ಮಾಜಿ ವಿತ್ತ ಸಚಿವ ಚಿದಂಬರಂ ತಮ್ಮ ಕುಟುಂಬದ ನಿಜ ಆಯವ್ಯಯ ಬಿಚ್ಚಿಡೋ ಕಾಲ ಸಮೀಪಿಸ್ತಿದೆಯಾ..?

30/11/2013 - CHENNAI: Union Finance Minister P Chidambaram and his son Karti P Chidambaram at a conferance on Indian Government’s Stand on The Sri Lankan Tamils Issue - PTI Photo. [Tamil Nadu, Union Finance Minister, P Chidambaram, Son, Karti P Chidambaram]

 

ಡಿಜಿಟಲ್ ಕನ್ನಡ ಟೀಮ್

ಇದು ಕಾಲದ ಹೊರಳು…
ಒಂದು ಕಡೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಆಯವ್ಯಯ ಮಂಡಿಸಿ ತತ್ ಕ್ಷಣದ ನಿರಾಳತೆಯೊಂದನ್ನು ಅನುಭವಿಸಿದ್ದಾರೆ. ಇದನ್ನು ಹೇಗೆಲ್ಲ ಟೀಕಿಸಬಹುದು ಅಂತ ಪ್ರತಿಪಕ್ಷಗಳು ಪದಜೋಡಣೆಯಲ್ಲಿರುವಾಗಲೇ, ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರ ಪಾಲಿಗೆ ಕಷ್ಟದ ದಿನಗಳು ಬಂದಂತೆ ಕಾಣುತ್ತಿವೆ.

ಪಿ. ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರ ನಾನಾ ವಹಿವಾಟುಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ), ಹಾಗೂ ಆದಾಯ ತೆರಿಗೆ ಇಲಾಖೆ(ಐಟಿ)ಗಳ ದಾಳಿ ಆಗಿದ್ದು, ಅವರ ಬೃಹತ್ ಉದ್ಯಮ ಸಾಮ್ರಾಜ್ಯದ ವ್ಯಾಪ್ತಿಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಸೋಮವಾರದಂದು ಮಾಧ್ಯಮಲೋಕವೆಲ್ಲ ಅರುಣ್ ಜೇಟ್ಲಿ ಕಡೆ ಕಣ್ಣುನೆಟ್ಟು ಕೂತಿದ್ದ ದಿನವೇ ದೆಹಲಿಯ ‘ದ ಪಯೋನೀರ್’ ಪತ್ರಿಕೆ ಪ್ರಕಟಿಸಿರುವ ವರದಿಯಲ್ಲಿ ಹಲವು ಸ್ಫೋಟಕ ಅಂಶಗಳಿವೆ.

ನಿಜ, ಮೊದಲೇ ಹೇಳಿಬಿಡಬೇಕು… ಪಯೋನೀರ್ ನ ಮಾಲಿಕ ಚಂದನ್ ಮಿತ್ರ ಬಿಜೆಪಿಯ ರಾಜ್ಯಸಭೆ ಸದಸ್ಯರು. ಹಾಗಂತ ವರದಿ ಹೊರಗೆಡವುತ್ತಿರುವ ಅಂಶಗಳು ಮೇಲುಮೇಲಿನ ಆಪಾದನೆಗಳಂತೆ ತೋರುತ್ತಿಲ್ಲ. ಇಷ್ಟಕ್ಕೂ ಜಾರಿ ನಿರ್ದೇಶನಾಲಯದ ದಾಳಿ ಬೆಂಬತ್ತಿ ಹೀಗೊಂದು ಎಕ್ಸ್ ಕ್ಲೂಸಿವ್ ವರದಿ ಬರೆದಿರೋರು ಜೆ. ಗೋಪಾಲಕೃಷ್ಣ. 2ಜಿ ಹಗರಣಕ್ಕೆ ಸಂಬಂಧಿಸಿ ಮೊದಲಿಗೆ ವರದಿಗಳನ್ನು ತಂದವರು ಇವರೇ. ಟಿವಿ ಚಾನೆಲ್ ಗಳು ಅವನ್ನೆಲ್ಲ ತಮ್ಮ ಎಕ್ಸ್ ಕ್ಲೂಸಿವ್ ಅಂತ ಬಡಕೊಂಡಿದ್ದು ನಂತರದ ವಿದ್ಯಮಾನ.

ಇವಿಷ್ಟು ಹಿನ್ನೆಲೆಗಳನ್ನು ಇಟ್ಟುಕೊಂಡೇ ಚಿದಂಬರಂ ಸಂಕಷ್ಟದಧ್ಯಾಯವನ್ನು ಪರೀಕ್ಷಿಸೋಣ. ಕಾರ್ತಿ ಚಿದಂಬರಂ ಮೇಲೆ ನಡೆದಿರುವ ಇಡಿ-ಐಟಿ ದಾಳಿ
ಏರ್ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದ್ದು. ಪಿ. ಚಿದಂಬರಂ ಅವರು ವಿತ್ತ ಸಚಿವರಾಗಿದ್ದ ಸಮಯದಲ್ಲಿ ಮ್ಯಾಕ್ಸಿಸ್ ಕಂಪನಿ ಏರ್ಸೆಲ್ ಜತೆ ಒಪ್ಪಂದ
ಮಾಡಿಕೊಳ್ಳುವುದಕ್ಕೆ ಇವರಿಂದಲೇ ಒಪ್ಪಿಗೆ ದೊರೆತಿತ್ತು. ಹೀಗೆ ಒಪ್ಪಿಗೆ ನೀಡಿದ್ದೇ ಕಾನೂನುಬಾಹಿರ ಅಂತ ಇಡಿ ಹಾಗೂ ಸಿಬಿಐ ಸಂಸ್ಥೆಗಳೆರಡೂ ಆರೋಪಪಟ್ಟಿಯಲ್ಲಿ ಸಾರಿವೆ. ಸುಪ್ರೀಂ ಕೋರ್ಟ್ ನಿಗಾದಲ್ಲಿ ಈ ಒಪ್ಪಂದದ ಎಲ್ಲ ಆಯಾಮಗಳ ತನಿಖೆ ನಡೆಯುತ್ತಿದೆ. ಈ ಒಪ್ಪಂದದಲ್ಲಿ ಚಿದಂಬರಂ ಅವರಿಗೆ ಕಿಕ್ ಬ್ಯಾಕ್ ಸಂದಾಯವಾಗಿತ್ತೇ ಎಂಬುದು ಪ್ರಶ್ನೆ. ಬಿಳಿ ಲುಂಗಿ- ಬಿಳಿ ಶರ್ಟು ಹಾಕಿಕೊಂಡು ಅಷ್ಟೇ ಬಿಳಿ ನಗೆ ಸೂಚಿಸಿಕೊಂಡಿರುವ ಪಿ. ಚಿದಂಬರಂ ಅವರನ್ನು ಸಂಶಯಿಸಲಿಕ್ಕಾಗುತ್ತದೆಯೇ? ಹಂಗಂತ ಪ್ರಶ್ನಿಸಿಕೊಂಡಾಗಲೆಲ್ಲ ಕಣ್ಣಿಗೆ ಚುಚ್ಚೋದು ಅವರ ಮಗ ಕಾರ್ತಿ ಚಿದಂಬರಂ ಅವರ ಉದ್ಯಮ ಸಾಮ್ರಾಜ್ಯ.

ಇದೀಗ ನಡೆದಿರುವ ಇಡಿ- ಐಟಿ ದಾಳಿಯಲ್ಲಿ ಕಾರ್ತಿ ಚಿದಂಬರಂ ಅವರ ಉದ್ಯಮ ಸಾಮ್ರಾಜ್ಯವು 14 ದೇಶಗಳಲ್ಲಿ ಹರಡಿಕೊಂಡಿರುವುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಅಂತ ಪಯೋನೀರ್ ನ ವರದಿ ಸಾರುತ್ತಿದೆ. 2006ರಲ್ಲಿ ನಡೆದ ಏರ್ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ಹಣಕಾಸು ಸಲಹೆ ನೀಡಿದ ಕಂಪನಿಯ ಹೆಸರು ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್. ಈ ಕಂಪನಿ ಮತ್ಯಾರದ್ದೂ ಅಲ್ಲ, ಕಾರ್ತಿ ಚಿದಂಬರಂ ಒಡೆತನದ್ದು! ಏರ್ಸೆಲ್- ಮ್ಯಾಕ್ಸಿಸ್ ನ ಹಣಕಾಸು ವಹಿವಾಟುಗಳೆಲ್ಲ ನಡೆದಿದ್ದು ಈ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ನ ಅಧೀನ ಕಂಪನಿ ಮುಖಾಂತರ. ಅದು ಸಿಂಗಾಪುರ ಮೂಲದ್ದು. 2006-2014ರ ಅವಧಿಯಲ್ಲೇ ಕಾರ್ತಿ ಚಿದಂಬರಂ ಅವರ ಉದ್ಯಮ ಸಾಮ್ರಾಜ್ಯ ಅತಿಯಾದ ಬೆಳವಣಿಗೆಯನ್ನು ಕಂಡಿದ್ದು, ಏರ್ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ಅನುಕೂಲ
ಮಾಡಿಕೊಟ್ಟ ಫಲದಿಂದಲೇ ಇವೆಲ್ಲ ಸಾಕಾರಗೊಂಡಿವೆಯೇ ಅಂತ ತನಿಖಾ ಸಂಸ್ಥೆಗಳೆಲ್ಲ ಸಿಕ್ಕು ಬಿಡಿಸುತ್ತಿವೆ.

ಕಾರ್ತಿ ಸಾಮ್ರಾಜ್ಯದ ಮೇಲೆ ಐಟಿ- ಇಡಿ ದಾಳಿಗಳಾಗುತ್ತಿರೋದು ಇದೇ ಮೊದಲಲ್ಲ. 2015ರ ಡಿಸೆಂಬರ್ ನಲ್ಲಿ ಕಾರ್ತಿಗೆ ಸಂಬಂಧಿಸಿದ ಚೆನ್ನೈನ ವಾಸನ್ ಐ ಕೇರ್, ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಸೇರಿದಂತೆ 12 ಕಚೇರಿಗಳ ಮೇಲೆ ದಾಳಿಯಾಗಿತ್ತು. ಪಯೋನೀರ್ ವರದಿ ಪ್ರತಿಪಾದಿಸುತ್ತಿರುವ ಪ್ರಕಾರ ಈಗಿನ ಇಡಿ- ಐಟಿ ದಾಳಿಯಿಂದ ಕಾರ್ತಿ ಚಿದಂಬರಂ ಉದ್ಯಮ ಸಾಮ್ರಾಜ್ಯವು 14 ರಾಷ್ಟ್ರಗಳಿಗೆ ಹರಡಿಕೊಂಡಿರುವುದರ ದಾಖಲೆಗಳು ದೊರೆತಿವೆ. ಲಂಡನ್, ದುಬೈ, ದಕ್ಷಿಣ ಆಫ್ರಿಕಾ, ಪಿಲಿಪ್ಪೈನ್ಸ್, ಥೈಲ್ಯಾಂಡ್, ಸಿಂಗಾಪುರ, ಮಲೇಷ್ಯ, ಶ್ರೀಲಂಕಾ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಫ್ರಾನ್ಸ್, ಯುಎಸ್ ಎ, ಸ್ವಿಡ್ಜರ್ಲೆಂಡ್, ಗ್ರೀಸ್, ಸ್ಪೇನ್ ಗಳಲ್ಲಿ ರಿಯಲ್ ಎಸ್ಟೇಟ್ ಮತ್ತು ಇತರ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಕಾರ್ತಿ ಸಾಮ್ರಾಜ್ಯ ಹರಡಿಕೊಂಡಿದೆ. ಕಳ್ಳಹಣ ಸಾಗಾಟದ ಕುರಿತು ವಿಶ್ವಸಂಸ್ಥೆಯಲ್ಲಿ ಸ್ವೀಕೃತವಾಗಿರುವ ನಡಾವಳಿ ಆಧಾರದಲ್ಲಿ ಈ 14 ದೇಶಗಳಿಂದ ಭಾರತದ ತನಿಖಾ ಸಂಸ್ಥೆಗಳು ವಿವರ ಪಡೆದುಕೊಳ್ಳುವುದಕ್ಕೆ ಮುಂದಾಗಿವೆ.
ಅಫ್ಜಲ್ ಗೆ ಸರಿಯಾಗಿ ನ್ಯಾಯ ಸಿಕ್ಕಿರಲಿಕ್ಕಿಲ್ಲ ಎಂದೆಲ್ಲ ಅಲವತ್ತುಕೊಳ್ಳುತ್ತಿದ್ದ ಚಿದಂಬರಂ ಅವರು ಪುತ್ರನೊಡಗೂಡಿ ನ್ಯಾಯದ ಕಟಕಟೆಯಲ್ಲಿ ನಿಲ್ಲುವ ದಿನಗಳು
ಸಮೀಪಿಸುತ್ತಿವೆಯೇ?

1 COMMENT

Leave a Reply