ಕೇರಳ ದೇಶದ ಮೊದಲ ಡಿಜಿಟಲ್ ರಾಜ್ಯ! ಈ ಆದರ್ಶಪ್ರಾಯ ಸಾಧನೆ ಆಗಿದ್ದಾದರೂ ಹೇಗೆ ಗೊತ್ತೇ..?

ಡಿಜಿಟಲ್ ಕನ್ನಡ ಟೀಮ್

ದೇವರ ನಾಡು ಕೇರಳ ಪ್ರವಾಸಿಗಳ ಸ್ವರ್ಗಧಾಮ. ಈ ಕರಾವಳಿ ರಾಜ್ಯದ ಸಂಸ್ಕೃತಿ ವಿಭಿನ್ನ. ಅಲ್ಲಿನ ಸಾಕ್ಷರತೆ ಬೆರಗು ಮೂಡಿಸುವಂತದ್ದು. ಈ ಸಾಕ್ಷರತೆ ಅಲ್ಲಿನ ಪ್ರಗತಿ ಬುನಾದಿ. ಅಂಥಾ ಕೇರಳದ ಮುಡಿಗೆ ಈಗ ಮತ್ತೊಂದು ಗರಿ. ಅದುವೇ ಡಿಜಿಟಲ್ ರಾಜ್ಯ ಎಂಬ ಕೀರ್ತಿ.

ಡಿಜಿಟಲ್ ಕ್ಷೇತ್ರದ ಸಾಧನೆಗೆ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಈ ದಿಕ್ಕಿನಲ್ಲಿ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ, ಮತ್ತಷ್ಟು ಬರುತ್ತಿವೆ. ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೇರಳವನ್ನು ‘ದೇಶದ ನಿಜವಾದ ಡಿಜಿಟಲ್ ರಾಜ್ಯ’ ಎಂದು ಘೋಷಿಸಿದ್ದಾರೆ. ಕೇರಳ ಡಿಜಿಟಲ್ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿಸ್ಸು ಹೇಗೆ? ಅಲ್ಲಿ ಕೈಗೊಂಡಿರುವ ಯೋಜನೆಗಳೇನು? ಅದರ ಸಾಧನೆಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  • ಕೇರಳದ ಪ್ರತಿ ಗ್ರಾಮ ಪಂಚಾಯ್ತಿಯೂ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆದಿದೆ. ಆ ಮೂಲಕ ರಾಜ್ಯದ ಮೂಲೆಮೂಲೆಯಲ್ಲೂ ಈ ಸೌಲಭ್ಯವಿದೆ.
  • ಮಲಪುರಂ ಜಿಲ್ಲೆಯಲ್ಲಿ 2002 ರಲ್ಲಿ ಆರಂಭವಾದ ‘ಅಕ್ಷಯ ಇ-ಸಾಕ್ಷರತಾ’ ಅಭಿಯಾನ ದೇಶದ ಮೊದಲ ಜಿಲ್ಲಾ ಮಟ್ಟದ ಇ-ಸಾಕ್ಷರತಾ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಕೇರಳದ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. ರಾಜ್ಯ ಆದಾಯ ಇಲಾಖೆ ನಿತ್ಯ 30 ಸಾವಿರ ನಾಗರೀಕರಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡುತ್ತಿದೆ.
  • ಇಲ್ಲಿರುವ ಒಟ್ಟು ಇ-ಸಾಕ್ಷರತಾ ಕೇಂದ್ರಗಳ ಸಂಖ್ಯೆ 2500. ಇವು ಸ್ಥಳೀಯರಿಗೆ ಅಂತರಜಾಲ ಸಂಪರ್ಕ ಮತ್ತು ಇ-ಸೇವೆಗಳನ್ನು ಒದಗಿಸುತ್ತಿವೆ.
  • ‘ಐಟಿ ಅಟ್ ಸ್ಕೂಲ್’ ಕೇರಳ ಡಿಜಿಟಲ್ ಕ್ಷೇತ್ರದ ಮತ್ತೊಂದು ಮಜಲು. ಈ ಯೋಜನೆಯಡಿ ಪ್ರೌಢ ಶಿಕ್ಷಣದ ಮಟ್ಟದಲ್ಲಿ ಎಲ್ಲ ಶಾಲೆಗಳ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಕಡ್ಡಾಯ.
  • 2005 ರಲ್ಲಿ ಮೊದಲ ಡಾಟಾ ಸೆಂಟರ್ (ಅಂಕಿ-ಅಂಶ ಕೇಂದ್ರ) ಸ್ಥಾಪನೆ. ಇ-ಗವರ್ನೆನ್ಸ್ (ಆಡಳಿತ) ಮೂಲಕ ಸರಕಾರಿ ಸೇವೆ. 2011 ರಲ್ಲಿ ಎರಡನೇ ಕೇಂದ್ರ ಸ್ಥಾಪನೆ. ಎಲ್ಲ ಸರಕಾರಿ ಇಲಾಖೆಗಳಿಂದಲೂ 600 ಇ- ಆಡಳಿತ ಕೇಂದ್ರಗಳ ಆರಂಭ.
  • ಕೇರಳದಲ್ಲಿ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನ್ ಬಳಕೆ ವ್ಯಾಪಕವಾಗಿದ್ದು, ಜ್ಞಾನ ಆಧಾರಿತ ಆರ್ಥ ವ್ಯವಸ್ಥೆಯತ್ತ ಸಾಗಲು ನೆರವಾಗಿದೆ. ರಾಜ್ಯದ ಶೇ.95 ರಷ್ಟು ಭಾಗ ಮೊಬೈಲ್ ಸಂಪರ್ಕ ಹೊಂದಿದೆ. ಶೇ.60 ರಷ್ಟು ಜನರು ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಪಡೆದಿದ್ದಾರೆ.
  • ಮಲಬಾರ್ ಪ್ರದೇಶದಲ್ಲಿ ಐಟಿ ಪಾರ್ಕ್ ಸ್ಥಾಪನೆ. ಇಲ್ಲಿ 5 ಸಾವಿರ ವೃತ್ತಿಪರರು ಸೇರಿ 20 ಸಾವಿರ ಮಂದಿ ಸಿಬ್ಬಂದಿ ಇದ್ದಾರೆ.

ಒಂದೂವರೆ ದಶಕದಲ್ಲಿ ಕೇರಳ ಡಿಜಿಟಲ್ ಅಳವಡಿಸಿಕೊಂಡಿರುವ ರೀತಿ, ಯಶಸ್ಸಿನತ್ತ ಸಾಗುತ್ತಿರುವ ವೇಗ ಶ್ಲಾಘನೀಯ. ಏಷ್ಯಾದ ಸಿಲಿಕಾನ್ ವ್ಯಾಲಿ, ದೇಶದ ಐಟಿ ರಾಜಧಾನಿ ಎಂದೆಲ್ಲ ಹೆಸರು ಪಡೆದಿರುವ ಬೆಂಗಳೂರಿನ ಪ್ರಗತಿ ವೇಗ ಕೇರಳಕ್ಕೆ ಹೋಲಿಸಿದರೆ ಕಡಿಮೆ ಇದೆ. ಕೇರಳ ನಿಜಕ್ಕೂ ಇತರೆ ರಾಜ್ಯಗಳಿಗೆ ಆದರ್ಶವಾಗಿದೆ.

Leave a Reply