ರಸೀದಿಯಿರದ ಸಿಎಂ ಗಿಫ್ಟ್ ವಾಚ್ ಸೃಷ್ಟಿಸಿದ ಗದ್ದಲ, ಸ್ಪೀಕರ್ ಗೆ ಒಪ್ಪಿಸಿ ಕೈಎತ್ತಿದ್ರೂ ನಿಲ್ಲಲಿಲ್ಲ

ಡಿಜಿಟಲ್ ಕನ್ನಡ ಟೀಮ್

ನಾಟಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದಿತ 70 ಲಕ್ಷ ರುಪಾಯಿ ವಾಚನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ವಶಕ್ಕೆ ಬುಧವಾರ ಒಪ್ಪಿಸಿದ್ದಾರೆ. ಎರಡು ದಿನಗಳಿಂದ ಈ ವಾಚಿಗಾಗಿ ವ್ಯಯವಾದ ವಿಧಾನಮಂಡಲ ಕಲಾಪ ವೆಚ್ಚ 1.40 ಕೋಟಿ ರುಪಾಯಿ. 70 ಲಕ್ಷ ರುಪಾಯಿ ವಾಚಿಗೆ 1.40 ಕೋಟಿ ಖರ್ಚು. ಇಷ್ಟೆಲ್ಲ ಆದರೂ ಹಿಂತಿರುಗಿ ಬಾರದೇ ಹೋದದ್ದು ಸಾರ್ವಜನಿಕ ವಲಯದಲ್ಲಿ ಸಿಎಂ ಕಳೆದುಕೊಂಡ ಗೌರವ!

ನಿಜ, ಸದನದ ಹೊರಗೆ ಮತ್ತು ಒಳಗೆ ನಿರ್ಮಾಣಗೊಂಡಿದ್ದ ಒತ್ತಡ ಮಂಡಲದಿಂದ ಆಚೆ ಬರಲು ಸಿಎಂ ವಾಚನ್ನೇನೋ ಸರ್ಕಾರದ ವಶಕ್ಕೆ ಒಪ್ಪಿಸಿಬಿಟ್ಟರು. ಜತೆಗೆ ಗಿಫ್ಟ್ ತೆರಿಗೆ ಮುಂಗಡ ಪಾವತಿ ರಸೀದಿಯನ್ನು ಕೊಟ್ಟರು. ಆದರೆ ಇವರು ಏನೆಲ್ಲ ಮಾಡಿದರೂ ಮೂರು ವಾರಗಳಿಂದ ಈ ವಾಚ್ ಸಿಎಂ ವರ್ಚಸ್ಸಿನ ಮೇಲೆ ಮೂಡಿಸಿರುವ ಅಡ್ಡ ಪರಿಣಾಮ ಮಾತ್ರ ಅಷ್ಟು ಸುಲಭವಾಗಿ ಕರಗುವಂತೆ ಕಾಣುತ್ತಿಲ್ಲ.

ವಿಧಾನಮಂಡಲ ಉಭಯ ಸದನಗಳ ಕಲಾಪ ಬುಧವಾರ ಕೂಡ ಸಿಎಂ ಗಿಫ್ಟ್ ವಾಚ್ ಕುರಿತ ನಿಲುವಳಿ ಸೂಚನೆ ಮಂಡನೆ ಕುರಿತ ಪ್ರಸ್ತಾಪ ಅವಕಾಶ ಕೋರಿಕೆ ಮತ್ತು ನಿರಾಕರಣೆ ಗದ್ದಲದಲ್ಲೇ ಕಳೆದು ಹೋಯಿತು. ಜೆಡಿಎಸ್ ನಾಯಕ ಕುಮಾರಸ್ವಾಮಿ ಬಹಿರಂಗ ಮಾಡಿದ ವಾಚ್ ಹಗರಣವನ್ನು ಹೈಜಾಕ್ ಮಾಡಿರುವ ಬಿಜೆಪಿ ಸದಸ್ಯರು ಸಿಎಂ ಹುಬ್ಲೋಟ್ ವಾಚ್ ಗಿಫ್ಟ್ ಪಡೆದವರಿಂದ ರಸೀದಿ ತರಿಸಿ ಸದನದ ಮುಂದಿಡಿ ಎಂದು ಪಟ್ಟು ಹಿಡಿದರು. ಗಿಫ್ಟ್ ಕೊಟ್ಟವರ ಬಳಿ ಬಿಲ್ ಇರಲೇಬೇಕಲ್ಲ ಅದನ್ನು ತರಿಸಿ, ತೋರಿಸಿ. ವಾಚ್ ಕದ್ದದ್ದಲ್ಲ ಎಂಬುದು ರುಜುವಾತಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಗಿಫ್ಟ್ ಹಿಂದಿನ ಮರ್ಮ ಅರಿಯಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬುದು ಅವರ ಮಾತು.

ಕಲಾಪವನ್ನು ಎರಡು ಭಾರಿ ಮುಂದೂಡಿ ಸದನ ಮುಖಂಡರ ಸಭೆ ನಡೆಸಿದರು ಪರಿಹಾರ ಕಂಡುಬರಲಿಲ್ಲ. ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ಕೊಡಿ ಅಂತ ಪ್ರತಿಪಕ್ಷಗಳ ಮುಖಂಡರು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪ ಮಾಡಿ ಅಂತ ಸ್ಪೀಕರ್. ಈ ವಾದ, ಪ್ರತಿವಾದಗಳ ನಡುವೆ ರಿಂಗಣಿಸಿದ್ದು, ವಾಚ್ ಎಲ್ಲಿಂದ ಬಂತು? ಅದರ ರಸೀದಿ ಎಲ್ಲಿ? ಇದು ಗಿಫ್ಟಾ ಅಥವಾ ಥೆಫ್ಟಾ ? ಎಂಬ ಘೋಷಣೆಗಳು. ಗಿಫ್ಟು ಸಿಕ್ಕಿದಾಗ ಅದರ ಬೆಲೆ ಗೊತ್ತಿರಲಿಲ್ಲ, ಗೊತ್ತಾದ ಮೇಲೆ ಅದನ್ನು ಕಟ್ಟಿಕೊಳ್ಳಲಿಲ್ಲ ಎಂದು ಪರಿಪರಿಯಾಗಿ ನಿವೇದನೆ ಮಾಡಿಕೊಂಡ ಸಿಎಂ ಪ್ರಕರಣದಲ್ಲಿ ತಾವೊಬ್ಬ ಅಮಾಯಕ ಎಂದು ಬಿಂಬಿಸುವ ಯತ್ನ ಮಾಡಿದರು.

ಆದರೆ ಸಿಎಂ ರಾಜಕೀಯ ಭವಿಷ್ಯ ಟಿಕಾಯಿಸಲು ಅವಕಾಶ ಕೊಟ್ಟಿರುವ ಈ ಗಡಿಯಾರವನ್ನು ಪ್ರತಿಪಕ್ಷಗಳು ಅಷ್ಟು ಸುಲಭವಾಗಿ ಬಿಡುವುದುಂಟೇ. ಎರಡು ವರ್ಷ ಆಚೆಗಿರುವ ವಿಧಾನಸಭೆ ಚುನಾವಣೆ ಭವಿಷ್ಯಕ್ಕೆ ಈ ವಾಚ್ ಕೊಟ್ಟಿರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳದೇ ಇರುವುದಾದರೂ ಹೇಗೆ? ಸಿಎಂ ಹೇಳಿದ್ದನ್ನು ಒಪ್ಪಿಕೊಂಡು ಸುಮ್ಮನಾದರೆ ಅದನ್ನು ರಾಜಕೀಯ ಅಂತ ಕರೆಯುವುದಾದರೂ ಹೇಗೆ? ಹೀಗಾಗಿ ಪ್ರತಿಪಕ್ಷಗಳು ತಮ್ಮ ಪಟ್ಟನ್ನು ಸಡಿಲಿಸದೇ ಹೋದಾಗ ಸಿಎಂ ವಿವಾದಿತ ವಾಚನ್ನು ಸ್ಪೀಕರ್ ಗೆ ಒಪ್ಪಿಸುವ ತಂತ್ರದ ಮೊರೆ ಹೋದರು. ಅದನ್ನು ಸರ್ಕಾರದ ಆಸ್ತಿ ಎಂದು ಸದನದಲ್ಲೇ ಘೋಷಿಸಿದರು.

ಆದರೆ ಪ್ರತಿಪಕ್ಷಗಳಿಗೆ ಬೇಕಿದ್ದುದು ಆ ವಾಚಲ್ಲ ಬದಲಿಗೆ ಅದರ ಮೂಲ, ಮೂಲ ರುಜುವಾತು ಪಡಿಸುವ ಬಿಲ್, ಗಿಫ್ಟ್ ಹಿಂದಿರುವ ಡೀಲ್. ಆಡಳಿತ ಪಕ್ಷದವರು ಹೇಳಿದ್ದು ಪ್ರತಿಪಕ್ಷಗಳಿಗೆ ರುಚಿಸಲಿಲ್ಲ, ಪ್ರತಿಪಕ್ಷಗಳ ಬೇಡಿಕೆ ಆಡಳಿತ ಪಕ್ಷಕ್ಕೆ ಒಮ್ಮತವಾಗಲಿಲ್ಲ. ತತ್ಪರಿಣಾಮವಾಗಿ ಕಲಾಪ ಗುರುವಾರಕ್ಕೆ ಮುಂದೂಡಿಕೆ ಆಗಿದೆ.

Leave a Reply