ಬಾಹ್ಯಾಕಾಶದಲ್ಲಿ ದಾಖಲೆಯ 340 ದಿನ ವಾಸ, ಮಂಗಳಯಾನಕ್ಕೂ ಸಹಕರಿಸಬಲ್ಲಇದರ ಮಹತ್ವ ಇಲ್ಲಿದೆ ಓದಿ…

ಡಿಜಿಟಲ್ ಕನ್ನಡ ಟೀಮ್

ನಾಸಾದ ಬಾಹ್ಯಾಕಾಶ ಯಾನಿಗಳು ಬರೋಬ್ಬರಿ 340 ದಿನ ಬಾಹ್ಯಾಕಾಶದಲ್ಲಿ ಜೀವಿಸಿ, ಬುಧವಾರವಷ್ಟೇ ಮತ್ತೆ ಭೂಮಿಯ ಮಡಿಲಿಗೆ ಆಗಮಿಸಿದ್ದಾರೆ. ಏನು 340 ದಿನವೇ.. ಅಲ್ಲಿಗೆ ಸುಮಾರು ಒಂದು ವರ್ಷವೇ ಲೆಕ್ಕ.. ಎಂದು ನಿಮಗೆ ಅಚ್ಚರಿಯಾಗುವುದು ಸಹಜ.

ಹೌದು.. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಾಸಾ ಬಾಹ್ಯಾಕಾಶ ಯಾನಿಗಳಾದ ಅಮೆರಿಕದ ಸ್ಕಾಟ್ ಕೆಲ್ಲಿ ಮತ್ತು ರಷ್ಯಾದ ಮಿಖೈಲ್ ಕೊರ್ನಿಯೆಂಕೊ ಸುದೀರ್ಘ ಬಾಹ್ಯಾಕಾಶದ ವಾಸದ ನಂತರ ಈಗ ಮತ್ತೆ ಭೂಮಿಯ ತಣ್ಣನೇ ಗಾಳಿ ಸೇವಿಸಿದ್ದಾರೆ. ಇವರು ಇಷ್ಟು ದಿನ ಬಾಹ್ಯಾಕಾಶದಲ್ಲಿ ಇದ್ದಿದ್ದಾರೂ ಏಕೆ? ಅದರಿಂದ ಏನು ಪ್ರಯೋಜನ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರದು.

ಬಾಹ್ಯಾಕಾಶದಲ್ಲಿ ಇದಷ್ಟು ಕಾಲ ಮಾನವನ ದೇಹದ ಮೇಲೆ ಆಗುವ ಪರಿಣಾಮ ಹಾಗೂ ಬದಲಾವಣೆಗಳ ಅಧ್ಯಯನ ಈ ಪ್ರಯೋಗದ ಮುಖ್ಯ ಉದ್ದೇಶ. ಭೂಮಿಯ ಮೇಲೆ ಸಹಜವಾಗಿರುವ ಮಾನವನ ದೇಹ, ಬಾಹ್ಯಾಕಾಶದಲ್ಲಿನ ವಾತಾವರಣಕ್ಕೆ ಸಾಕಷ್ಟು ಏರುಪೇರುಗಳನ್ನು ಕಾಣುತ್ತದೆ. ಈ ಪ್ರಯೋಗದ ಮುನ್ನ ಬಾಹ್ಯಾಕಾಶದಲ್ಲಿ ಜೀವಿಸುವಾಗ ಮಾನವನ ದೇಹದ ಮೇಲಾಗಬಹುದಾದ ಸಹಜ ಪರಿಣಾಮಗಳ ಬಗ್ಗೆ ತಿಳಿಯೋಣ.

  • ಕಡಿಮೆ ಗುರುತ್ವಾಕರ್ಷಣ ವಾತಾವರಣ, ಮಾನವನ ಮೂಳೆಯ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.
  • ಸ್ಪೇಸ್ ಫ್ಲೈಟ್ ಗಳಲ್ಲಿ ಮಾನವನ ಮಿದುಳು ಪ್ರತಿಸ್ಪಂದಿಸುವ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ.
  • ದೇಹದ ಮಾಂಸಖಂಡಗಳಲ್ಲಿನ ಫೈಬರ್ ಕ್ಷೀಣಿಸುತ್ತವೆ.

ಈ ಎಲ್ಲ ಪರಿಣಾಮದ ಜತೆಗೆ ಮಂಗಳ ಯಾನದ ವೇಳೆ ಹಗುರತನ, ಏಕಾಕಿತನ, ಬಾಹ್ಯಾಕಾಶದ ವಿಕಿರಣ, ಸ್ಪೇಸ್ ಫ್ಲೈಟ್ ನಲ್ಲಿ ಸುದೀರ್ಘ ಅವಧಿ ಕಾಲ ಕಳೆಯುವುದಕ್ಕೆ ಮಾನವನ ದೇಹ ಹೇಗೆ ಒಗ್ಗಿಕೊಳ್ಳುವಾಗಿನ ಸಂಘರ್ಷ ಇವೆಲ್ಲದರ ಬಗ್ಗೆ ತಿಳಿದುಕೊಳ್ಳುವಲ್ಲಿ ಇವರ ಬಾಹ್ಯಾಕಾಶ ಜೀವನಾನುಭವ ಸಹಾಯಕ್ಕೆ ಬರಲಿದೆ.ಈ ಅಂಶಗಳನ್ನು ತಿಳಿಯುವ ಸಲುವಾಗಿ ಸ್ಕಾಟ್ ಹಾಗೂ ಮಿಖೈಲ್ ಸುಮಾರು 400 ಪರೀಕ್ಷೆಗಳನ್ನು ನಡೆಸಲಾಗಿದೆ.

ಅದರಲ್ಲೂ ಈ ಸಾಹಸದಲ್ಲಿ ತುಲನಾತ್ಮಕ ಅಧ್ಯಯನಕ್ಕೆ ಒಳ್ಳೆ ಸ್ಕೋಪ್ ಇದೆ. ಏಕೆಂದರೆ ಬಾಹ್ಯಾಕಾಶದಲ್ಲಿದ್ದುಬಂದ ಸ್ಕಾಟ್ ಕೆಲ್ಲಿ ಅವರಿಗೆ ಮಾರ್ಕ್ ಕೆಲ್ಲಿ ಎಂಬ ಅವಳಿ ಸಹೋದರರೊಬ್ಬರಿದ್ದಾರೆ. ಸ್ಕಾಟ್ ಬಾಹ್ಯಾಕಾಶಕ್ಕೆ ತೆರಳಿದಾಗ ಇಲ್ಲಿದ್ದ ಮಾರ್ಕ್ ಕೆಲ್ಲಿ ಸಹ ನಾಸಾ ಪ್ರಯೋಗಾಲಯಕ್ಕೆ ತಮ್ಮನ್ನು ಒಡ್ಡಿಕೊಂಡರು.

ಈ ಅವಳಿ ಅಧ್ಯಯನ ಎಂದರೆ, ಅವಳಿಗಳ ಪೈಕಿ ಒಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಬಾಹ್ಯಾಕಾಶದಲ್ಲಿ ಮಾನವನ ದೇಹದ ಜತೆಗೆ ಮಿದುಳಿನ ಕೋಶದ ಮೇಲಾಗುವ ಬದಲಾವಣೆ ಅಧ್ಯಯನ ಮಾಡುವುದು. ಈ ಪ್ರಯೋಗದ ಪ್ರಮುಖ ಅಂಶ ಹೀಗಿವೆ:

  • ಬಾಹ್ಯಾಕಾಶಕ್ಕೆ ಹೋದ ಹಾಗೂ ಭೂಮಿಯಲ್ಲೇ ಇದ್ದ ಅವಳಿಗಳ ನಡುವೆ ಹೃದಯ, ಮಾಂಸಖಂಡ, ಮಿದುಳು ಹೀಗೆ ದೈಹಿಕ ಬದಲಾವಣೆ ಗುರುತಿಸುವುದು.
  • ಅವರ ವರ್ತನೆಯ ಬದಲಾವಣೆ (ತರ್ಕ, ನಿರ್ಧಾರ ತೆಗೆದುಕೊಳ್ಳುವಿಕೆ, ಜಾಗೃತಿ, ಕಾರ್ಯೋನ್ಮುಖತೆ).
  • ಈ ಇಬ್ಬರು ಸಹೋದರರಲ್ಲಿ ಆಗುವ ಸೂಕ್ಷ್ಮ ಜೀವ ಅಂಶಗಳ ಬದಲಾವಣೆ.
  • ಈ ಇಬ್ಬರ ರಕ್ತ, ಮೂತ್ರ, ಲಾಲಾರಸ, ಮಲದ ಮಾದರಿಯನ್ನು ಪಡೆದು ಅಣು ಬದಲಾವಣೆ ಸಂಬಂಧಿ ಅಧ್ಯಯನ.

ಸರಿ, ಇಷ್ಟೆಲ್ಲ ಮಾಹಿತಿ ಕಲೆಹಾಕಿದರೆ ಅದರ ಪ್ರಯೋಜನವಾದರೂ ಏನು ಅಂದ್ರಾ? 2030ರ ವೇಳೆಗೆ ಮಂಗಳ ಗ್ರಹದಲ್ಲಿ ಮಾನವನ ಹೆಜ್ಜೆ ಗುರುತು ಮೂಡಿಸುವ ಮಹತ್ವಾಕಾಂಕ್ಷೆ ವಿಜ್ಞಾನಿಗಳದ್ದು. ಈ ನಿಟ್ಟಿನಲ್ಲಿ ಬಾಹ್ಯಾಕಾಶದಲ್ಲಿ ಮನುಷ್ಯನ ದೇಹಸ್ಥಿತಿ ಮೇಲಾಗುವ ಅಧ್ಯಯನಕ್ಕೆ ಭಾರೀ ಮಹತ್ವವೇ ಇದೆ. ಮಂಗಳ ಯಾನ ಸುಮಾರು 30 ತಿಂಗಳ ಕಾಲಾವಧಿಯಾಗಿದ್ದು, ಈ ಪ್ರಯೋಗದಲ್ಲಿ ಅಮೆರಿಕ ಮತ್ತು ರಷ್ಯಾ ಎರಡೂ ತಮ್ಮ ಸಂಶೋಧನಾ ಮಾಹಿತಿಯನ್ನು ಹಂಚಿಕೊಳ್ಳಲಿವೆ.

ತಮ್ಮ ಬಾಹ್ಯಾಕಾಶ ಬದುಕಿನ ಅವಧಿಯಲ್ಲಿ ಸ್ಕಾಟ್ ಹಾಗೂ ಮಿಖೈಲ್ ಸಾಮಗ್ರಿ ಸರಬರಾಜು ಮಾಡುವ ಆರು ಬಾಹ್ಯಾಕಾಶ ನೌಕೆಯ ಆಗಮನವನ್ನು ನೋಡಿದ್ದಾರೆ. ಅಲ್ಲದೆ ಸ್ಕಾಟ್ ಈ ಅವಧಿಯಲ್ಲಿ ತಮ್ಮ ಬಾಹ್ಯಾಕಾಶ ನೌಕೆಯಿಂದ ಹೊರಗೆ ಮೂರು ಬಾರಿ ಚಲಿಸಿದ್ದಾರೆ.

ಇತಿಹಾಸ ಇವರಿಬ್ಬರನ್ನೂ ನೆನಪಿನಲ್ಲಿಡಲಿದೆ. ಹಾಗೆಂದೇ ಅವರಿಗೊಂದು ಚಿಯರ್ಸ್ ಹೇಳೋಣ!

Leave a Reply