ಕಾಂಗ್ರೆಸ್ ಗೆ ಕಾಡುತ್ತಿರುವ ಇಶ್ರತ್ ಭೂತ ಅದ್ಯಾವ ಮಹಾಘಾತಕ್ಕೆ ಮುನ್ನುಡಿ? ಚಿದು ಎಂಬ ಸೇನಾಪತಿ ಉರುಳಿದರೆ ಅಲ್ಲಾಡೋ ಸಾಮ್ರಾಜ್ಯ ಯಾರದ್ರೀ?

ಪ್ರವೀಣ್ ಕುಮಾರ್

ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣ ಮತ್ತು ಏರ್ಸೆಲ್ – ಮ್ಯಾಕ್ಸಿಸ್ ಒಪ್ಪಂದದ ಕುರಿತ ತನಿಖೆ. ಇವೆರಡು ಈ ಹಿಂದೆ ಯುಪಿಎ ಸರ್ಕಾರವನ್ನು ಎರಡು ಅವಧಿಗಳಿಗೆ ಮುನ್ನಡೆಸಿದ್ದ ಕಾಂಗ್ರೆಸ್ ಅನ್ನು ಅಲ್ಲಾಡಿಸುತ್ತಿರುವ ವಿದ್ಯಮಾನಗಳು.

ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರಕ್ಕೆ ಬರುತ್ತಿದ್ದಂತೆ ಅದರ ಕಟ್ಟರ್ ಬೆಂಬಲಿಗರು ಹಿಂದಿನ ಸರ್ಕಾರಗಳ ಭ್ರಷ್ಟಾಚಾರಗಳು ತನಿಖೆಯಾಗಲಿ ಹಾಗೂ ಅದು ಸೋನಿಯಾ ಕುಟುಂಬದಿಂದ ಪ್ರಾರಂಭವಾಗಲಿ ಅಂತೆಲ್ಲ ಬಯಸಿದ್ದರು. ವಾಧ್ರಾ ಪ್ರಕರಣಗಳೆಲ್ಲ ತ್ವರಿತವಾಗಿ ತನಿಖೆಯಾಗಿಬಿಡುತ್ತವೆ, ಸೋನಿಯಾ- ರಾಹುಲ್ ಹಲವು ಪ್ರಕರಣಗಳಿಗೆ ಉತ್ತರದಾಯಿಯಾಗಬೇಕಾಗುತ್ತದೆ ಅಂತ ಸಮರೋತ್ಸಾಹದಲ್ಲಿದ್ದವರಿಗೆಲ್ಲ ತುಸು ಬೇಸರವೇ ಆಗಿತ್ತೆಂಬುದು ದಿಟವೇ. ಏಕೆಂದರೆ, ಒಬ್ಬರು ಸುಬ್ರಮಣಿಯನ್ ಸ್ವಾಮಿ, ಸೋನಿಯಾ ವಿರುದ್ಧದ ತಮ್ಮ ಲಾಗಾಯ್ತಿನ ಸಮರ ಮುಂದುವರಿಸಿದರಾಗಲೀ, ಬಿಜೆಪಿ ಒಂದು ರಾಜಕೀಯ ಶಕ್ತಿಯಾಗಿ ಕಾಂಗ್ರೆಸ್ ಪ್ರಮುಖರ ಮೇಲೆ ತಿರುಗಿಬೀಳಲಿಲ್ಲ.

ಈಗ ನೋಡಿದರೆ, ಸಮರ ಮತ್ತೆಲ್ಲೋ ಗುರಿಯಾದಂತಿದೆ. ಯುಪಿಎ ಸರ್ಕಾರದಲ್ಲಿ ಅತಿ ಪ್ರಮುಖ ವ್ಯಕ್ತಿಯಾಗಿದ್ದ (ಹಣಕಾಸು- ಗೃಹ ಸಚಿವಾಲಯಗಳ ನಿರ್ವಹಣೆ) ಪಿ. ಚಿದಂಬರಂ ಅವರಿಗೇ ಭವಿಷ್ಯದ ಕಾನೂನು ಪ್ರಕ್ರಿಯೆಗಳು ಸುತ್ತಿಕೊಂಡು, ಆ ಮೂಲಕ ರಾಣಿ-ಯುವರಾಜರಿಗೆಲ್ಲ ಚೆಕ್ ನೀಡುವ ಭೂಮಿಕೆಯೊಂದು ಸಿದ್ಧವಾಗುತ್ತಿದೆಯೇ? ಒಂದರ ಹಿಂದೊಂದರಂತೆ ಅಮರಿಕೊಂಡು ಸದ್ದು ಮಾಡಲಾರಂಭಿಸಿರುವ ಏರ್ಸೆಲ್- ಮ್ಯಾಕ್ಸಿಸ್ ಮತ್ತು ಇಶ್ರತ್ ಭೂತಗಳು ಹಾಗೊಂದು ಮಿಂಚನ್ನು ತೋರುತ್ತಿವೆ.

ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಉಗ್ರ ಡೇವಿಡ್ ಹೆಡ್ಲಿ, ಟೆಲಿಕಾನ್ಫರೆನ್ಸ್ ಮೂಲಕ ಭಾರತದ ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯಲ್ಲಿ ಜಹಾನ್ ಗೆ ಉಗ್ರರೊಂದಿಗೆ ನಂಟಿತ್ತು ಎಂಬ ಹೇಳಿಕೆ ನೀಡಿದ್ದ. ಹೆಡ್ಲಿ ಹೇಳಿಕೆ ನ್ಯಾಯ ಪ್ರಕ್ರಿಯೆ ಮೇಲೇನೂ ಪರಿಣಾಮ ಬೀರುವಂತಿಲ್ಲ ಅಂತ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಆದರೆ, ಕಾಂಗ್ರೆಸ್ ಉಗ್ರರ ಪರವೇ ಎಂಬ ಚರ್ಚೆಯನ್ನಂತೂ ಹೆಡ್ಲಿ ಹೇಳಿಕೆ ಹುಟ್ಟುಹಾಕಿತ್ತು.

ಜಿ ಕೆ ಪಿಳ್ಳೈ
ಜಿ ಕೆ ಪಿಳ್ಳೈ

ಇದೀಗ ಯುಪಿಎ ಅವಧಿಯ ಇಬ್ಬರು ಅಧಿಕಾರಿಗಳು, ಇಶ್ರತ್ ಕುರಿತ ಅಫಡವಿಟ್ ಅನ್ನು ಬದಲಿಸಲಾಯಿತು ಅಂತ ಅವತ್ತಿನ ಗೃಹ ಸಚಿವ ಪಿ. ಚಿದಂಬರಂ ಅವರ ಮೇಲೆ ಆರೋಪ ಹೊರೆಸಿದ್ದಾರೆ. ‘ತಾವು ಸಲ್ಲಿಸಿದ್ದ ಮೊದಲ ಅಫಡವಿಟ್ ನಲ್ಲಿ ಇಶ್ರತ್ ಜಹಾನ್ ಗೆ ಉಗ್ರರ ಲಿಂಕ್ ಇರುವ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಅದನ್ನು ಬದಲಿಸಿ, ಎರಡನೇ ಅಫಡವಿಟ್ ನಲ್ಲಿ ಈ ಅಂಶಗಳನ್ನು ಬದಲು ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಮಾತ್ರ ಅಂದಿನ ರಾಜಕೀಯ ನಾಯಕತ್ವ’ ಎಂದಿದ್ದಾರೆ ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳೈ.

ಇದಕ್ಕೆ ಪೂರಕವಾಗಿ ಗೃಹ ಸಚಿವಾಲಯದ ಮಾಜಿ ಅಧಿಕಾರ ಕೆವಿಎಸ್ ಮಣಿ ಯುಪಿಎ ಸರ್ಕಾರದ ವಿರುದ್ಧ ಹೊರೆಸಿರುವ ಆರೋಪಗಳು ಇನ್ನೂ ಗುರುತರವಾಗಿವೆ. ಪಿಳ್ಳೈ ಅವರ ಹೇಳಿಕೆಗಳಲ್ಲಿ ಇಶ್ರತ್ ಕುರಿತ ಎರಡನೇ ಅಫಡವಿಟ್ ನಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನವಷ್ಟೇ ಕಾಣುತ್ತಿದೆ.

ಕೆವಿಎಸ್ ಮಣಿ
ಕೆವಿಎಸ್ ಮಣಿ

ಆದರೆ ಕೆವಿಕೆ ಮಣಿಯವರು ಹೇಳಿರೋದು ಬೇರೆ. ಅಫಡವಿಟ್ ಬದಲಿಸೋಕೆ ತಮ್ಮ ಮೇಲೆ ಹಲ್ಲೆಗಳಾದವು ಎಂಬ ಗಂಭೀರ ಆರೋಪ ಅವರದ್ದು. ‘ಇಶ್ರತ್ ಕುರಿತು ಆಕೆಯ ವಿರುದ್ಧ ಐಬಿ ನೀಡಿದ ಸಾಕ್ಷ್ಯಗಳನ್ನೆಲ್ಲ ಪಕ್ಕಕ್ಕಿಟ್ಟು, ಅವಳ ಲಷ್ಕರ್ ನಂಟನ್ನು ಮರೆಮಾಚಿಸುವ ಅಫಡವಿಟ್ ಸಿದ್ಧವಾಗಿದ್ದೇ ಒತ್ತಡದಲ್ಲಿ. ಇದರ ಪ್ರಕ್ರಿಯೆಯಲ್ಲಿದ್ದಾಗ ಮೊದ- ಮೊದಲು ಚೆನ್ನಾಗಿಯೇ ಮಾತನಾಡಲಾರಂಭಿಸಿದ್ದ ವಿಶೇಷ ತನಿಖಾ ದಳದ ಅಧಿಕಾರಿಗಳು ಸರ್ಕಾರದ ನಿಲುವಿನಂತೆ ನಾನು ಪ್ರತಿಕ್ರಿಯಿಸದೇ ಇದ್ದಾಗ ಸಿಟ್ಟುಗೊಂಡು ಸಿಗರೇಟ್ ನಿಂದ ಮೈ ಸುಟ್ಟರು, ನಿಂದಿಸಿದರು. ಎರಡನೇ ಅಫಡವಿಟ್ ಗೆ ಬಲವಂತದಿಂದ ನನ್ನ ಸಹಿ ಹಾಕಿಸಿಕೊಳ್ಳಲಾಯಿತು’ ಎಂದಿದ್ದಾರೆ.

ಇಬ್ಬರೂ ಅಧಿಕಾರಿಗಳ ಮಾತು ಸ್ವಷ್ಟಪಡಿಸುತ್ತಿರುವ ಅಂಶ ಇಷ್ಟೆ. ಇಶ್ರತ್ ಪ್ರಕರಣದಲ್ಲಿ ಮೊದಲು ಸಲ್ಲಿಸಿದ್ದ ಅಫಡವಿಟ್ ನಲ್ಲಿ ಗುಪ್ತಚರ ಮಾಹಿತಿ ಉಲ್ಲೇಖಿಸಿದಂತೆ ಆಕೆ ಉಗ್ರಳೆಂಬ ಸುಳಿವುಗಳು ಇದ್ದವು. ಒಂದು ತಿಂಗಳ ನಂತರ ಚಿದಂಬರಂ ಅವರು ಕಡತವನ್ನು ಮತ್ತೆ ತರಿಸಿಕೊಂಡು ಬದಲಾವಣೆ ಸೂಚಿಸಿ, ಎರಡನೇ ಅಫಡವಿಟ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದರು. ಇದರಲ್ಲಿ ಉಗ್ರ ನಂಟಿನ ಪ್ರಸ್ತಾವ ತೆಗೆಯಲಾಗಿತ್ತು.

ಈ ಎಲ್ಲಾ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು

ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ವಿವರಗಳನ್ನು ನೀಡಿದ್ದು ಚಿದಂಬರಂ ಅವರು ನೀಡಿದ್ದು, ಇಲ್ಲಿ ಗೊಂದಲವೇನೂ ಇಲ್ಲ ಅಂತಿದಾರೆ. ಅಧಿಕಾರಿಗಳು ನಿವೃತ್ತರಾದ ನಂತರವಷ್ಟೇ ಇಂಥ ಅಪಸ್ವರಗಳನ್ನು ಏಕೆ ಹಾಡ್ತಿದಾರೆ. ಆಗಲೇ ಈ ಬಗ್ಗೆ ಆಕ್ಷೇಪ ಸಲ್ಲಿಸಬಹುದಿತ್ತಲ್ಲ ಎನ್ನೋದೂ ಕಾಂಗ್ರೆಸ್ ಆಕ್ಷೇಪ.

ಆದರೆ ಪ್ರತಿರೋಧ ತೋರಿದ್ದಕ್ಕೆ ಸಿಗರೇಟ್ ತುದಿಯಿಂದ ಸುಡಲಾಯಿತು ಅಂತ ಅಧಿಕಾರಿಯೊಬ್ಬರು ಆರೋಪಿಸುತ್ತಿರುವಾಗ ಪರಿಸ್ಥಿತಿ ಅಷ್ಟರಮಟ್ಟಿಗೆ ಕೆಟ್ಟುಹೋಗಿತ್ತಾದ್ದರಿಂದ ಸುಮ್ಮನಿರಬೇಕಾದ ವಾತಾವರಣ ನಿರ್ಮಾಣವಾಗಿದ್ದಿರಬಹುದು ಅಂತಲೂ ವ್ಯಾಖ್ಯಾನಿಸುವುದಕ್ಕೆ ಅವಕಾಶವಿದೆ. ಕಾಂಗ್ರೆಸ್ ನಡೆ ನಿವೃತ್ತ ಅಧಿಕಾರಿಗಳ ಹೇಳಿಕೆ ಇವೆರಡರ ಕುರಿತೂ ತನಿಖೆ ಆಗಲಿ ಅನ್ನೋದು ಎಡಪಕ್ಷದ ಪ್ರತಿಪಾದನೆ.

ಒಂದೆಡೆ ಕಾರ್ತಿ ಚಿದಂಬರಂ ಸಾಮ್ರಾಜ್ಯವೂ ಪ್ರಶ್ನೆಗೊಳಗಾಗಿರುವುದು, ಪಿ. ಚಿದಂಬರಂ ಅವರು ವಿತ್ತ ಮತ್ತು ಗೃಹ ಸಚಿವರಾಗಿದ್ದಾಗಿನ ತೀರ್ಮಾನಗಳೆಲ್ಲ ಈಗ ಪ್ರಶ್ನೆಗೊಳಗಾಗುತ್ತಿರುವುದು ಇವೆಲ್ಲವನ್ನು ಗಮನಿಸಿದಾಗ ಮುಂಬರುವ ದಿನಗಳಲ್ಲಿ ದೊಡ್ಡ ರಾಜಕೀಯ ತಲ್ಲಣವೇ ಬಿಚ್ಚಿಕೊಳ್ಳಬಹುದು ಅನ್ನೋದಂತೂ ಸ್ಪಷ್ಟವಾಗುತ್ತಿದೆ.

‘ಏರ್ಸೆಲ್ – ಮ್ಯಾಕ್ಸಿಸ್ ಹಗರಣದಲ್ಲಿ ಪರಿಣಾಮಕಾರಿ ದಾಖಲೆಗಳು ವಶವಾಗಿವೆ. ಈ ಹಂತದಲ್ಲಿ ಆ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲವಾದರೂ, ತನಿಖಾ ವರದಿ ಸಲ್ಲಿಕೆಯಾಗುತ್ತಲೇ ಎಲ್ಲ ಮಾಹಿತಿ ನೀಡುತ್ತೇವೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸಬೇಕಾದ ಅಗತ್ಯ ಸರ್ಕಾರಕ್ಕಿಲ್ಲ’ ಅಂತ ಕೇಂದ್ರದ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ಸಂಸತ್ತಿನಲ್ಲಿ ಹೇಳಿದ್ದಾರೆ.

Leave a Reply