ಅಂದಹಾಗೆ ಇದು ನ್ಯೂಟ್ರಲ್ ಬಜೆಟ್, ವಿತ್ತೀಯ ಕೊರತೆ ಅರ್ಧದಷ್ಟು ಇಳಿದಿರುವುದೇ ದೊಡ್ಡ ಸಾಧನೆ!

authors-rangaswamyರೈಲ್ವೆ ಬಜೆಟ್ ನೋಡಿದವರಿಗೆ, ಇಂದಿನ ಬಜೆಟ್ ನ ಸುಳಿವು ಸಿಕ್ಕೆ ಇರುತ್ತೆ. ಕರೆಕ್ಟ್ ನಿಮ್ಮ ಗೆಸ್ ಸರಿ ಇದೆ, ಮೇಲ್ನೋಟಕ್ಕೆ ನ್ಯೂಟ್ರಲ್ ಅನ್ನಿಸುತ್ತೆ. ಅದು ಸಹಜ ಕೂಡ. ಕಥೆ ಎಷ್ಟೇ ಸೂಪರ್ ಆಗಿ ಇದ್ದರೂ ಹೆಸರು ಗೊತ್ತಿಲ್ಲದ ನಟ ನಟಿ ಇದ್ದರೆ ಫಿಲಂ ಗೆ ಸಿಗುವ ಸ್ವಾಗತ ಅಷ್ಟಕಷ್ಟೇ ಅಲ್ಲವೇ? ಒಂದು ಹಳಸಲು ಕಥೆಯ ಚಿತ್ರದಲ್ಲಿ ನಿಮ್ಮ ನೆಚ್ಚಿನ ನಾಯಕ ನಾಯಕಿ ಇದ್ದರೆ ಹೇಗೋ ಚಿತ್ರ ದಡ ಸೇರುತ್ತೆ. ಆದರೆ, ಲಾಂಗ್ ರನ್ ಗೆಲುವು ಸಿಗುವುದು, ಶಾಶ್ವತ ಉಳಿಯುವುದು ಉತ್ತಮ ಕಥೆಯೇ. ಅದೇ ರೀತಿ ಈ ಬಜೆಟ್ ಕೂಡ. ಬನ್ನಿ ಬದುಕಿನ ಆನೇಕ ರಂಗದಲ್ಲಿ ದುಡಿಯುವ ಕೋಟ್ಯಂತರ ಜನರನ್ನು ಹೇಗೆ ತಲುಪುತ್ತದೆ ನೋಡೋಣ !
ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಎಂದರೆ ಏನು ಎಂದು ನೀವು ಮುಖ್ಯವಾಗಿ ತಿಳಿದು ಕೊಳ್ಳಬೇಕು.
ಸರಕಾರದ ಆದಾಯ 100 ರುಪಾಯಿ ಎಂದಿಟ್ಟುಕೊಳ್ಳಿ. ಖರ್ಚು 105 ರುಪಾಯಿ ಎಂದು ಕೊಂಡರೆ, ಆದಾಯ ಮೀರಿದ ಖರ್ಚು (100-105= 5 ರುಪಾಯಿ) ವಿತ್ತೀಯ ಕೊರತೆ ಎನಿಸಿಕೊಳ್ಳುತ್ತದೆ. ಮೋದಿ ಸರಕಾರ ಈ ವರ್ಷದ ಕೊರತೆ 3.9 ಹಾಗೂ ಮುಂದಿನ ವರ್ಷ ಇದು 3.5 ಎಂದು ಹೇಳಿದೆ. ಇದೊಂದು ಉತ್ತಮ ಸಾಧನೆ. 2009-10 ಸಮಯದಲ್ಲಿ 7 ಕ್ಕೂ ಮೀರಿದ್ದ ಕೊರತೆ ಇತ್ತು. ಅದೀಗ 3.5 ಬಂದಿರುವುದು ಸಂತಸದ ವಿಷಯ.
– ಸಾಮಾನ್ಯ ಜನರಿಗೆ ಬೇಕಿರುವುದು ಬಜೆಟ್ ನಿಂದ ನಮ್ಮ ಜೇಬಿಗೆ ಕತ್ತರಿಯೇ? ಇಲ್ಲವೇ ಅನ್ನುವುದು. ಹಾಗೆ ನೋಡಿದರೆ ಇಲ್ಲಿ ಇದು ಸಮಸ್ಥಿತಿ ಕಾಯ್ದುಕೊಂಡಿದೆ. ಆದಾಯ ತೆರಿಗೆ ಮಿತಿ ಹಿಂದಿನಂತೇ ಮುಂದುವರಿಸಿದೆ. ತೆರಿಗೆ ಮಿತಿಯನ್ನು ಎರಡೂವರೆ ಲಕ್ಷದಿಂದ ನಾಲ್ಕು ಲಕ್ಷಕ್ಕೆ ಏರಿಸುವಂತೆ ಕೋರಿಕೆ ಇಡಲಾಗಿತ್ತು. ಆದರೆ, ಮೋದಿ ಸರಕಾರ ಮಾನ್ಯ ಮಾಡಿಲ್ಲ. ಹೀಗಾಗಿ ವೇತನ ಅವಲಂಬಿಸಿ ಬದುಕುವ ಮಂದಿಗೆ ಇದು ನೀರಸ.
– ನೌಕರಿಯಿಂದ ಯಾವುದೇ ಬಾಡಿಗೆ ಭತ್ಯೆ ಇಲ್ಲದ ಜನ 20 ಸಾವಿರದವರೆಗೆ ತಮ್ಮ ಆದಾಯದಲ್ಲಿ ಕಡಿತ ಪಡೆಯಬಹುದಿತ್ತು. ಅದನ್ನು 60 ಸಾವಿರಕ್ಕೆ ಏರಿಸಿರುವುದರಿಂದ ಐದು ಲಕ್ಷಕ್ಕೂ ಕಮ್ಮಿ ವಾರ್ಷಿಕ ವೇತನ ಪಡೆಯುವ ಜನರಿಗೆ ಒಂದಷ್ಟು ಉಳಿತಾಯ ಆಗಲಿದೆ.
– ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ  ಒಂದು ಲಕ್ಷದವರೆಗೆ ಆರೋಗ್ಯ ರಕ್ಷಣೆ ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೆ ಕುಟುಂಬದಲ್ಲಿ ಹಿರಿಯ ನಾಗರೀಕರಿದ್ದರೆ 30 ಸಾವಿರ ಹೆಚ್ಚಿನ ಭದ್ರತೆ ಕೂಡ ಸಿಗಲಿದೆ.
– ಸಣ್ಣ ಉದ್ದಿಮೆದಾರರ ವಹಿವಾಟು ಎರಡು ಕೋಟಿಗೂ ಕಡಿಮೆ ಇದ್ದಲ್ಲಿ, 8 ಪ್ರತಿಶತ ಲಾಭ ಎಂದು ತೀರ್ಮಾನಿಸಲಾಗುತ್ತದೆ. ಅದರ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ. ವೃತ್ತಿನಿರತ ವ್ಯಕ್ತಿಗಳ ವಹಿವಾಟು 50 ಲಕ್ಷಕ್ಕೂ ಕಡಿಮೆ ಇದ್ದಲ್ಲಿ, ವಹಿವಾಟಿನ ಅರ್ಧ ಭಾಗ ಲಾಭ ಎಂದು ಪರಿಗಣಿಸಲಾಗುವುದು ಹಾಗೂ ಅದಕ್ಕೆ ತೆರಿಗೆ ವಿಧಿಸಲಾಗುವುದು. ಉಳಿದಂತೆ ಗ್ರಾಮೀಣ ಭಾರತ, ಕೃಷಿ ಭಾರತ ಸದೃಢ ಮಾಡಲು ಹೆಚ್ಚು ಗಮನ ಹರಿಸಲಾಗಿದೆ.
– 2022 ರ ವೇಳೆಗೆ ನಮ್ಮ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಈ ಬಜೆಟ್ ನಲ್ಲಿದೆ. ಇನ್ನು ಮೂರು ವರ್ಷದಲ್ಲಿ 5 ಲಕ್ಷ ಎಕರೆ ಸಾವಯವ ಕೃಷಿ ನೆಲವನ್ನು ಅಭಿವೃದ್ದಿ ಪಡಿಸುವ ಮಹತ್ತರ ಯೋಜನೆಗೆ ಈ ಬಜೆಟ್ ಹಣ ನೀಡಲಿದೆ. ನೀರಾವರಿ , ಅಂತರ್ಜಲ ಅಭಿವೃದ್ಧಿ ಕಡೆಗೂ ಹೆಚ್ಚು ಗಮನ ಹರಿಸಲಾಗಿದೆ.
– ಪ್ರಧಾನ ಮಂತ್ರಿಗಳ ಗ್ರಾಂ ಸಡಕ್ ಯೋಜನೆ ಅಡಿಯಲ್ಲಿ 19 ಸಾವಿರ ಕೋಟಿ ರುಪಾಯಿ ವ್ಯಯಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ.
– 10 ಸಾವಿರ ಕಿಲೋ ಮೀಟರ್ ಹೊಸ ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ 55 ಸಾವಿರ ಕೋಟಿ ರುಪಾಯಿ ಮೀಸಲಿಡಲಾಗಿದೆ. ಉಳಿದ 15 ಸಾವಿರ ಕೋಟಿ ರುಪಾಯಿಯನ್ನು ಬಾಂಡ್ ಮೂಲಕ ಸಂಗ್ರಹಿಸಿಸುವ ಗುರಿ ಇದೆ.
– ಒಟ್ಟು ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿಗೆ ಮೀಸಲಿಟ್ಟ ಹಣ 2.18 ಲಕ್ಷ ಕೋಟಿ ರುಪಾಯಿ.
– ಗ್ರಾಮೀಣ ಅಭಿವೃದ್ದಿಗೆ ಮೀಸಲಿಟ್ಟ ಮೊತ್ತ 87,765 ಕೋಟಿ ರುಪಾಯಿ ಎಂದರೆ ಈ ಬಜೆಟ್ ನಲ್ಲಿ ಗ್ರಾಮೀಣ ಅಭಿವೃದ್ದಿಗೆ ಎಷ್ಟು ಮಹತ್ವ ಕೊಟ್ಟಿದೆ ಎನ್ನುವುದರ ಅರಿವಾಗುತ್ತದೆ.
– ಸ್ವಚ್ಛ ಭಾರತಕ್ಕೆ 9 ಸಾವಿರ ಕೋಟಿ ಸಂದಾಯವಾಗಲಿದೆ. ಮೋದಿ ಅವರ ಅಣತಿಯಂತೆ ಎಲ್ಲರೂ ನಿಗಾವಹಿಸಿ ಕೆಲಸ ಮಾಡಿದ್ದೆ ಆದರೆ ಭಾರತ ನಿಜಕ್ಕೂ ಸ್ವಚ್ಛವಾಗಲಿದೆ.
– 75 ಲಕ್ಷ ಜನ ಗ್ಯಾಸ್ ಸಬ್ಸಿಡಿ ಬಿಟ್ಟಿದ್ದಾರೆ. ಕಟ್ಟಿಗೆ ಸುಟ್ಟು ಅಡಿಗೆ ಮಾಡುವ, ನಿಜಕ್ಕೂ ಅವಶ್ಯಕತೆ ಇರುವ ಜನರನ್ನು ತಲುಪುವ ಉದ್ದೇಶ ಮೋದಿ ಸರಕಾರದ್ದು. ಈ ವರ್ಷ  ಒಂದೂವರೆ ಕೋಟಿ ಜನರ ಮನೆಗೆ ಗ್ಯಾಸ್ ತಲುಪಿಸುವ ಆಶಯ ಇದೆ.
– ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಜಗತ್ತಿನ ಉಳಿದ ಬ್ಯಾಂಕಿಂಗ್ ವ್ಯವಸ್ಥೆಗಿಂತ ಉತ್ತಮವಾಗಿದೆ. ಅಂದ ಮಾತ್ರಕ್ಕೆ ಇಲ್ಲಿ ಎಲ್ಲವೂ ಸರಿ ಇದೆ ಎಂದಲ್ಲ. ಇಲ್ಲಿಯೂ ಹಲವು ಹುಳುಕುಗಳಿವೆ. ಇಂತಹ ಹುಳುಕಗಳನ್ನು ಹುಡುಕಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಲ್ಯರಂತ ಸಾಲ ಮರು ಪಾವತಿ ಮಾಡದ ವ್ಯಕ್ತಿಗಳ ಕಾನೂನಿನ ಬಂಧನಕ್ಕೆ ತರಲು ಹೊಸ ನೀತಿ ಸಂಹಿತೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಅಲ್ಲದೆ ಬ್ಯಾಂಕಿಂಗ್ ವಲಯಕ್ಕೆ ಸರಕಾರದ ಪರವಾಗಿ  25 ಸಾವಿರ ಕೋಟಿ ಹೊಸ ಬಂಡವಾಳ ಹೂಡಿಕೆ ಮಾಡಲಾಗಿದೆ.
– ರಸ್ತೆ, ರೈಲು , ವಾಯು ಮಾರ್ಗ ಸುಧಾರಣೆ ಮೂಲಕ ಜನಜೀವನ ಉತ್ತಮಗೊಳಿಸುವುದು, ವ್ಯಾಪಾರ ಹೆಚ್ಚಿಸುವುದು ಈ ಬಜೆಟ್ ಉದ್ದೇಶ. ರಾಜ್ಯ ಸರಕಾರಗಳ ಸಹಯೋಗದೊಂದಿಗೆ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇಸರಿಸುವುದು ಸರಕಾರದ ಇನ್ನೊಂದು ಮಹತ್ತರ ಯೋಜನೆ.
ಉಳಿದಂತೆ, ನೀವು ಅತೀ ಹೆಚ್ಚು ಶ್ರೀಮಂತರಾಗಿದ್ದರೆ ನಿಮಗೆ ಹೆಚ್ಚಿನ ತೆರಿಗೆ ಬೀಳಲಿದೆ. ನೀವು ಕೊಳ್ಳುವ ಕಾರು ಹತ್ತು ಲಕ್ಷಕ್ಕೂ ಹೆಚ್ಚಿನ ಬೆಲೆ ಇದ್ದರೆ ಅದಕ್ಕೂ ಹೆಚ್ಚಿನ ಸುಂಕ ಕಟ್ಟಬೇಕು. ಲಾಗಾಯ್ತಿನಿಂದ ಬಂದಂತೆ ತಂಬಾಕು ಉತ್ಪನ್ನಗಳ ಮೇಲೆ 10 ರಿಂದ 15 ಪ್ರತಿಶತ ಅಬಕಾರಿ ಸುಂಕ ಹೆಚ್ಚಿಸಲಾಗಿದೆ.
ಇದೆಲ್ಲಾ ಸರಿ , ಮೋದಿ ಸರಕಾರದ ಬಜೆಟ್ ಚೆನ್ನಾಗಿದೆಯೋ ಇಲ್ಲವೋ ಹೇಳಿ ಎನ್ನುವವರಿಗೆ ಈ ಉದಾಹರಣೆ ಕೊಡಬಹುದು. ನಿಮ್ಮ ಮನೆಯಲ್ಲಿ ನಾಲ್ಕು ಮಕ್ಕಳಿವೆ ಎಂದಿಟ್ಟುಕೊಳ್ಳಿ. ಮೊದಲ ಎರಡು ಮಕ್ಕಳಿಗೆ, ಊಟ, ಬಟ್ಟೆ ಸಕಲ ವ್ಯವಸ್ಥೆ ಕೊಟ್ಟರೆ ಸಾಲದು. ಉಳಿದಿಬ್ಬರು ಮಕ್ಕಳಿಗೂ ಅದರ ವ್ಯವಸ್ಥೆ ಮಾಡುವ ಕರ್ತವ್ಯ ಪೋಷಕರದು ಅಲ್ಲವೇ? ಗ್ರಾಮೀಣಾಭಿವೃದ್ದಿ, ಕೃಷಿ ಹಾಗೂ ಮೂಲ ಸೌಕರ್ಯಗಳಿಗೆ ಕೊಟ್ಟಿರುವ ಒತ್ತನ್ನು ಉಳಿದ ಕಡೆಯೂ ಕಂಡುಕೊಳ್ಳಬೇಕಿದೆ. ಹಾಗೆಂದು ಈಗ ಕೊಟ್ಟಿರುವ ಆದ್ಯತೆಯಿಂದ ನಿಮಗೆ ನೇರ ಅಲ್ಲದಿದ್ದರೂ ಪರೋಕ್ಷ ಲಾಭವಂತೂ ಇದ್ದೇ ಇದೆ.

Leave a Reply