ಜೇಟ್ಲಿ ಬಜೆಟ್: ಪಾಂಡಿತ್ಯವಿರದ ಪಾಮರರು ಅರ್ಥ ಮಾಡಿಕೊಳ್ಳಬಹುದಾದ ಸಂಗತಿಗಳು ಏನಪ್ಪಾ ಅಂತಂದರೇ..?

ಡಿಜಿಟಲ್ ಕನ್ನಡ ಟೀಮ್

ಬಜೆಟ್ ನಿರಾಶಾದಾಯಕ ಅಂತ ಪ್ರತಿಪಕ್ಷದಲ್ಲಿ ಕುಳಿತ ಯಾರಾದರೂ ಪ್ರತಿಕ್ರಿಯೆ ಕೊಡಲೇಬೇಕು. ಅದು ಲಾಗಾಯ್ತಿನಿಂದ ಪಾಲಿಸಿಕೊಂಡು ಬಂದಂತಹ ನೀತಿ. ಇಲ್ಲವಾದರೆ, ನಮ್ಮ ಯೋಜನೆಗಳನ್ನೇ ಬೇರೆ ರೀತಿಯಲ್ಲಿ ಪ್ರಚುರಪಡಿಸಲಾಗಿದೆಯಷ್ಟೇ ಅಂತಾದರೂ ಟೀಕಿಸಬೇಕು. ಆದರೆ ಹಿಂದಿನ ಸರ್ಕಾರದ ಯೋಜನೆಯೊಂದಕ್ಕೆ ಬಜೆಟ್ ನಲ್ಲಿ ಒತ್ತು ನೀಡಿಬಿಟ್ಟರೆ ಪ್ರತಿಕ್ರಿಯಿಸೋದು ಹೆಂಗೆ? ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ಸಿಗೆ ಈ ಪ್ರಶ್ನೆ ಕಾಡಬಹುದೇನೋ.

ತಮ್ಮ ಮಹಾತ್ವಾಕಾಂಕ್ಷಿ ಯೋಜನೆಯನ್ನು ಎನ್ ಡಿ ಎ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂಬ ದೂರೊಂದು ಆಗಾಗ ಅನುರಣಿಸುತ್ತಲೇ ಇತ್ತು. ಅದು ಹಾಗಲ್ಲ, ಈ ಯೋಜನೆಯಲ್ಲಿ ಎಷ್ಟು ದುಡ್ಡು ಕೊಟ್ಟೆವು ಅನ್ನೋದಕ್ಕಿಂತ, ಫಲಿತಾಂಶ ಏನು ಸಾಧಿಸಿದೆವು ಎಂಬುದು ಮುಖ್ಯ ಅನ್ನೋದು ಬಿಜೆಪಿಗರ ವಾದವಾಗಿತ್ತು. ಅದೇನೇ ಇರಲಿ, ಈ ಬಜೆಟ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬರೋಬ್ಬರಿ 38500 ಕೋಟಿ ರುಪಾಯಿಗಳನ್ನು ಎತ್ತಿಡಲಾಗಿದೆ. ಹಾಗಂತ ಹೆಬ್ಬೆಟ್ಟು ಒತ್ತಿಸಿಕೊಂಡು ಕೂಲಿ ಕೊಟ್ಟು ದುಡ್ಡು ಸ್ವಾಹಾ ಮಾಡುವುದನ್ನು ನಿಯಂತ್ರಿಸುವ ಬಗ್ಗೆಯೂ ಸರ್ಕಾರ ಯೋಚಿಸಿದಂತಿದೆ. ಹೀಗಾಗಿ, ಇದೇ ಬಜೆಟ್ ನ ಸಾವಯವ ಕೃಷಿ ಕನಸುಗಳೊಂದಿಗೆ ಇದನ್ನು ಬೆಸೆಯಲಾಗಿದೆ. ತ್ಯಾಜ್ಯದಿಂದ ಸಾವಯವ ಗೊಬ್ಬರ ಮಾಡುವ 10 ಲಕ್ಷ ಕಾಂಪೋಸ್ಟ್ ಗುಂಡಿಗಳ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಉದ್ಯೋಗ ಖಾತ್ರಿಯ ಶ್ರಮಿಕರನ್ನು ಬೆಸೆಯುವ ಪ್ಲಾನ್ ಒಳ್ಳೆಯದೇ. ವರ್ಷದ ಕೊನೆಗೆ ಗುಂಡಿ ತೆಗೆದಿದ್ದೆಷ್ಟು, ಸಾವಯವ ಯೋಜನೆ ಫಲಿತವಾಗಿದ್ದೆಷ್ಟು, ಉದ್ಯೋಗ ಖಾತ್ರಿಯಲ್ಲಿ ಹಣ ಹಂಚಿಕೆ ಸಫಲವೇ ಎಂಬುದೆಲ್ಲದರ ಅಂದಾಜು ಹಿಂದಿಗಿಂತ ನಿಚ್ಚಳವಾದೀತು.

ದೆಹಲಿಯಲ್ಲಿ ಕುಳಿತು ಬಜೆಟ್ ಮಾಡೋರಿಗೆ ಹಳ್ಳಿಮೂಲೆಯ ನೆನಪು ಎಲ್ಲಿರುತ್ತೆ ಅನ್ನೋದೊಂದು ಸಾಮಾನ್ಯ ಕೊರಗು. ಈ ಬಾರಿ ಬಜೆಟ್ ನಲ್ಲಿ ಎತ್ತಿಟ್ಟಿರುವ 2.87 ಲಕ್ಷ ಕೋಟಿ ರುಪಾಯಿಗಳು ಗ್ರಾಮ ಪಂಚಾಯ್ತಿ ಮತ್ತು ಮುನ್ಸಿಪಾಲಿಟಿಗಳಿಗೆ ಸಲ್ಲಲಿವೆ. ಹಿಂದಿನ ಅನುದಾನಗಳಿಗೆ ಹೋಲಿಸಿದರೆ ಇದು ಭಾರೀ ನೆಗೆತ. ಅಲ್ಲದೇ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಪೂರಕವಾದ ಪ್ರಧಾನ ಮಂತ್ರಿ ಗ್ರಾಮ ಸಢಕ್ ಗೆ ಎತ್ತಿಟ್ಟಿರುವ ಹಣದ ಪ್ರಮಾಣದಲ್ಲೂ ಭಾರೀ ನೆಗೆತವೇ ಕಂಡುಬಂದಿದೆ. ಈ ಹಿಂದಿನ ಆಯವ್ಯಯಗಳಲ್ಲಿ 8-9 ಸಾವಿರ ಕೋಟಿ ರುಪಾಯಿಗಳ ಅನುದಾನ ಕಂಡುಬರುತ್ತಿದ್ದದ್ದು, ಈ ಬಾರಿ 19 ಸಾವಿರ ಕೋಟಿ ರುಪಾಯಿಗಳಿಗೆ ಏರಿದೆ. ಗ್ರಾಮಾಭಿವೃದ್ಧಿ ಸರಣಿಯ ಮುಂದುವರಿಕೆ ಎಂಬಂತೆ ವಿದ್ಯುದೀಕರಣ ಮತ್ತು ಡಿಜಿಟಲೀಕರಣಗಳೆಂಬ ಎರಡು ಮಂತ್ರಗಳು ಮೊಳಗಿವೆ. ಆ ಪೈಕಿ, ಪಿಯೂಶ್ ಗೋಯಲ್ ಎಂಬ ಸಮರ್ಥ ಸಚಿವರ ನೇತೃತ್ವವಿರುವ ವಿದ್ಯುದೀಕರಣವನ್ನು ನೆಚ್ಚಿಕೊಳ್ಳಬಹುದು. ಆದರೆ ಈ ಡಿಜಿಟಲ್ ಇಂಡಿಯಾ ಕೇಳುವುದಕ್ಕೇನೋ ಆಪ್ತವಾಗಿದೆಯಾದರೂ ರವಿಶಂಕರ ಪ್ರಸಾದ ನಾಯಕತ್ವ ಈ ನಿಟ್ಟಿನಲ್ಲಿ ಅಂಥ ಛಾಪನ್ನೇನೂ ಮೂಡಿಸಿಲ್ಲ. ಹೀಗಾಗಿ ಗ್ರಾಮೀಣ ಸ್ತರದಲ್ಲಿ ಇ ಮಾರುಕಟ್ಟೆ ಮಾಡುತ್ತೇವೆನ್ನುವ, ಶಿಕ್ಷಣ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲೇ ಕೊಡಲಾಗುತ್ತದೆನ್ನುವ ಘೋಷಣೆಗಳೆಲ್ಲ ಘೋಷಣೆಗಳಾಗಿಯೋ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚು.

ಪ್ರತಿಪಕ್ಷದ ಹಿರಿ ಕಿರಿ ರಾಜಕಾರಣಿಗಳೆಲ್ಲ ಸೇರಿ ಮೋದಿ ಸರ್ಕಾರವನ್ನು ಏನಕೇನ ದಲಿತ ವಿರೋಧಿ ಎಂದು ಬಿಂಬಿಸುವುದಕ್ಕೆ ತಮ್ಮೆಲ್ಲ ಶ್ರಮವನ್ನೂ ವ್ಯಯಿಸುತ್ತಿರುವಾಗ ತನ್ನ ದಲಿತ ಬದ್ಧತೆಯನ್ನು ಈ ಸರ್ಕಾರ ಸ್ವಲ್ಪ ಬೇರೆ ರೀತಿಯಲ್ಲಿ ಪ್ರಕಟಿಸಿದೆ. ಇದು ಯಾವುದೇ ಭಾಗ್ಯದ ಘೋಷಣೆ ಅಲ್ಲ. ಉದ್ಯೋಗ ಕೇಳುವವರಾಗದೇ ದಲಿತರು ಉದ್ಯೋಗದಾತರಾಗಬೇಕೆಂಬ, ದಲಿತ್ ಚೇಂಬರ್ ಆಫ್ ಕಾಮರ್ಸ್ ನ ಆಶೋತ್ತರಗಳನ್ನು ತನ್ನ ಉದ್ದೇಶವೂ ಆಗಿಸಿಕೊಳ್ಳುತ್ತ,
500ಕೋಟಿ ರುಪಾಯಿಗಳನ್ನು ಸರ್ಕಾರ ಎತ್ತಿಟ್ಟಿದೆ.

ನಗರ ಜೀವನಕ್ಕೆ ಮಾತ್ರ ರೋಗಗಳು ಹೆಚ್ಚಾಗಿ ಅಮರಿಕೊಳ್ಳುತ್ತವೆ, ಬಿಪಿ- ಶುಗರ್ ಗಳೆಲ್ಲ ನಗರದ ಒತ್ತಡ ಜೀವನಕ್ಕೆ ಎಂಬ ಸ್ಥಿತಿ ಈಗಿಲ್ಲ. ಸಣ್ಣ ಪಟ್ಟಣ- ಹಳ್ಳಿಗಳಲ್ಲೂ ಪ್ರತಿ ತಿಂಗಳು ಕಿರಾಣಿ ಪಾವತಿ ನೋಡಿದಷ್ಟೇ ಸಹಜವಾಗಿ ಔಷಧದ ಪಾವತಿಗಳನ್ನೂ ನೋಡುವಂತಾಗಿದೆ. ಈ ನಿಟ್ಟಿನಲ್ಲಿ ಜನರಿಕ್ ಔಷಧಗಳನ್ನು ಒದಗಿಸುವ ಬದ್ಧತೆ ತೋರಿರುವುದು ಸ್ವಾಗತಾರ್ಹ. ಕಿಡ್ನಿ ತೊಂದರೆ ಅನ್ನೋದು ಸಹ ಹಳ್ಳಿ- ನಗರವೆನ್ನದೇ ಎಲ್ಲವನ್ನೂ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಆಯವ್ಯಯವು ಈ ಸಂಕಷ್ಟವನ್ನು ಸರಿಯಾಗಿಯೇ ಗುರುತಿಸಿದೆ. ಪ್ರತಿ ಸಾರಿ ಡಯಾಲಿಸಿಸ್ ಗೆ 2000 ರುಪಾಯಿಗಳಂತೆ ವರ್ಷಕ್ಕೆ ಸುಮಾರು 3 ಲಕ್ಷ ವ್ಯಯಿಸಬೇಕಾದ ಸ್ಥಿತಿ ಇರುವುದನ್ನು ಗುರುತಿಸಿರುವ ಆಯವ್ಯಯವು, ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಅಡಿಯಿಟ್ಟಿದೆ. ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ವೆಚ್ಚ ತಗ್ಗಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದ್ದು, ಉಪಕರಣಗಳ ಕಸ್ಟಮ್ ಸುಂಕಕ್ಕೆ ವಿನಾಯಿತಿ ನೀಡಲಾಗಿದೆ.

ಇವೆಲ್ಲ ಮೇಲ್ನೋಟಕ್ಕೆ ದಕ್ಕಿಸಿಕೊಳ್ಳಬಹುದಾದ, ಅರ್ಥ ಪರಿಣತರ ವಿಶ್ಲೇಷಣೆಯನ್ನೇನೂ ಬೇಡದ ಅಂಶಗಳು.

1 COMMENT

  1. ಮತ್ತೊಂದು ವಿಷಯವೆಂದರೆ ರಾಹುಲ್ ಗಾಂಧಿಯ ಆಗ್ರಹದ ಮೇರೆಗೆ ಬ್ರೈಲಿ ಕಾಗದಕ್ಕೆ ತೆರಿಗೆ ಕಡಿತಗೊಳಿಸಲಾಗಿದೆ. ಅದನ್ನು ಜೇಟ್ಲಿ ಬಜೆಟ್ ಮಂಡಿಸುವಾಗಲೂ ಉಲ್ಲೇಖಿಸಿದ್ದಾರೆ. ರಾಹುಲ್ ಗಾಂಧಿಗೆ ಇಂಥದ್ದೊಂದು ಸಲಹೆ ನೀಡಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಂವಾದ ನಡೆಸಿದಾಗ ಚಂದನಾ ಚಂದ್ರಶೇಖರ್ ಎಂಬ ವಾಣಿಜ್ಯ ವಿದ್ಯಾರ್ಥಿನಿ. ರಾಹುಲ್ ಬಜೆಟ್ ಬಗ್ಗೆ ತರಲೆ ಮಾಡುವ ಪ್ರಶ್ನೆಯೇ ಇಲ್ಲ, ಅವರ ಬೇಡಿಕೆ ಈಡೇರಿದೆ.

Leave a Reply