ರಾಹುಲ್- ಪ್ರಹ್ಲಾದ್ ಜೋಷಿ ‘ಜಗಳ್ಬಂದಿ’ಯೇ ಲೋಕಸಭೆ ಹೈಲೈಟ್, ಸಿದ್ರಾಮಯ್ಯ ದುಬಾರಿ ವಾಚಿನ ಮಜಾವಾದಿ ಅಂತ್ಲೂ ಜೋಷಿ ಏಟು

ಡಿಜಿಟಲ್ ಕನ್ನಡ ಟೀಮ್

ಲೋಕಸಭೆಯಲ್ಲಿ ಬುಧವಾರ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆ ಮಾತನಾಡಿದ ಬಿಜೆಪಿ ಸಂಸದ ಕರ್ನಾಟಕದ ಪ್ರಹ್ಲಾದ ಜೋಷಿ, ರಾಹುಲ್ ಅವರಿಗೆ ತಿರುಗೇಟು ನೀಡಿದರು. ಅಲ್ಲದೆ ಕರ್ನಾಟಕ ಸಿಎಂ ದುಬಾರಿ ವಾಚ್ ಪ್ರಕರಣವನ್ನು ಸಂಸತ್ತಿನಲ್ಲಿ ಮೊಳಗಿಸಿದರು. ಜೋಷಿ ಅವರ ಭಾಷಣ ಹೀಗಿತ್ತು:

‘ಈ ಮುನ್ನ ರಾಹುಲ್ ಗಾಂಧಿಯವರು ಮಾತನಾಡಿದ್ದಾರೆ. ಅವರು ರಾಷ್ಟ್ರಪತಿ ಭಾಷಣದ ಮೇಲೆ ಮಾತನಾಡಿದರೋ ಅಥವಾ ಸಾರ್ವಜನಿಕ ಭಾಷಣ ಮಾಡಿದರೋ ಗೊತ್ತಾಗುತ್ತಿಲ್ಲ. ಅಲ್ಲದೆ ಯಾರೋ ಬರೆದುಕೊಟ್ಟಿದ್ದನ್ನು ಯಥಾವತ್ತಾಗಿ ಓದಿದ್ದಾರೆ. ಹೀಗಾಗಿಯೇ ಪೀಠದಲ್ಲಿ ಅಧ್ಯಕ್ಷರಿದ್ದರೂ ಮೇಡಂ ಅಂತ ಸಂಬೋಧಿಸುತ್ತಿದ್ದಾರೆ.’

ಈ ಹಂತದಲ್ಲಿ ರಾಹುಲ್ ಗಾಂಧಿ ಮಧ್ಯಪ್ರವೇಶಿಸಿ ಹೇಳಿದರು- ‘ಹೌದು. ಮಾತಿನಲ್ಲಿ ನಾಲ್ಕಾರು ತಪ್ಪುಗಳಿವೆ. ನಾವು ನಿಮ್ಮಂತೆ ತಪ್ಪೇ ಮಾಡದವರೆಂದು ಹೇಳುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತೇವೆ. ನಮ್ಮಿಂದ ತಪ್ಪುಗಳಾಗ್ತವೆ.’

ಹಂಗಂದಿದ್ದೇ ಜೋಷಿಯವರು ಮತ್ತೆ ಅಲ್ಲಿಂದಲೇ ತಮ್ಮ ಭಾಷಣ ಎತ್ತಿಕೊಂಡು ಹೋದರು. ‘ಕಾಂಗ್ರೆಸ್ ತಪ್ಪು ಮಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ನ ದೊಡ್ಡ ಸಮಸ್ಯೆ ಎಂದರೆ, ಆ ತಪ್ಪು ಮತ್ತು ಅನುಭವದಿಂದ ಪಾಠ ಕಲಿಯುತ್ತಿಲ್ಲ.’ ಅಂತ ಟಾಂಗ್ ಕೊಟ್ಟರು. ಮುಂದುವರೆದು ವಾಗ್ದಾಳಿ ಚುರುಕುಗೊಳಿಸಿದ್ರು- ‘ರಾಹುಲ್ ಗಾಂಧಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು, ಅಚ್ಚರಿಯಾಯ್ತು. ಕಾರಣ, ಭಾರತದಲ್ಲಿ ಭ್ರಷ್ಟಾಚಾರಕ್ಕೆ ಮೂಲ ಕಾರಣಕರ್ತರು 53 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್. ಕಳೆದ 10 ವರ್ಷಗಳಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದೆ. ಹಾಗಾಗಿ ಕಾಂಗ್ರೆಸ್ ನವರಿಂದ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಮೋದಿ ಅವರು ವಿದೇಶದಲ್ಲೇ ಹೆಚ್ಚಾಗಿ ಇರ್ತಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ಮೋದಿ ಅವರು ಪ್ರವಾಸ ಆರಂಭಿಸಿದ ನಂತರ ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್ ಎನ್ನುವ ಪರಿಸ್ಥಿತಿ ಕಡಿಮೆಯಾಗಿ ವಿಶ್ವವೇ ಭಾರತದತ್ತ ನೋಡುವಂತಾಗುತ್ತಿದೆ.’

ಹೀಗೆ ರಾಹುಲ್ ಗಾಂಧಿ ಭಾಷಣಕ್ಕೆ ಪ್ರತಿವಾದ ಮಂಡಿಸುತ್ತಲೇ, ಲೋಕಸಭೆಯಲ್ಲಿ ಸಿದ್ದರಾಮಯ್ಯ ವಾಚಿನ ಪ್ರಕರಣ ಧ್ವನಿಸುವಂತೆ ನೋಡಿಕೊಂಡರು. ‘ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿಗಳಲ್ಲ. ಅವರೊಬ್ಬ ಮಜಾವಾದಿ. ವಿದೇಶದಿಂದ ದುಬಾರಿ ವಸ್ತು ತರುವಾಗ ಕೇಂದ್ರ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಬೇಕು. ಅನಿವಾಸಿ ಭಾರತೀಯ ಗೆಳೆಯರು ಈ ವಾಚನ್ನು ಉಡುಗೊರೆ ನೀಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರಾ? ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಉನ್ನತ ತನಿಖೆ ನಡೆಸಬೇಕು. ಉಡುಗೊರೆ ನೀಡಿದ ಅನಿವಾಸಿ ಭಾರತೀಯನನ್ನು ವಿಚಾರಣೆಗೆ ಒಳಪಡಿಸಬೇಕು.’ ಅಂತ ಗುಡುಗಿದರು.

ಇದಕ್ಕೂ ಮುನ್ನ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲೆ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ದಲಿತ ಕಾರ್ಡಿನ ಮಾಮೂಲಿ ರಾಜಕೀಯ ವರಸೆ, ಡಾಲರ್- ರುಪಾಯಿಗಳಿಗೆ ವ್ಯತ್ಯಾಸ ಮಾಡಿಕೊಂಡಿದ್ದು, ಪ್ರತಿಯೊಂದಕ್ಕೂ ಆರೆಸ್ಸೆಸ್ ಎಳೆದು ತರುವ ವೃಥಾ ಸರ್ಕಸ್ಸುಗಳಿಗೆ ಮಾಫಿ ಕೊಟ್ಟು ನೋಡುವುದಾದರೆ ರಾಹುಲ್ ಭಾಷಣದಲ್ಲಿ ತಕ್ಕ ಮಟ್ಟಿಗಿನ ಮೊನಚಿದ್ದದ್ದು ಸುಳ್ಳಲ್ಲ.

ಹಸನ್ಮುಖ, ವ್ಯಂಗ್ಯದ ವಾಗ್ಬಾಣ ಇವೆಲ್ಲ ರಾಹುಲ್ ಗಾಂಧಿ ಮಾತುಗಳಲ್ಲಿಸಿಗೋದು ವಿರಳ. ಆ ನಿಟ್ಟಿನಲ್ಲಿ ರಾಹುಲ್ ಗಾಂಧಿಯ ರೂಪಕ- ಪ್ರತಿಮೆಗಳ ಬ್ಯಾಟಿಂಗ್ ಕೆಲವು ಬೌಂಡರಿಗಳನ್ನು ಸ್ಕೋರ್ ಮಾಡಿದ್ದಂತೂ ಹೌದು. ಬಜೆಟ್ ಬಗ್ಗೆ ಪ್ರಸ್ತಾಪಿಸುತ್ತ ರಾಹುಲ್ ಹೇಳಿದರು- ‘ನರೇಂದ್ರ ಮೋದಿಯವರು ಹೋದಲ್ಲೆಲ್ಲ ತಾವು ಕಾಳಧನ ಹಿಂದಕ್ಕೆ ತರುವುದಾಗಿ ಹೇಳುತ್ತಿದ್ದರು. ಕಾಳಧನ ಸಂಗ್ರಹಿಸಿದವರನ್ನು ಜೈಲಿಗಟ್ಟುವುದಾಗಿ ಆರ್ಭಟಿಸಿದ್ದರು. ಆದರೆ ಈ ಬಜೆಟ್ ನಲ್ಲಿ ಅರುಣ್ ಜೇಟ್ಲಿಯವರು ಹೊಸ ಯೋಜನೆಯೊಂದನ್ನು ತಂದಿದ್ದಾರೆ. ಅದುವೇ ಫೇರ್ ಆ್ಯಂಡ್ ಲವ್ಲಿ ಯೋಜನೆ! ಕಪ್ಪುಹಣ ಇಲ್ಲಿ ಅಪರಾಧವೇ ಅಲ್ಲ, ಕಾಳಧನಕೋರರು ಜೈಲಿಗೂ ಹೋಗುವುದಿಲ್ಲ. ಅವರು ಜೇಟ್ಲಿಜಿ ಬಳಿ ಹೋಗಿ ಇಂತಿಷ್ಟು ಟ್ಯಾಕ್ಸ್ ಒಪ್ಪಿಸಿಬಿಟ್ಟರೆ ಕಪ್ಪೆಲ್ಲ ಬಿಳಿಯಾಗಿಬಿಡುತ್ತದೆ. ಇದೇ ಫೇರ್ ಆ್ಯಂಡ್ ಲವ್ಲಿ ಸ್ಕೀಮ್!’

‘ಬಜೆಟ್ ಮಂಡನೆ ವೇಳೆ ನಾನು ಇದೇನು ಚಿದಂಬರಂ ಅವರು ಮಾತಾಡುತ್ತಿದ್ದಾರೆಯೇ ಅಂತ ಬೆಚ್ಚಿಬಿದ್ದೆ. ಏಕೆಂದರೆ ಜೇಟ್ಲಿ ಬಜೆಟ್ ನಲ್ಲಿ ಮನ್ರೇಗಾ ಯೋಜನೆ ಮಾತು ಜೋರಾಗಿ ನಡೆದಿತ್ತು. ನರೇಂದ್ರ ಮೋದಿಯವರು ಇದೇ ಸಂಸತ್ತಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಏನಕ್ಕೂ ಪ್ರಯೋಜನವಿಲ್ಲದ್ದು ಅಂತ ಕಟಕಿಯಾಡಿದ್ದರು. ಯುಪಿಎ ವೈಫಲ್ಯವನ್ನು ಬಿಂಬಿಸುವ ಏಕೈಕ ಕಾರಣಕ್ಕಾಗಿ ಈ ಯೋಜನೆಯನ್ನು ರದ್ದುಗೊಳಿಸದೇ ಬಿಟ್ಟಿರುವುದಾಗಿ ಹೇಳಿದ್ದರು. ಈಗ ಅದೇ ಯೋಜನೆಯಲ್ಲಿ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ.’

ನಿರೀಕ್ಷೆಯಂತೆ ದೇಶದ್ರೋಹದ ಆರೋಪ ಹೊತ್ತಿರುವ ಜೆ ಎನ್ ಯು ವಿದ್ಯಾರ್ಥಿಗಳ ಪರ ರಾಹುಲ್ ಮಾತನಾಡಿದರು. ಇವರು ದೇಶ ವಿರೋಧಿ ಘೋಷಣೆ ಕೂಗಿರುವುದಕ್ಕೆ ಸಾಕ್ಷ್ಯಗಳಿಲ್ಲ ಅಂತಂದ್ರು. ರೋಹಿತ್ ವೇಮುಲಗೆ ಸರ್ಕಾರದಿಂದ ಅನ್ಯಾಯವಾಗಿದೆ, ಈ ಸರ್ಕಾರ ದಲಿತ ವಿರೋಧಿ ಎಂಬ ಎಂದಿನ ರಾಗ ಹಾಡಿದರು.

ನರೇಂದ್ರ ಮೋದಿ ವಿಚಾರ ಮಾತನಾಡುವಾಗ ರೋಷದ ಬದಲು ವ್ಯಂಗ್ಯಕ್ಕೆ ಮೊರೆ ಹೋಗಿದ್ದು ರಾಹುಲ್ ಮಾತಿಗೆ ಭಿನ್ನ ಖದರನ್ನು ಕೊಟ್ಟಿತ್ತು. ‘ಹೌದ್ರೀ… ನರೇಂದ್ರ ಮೋದಿ ಬಗ್ಗೆ ಮಾತಾಡುವಾಗ ಭಯ ಆಗುತ್ತೆ. ಎಷ್ಟೆಂದರೂ ಭಾರೀ ಪವರ್ ಫುಲ್ ವ್ಯಕ್ತಿಯಲ್ವೇ ಅವ್ರು. ಆದ್ರೂ ಮಾತಾಡ್ತಿದ್ದೇನೆ. ಆಡಳಿತ ಪಕ್ಷದವರೂ ಸ್ವಲ್ಪ ಧೈರ್ಯ ತಂದುಕೊಂಡು ಅವರ ಬಗ್ಗೆ ಮಾತನಾಡಿ. ನಂಗೆ ಗೊತ್ತು, ನಿಮಗೂ ಅವರ ಬಗ್ಗೆ ಮಾತನಾಡಲಿಕ್ಕಿದೆ ಅಂತ..’

ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದ ಮೋದಿಯವರು ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ ಅಂತ ಪ್ರಶ್ನಿಸಿದ ರಾಹುಲ್, ಎಲ್ಲವಕ್ಕೂ ಮೇಕ್ ಇನ್ ಇಂಡಿಯಾದ ಬಬ್ಬರ್ ಸಿಂಹವನ್ನು ತೋರಿಸಿ ಜಂಬ ಕೊಚ್ಚಿಕೊಳ್ತಿದಾರಷ್ಟೆ ಅಂತ ವ್ಯಂಗ್ಯವಾಡಿದ್ರು.

Leave a Reply