್ತಿಗಾಗಿ ಡಿಕ್ಯಾಪ್ರಿಯೊ ಐದು ಬಾರಿ ಪ್ರಯತ್ನಿಸಿದ್ದರು. ವಾಟ್ ಈಟಿಂಗ್ ಗಿಲ್ಬರ್ಟ್ ಗ್ರೇಪ್ (ಅತ್ಯುತ್ತಮ ಪೋಷಕ ನಟ), ಬ್ಲಡ್ ಡೈಮಂಡ್, ದ ವೂಲ್ಫ್ ಆಫ್ ವಾಲ್ ಸ್ಟ್ರೀಟ್ (ಅತ್ಯುತ್ತಮ ನಟ), ದ ಎವಿಯೇಟರ್ (ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರ ನಿರ್ಮಾಣ)

ಭಾರತದ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ನಿರೂಪಣೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೆರುಗು ತಂದಿತ್ತು. ಶ್ವೇತವರ್ಣದ ಪೋಷಾಕಿನಲ್ಲಿ ಮಿರಿಮಿರಿ ಮಿಂಚುತ್ತಿದ್ದ ಚೋಪ್ರಾ ಎಲ್ಲರ ಗಮನ ಕಸಿದಿದ್ದರು.

PRIYANKA OSCAR

ಆಸ್ಕರ್ ಪ್ರಶಸ್ತಿ ಪ್ರಮುಖ ಪುರಸ್ಕೃತರು:

ಅತ್ಯುತ್ತಮ ಚಿತ್ರ- ಸ್ಪಾಟ್ ಲೈಟ್

ಅತ್ಯುತ್ತಮ ನಟ- ಲಿಯೊನಾರ್ಡೊ ಡಿಕ್ಯಾಪ್ರಿಯೊ (ದ ರೆವೆನೆಂಟ್)

ಅತ್ಯುತ್ತಮ ನಟಿ- ಬ್ರಿ ಲಾರ್ಸನ್ (ರೂಮ್)

ಅತ್ಯುತ್ತಮ ಪೋಷಕ ನಟ- ಮಾರ್ಕ್ ರಿಲ್ಯಾನ್ಸ್ (ಬ್ರಿಡ್ಜ್ ಆಫ್ ಸ್ಪೈಸ್)

ಅತ್ಯುತ್ತಮ ಪೋಷಕ ನಟ- ಅಲಿಸಿಯಾ ವಿಕಂದರ್ (ದ ಡ್ಯಾನಿಶ್ ಗರ್ಲ್)

ಅತ್ಯುತ್ತಮ ನಿರ್ದೇಶಕ- ಅಲೆಕ್ಯಾಂಡ್ರೊ ಇನಾರಿಟು (ದ ರೆವೆನೆಂಟ್)

ಅತ್ಯುತ್ತಮ ಸ್ಕ್ರೀನ್ ಪ್ಲೇ ಅಳವಡಿಕೆ- ದ ಬಿಗ್ ಶಾಟ್

ಅತ್ಯುತ್ತಮ ಸ್ಕ್ರೀನ್ ಪ್ಲೇ- ಸ್ಪಾಟ್ ಲೈಟ್

ಅತ್ಯುತ್ತಮ ಅನಿಮೇಟೆಡ್ ಚಿತ್ರ- ಇನ್ ಸೈಡ್ ಔಟ್

ಅತ್ಯುತ್ತಮ ವಿದೇಶಿ ಚಿತ್ರ- ಸನ್ ಆಫ್ ಸೌಲ್ (ಹಂಗೇರಿ)

ಅತ್ಯುತ್ತಮ ಸಿನಿಮೆಟೊಗ್ರಫಿ- ದ ರೆವೆನೆಂಟ್

ಅತ್ಯುತ್ತಮ ಸಂಪಾದನೆ- ಮ್ಯಾಡ್ ಮ್ಯಾಕ್ಸ್ (ಫುರಿ ರೋಡ್)

ಅತ್ಯುತ್ತಮ ಸಂಗೀತ- ರೈಟಿಂಗ್ಸ್ ಆನ್ ದ ವಾಲ್, ಸ್ಯಾಮ್ ಸ್ಮಿತ್ (ಸ್ಪೆಕ್ಟರ್)

ಆಸ್ಕರ್ ನಲ್ಲಿ ವರ್ಣಭೇದ ಆರೋಪ; ಪ್ರಮುಖರ ಅನುಪಸ್ಥಿತಿ

ಈ ಬಾರಿಯ ಆಸ್ಕರ್ ಪ್ರಶಸ್ತಿ ಕೂಡ ವಿವಾದದಿಂದ ಹೊರತಾಗಲಿಲ್ಲ. ವರ್ಣ ಬೇಧದ ಕಪ್ಪುಚುಕ್ಕೆ ಪ್ರಶಸ್ತಿಯ ಹೆಗಲಿಗೇರಿತು. ಕಳೆದ ಬಾರಿಯೂ ಈ ವಿವಾದ ಮೂಡಿತ್ತು. ಈ ಬಾರಿ ಅಂತಿಮ ಸುತ್ತಿಗೆ ವಿವಿಧ ವಿಭಾಗಗಳಿಂದ ನಾಮಾಂಕಿತಗೊಂಡವರ ಪೈಕಿ ಕರಿಯರಿಗೆ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ ಕೆಲ ಪ್ರಮುಖ ನಟರು ಪ್ರಶಸ್ತಿ ಸಮಾರಂಭದಿಂದ ದೂರ ಉಳಿದರು. ಅವರ ಪೈಕಿ, ವಿಲ್ ಸ್ಮಿತ್, ಜಡ್ ಪಂಕಟ್, ಸ್ಮಿತ್, ಸ್ಪೈಕ್ ಲೀ ಪ್ರಮುಖರು.

ಇನ್ನು ಅಂಕಿ ಅಂಶಗಳನ್ನು ಪರಾಮರ್ಶಿಸುವುದಾದರೆ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನದಲ್ಲಿ ಬಿಳಿಯರ ಪ್ರಾಬಲ್ಯವೇ ಹೆಚ್ಚು. 1926 ರಿಂದ 2014ರವರೆಗೆ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡವರಲ್ಲಿ 812 ಮಂತಿ ಬಿಳಿಯರಿದ್ದರೆ ಕರಿಯರ ಸಂಖ್ಯೆ ಕೇವಲ 82. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಕರಿಯರು ನಾಮನಿರ್ದೇಶನಗೊಂಡಿಲ್ಲ.

Leave a Reply