ವಿಧಾನ ಮಂಡಲದ ಇಡೀ ದಿನದ ‘ಟೈಮ್’ ನುಂಗಿ ಹಾಕಿದ ಸಿದ್ದರಾಮಯ್ಯನವರ ವಾಚ್!

 

ಡಿಜಿಟಲ್ ಕನ್ನಡ ಟೀಮ್

ಅಂದುಕೊಂಡತೆಯೇ ಆಗಿದೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಇಡೀ ದಿನದ ‘ಟೈಮ್’ ಅನ್ನು ಸಿದ್ದರಾಮಯ್ಯನವರ ‘ವಾಚ್’ ನುಂಗಿ ಹಾಕಿದೆ!

ಹಾದಿಬೀದಿ ಚರ್ಚೆ ವಸ್ತುವಾಗಿ ಇಡೀ ದೇಶದ ಗಮನ ಸೆಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಗಿಫ್ಟ್ ವಾಚ್’ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂಬ ಚರ್ಚೆಯಲ್ಲೇ ದಿನ ಕಳೆದು ಹೋಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಕಡೆ ಕಲಾಪ ಆರಂಭವಾಗುತ್ತಿದ್ದಂತೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಪ್ರಸ್ತಾವನೆ ಸಲ್ಲಿಸಿದ ಬಿಜೆಪಿ ಮುಖಂಡರು ಚರ್ಚೆ ವಾಚ್ ಸುತ್ತಲೇ ಗಿರಕಿ ಹೊಡೆಯುವಂತೆ ನೋಡಿಕೊಂಡರು. ಪ್ರಕರಣ ಬಯಲಿಗೆ ತಂದಿರುವ ಜೆಡಿಎಸ್ ನ ಮುಖಂಡರು ತಾವೇನು ಕಮ್ಮಿ ಎಂದು ಪೈಪೋಟಿಗೆ ಬಿದ್ದರು. ಇವರಿಬ್ಬರ ವಾಗ್ದಾಣಗಳಿಗೆ ಗುರಾಣಿ ಹಿಡಿಯುವುದರಲ್ಲೇ ಆಡಳಿತ ಪಕ್ಷದ ಸದಸ್ಯರು ಸುಸ್ತು ಹೊಡೆದು ಹೋದರು.

ಈಗಾಗಲೇ ಸಿಎಂ ವಾಚ್ ಸಂಬಂಧ ಹೊರಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ನಡೆದಿರುವ ಹೋರಾಟವೇ ಸದನದ ಒಳಗೂ ಅನುರಣಿಸಿತ್ತು. ಅದೇ ಚರ್ವಿತ-ಚರ್ವಿಣ. ಆದರೆ ಲೊಕೇಷನ್ ಮಾತ್ರ ಚೇಂಜ್. ಸಿದ್ದರಾಮಯ್ಯನವರು ದುಬಾರಿ ಕನ್ನಡಕ, ವಾಚ್, ಚಪ್ಪಲಿ, ಶೂ ಧರಿಸಿರುವ ಫೋಟೋಗಳನ್ನು ಪ್ರತಿಪಕ್ಷದವರು ಪ್ರದರ್ಶಿಸಿದರೆ, ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ, ಮತ್ತಿತರ ಸಮಾರಂಭಗಳಲ್ಲಿ ಬೆಲೆ ಬಾಳುವ ವಾಚ್ ಧರಿಸಿದ್ದ ಛಾಯಾಚಿತ್ರಗಳನ್ನು ಆಡಳಿತ ಪಕ್ಷದವರು ತೋರಿಸಿದರು. ಆಗ ಸದನ ಒಂದು ರೀತಿ ‘ಫೋಟೋ ಸೆಷನ್’ ಆಗಿ ಮಾರ್ಪಟ್ಟಿತ್ತು.

ಕಲಾಪ ಇವತ್ತು ಯಾವ ಕಾರಣಕ್ಕೂ ‘ವಾಚ್’ ಬಿಟ್ಟು ಬೇರೆಲ್ಲೂ ಹೋಗಬಾರದು ಅಂತ ಪ್ರತಿಪಕ್ಷದವರು ಮೊದಲೇ ತೀರ್ಮಾನಿಸಿಕೊಂಡು ಬಂದಿದ್ದರು. ಇದನ್ನು ನಿರೀಕ್ಷಿಸಿದ್ದ ಆಡಳಿತ ಪಕ್ಷದವರೂ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದರು. ಹೀಗಾಗಿ ವಾದ-ಪ್ರತಿವಾದ, ಆರೋಪ-ಪ್ರತ್ಯಾರೋಪ, ಘೋಷಣೆ, ಪ್ರತಿಘೋಷಣೆಗಳೇ ಇಡೀ ದಿನದ ಕಲಾಪವಾದವು.  ವಾಚ್ ಹೇಗೆ, ಎಲ್ಲಿಂದ, ಯಾರಿಂದ ಬಂತು? ಅದರ ಬೆಲೆ ಏನು ಮತ್ತಿತರ ವಿವರಗಳನ್ನು ಸಿದ್ದರಾಮಯ್ಯನವರು ಈಗಾಗಲೇ ಹೇಳಿದ್ದಾರೆ. ಉಡುಗೊರೆ ತೆರಿಗೆ ಕಟ್ಟಿ, ಸರಕಾರದ ಆಸ್ತಿಯಾಗಿ ಘೋಷಿಸಿ, ಸಂಪುಟ ಸಭಾಂಗಣದಲ್ಲಿ ಇಡುವುದಾಗಿ ತಿಳಿಸಿದ್ದಾರೆ. ಮೇಲಾಗಿ ಅದು ಕದ್ದ ವಾಚಲ್ಲ ಅಂತ ವಾಚ್ ಕಳುವಾಗಿರುವವರು ಸ್ಪಷ್ಟಪಡಿಸಿದ್ದಾರೆ. ಹಿಂಗಾಗಿ ಅದು ಮುಗಿದ ಅಧ್ಯಾಯ’ ಎಂಬ ಆಡಳಿತ ಪಕ್ಷದವರ ಸಮರ್ಥನೆ ಪ್ರತಿಪಕ್ಷ ಸದಸ್ಯರ ಕಿವಿ ಸವರಿಕೊಂಡು ಹೋಗಲಷ್ಟೇ ಸೀಮಿತವಾಯಿತು.

ಪ್ರತಿಪಕ್ಷದವರೂ ಸೇರಿಗೆ ಸವ್ವಾಸೇರಾದರು. ‘ಸಿಎಂ ನೈತಿಕವಾಗಿ, ಕಾನೂನಾತ್ಮಕವಾಗಿ ತಪ್ಪು ಮಾಡಿದ್ದಾರೆ. ವಿದೇಶಿ ಮೂಲದ ವಾಚ್ ಗಿಫ್ಟ್ ಪಡೆಯುವಾಗ ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ (ಫೆರಾ) ಆಗಿದೆ. ಅದರ ಬಿಲ್ ಕೊಡಿ. ದಿನಾಂಕ ತೋರಿಸಿ. ಸಮಾಜವಾದಿ ಸಿದ್ಧಾಂತ ಪ್ರತಿಪಾದಿಸಿದ ಸಿದ್ದರಾಮಯ್ಯ ವಜ್ರಖಚಿತ ವಾಚ್ ಗಿಫ್ಟ್ ಪಡೆದಿರುವುದು ನೈತಿಕ ದಿವಾಳಿತನದ ಸಂಕೇತ. ಅವರು ರಾಜೀನಾಮೆ ನೀಡುವಷ್ಟು ಪ್ರಖರತೆಯನ್ನು ಪ್ರಕರಣ ಹೊಂದಿರುವುದರಿಂದ ನಿಲುವಳಿ ಸೂಚನೆ ಮಂಡನೆ ಕುರಿತ ಪ್ರಸ್ತಾವನೆಗೆ ಅವಕಾಶ ಕೊಡಬೇಕು’ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮೇಲ್ಮನೆಯಲ್ಲಿ ಈಶ್ವರಪ್ಪ ಪ್ರತಿಪಾದಿಸಿದ್ದು ಕೂಡ ವ್ಯರ್ಥಲಾಪವಾಯಿತು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಉಡುಗೊರೆಯಾಗಿ ಬಂದ ಬೆಳ್ಳಿ ಕುರ್ಚಿ ಎಲ್ಲೋಯ್ತು ಅಂತ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಕಾಲೆಳೆದಾಗ, ಸಾರ್ವಜನಿಕ ಸಮಾರಂಭದಲ್ಲಿ ಅದು ಬಂದಿದ್ದರಿಂದ ಹಿಡಿದು ಸಿದ್ದಗಂಗಾ ಮಠ ಸೇರುವವರೆಗೆ ಆದದ್ದನ್ನೆಲ್ಲ ಕಾಂಗ್ರೆಸ್ ಬಂಡಾಯ ಶಾಸಕ ನಡಹಳ್ಳಿ ಮತ್ತು ಕುಮಾರಸ್ವಾಮಿ ವಿವರಿಸಿದಾಗ ಆಡಳಿತಪಕ್ಷದ ಉದ್ದೇಶ ಠುಸ್ಸಾಗಿತ್ತು.

ಈ ಮಧ್ಯೆ, ಚರ್ಚೆಯು ಪಕ್ಷಗಳ ಪರಸ್ಪರ ಹೋರಾಟದಿಂದ ವ್ಯಕ್ತಿಗತ ಟೀಕೆವರೆಗೂ ಕುಸಿದು ಹೋಯಿತು. ವಿಧಾನಸಭೆಯಲ್ಲಿ ತಮ್ಮನ್ನು ‘ನೀವೇನು ವಾಜಪೇಯಿ ಮಗನಾ’ ಎಂದು ಕಿಚಾಯಿಸಿದ ಸಚಿವ ರಮಾನಾಥ ರೈಗೆ ಬಿಜೆಪಿಯ ಸಿ.ಟಿ. ರವಿ, ‘ನೀವೇನು ಶೇಕ್ ಅಬ್ದುಲ್ಲಾ ಮಗನಾ’ ಎಂದು ರಿಮ್ಮನೆ ತಿರುಗಿಸಿಕೊಟ್ಟರು. ಅತ್ತ ಮೇಲ್ಮನೆಯಲ್ಲಿ ಸಿಎಂ ಸಮರ್ಥಿಸಿಕೊಂಡ ಕಾಂಗ್ರೆಸ್ ಮುಖಂಡರನ್ನು ‘ಕುಡಿದು ಬಂದಿದ್ದಾರೆ’ ಎಂದು ಜರಿದ ಈಶ್ವರಪ್ಪನವರಿಗೆ ‘ಹುಚ್ಚಾಸ್ಪತ್ರೆಗೆ ಸೇರುವುದು ಒಳಿತು’ ಎಂಬ ಬಳುವಳಿ ಆಡಳಿತ ಪಕ್ಷದವರಿಂದ ಬಂತು.

ಇದೇ ರೀತಿ ಸಿಎಂ ವಾಚ್ ಕುರಿತ ಗದ್ದಲ, ಗೊಂದಲ, ಆಕ್ರೋಶದಲ್ಲಿ ಮುಳುಗಿ ಹೋದ ಉಭಯ ಸದನಗಳು ‘ಟೈಮ್’ ನೋಡಿಕೊಳ್ಳುವ ಹೊತ್ತಿಗೆ ಕಲಾಪ ಬುಧವಾರಕ್ಕೆ ಮುಂದೋಗಿತ್ತು.

Leave a Reply