ಚರ್ಚ್ ಪಾದ್ರಿಗಳ ಲೈಂಗಿಕ ವಿಕೃತಿಯ ನಿಜಕತೆ, ಡಿಕ್ಯಾಪ್ರಿಯೊ ಹೊಗಳುತ್ತ ‘ಸ್ಪಾಟ್ ಲೈಟ್’ ಕಡೆಗಣಿಸಲಾದೀತೇ?

 

ಚೈತನ್ಯ ಹೆಗಡೆ

ಈ ಬಾರಿಯ ಆಸ್ಕರ್ ನಲ್ಲಿ ಲಿಯಾನಾರ್ಡೋ ಡಿಕ್ಯಾಪ್ರಿಯೊ ಕೊನೆಗೂ ಉತ್ತಮ ನಟ ಎಂಬ ಪ್ರಶಸ್ತಿ ಪಡೆಯುವುದಕ್ಕೆ ಸಫಲನಾದ ಎಂಬ ಬಗ್ಗೆಯೇ ಹೆಚ್ಚು ಸುದ್ದಿಯಾಗಿದೆ. ಅದು ಸಹಜ ಕೂಡ. ಹಲವು ವರ್ಷಗಳಿಂದ ಡಿಕ್ಯಾಪ್ರಿಯೊ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ಈಡೇರಿದ ಸಂದರ್ಭದಲ್ಲಿ ಈ ಸಡಗರ ಸಹಜವೇ.
ಆದರೆ, ಈ ಬಾರಿ ಆಸ್ಕರ್ ನಲ್ಲಿ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ‘ಸ್ಪಾಟ್ ಲೈಟ್’. ಬೆಂಗಳೂರಿನ ಒಂದೆರಡು ಸ್ಕ್ರೀನ್ ಗಳಲ್ಲಿ ಈಗಲೂ
ಲಭ್ಯವಿರುವ ಈ ಸಿನಿಮಾ ಸೀರಿಯಸ್ ಸಿನಿಹೋಕರಿಗೆ ಅನನ್ಯ ಆನಂದ ನೀಡುವ ಕೃತಿ. ಅದರಲ್ಲೂ ಪತ್ರಿಕಾ ವಲಯದ ಆಸಕ್ತರು ಮಿಸ್ ಮಾಡದೇ ನೋಡಿಕೊಳ್ಳಬೇಕಾದ ಸಿನಿಮಾ.

ಸ್ಥಳೀಯ ಚರ್ಚ್ ಪುರೋಹಿತರು ಏನೂ ಅರಿಯದ ಮಕ್ಕಳನ್ನು ನಾಜೂಕಾಗಿ ನಂಬಿಸಿ ತಮ್ಮ ಲೈಂಗಿಕ ಆಟಗಳಿಗೆ ಬಳಸಿಕೊಂಡಿದ್ದನ್ನು 2002ರಲ್ಲಿ ‘ದ ಬೋಸ್ಟನ್ ಗ್ಲೋಬ್’ ಪತ್ರಿಕೆ ಹೊರಗಳೆದಿತ್ತು. ಆ ಪತ್ರಿಕೆಯ ತನಿಖಾ ವರದಿಗಾರಿಕೆಯ ತಂಡದ ಹೆಸರೇ ಸ್ಪಾಟ್ ಲೈಟ್. ಚರ್ಚ್, ವಕೀಲರು ಎಲ್ಲ ಸೇರಿಕೊಂಡು ಮುಚ್ಚಿಹಾಕಿಬಿಟ್ಟಿದ್ದ ಪ್ರಕರಣಗಳನ್ನು ಹೊರತೆಗೆಯುವುದಕ್ಕೆ ಬೋಸ್ಟನ್ ಗ್ಲೋಬ್ ನ ಸ್ಪಾಟ್ ಲೈಟ್ ತಂಡವು ವಹಿಸಿದ ಶ್ರಮ, ಅದು ಕೈಗೊಂಡ ಅಧ್ಯಯನಗಳನ್ನು ತುಂಬ ಚೆನ್ನಾಗಿ ಕಟ್ಟಿಕೊಡುತ್ತದೆ ಈ ಸಿನಿಮಾ.

ಪತ್ರಿಕೋದ್ಯಮದ ಕತೆಯನ್ನು ಎತ್ತಿಕೊಂಡು ಸಿನಿಮಾ ಮಾಡುವವರು ಹೆಚ್ಚಿನ ಸಂದರ್ಭಗಳಲ್ಲಿ ಪತ್ರಕರ್ತನನ್ನು ಹೀರೋ ಆಗಿಸಿ ಮೆರೆಸುತ್ತಾರೆ, ಇಡೀ ಪತ್ರಿಕೋದ್ಯಮಕ್ಕೆ ರೋಮ್ಯಾಂಟಿಕ್ ಬಣ್ಣವೊಂದನ್ನು ಮೆತ್ತುತ್ತಾರೆ. ಇಲ್ಲವೇ ಪತ್ರಕರ್ತ ಪಾತ್ರಕ್ಕೊಂದು ಜುಬ್ಬಾ ತೊಡಿಸಿ, ಆತನನ್ನು ಮಹಾನ್ ಆದರ್ಶವಾದಿಯನ್ನಾಗಿಸಿ ಅನ್ಯಾಯದ ವಿರುದ್ಧ ಕನಸಿನಲ್ಲೂ ಎದ್ದುಕೂರುವ ಅತಿರಂಜಕತೆ ಹಾಗೂ ಜತೆಯಲ್ಲೇ ಆತನನ್ನು ವ್ಯವಸ್ಥೆಯ ಬಲಿಪಶುವಾಗಿಸಿ ಅನುಕಂಪದ ಬೆಳೆ ತೆಗೆಯುವ ಸಿದ್ಧಸೂತ್ರಗಳನ್ನು ಅನುಸರಿಸುತ್ತಾರೆ. ಇನ್ನು ನ್ಯೂಸ್ ರೂಮನ್ನಂತೂ ಇನ್ನಿಲ್ಲದ ನಾಟಕೀಯತೆ ತುಂಬಿ ತೋರಿಸುವುದು ಮಾಮೂಲು.

ಸ್ಪಾಟ್ ಲೈಟ್ ಇವೆಲ್ಲ ಕ್ಲೀಷೆಗಳನ್ನೂ ಮೀರಿದೆ. ಈಗೆರಡು ದಶಕಗಳ ಹಿಂದಿನ ಸುದ್ದಿಮನೆ ಚಿತ್ರಣವೇ ಅಲ್ಲಿದ್ದರೂ, ನೈಜ ಪತ್ರಿಕೋದ್ಯಮ ಬಿಂಬಿತವಾಗಿದೆ. ನ್ಯೂಸ್ ಅಂತಂದ್ರೆ ನಾರ್ತ್, ಈಸ್ಟ್… ಬ್ಲಾ ಬ್ಲಾ ಬ್ಲಾ ಅಂತ ಉಪನ್ಯಾಸ ಕೊಡುವ ಹೀರೋಗಳು ಇಲ್ಲಿಲ್ಲ. ಬೋಸ್ಟನ್ ಗ್ಲೋಬ್ ಗೆ ಹೊಸದಾಗಿ ಸಂಪಾದಕನಾಗಿ ಬರುವ ಮಾರ್ಟಿ ಬರಾನ್ ಗೆ ಪತ್ರಿಕೆಯ ಇಳಿಯುತ್ತಿರುವ ಪ್ರಸರಣ ಸಂಖ್ಯೆಯ ಬಗ್ಗೆ ಆತಂಕವಿದೆ. ಸಂಪಾದಕೀಯ ಸಭೆಯಲ್ಲಿ ಪತ್ರಿಕೆಯ ಅಂಕಣ ಬರಹವೊಂದನ್ನು ಉಲ್ಲೇಖಿಸಿ, ಚರ್ಚ್ ಗಳ ಮೇಲಿರುವ ಅನುಮಾನವನ್ನೇ ಬೆಂಬತ್ತಿ ನಾವೇಕೆ ತನಿಖಾ ವರದಿ ಮಾಡಬಾರದು ಅಂತ ಕೇಳ್ತಾನೆ. ಹೀಗೆ ಪ್ರಚೋದಿಸುವಾಗಲೂ ಆತನಿಗೆ ಗೊತ್ತು, ಪತ್ರಿಕೆಯ ಓದುಗರ ಬೇಸ್ ಇರೋದೆ ರೋಮನ್ ಕ್ಯಾಥೊಲಿಕ್ ಪಂಗಡದಲ್ಲಿ. ಆ ಸಮುದಾಯದ ಸಂಸ್ಥೆಯನ್ನು ಗುರಿ ಮಾಡಿದರೆ ಅವರೆಲ್ಲ ಮುನಿಸಿಕೊಂಡಾರು ಅಂತ. ಅಷ್ಟರ ನಡುವೆಯೂ ಆತ ತಣ್ಣಗೆ ರಿಸ್ಕ್ ತಗೋಳೋದು, ಈತನ ಆಶಯಕ್ಕೆ ತಕ್ಕಂತೆ ಸ್ಪಾಟ್ ಲೈಟ್ ತಂಡ ಕೆಲಸ ಮಾಡುವ ಪರಿ ಇವೆಲ್ಲವನ್ನೂ ನೀವು ತೆರೆಯ ಮೇಲೆ ನೋಡಿಯೇ ಆಸ್ವಾದಿಸಬೇಕು.

ಇವನ್ನೆಲ್ಲ ಓದುತ್ತಲೇ…

ವಾವ್.. ಇದರಲ್ಲೇನೋ ಕಾರ್ ಚೇಸ್ ಗಳಿರುತ್ತವೆ, ಪಿಸ್ತೂಲುಗಳ ಗರ್ಜನೆಗಳಿರುತ್ತವೆ ಅಂತೆಲ್ಲ ಲೆಕ್ಕ ಹಾಕಿದರೆ…. ಸ್ಸಾರಿ, ಇದು ನಿಮ್ಮ ಜಾಯಮಾನದ ಸಿನಿಮಾ ಅಲ್ಲ. ಸತ್ಯವನ್ನು ಬಗೆಯುತ್ತ ಹೋಗುವ ಪತ್ರಕರ್ತ ಪಾತ್ರಗಳ ತರ್ಕ, ಅಧ್ಯಯನ, ಹುಡುಕಾಟಗಳೇ ಇಡಿ ಇಡೀ ಚಿತ್ರವನ್ನು ಆವರಿಸಿಕೊಂಡಿವೆ. ಇಲ್ಲೆಲ್ಲೂ ಅಡ್ಡ ಬಂದು ಬೊಬ್ಬಿರಿಯುವ ವಿಲನ್ ಇಲ್ಲ. ಅವಾಜು ಹಾಕುವ ಹೀರೋನೂ ಇಲ್ಲ. ಹಲವು ವರ್ಷಗಳ ಹಿಂದಿನ ಪತ್ರಿಕಾ ವರದಿಯ ಚೂರುಗಳನ್ನೆಲ್ಲ ಇಟ್ಟುಕೊಂಡು ಕನೆಕ್ಟ್ ದ ಡಾಟ್ ಕೆಲಸಕ್ಕೆ ತೊಡಗಿಸಿಕೊಳ್ಳುವ (ಇಂಟರ್ನೆಟ್ ಪ್ರಸಿದ್ಧಿಗೆ ಬಾರದ ದಿನಗಳು), ವೃತ್ತಿಯನ್ನು ಉಸಿರಿನಷ್ಟೇ ಸರಾಗವಾಗಿ ತೆಗೆದುಕೊಂಡಿರುವ ಪತ್ರಕರ್ತರು ಇಲ್ಲಿ ಕಾಣಸಿಗುತ್ತಾರೆ. ಚರ್ಚ್ ಗಳು ಸಂತ್ರಸ್ತರ ಪರ ವಕೀಲರ ಮೇಲೆ ಒತ್ತಡ ಹೇರಿ, ಪ್ರಕರಣಗಳು ಅಲ್ಲಲ್ಲೇ ಸೆಟ್ಲ್ ಆಗುವಂತೆ ನೋಡಿಕೊಂಡಿದ್ದವಲ್ಲ… ಅಂಥ ವಕೀಲರನ್ನು ಬೆಂಬತ್ತಿ, ಪುಸಲಾಯಿಸಿ, ಸ್ನೇಹ ಸಂಪಾದಿಸಿ ಅಲ್ಲಿಂದ ಅಮೂಲ್ಯ ಮಾಹಿತಿಗಳನ್ನು ಕಲೆಹಾಕುವ ಪತ್ರಕರ್ತ ಹುಡುಗ- ಹುಡುಗಿಯರ ಉತ್ಸಾಹ ನಿಮ್ಮನ್ನು ಚಕಿತರನ್ನಾಗಿಸೀತು. ನೀವು ಪತ್ರಕರ್ತರಾಗಿಯೋ, ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿಯೋ ಈ ಸಿನಿಮಾವನ್ನು ನೋಡಿದ್ದೇ ಆದರೆ ಒಂದಿಷ್ಟು ಗಿಲ್ಟ್ ಕಾಡೀತು. ಏಕೆಂದರೆ, ಗದ್ದಲ- ವಿವಾದ- ಚರ್ಚೆಗಳೇ ಪತ್ರಿಕೋದ್ಯಮಕ್ಕೆ ರೇಟಿಂಗ್ ತಂದುಕೊಡುವಂಥ ಕಾಲಘಟ್ಟದಲ್ಲಿ ನಾವು ನಿಂತಿರುವಾಗ, ಬೋಸ್ಟನ್ ಗ್ಲೋಬ್ ನ ಈ ಸ್ಪಾಟ್ ಲೈಟ್ ಎಂಬ ತನಿಖಾ ತಂಡವು ತಿಂಗಳುಗಳನ್ನು ವ್ಯಯಿಸಿ ಒಂದು ಸರಣಿ ವರದಿ ಮಾಡುತ್ತದೆ ಅನ್ನೋದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೇನೋ… ಅಂಥ ಪತ್ರಿಕೋದ್ಯಮದಿಂದ ನಾವು ದೂರ ಬಂದುಬಿಟ್ಟಿದ್ದೇವಾ ಅಂತ ಮನಸ್ಸು ಪ್ರಶ್ನಿಸದೇ ಬಿಡೋದಿಲ್ಲ.

ಸ್ಟೋರಿಯನ್ನು ಸಮಗ್ರವಾಗಿ ಸಿದ್ಧಪಡಿಸಿ ಪ್ರಿಂಟಿಗೆ ಹಾಕಬೇಕು ಎಂದುಕೊಳ್ಳುವಾಗಲೇ ಬರುವ ವಿಘ್ನಗಳು, ಎದುರಾಳಿಗೆ ಈ ಸ್ಟೋರಿ ಸಿಕ್ಕಿಬಿಟ್ಟೀತಾ ಅಂತ ತಲ್ಲಣಗೊಳ್ಳುವ ಮನಸ್ಸು ಇವೆಲ್ಲ ಪತ್ರಿಕೋದ್ಯಮದ ರುಚಿ ಗೊತ್ತಿದ್ದವರಿಗೆ ದಟ್ಟವಾಗಿ ಕಾಡೀತು. 2001ರಲ್ಲಿ ಅವಳಿ ಕಟ್ಟಡದ ಮೇಲೆ ಉಗ್ರ ದಾಳಿ ಆಗುತ್ತಲೇ ಎಲ್ಲ ಮಾಧ್ಯಮಗಳೂ ದೀರ್ಘಕಾಲಕ್ಕೆ ಅತ್ತ ಹೊರಳಿಬಿಡುತ್ತವೆ. ಸ್ಪಾಟ್ ಲೈಟ್ ನ ಸಿದ್ಧಗೊಂಡ ತನಿಖಾ ವರದಿ ಕಡತದಲ್ಲೇ ಕೂರುವಂತಾಗುತ್ತದೆ. ಆಗ ಇವರಿಗೆ ಸಂದರ್ಶನ ಕೊಟ್ಟಿದ್ದ ಸಂತ್ರಸ್ತರೆಲ್ಲ ಇನ್ನೂ ಏಕೆ ಬಂದಿಲ್ಲ, ನಮ್ಮ ಕತೆ ಪ್ರಕಟಿಸದೇ ಮೋಸ ಮಾಡ್ತಿದೀರಾ ಎಂಬರ್ಥದಲ್ಲಿ ಆಕ್ರೋಶ- ಅಳಲು ತೋಡಿಕೊಳ್ಳತೊಡಗುತ್ತಾರೆ. ಇಂಥ ಸಂದರ್ಭದಲ್ಲಿ, ಸ್ಪಾಟ್ ಲೈಟ್ ತಂಡ ತನ್ನ ತನಿಖೆ ಹಾದಿಯಲ್ಲಿ ಮೆರೆಯುವ ಸಂವೇದನೆ ಇದೆಯಲ್ಲ… ಅದು ತುಂಬ ಮುಖ್ಯ. ಕೇವಲ ಸ್ಫೋಟಕ ಮಾಹಿತಿ ತುಂಬಿಸಿಕೊಂಡು ಬಂದರಾಯಿತು ಎಂಬುದಷ್ಟೇ ಅವರ ಆದ್ಯತೆಯಾಗಿ ಉಳಿಯುವುದಿಲ್ಲ. ಚಿಕ್ಕಂದಿನಲ್ಲಿ ತಮ್ಮ ಮೇಲಾದ ಲೈಂಗಿಕ ಶೋಷಣೆ ಹೇಳಿಕೊಳ್ಳುತ್ತ, ಅದಾಗ ಬೆಳೆದು ದೊಡ್ಡವರಾಗಿದ್ದವರೂ ಮಕ್ಕಳಂತೆ ಅತ್ತುಬಿಡುತ್ತಾರೆ. ಆಗೆಲ್ಲ ಸಮಾಧಾನಿಸುವ ಆಪ್ತ ಸಲಹೆಗಾರರಂತೆ ಈ ಸುದ್ದಿಗಾರರು ನಡೆದುಕೊಳ್ಳುತ್ತಾರೆ.

ಕೊನೆಗೆ 2002ರಲ್ಲಿ ಬೋಸ್ಟನ್ ಗ್ಲೋಬ್ ತನಿಖಾ ವರದಿ ಪ್ರಕಟಿಸಿದಾಗ ದೊಡ್ಡ ಸಂಚಲನವೇ ಆಗುತ್ತದೆ. ಅಲ್ಲಿಯವರೆಗೆ ವಿಷಯ ಗೊತ್ತಿದ್ದೂ ಚರ್ಚ್ ವಿಷಯದಲ್ಲಿ ಹಿಂಜರಿಕೆ ಇಟ್ಟುಕೊಂಡವರೆಲ್ಲ ಮುಕ್ತವಾಗಿ ಮಾತನಾಡತೊಡಗುತ್ತಾರೆ. ವರದಿ ಪ್ರಕಟವಾದ ಮುಂಜಾನೆಯಿಂದಲೇ ಬೋಸ್ಟನ್ ಗ್ಲೋಬ್ ಪತ್ರಿಕೆಗೆ ದೂರವಾಣಿ ಕರೆಗಳ ಸುರಿಮಳೆ. ಅಲ್ಲಿಯವರೆಗೆ ಅವಮಾನ ನುಂಗಿಕೊಂಡಿದ್ದ ಎಷ್ಟೋ ಸಂತ್ರಸ್ತರು ಧೈರ್ಯವಾಗಿ ತಮ್ಮ ಮೇಲಾದ ಶೋಷಣೆಯ ಕತೆ ಹೇಳತೊಡಗುತ್ತಾರೆ. ಬೋಸ್ಟನ್ ನ ರೋಮನ್ ಕ್ಯಾಥೊಲಿಕ್ ಪಾದ್ರಿಗಳ ಮಕ್ಕಳ ಬಳಸಿಕೊಳ್ಳುವಿಕೆಯ ಲೈಂಗಿಕ ವಿಕೃತಿ ಹಾಗೂ ಅದಕ್ಕೆ ಚರ್ಚಿನ ಮೌನ ಸಮ್ಮತಿ ಬಗ್ಗೆ ಪತ್ರಿಕೆ ಬರೆಯಿತಷ್ಟೆ. ಆದರೆ ಈ ವರದಿ ಪ್ರಕಟವಾಗುತ್ತಲೇ ಅಮೆರಿಕದ ಉದ್ದಗಲಕ್ಕೂ ಚರ್ಚ್ ಗಳಲ್ಲಾದ ಶೋಷಣೆ ಕತೆಗಳು ಬಿಚ್ಚಿಕೊಳ್ಳುತ್ತಲೇ ಸಾಗುತ್ತವೆ.
ದಟ್ಸ್ ಜರ್ನಲಿಸಂ! ಹಾಗೆಂದೇ 2003ರಲ್ಲಿ ಬೋಸ್ಟನ್ ಗ್ಲೋಬ್ ಗೆ ಅಮೆರಿಕದ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿ ಪುಲಿಟ್ಜರ್ ಸಿಗುತ್ತದೆ. ಈ ನಿಜ ಸಾಹಸವನ್ನೇ ಆಧರಿಸಿ ಟಾಮ್ ಮ್ಯಾಕರ್ಥಿ ನಿರ್ದೇಶಿಸಿದ ‘ಸ್ಪಾಟ್ ಲೈಟ್’ ಚಿತ್ರಕ್ಕೆ ಈ ಬಾರಿ ಉತ್ತಮ ಚಿತ್ರವೆಂಬ ಆಸ್ಕರ್ ಗರಿ. ಖಂಡಿತ, ಇದರಲ್ಲಿ ಸ್ಪೆಷಲ್ ಎಫೆಕ್ಟು, ತಂತ್ರಜ್ಞಾನದ ಸರ್ಕಸ್ಸುಈಥರದ್ದೇನೂ ಇಲ್ಲ. ಚಿತ್ರ ಆಸ್ಕರ್ ಗೆ ಅರ್ಹವೆನಿಸಿದ್ದು ಕೇವಲ ಅದರ ಪ್ರಾಮಾಣಿಕ ನಿರೂಪಣೆಯಿಂದ ಅನ್ನೋದು ಸ್ಪಷ್ಟ.

ತನಿಖೆಯ ಹಾದಿಯಲ್ಲಿ ಕೆಲವರ ಹೆಸರು ಸಿಗುತ್ತಲೇ ಸ್ಪಾಟ್ ಲೈಟ್ ತಂಡದ ಕೆಲವು ಸದಸ್ಯರು ಸಹಜ ಕಾತುರದಲ್ಲಿ ಪ್ರಕಟಿಸಿಯೋಬಿಡೋಣ ಎಂಬ ಆತುರ ತೋರುತ್ತಾರೆ. ಆಗ ಸಂಪಾದಕ ಹೇಳುವ ಮಾತು ಮನೋಜ್ಞವಾಗಿದೆ. ‘ತನಿಖಾ ಪತ್ರಿಕೋದ್ಯಮ ಗುರಿ ಮಾಡಬೇಕಿರೋದು ವ್ಯಕ್ತಿಗಳನ್ನಲ್ಲ, ಸಾಂಸ್ಥಿಕ ಸ್ವರೂಪದ ಲೋಪಗಳನ್ನು…’ ಇದೇ ಸಂಪಾದಕ ಬೋಸ್ಟನ್ ಗೆ ಬಂದ ಪ್ರಾರಂಭದಲ್ಲಿ ನಗರದ ಗಣ್ಯರನ್ನೆಲ್ಲ ಸೌಜನ್ಯದ ಭೇಟಿ ಮಾಡುತ್ತ, ನಗರದ ಮುಖ್ಯ
ಪಾದ್ರಿಗಳನ್ನೂ ಭೇಟಿ ಮಾಡುತ್ತಾನೆ. ಆಗವರು ಮಾತುಕತೆಯಲ್ಲಿ, ‘ಯಾವುದೇ ಸಹಕಾರ ಬೇಕಿದ್ದರೂ ಹಿಂಜರಿಯಬೇಡಿ… ಚರ್ಚ್ ನಿಮ್ಮೊಂದಿಗೆ ನಿಲ್ಲುತ್ತದೆ’ ಅಂತಾರೆ. ಸಂಪಾದಕ ಹೇಳ್ತಾನೆ- ‘ಥ್ಯಾಂಕ್ಯೂ… ಆದರೆ ಪ್ರತ್ಯೇಕವಾಗಿ ನಿಲ್ಲುವ ಪದ್ಧತಿ ಅನುಸರಿಸಿದಷ್ಟೂ ಅದು ಪತ್ರಿಕೋದ್ಯಮಕ್ಕೆ ಒಳ್ಳೆಯದು.’

ಸ್ಪಾಟ್ ಲೈಟ್ ತಂಡದ ಪತ್ರಕರ್ತೆಯ ಬಳಿ ಹಲವು ಭೇಟಿಗಳಲ್ಲಿ ತನ್ನ ಮೇಲಾದ ದೌರ್ಜನ್ಯವನ್ನು ತೋಡಿಕೊಳ್ಳುವ ವ್ಯಕ್ತಿಯೊಬ್ಬ ಉದ್ಯಾನದಲ್ಲಿ ಆಕೆಯೊಂದಿಗೆ
ನಡೆಯುತ್ತಾ ಬಂದು ಸಹಜವೆಂಬಂತೆ ಹೇಳುವ ಮಾತು ನಮ್ಮನ್ನು ಅಲ್ಲಾಡಿಸುತ್ತದೆ.. ‘ಅಗೋ.. ಮಾತಾಡ್ತಾ ನಾವು ಇಲ್ಲೀವರೆಗೆ ಬಂದ್ವಿ. ಎದುರಿಗೊಂದು ಚರ್ಚ್ ಇದೆ. ಅದಕ್ಕೆ ಮುಖಾಮುಖಿಯಾಗಿಯೇ ಇಲ್ಲಿ ಮಕ್ಕಳ ಆಟದ ಉದ್ಯಾನವಿದೆ!’

ಆಸ್ಕರ್ ಬಂದಿದೆ ಎಂಬ ನೆಪದಲ್ಲಾದರೂ ‘ಸ್ಪಾಟ್ ಲೈಟ್’ ನೋಡಿ. ನಿಮ್ಮನ್ನು ಕೆಣಕೀತು, ಹಿತವಾಗಿ ಕಂಪಿಸೀತು…

1 COMMENT

  1. ಚೈತನ್ಯ,

    ನಿಮ್ಮ ‘spot light’ ಬರಹ ಓದಿ ‘ತೆರೆದ ಕಿಟಕಿ’ ಯ ನಿಮ್ಮ ಅಂಕಣಗಳು ಕಣ್ಣ ಮುಂದೆ ಹಾಡು ಹೋದವು. ನೀವು ಯಾವುದೇ ಚಲನಚಿತ್ರ ಅಥವಾ ಪುಸ್ತಕ\ ವಿಮರ್ಶೆ ಮಾಡಿದರೆ, ಓದುಗನಿಗೆ ಆ ಚಿತ್ರ ನೋಡಬೇಕು, ಪುಸ್ತಕ ಓದಬೇಕು ಎಂಬ ಹಂಬಲ ಮೂಡುತ್ತದೆ. Gud show… keep going 

Leave a Reply