ಕಪ್ಪುರಂಧ್ರ ಸಿದ್ಧಾಂತಕ್ಕೆ ಹೊಸ ಐಡಿಯಾ ಕೊಟ್ಟ ಭಾರತದ ಯುವತಿ ಸತ್ಪರ್ಣ ಸದ್ಯದಲ್ಲೇ ನಾಸಾ ಸಂಶೋಧಕಿ..!

ಡಿಜಿಟಲ್ ಕನ್ನಡ ಟೀಮ್

ಸತ್ಪರ್ಣಾ ಸಾಧನಾಗಾಥೆ ಸುಳ್ಳು, ನಾಸಾ ಸ್ಪಷ್ಟನೆ

ಸ್ಸಾರಿ… ಎಲ್ಲರೂ ಪಿಗ್ಗಿ ಬಿದ್ದಂತೆ ನಾವೂ ಮೋಸ ಹೋದೆವು.

ಪಶ್ಚಿಮ ಬಂಗಾಳ ಮೂಲದ 18 ವರ್ಷದ ಸತ್ಪರ್ಣ ಮುಖರ್ಜಿ ಎಂಬ 12 ನೇ ತರಗತಿ ವಿದ್ಯಾರ್ಥಿಗೆ ನಾಸಾ ವಿದ್ಯಾರ್ಥಿ ವೇತನದೊಂದಿಗೆ ತರಬೇತಿ ನೀಡಲಿದೆ ಮತ್ತು ಆಕೆ ಪದವಿ, ಉನ್ನತ ಪದವಿ ಹಾಗೂ ಪಿಹೆಚ್ ಡಿಯನ್ನು ಅಲ್ಲೆ ಮುಂದುವರೆಸಲಿದ್ದಾರೆ ಎಂದು ವರದಿಯಾಗಿತ್ತು. ಪ್ರಮುಖ ಸುದ್ದಿಸಂಸ್ಥೆ ಹಾಗೂ ಪತ್ರಿಕೆಗಳಲ್ಲಿ ವರದಿಯಾದಂತೆ ಡಿಜಿಟಲ್ ಕನ್ನಡದಲ್ಲೂ ಈ ಬಗ್ಗೆ ಬರಹ ಪ್ರಕಟವಾಗಿತ್ತು.

ಆದರೆ ಭಾರತೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾದ ಈ ವಿದ್ಯಮಾನವನ್ನು ನಾಸಾ ಸಂಸ್ಥೆ ನಿರಾಕರಿಸಿದೆ. ಭಾರತೀಯ ಮೂಲದ ವಿದ್ಯಾರ್ಥಿಗೆ ಇಂಟರ್ನ್ ಶಿಪ್ ನಂತಹ ಯಾವುದೇ ಅವಕಾಶ ನೀಡಿಲ್ಲ ಮತ್ತು ಗೊಡ್ಡರ್ಡ್ ಇಂಟರ್ನ್ ಶಿಪ್ ಎಂಬ ಯಾವುದೇ ಕಾರ್ಯಕ್ರಮ ನಮ್ಮಲ್ಲಿ ಇಲ್ಲ ಎಂದು ಸಂಸ್ಥೆಯ ಸಾರ್ವಜನಿಕ ವ್ಯವಹಾರಗಳ ತಜ್ಞೆ ಲೆಸ್ಲಿ ಮಾಕಾರ್ಥಿ ತಿಳಿಸಿದ್ದಾರೆ.

 

ಗುರುತ್ವಾಕರ್ಷಣ ಅಲೆ ಹಾಗೂ ಕಪ್ಪುರಂಧ್ರಗಳ ಕುರಿತು ಇತ್ತೀಚೆಗೆ ವಿಜ್ಞಾನಿಗಳ ಸಂಶೋಧನೆ, ಅದರಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರ ಎನ್ನುವುದು ಗಮನಾರ್ಹ ಸಂಗತಿ. ಕೇವಲ ವಿಜ್ಞಾನಿಗಳಷ್ಟೇ ಅಲ್ಲ, ಈ ವಿಷಯದಲ್ಲಿ ಯುವ ವಿದ್ಯಾರ್ಥಿಗಳು ಹೊಸ ಪರಿಕಲ್ಪನೆಗಳ ಹುಡುಕಾಟ ನಡೆಸುತ್ತಿರುವುದು ಕೂಡ ವಿಶೇಷ. ಈಗ ಅಂತಹದೊಂದು ಪ್ರಕ್ರಿಯೆ ನಾಸಾ ವಿಜ್ಞಾನಿಗಳ ಚಿತ್ತ ಆಕರ್ಷಿಸಿದೆ. ಈ ಪರಿಕಲ್ಪನೆ ನೀಡಿದ್ದು ಯಾರೋ ವಿಜ್ಞಾನಿಯಲ್ಲ, ಬದಲಿಗೆ ಭಾರತದ 18 ವರ್ಷದ ಯುವ ವಿದ್ಯಾರ್ಥಿನಿ!

ಯೆಸ್, ಈಕೆಯ ಹೆಸರು ಸತ್ಪರ್ಣ ಮುಖರ್ಜಿ. ಪಶ್ಚಿಮ ಬಂಗಾಳ ಮೂಲದವರು. ಈಕೆಯ ಚಿಂತನೆ ಮೆಚ್ಚಿರುವ ನಾಸಾ, ಪ್ರತಿಷ್ಠಿತ ಸ್ಕಾಲರ್ ಶಿಪ್ ನೀಡಿದೆ. ಅಲ್ಲದೇ ನಾಸಾ ಕೇಂದ್ರದಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ.

ಭಾರತದಲ್ಲಿ ಫೆ.28 ರಾಷ್ಟ್ರೀಯ ವಿಜ್ಞಾನ ದಿನ. ಈ ಸಂದರ್ಭದಲ್ಲಿ ನಾಸಾ ವಿಜ್ಞಾನಿಗಳ ಗಮನ ಸೆಳೆದ ಸತ್ಪರ್ಣ ಕಪ್ಪುರಂಧ್ರದ ಸಿದ್ಧಾಂತ ಕುರಿತು ಹೊಂದಿರುವ ಪರಿಕಲ್ಪನೆ ಏನು? ಈಕೆಯ ಮುಂದಿನ ಹಾದಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪಶ್ಚಿಮ ಬಂಗಾಳ ಕೊಲ್ಕತ್ತಾ ಸಮೀಪದ ಕಮುದಿನಿ ಎಂಬ ಹಳ್ಳಿಯ ಸತ್ಪರ್ಣ 12 ನೇ ತರಗತಿ ವಿದ್ಯಾರ್ಥಿನಿ. ‘ಕಪ್ಪುರಂಧ್ರ ಸಿದ್ಧಾಂತ ಹಾಗೂ ಟೈಮ್ ಮಷಿನ್ ತಯಾರಿಕೆಗೆ ಅದರ ಬಳಕೆ ಹೇಗೆ’ ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ತಾಣದಲ್ಲಿ ತಿಳಿಸಿದ್ದರು. ಈಕೆಯ ಪರಕಲ್ಪನೆಯಿಂದ ಪ್ರಭಾವಿತರಾದ ಕೆಲವರು ಈ ಮಾಹಿತಿಯನ್ನು ನಾಸಾದ ಅಧಿಕೃತ ಪೇಜ್ ನಲ್ಲಿ ಪ್ರಕಟಿಸುವಂತೆ ಸಲಹೆ ಮಾಡಿದರು. ಇದನ್ನು ಪಾಲಿಸಿದ ಸತ್ಪರ್ಣ ಇದೀಗ ನಾಸಾ ವಿಜ್ಞಾನಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಪ್ರಸ್ತುತ ಯುವ ಜನಾಂಗ ಕೇವಲ ವಿದ್ಯಾಭ್ಯಾಸ ಮಾತ್ರವಲ್ಲದೇ ಸೈದ್ಧಾಂತಿಕವಾಗಿಯೂ ಮುಂದಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯುತ್ತಿರುವ ಭಾರತೀಯರು ಭವ್ಯ ಭವಿಷ್ಯದ ಆಶಾಕಿರಣಗಳಾಗಿದ್ದಾರೆ. ಇಂತಹ ಪ್ರತಿಭಾವಂತರು ದೇಶದ ಮೂಲೆ ಮೂಲೆಗಳಲ್ಲಿ ಎಲೆಮರೆ ಕಾಯಿಗಳಂತಿದ್ದಾರೆ. ಇವರಿಗೆ ಸೂಕ್ತ ವೇದಿಕೆ ಅಗ್ಯತವಿದೆ. ಸತ್ಪರ್ಣ ಪ್ರತಿಭೆಗೆ ಸಾಮಾಜಿಕ ಜಾಲ ತಾಣ ತಿರುವು ನೀಡಿದ್ದು ಪ್ರಶಂಸನೀಯ.

ಇನ್ನು ಮುಂದೆ ಸತ್ಪರ್ಣ ಅವರ ಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ನಾಸಾ ವಹಿಸಿಕೊಳ್ಳಲಿದೆ. ಮುಂದೆ ಲಂಡನ್ ನ ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ ಬಾಹ್ಯಾಕಾಶ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಸತ್ಪರ್ಣ ನಿರ್ಧರಿಸಿದ್ದಾರೆ. ಇದರ ಜತೆಗೆ ಗೊಡ್ಡಾರ್ಡ್ ಇಂಟರ್ನ್ ಶಿಫ್ ಅಡಿ ಸಂಶೋಧಕಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಲಂಡನ್ ನ ನಾಸಾ ಕೇಂದ್ರದಲ್ಲಿ ‘ಭೂವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮ’ದಡಿ (ಅರ್ಥ್ ಸೈನ್ಸ್ ಅಂಡ್ ಟೆಕ್ನಾಲಜಿ ಡೆವಲಪ್ ಮೆಂಟ್ ಪ್ರೊಗ್ರಾಮ್) ಸಂಶೋಧಕಿಯಾಗಿ ಕಾರ್ಯನಿರ್ವಹಿಸುವರು. ವಿದ್ಯಾಭ್ಯಾಸ ಖರ್ಚು ಜತೆಗೆ ಉತ್ತಮ ವೇತನವನ್ನೂ ನೀಡಲಿದೆ. ಸದ್ಯ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಸತ್ಪರ್ಣ, ಪರೀಕ್ಷೆ ನಂತರ ವಿದೇಶಕ್ಕೆ ತೆರಳಲಿದ್ದಾರೆ. ಈ ಮಹತ್ವದ ಯೋಜನೆಗೆ ಸಂಶೋಧಕಿಯಾಗಿ ಆಯ್ಕೆಯಾದ ಅತ್ಯಂತ ಕಿರಿಯ ಭಾರತೀಯಳು ಎಂಬ ಹೆಗ್ಗಳಿಕೆ ಇವರದು. ಈಕೆಯ ಈ ಸಾಧನೆ ದೇಶದ ಇತರೆ ಪ್ರತಿಭೆಗಳಿಗೆ ಸ್ಫೂರ್ತಿಸೆಲೆ. ತನ್ನ ಪರಿಕಲ್ಪನೆ ಸಾಕಾರದಲ್ಲಿ ಸತ್ಪರ್ಣ ಯಶಸ್ವಿಯಾಗಲಿ. ಇಂತಹ ನೂರಾರು ವಿಜ್ಞಾನಿಗಳು ಭಾರತದಿಂದ ಹೊರಹೊಮ್ಮಲಿ.

Leave a Reply