ಒಳ ಉಡುಪಿನಲ್ಲಿ ಪರೀಕ್ಷೆ ಬರೆದರು, ಲಂಕಾ ಮಣಿಸಿ ಭಾರತ ಫೈನಲ್ ಗೆ, ಸಂಸತ್ ಕಲಾಪ ನುಂಗಿದ ಕಾರ್ತಿ, ಮನು ಬಳಿಗಾರ್ ಕಸಾಪ ಅಧ್ಯಕ್ಷ…

ಡಿಜಿಟಲ್ ಕನ್ನಡ ಟೀಮ್

ನಕಲು ತಡೆಯಲು ಅಭ್ಯರ್ಥಿಗಳ ಬಟ್ಟೆ ಬಿಚ್ಚಿಸಿ, ಕೇವಲ ಒಳ ಉಡುಪಿನಲ್ಲಿ ಬಯಲಲ್ಲಿ ಕೂರಿಸಿ ಸೇನೆ ನೇಮಕ ಪರೀಕ್ಷೆ ಬರೆಸಿದ ಘಟನೆ ಬಿಹಾರದ ಮುಮುಜಾಫರಪುರ್ ನಲ್ಲಿ ನಡೆದಿದೆ. ಪ್ರತಿ ಅಭ್ಯರ್ಥಿ ತಪಾಸಣೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸೇನೆ ಅಧಿಕಾರಿಗಳು ಅನುಸರಿಸಿದ ಈ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಪಾಟ್ನಾ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆಗೆ ನಿರ್ಧರಿಸಿದೆ. ಸುಮಾರು 1,200 ಮಂದಿ ಅಭ್ಯರ್ಥಿಗಳು ಭಾರತೀಯ ಸೇನೆಯ ಗುಮಾಸ್ತ ಹುದ್ದೆಗೆ ಈ ರೀತಿ ಪರೀಕ್ಷೆ ಬರೆದಿದ್ದಾರೆ.

ಸಂಸತ್ ಕಲಾಪ ನುಂಗಿದ ಕಾರ್ತಿ

ಬಜೆಟ್ ನಂತರ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪದಲ್ಲಿ ಮಂಗಳವಾರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿರುದ್ಧ ಟೀಕೆಗಳು ವ್ಯಕ್ತವಾಗುವ ನಿರೀಕ್ಷೆ ಇತ್ತು. ಆದರೆ, ಅಲ್ಲಿ ನಡೆದದ್ದೇ ಬೇರೆ.  ಯುಪಿಎ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಪಿ.ಚಿದಂಬರಮ್ ಪುತ್ರ ಕಾರ್ತಿ ಚಿದಂಬರಮ್ ಅವರ ವಿದೇಶದಲ್ಲಿ ರಿಯಲ್ ಎಸ್ಟೇಟ್ ಅವ್ಯವಹಾರ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿರುವುದನ್ನು ಅಸ್ತ್ರವಾಗಿ ಬಳಸಿಕೊಂಡ ಎಐಎಡಿಎಂಕೆ ಸದಸ್ಯರು, ಸದನದ ಭಾವಿಗಿಳಿದು ಪ್ರತಿಭಟಿಸಿದರು. ಅಲ್ಲದೆ ಪಿ.ಚಿದಂಬರಮ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಉಭಯ ಸದನಗಳ ಕಲಾಪವನ್ನು ಸಾಕಷ್ಟು ಬಾರಿ ಮುಂದೂಡಿದರೂ ಪ್ರತಿಭಟನೆ ನಿಲ್ಲಲಿಲ್ಲ.

ಫೈನಲ್ ಗೆ ಟೀಂ ಇಂಡಿಯಾ

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಆಕರ್ಷಕ ದಾಳಿ ಸಂಘಟಿಸಿದ ಭಾರತ ಏಷ್ಯಾಕಪ್ ಟಿ-20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ ಜಯಗಳಿಸಿ, ಫೈನಲ್ ತಲುಪಿದೆ.

ಬಾಂಗ್ಲಾದ ಢಾಕದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ಗೆ 139 ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಭಾರತ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ, ಗೆಲವು ಪಡೆಯಿತು. ಭಾರತ ತಂಡದ ಪರ ವಿರಾಟ್ ಕೊಯ್ಲಿ ಅಜೇಯ 56 (47), ಯುವರಾಜ್ ಸಿಂಗ್ 35 (18) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಲಿಂಗ್ ನಲ್ಲಿ ಬೂಮ್ರಾ ಪಾಂಡ್ಯ, ಅಶ್ವಿನ್ ತಲಾ 2, ನೆಹ್ರಾ 1 ವಿಕೆಟ್ ಪಡೆದರು. ಕೊಯ್ಲಿ ಪಂದ್ಯಶ್ರೇಷ್ಠ ಎನಿಸಿದರು.

ಮನು ಬಳಿಗಾರ್ ಕಸಾಪ  ಅಧ್ಯಕ್ಷ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ಡಾ.ಮನು ಬಳಿಗಾರ್ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ ಮನು ಬಳಿಗಾರ್ 60,839 ಮತಗಳನ್ನು ಪಡೆಯುವ ಮೂಲಕ ದಾಖಲೆಯ ಜಯ ಗಳಿಸಿದ್ದಾರೆ. ಇವರ ಸಮೀಪಸ್ಪರ್ಧಿ ಜಯಪ್ರಕಾಶ್ ಗೌಡ 22,908 ಮತ ಪಡೆದಿದ್ದಾರೆ. ಮನು ಬಳಿಗಾರ್ ಪರಿಷತ್ತಿನ 25ನೇ ಅಧ್ಯಕ್ಷರಾಗಿದ್ದಾರೆ.

ಟಿವಿ ನಿರೂಪಕಿಗೆ 2000 ಬೆದರಿಕೆ ಕರೆ

ಮಹಿಷಾಸುರ ಜಯಂತಿ ಬಗ್ಗೆ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಹಿಂದೂ ದೇವತೆ ದುರ್ಗೆಯನ್ನು ಲೈಂಗಿಕ ಕಾರ್ಯಕರ್ತೆ ಎಂದು ಬಿಂಬಿಸಿದ ಏಷಿಯಾನೆಟ್ ನ್ಯೂಸ್ ಚಾನೆಲ್ ಸಹಾಯಕ ಸಂಪಾದಕಿ ಸಿಂಧು ಸೂರ್ಯಕುಮಾರ್ ಅವರಿಗೆ 2000ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಸಿಂಧು ದೂರು ಅಧರಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಇಂಡೋ-ಪಾಕ್ ಪಂದ್ಯ ಶಿಫ್ಟ್?

ಪಾಕಿಸ್ತಾನ ತಂಡಕ್ಕೆ ಸೂಕ್ತ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಿಳಿಸಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯ ಸ್ಥಳಾಂತರವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್, ಟಿ20 ವಿಶ್ವಕಪ್ ಟೂರ್ನಿಗೆ ತಂಡ ಕಳುಹಿಸಲು ಸಿದ್ಧ. ಆದರೆ, ಭಾರತ ಸರ್ಕಾರ ತಂಡಕ್ಕೆ ಭದ್ರತೆ ಭರವಸೆ ನೀಡಬೇಕು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ‘ಅಂತಿಮ ಕ್ಷಣದಲ್ಲಿ ಪಾಕಿಸ್ತಾನ ತಂಡಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹಿಮಾಚಲ ಸರಕಾರ ಹೇಳುತ್ತಿರುವುದು ಸರಿಯಲ್ಲಿ. ಅಸ್ಸಾಂ ಸರಕಾರಕ್ಕೆ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಪಾಕ್ ಅಥ್ಲೀಟ್ ಗಳಿಗೆ ಭದ್ರತೆ ನೀಡಲು ಸಾಧ್ಯವಾಗಿರುವಾಗ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ. ಕ್ರೀಡೆ ವಿಷಯದಲ್ಲಿ ರಾಜಕೀಯ ಸಲ್ಲದು’ ಎಂದಿದ್ದಾರೆ.

ಡಿಡಿಡಿ ಗೆ ದ್ರಾವಿಡ್ ಮಾರ್ಗದರ್ಶನ

ಈ ಬಾರಿಯ ಐಪಿಎಲ್ ಟಿ20 ಟೂರ್ನಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾರ್ಗದರ್ಶಕರಾಗಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಅಮಾನತುಗೊಂಡ ಹಿನ್ನೆಲೆಯಲ್ಲಿ ದ್ರಾವಿಡ್ ಈ ಬಾರಿ ಯಾವ ತಂಡಕ್ಕೆ ಮಾರ್ಗದರ್ಶನ ನೀಡುವರು ಎಂಬ ಕುತೂಹಲ ಅಭಿಮಾನಿಗಳದ್ದಾಗಿತ್ತು. ಅಲ್ಲದೆ ಆರ್ ಸಿಬಿ ತಂಡಕ್ಕೆ ಆಗಮಿಸಲಿ ಎಂಬ ಹಂಬಲವೂ ಇತ್ತು. ಆದರೆ, ಡೆಲ್ಲಿ ತಂಡ ದ್ರಾವಿಡ್ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರು ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಡೆಲ್ಲಿ ಡೇರ್ ಡೆವಿಲ್ಸ್ ದ್ರಾವಿಡ್ ಆಗಮನದಿಂದ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆಯಿದೆ.

 

Leave a Reply