ಸುದ್ದಿ ಸಂತೆ: ಪೆಟ್ರೋಲ್ ₹ 3.02 ಇಳಿಕೆ, ಡೀಸೆಲ್ ₹ 1.47 ಏರಿಕೆ, ರಾಹುಲ್ ವಿರುದ್ಧ ದೇಶದ್ರೋಹ ಕೇಸ್, ಕೇಜ್ರಿ ಕಾರು ಮೇಲೆ ದಾಳಿ

 

ಡಿಜಿಟಲ್ ಕನ್ನಡ ಟೀಮ್

ವಾಹನ ಹೊಂದಿರುವವರಿಗೆ ಮಿಶ್ರಫಲ. ಪೆಟ್ರೋಲ್ ಲೀಟರ್ ಗೆ ₹ 3.02 ಇಳಿಕೆ ಹಾಗೂ ಡೀಸೆಲ್ ₹ 1.47 ಏರಿಕೆಯಾಗಿದೆ. ಈ ಪರಿಷ್ಕೃತ ದರ ಫೆ. 29 ರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಇನ್ನು ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದೇಶದಲ್ಲಿ ಕ್ರಮವಾಗಿ ₹ 56.61 ಹಾಗೂ ₹ 44.96 ಆಗಲಿದೆ. ಬೆಂಗಳೂರಲ್ಲಿ ಈ ದರ ಪೆಟ್ರೋಲ್ 59 (ಈಗಿನ ದರ 62) ಡೀಸೆಲ್ 48.52 (ಈಗ 46.72) ರುಪಾಯಿ ಆಗಲಿದೆ.

ಕೇಜ್ರಿವಾಲ್ ಕಾರಿನ ಮೇಲೆ ದಾಳಿ

ಇತ್ತೀಚೆಗೆ ಕಾನ್ಪುರದಲ್ಲಿ ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ ಅವರ ಕಾರಿನ ಮೇಲೆ ಮೊಟ್ಟೆ, ಟೊಮೆಟೊ ಎಸೆಯಾಗಿತ್ತು. ಇದೀಗ ಪಂಜಾಬ್ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸರದಿ. ಲೂಧಿಯಾನ ಜಿಲ್ಲೆಯಲ್ಲಿ ಸೋಮವಾರ ಕೇಜ್ರಿವಾಲ್ ಅವರ ಕಾರಿನ ಮೇಲೆ ಕಲ್ಲು ತೂರಿ, ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಸ್ವತಃ ಕೇಜ್ರಿವಾಲ್ ಅವರೇ ಟ್ವಿಟರ್ ನಲ್ಲಿ ‘ಬಾದಲ್ಸ್ ಮತ್ತು ಕಾಂಗ್ರೆಸಿಗರು ಹೆದರಿದ್ದಾರೆ? ಆದರೆ ನನ್ನ ಉತ್ಸಾಹ ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 117 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

ರಾಹುಲ್, ಯಚೂರಿ ಸೇರಿ 9 ಮಂದಿ ವಿರುದ್ಧ ದೇಶದ್ರೋಹ ಆರೋಪ

ಜೆಎನ್ ಯು ವಿವಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ಬೆಂಬಲಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ 9 ಜನರ ವಿರುದ್ಧ ಹೈದರಾಬಾದ್ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಹೈದರಾಬಾದ್ ವಕೀಲ ಜನಾರ್ಧನ ಗೌಡ್ ಎಂಬುವವರ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸಿಪಿಐ (ಎಂ)ನ ಸೀತಾರಾಮ್ ಯೆಚೂರಿ, ಕಾಂಗ್ರೆಸ್ ನ ಆನಂದ್ ಶರ್ಮಾ, ಅಜೇಯ್ ಮಕೇನ್, ಸಿಪಿಐನ ಡಿ.ರಾಜ, ಜೆಡಿಯುನ ಕೆ.ಸಿ ತ್ಯಾಗಿ, ಜೆಎನ್ ಯು ವಿದ್ಯಾರ್ಥಿಗಳಾದ ಕನ್ಹಯ್ಯಾ ಮತ್ತು ಉಮರ್ ಖಲೀದ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಕನ್ಹಯ್ಯಾ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ಇವರೆಲ್ಲ ಪ್ರತಿಭಟನೆ ನಡೆಸಿದ್ದರು. ಆ ಮೂಲಕ ದೇಶದ್ರೋಹದಲ್ಲಿ ಇವರೂ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply