ಸಂಸ್ಕೃತಿ ಕಾಪಾಡೋ ರುಬ್ಬುಗಲ್ಲಿನಂಥ ಭಾರವನ್ನು ಮಹಿಳೆಗೆ ಕಟ್ಟಿದರಾಯಿತೇ?

author-geethaಹಿಂದಿನ ಕಾಲವೇ ಚೆಂದವಿತ್ತು. ನಮ್ಮ ಹಳ್ಳಿಗಳಲ್ಲಿ, ಹೆಣ್ಣು ಮಕ್ಕಳಲ್ಲಿ ಚೆಂದವಿತ್ತು. ಈಗ ಎಲ್ಲಾ ಹಾಳಾಗಿ ಹೋಗಿದೆ. ಮನೆಯ ಅಂಗಳದಲ್ಲಿ ಆ ಮನೆಯ ಗೃಹಿಣಿ ಬಿಡಿಸಿದ ಚಿತ್ತಾರದ ರಂಗವಲ್ಲಿ ಇರುತ್ತಿತ್ತು. ಅದು ನಮ್ಮ ಸಂಸ್ಕೃತಿಯ ಲಕ್ಷಣ. ಕಂಬದ ಮನೆಯ ಜಗುಲಿಯ ಮೇಲೆ ಕುಳಿತು ಹೆಣ್ಣು ರಾಗಿ ಬೀಸುತ್ತಾ ಹಾಡುತ್ತಿರುತ್ತಿದ್ದಳು. ಅವಳ ಕೈಗಳಲ್ಲಿ ಇರುತ್ತಿದ್ದ ಹಸಿರು ಕೆಂಪು ಗಾಜಿನ ಬಳೆಗಳ ನಿನಾದ, ಅವಳ ಕಾಲ್ಗೆಜ್ಜೆಯ ಘಲ್ ಘಲ್ ನಾದ, ಅವಳು ಹಿಂದಕ್ಕೆ ಮುಂದಕ್ಕೆ ವಾಲಾಡುತ್ತಿದ್ದರಿಂದ ಕೊರಳಲ್ಲಿ ಧರಿಸುತ್ತಿದ್ದ ಸರಗಳು ಒಂದಕ್ಕೊಂದು ತಾಗಿ ಅಲ್ಲೊಂದು ಸಂಗೀತ.. ಅವಳ ತೊಡೆಯ ಮೇಲೆ ಮಲಗುತ್ತಿದ್ದ ಮಗುವಿನ ಕಳ್ಳದನಿಯ ಅಳು.. ನೋಡಲು ಚೆಂದ, ಕೇಳಲು ಆನಂದ.

ಭಾಷಣಕಾರರು ಸುಂದರ ಪ್ರತಿಮೆಯನ್ನು ಕಟ್ಟಿಕೊಡುತ್ತಿದ್ದರು. ಅವರು ಅಕಾಡೆಮಿಯೊಂದರ ಅಧ್ಯಕ್ಷರು, ನಮ್ಮ ಸಂಸ್ಕೃತಿ, ಸಂಸ್ಕಾರ, ಸೌಂದರ್ಯ ಇತ್ಯಾದಿಗಳು ಅವರ ಭಾಷಣದ ವಿಷಯ. ಆದರೆ ಅವರು ಬಣ್ಣಿಸಿದ್ದು ಹೆಣ್ಣನ್ನು ಅವಳ ಸೌಂದರ್ಯವನ್ನು ಅಷ್ಟೇ.

ಸಂಸ್ಕೃತಿಯ ರಕ್ಷಣೆ ಮಾಡಬೇಕಾಗಿರುವವಳು ಹೆಣ್ಣು. ಸಂಸ್ಕೃತಿಯೆಂದರೆ ಬೀಸೋ ಕಲ್ಲು, ಕಡಿಯೋ ಕೋಲು, ತಿರುವೋ ಸೌಟು!

ಮಿಕ್ಸಿ ಬಂದು, ಪ್ಯಾಕೆಟ್ಟುಗಳಲ್ಲಿ ಹಿಟ್ಟು ಬಂದು, ನಮ್ಮ ಸಂಸ್ಕೃತಿ ನಾಶವಾಗುತ್ತಿದೆ. ತಿರುವೋ, ರುಬ್ಬೋ, ಕುಟ್ಟೋ ಕೆಲಸಗಳಿಲ್ಲದೇ ಹೆಣ್ಮು ಸ್ಥೂಲಕಾಯಳಾಗುತ್ತಿದ್ದಾಳೆ. ಮಿಕ್ಸಿಯಿಂದ ಅವಳ ಬೆರಳುಗಳಷ್ಟೇ ವ್ಯಾಯಾಮ ಸಿಗುತ್ತಿದೆ. ಮುಂದುವರಿದು ಹೇಳಿದಾಗ ಎದ್ದು ಹೊರ ಬಂದೆ. ಸಂಸ್ಕೃತಿ ಎಂದರೆ ಅಷ್ಟೆಯೇ? ಹೆಣ್ಣು! ಹಾಡು! ಹಸೆ.. ! ಬಳೆ! ಮಾಂಗಲ್ಯ! ಕಾಲುಂಗುರ! ಮಗು! ಮನೆ! ಕೆಲಸ! ಸೌಂದರ್ಯ! ಕುಂಕುಮ! ಹೂವು!. ಸಂಸ್ಕೃತಿ ರಕ್ಷಿಸುವ ಸಂಪೂರ್ಣ ಹೊಣೆ ಹೆಣ್ಮಿನ ಮೇಲೆ. ಹೆಣ್ಣನ್ನು ಸಂರಕ್ಷಿಸಿ, ಬಂಧಿಸಿ ನೋಡಿಕೊಳ್ಳುವ ಹೊಣೆ ಗಂಡಿನ ಮೇಲೆ!

ಹಾಗಾಗಿಯೇ ಸರಿಯಾಗಿ ಉಡುಪು ಧರಿಸದ ಹೆಣ್ಣು, ಮಧುಪಾನ ಮಾಡುವ ಹೆಣ್ಣು ರಸ್ತೆಗಳಲ್ಲಿ, ಪಬ್ಬು, ಬಾರುಗಳಲ್ಲಿ ಹೊಡೆತವನ್ನು, ಅವಮಾನವನ್ನು ಎದುರಿಸಬೇಕಾಗುತ್ತಿದೆ. ಆಧುನಿಕ ಉಡುಪು ಧರಿಸುವ ಹೆಣ್ಣು easily available ಎಂದು ತೀರ್ಮಾನಕ್ಕೆ ಬರುತ್ತಾರೆ ಸಂಸ್ಕೃತಿಯ ರಕ್ಷಕರು. ಅಪ್ಪ, ಅಣ್ಣ, ಗಂಡ, ಮಗನ ರಕ್ಷಣೆಯಲ್ಲಿ ಹೆಣ್ಣು ಇರಬೇಕು ಎಂದು ಯಾರು ಹೇಳಿದರೋ.. (ಪ್ರೂಫ್ ಇಲ್ಲದ ಸಂಬಂಧವಿರುವ ಗಂಡಸಿನೊಂದಿಗೆ ಹೆಣ್ಣು ಓಡಾಡುವಂತಿಲ್ಲ ಎಂಬ ಕಾನೂನೇ ಇರುವ ದೇಶಗಳಿವೆ. ಅದರ ವಿಚಾರ ನಮಗೆ ಬೇಡ.. ಏಕೆಂದರೆ ಅದು ಅನುಕರಣೀಯವಲ್ಲ) ಏನೋ.. ಅವಳನ್ನು ರಕ್ಷಿಸುವ ಭರದಲ್ಲಿ ಅವಳ ಅಭಿವ್ಯಕ್ತಿ ಸ್ವಾತಂತ್ರಕ್ಕೆ ತಡೆ ಒಡ್ಡುತ್ತಿದ್ದಾರೆ.

ಸಂಸ್ಕೃತಿಯ ಅರ್ಥ, ಅದರ ವ್ಯಾಪ್ತಿ ತಿಳಿಯದೆ ಎಲ್ಲವನ್ನೂ ಮೂರ್ತ ರೂಪದಲ್ಲಿ ನೋಡುತ್ತಾ, ಅದರ ರಕ್ಷಣೆಗೆ ಹೊರಟು ಅಭಾಸ ಉಂಟು ಮಾಡುತ್ತಿದ್ದಾರೆ. ನಮ್ಮ ಪರಂಪರೆ, ಸಂಸ್ಕೃತಿಗಳ ರಕ್ಷಣೆ ಮಾಡಬೇಕಾಗಿಲ್ಲ. ಅದರ ಅರ್ಥ ತಿಳಿದು, ಪಾಲಿಸಿದರೆ ಸಾಕು. ನಾಲ್ಕು ಜನರಿಗೆ ನೋವಾಗದಂತೆ ಬಾಳಿದರೆ ಸಾಕು. ಅದು ಬಿಟ್ಟು ಸಮಾಜದಲ್ಲಿ ಹೆಣ್ಣು ಹೇಗಿದ್ದರೆ ಸಂಸ್ಕೃತಿ ಉಳಿಯುತ್ತದೆ ಎಂದು ಹೆಣ್ಣಿನ ಮೇಲೆ, ಅವಳ ನಡೆ, ನುಡಿ, ಉಡಿಗೆ, ತೊಡಿಗೆಯ ಮೇಲೆ ಸಂಸ್ಕೃತಿ ನಿಂತಿದೆ ಎನ್ನುವಂತೆ ಸಂಕೋಲೆ ತೊಡಿಸುವುದನ್ನು ಬಿಡಬೇಕು.

ಲೇಖನದ ಆರಂಭದಲ್ಲಿ ಹೇಳಿದಂತೆ ಆ ರಾಗಿ ಬೀಸುತ್ತಿರುವ ಹೆಣ್ಣಿನ ಪ್ರತಿಮಾ ಚಿತ್ರ ಸುಂದರ. ಯಾರಿಗೆ? ಅದನ್ನು ನೋಡುತ್ತಿರುವವರಿಗೆ. ಅಲ್ಲಿ ರಾಗಿ ಬೀಸುತ್ತಾ ಕೂತ ಹೆಣ್ಣಿಗೆ ಅದು ಕೆಲಸ. ಬೀಸೋ ಕಲ್ಲು ಹೋಗಿ ಮಿಕ್ಸಿ ಬಂದು, ಬೆರಳ ತುದಿಯಲ್ಲಿ ಬೀಸೋ, ಕುಟ್ಟೊ, ರುಬ್ಬೋ ಕೆಲಸ ಆಗುತ್ತಿರುವುದು ಅವಳ ದೃಷ್ಟಿಯಲ್ಲಿ ಪ್ರಗತಿ.

ಮೊನ್ನೆ ಕೂಡ ಎಫ್.ಬಿ ನಲ್ಲಿ ಒಂದು ಚಿತ್ರವನ್ನು ಸುಮಾರು ಮಂದಿ ಫಾರ್ವರ್ಡ್ ಮಾಡುತ್ತಿದ್ದರು. ಒನಕೆ, ರುಬ್ಬೊಕಲ್ಲು, ಬೀಸೋ ಕಲ್ಲು ಇತ್ಯಾದಿ ಇತ್ಯಾದಿಗಳು ಇದ್ದ ಚಿತ್ರವದು. ನಮ್ಮ ನಿಮ್ಮ ಅಜ್ಜಿಯರು ಉಪಯೋಗಿಸಿದ ಜಿಮ್ ಎಂಬ ತಲೆ ಬರಹ. ಈಗ ಇದನ್ನೆಲ್ಲಾ ಬಿಟ್ಟ ಹೆಂಗಸರು. ಅರೆಗಂಟೆಯಲ್ಲಿ ಬೇಯಿಸಿ ಹಾಕಿ ಸ್ಥೂಲಕಾಯಳಾಗುತ್ತಿದ್ದಾರೆ ಎಂಬ ವ್ಯಂಗ್ಯ ಬೇರೆ! ಯಾಕೆ?.. ಮನೆಯಲ್ಲೇ ಯಾಕೆ ಕೆಲಸ ಮಾಡಬೇಕು ಹೆಂಗಸರು? ಅವರು ಕೂಡ ಜಿಮ್ ಗೆ ಹೋಗಿ ಅಥವಾ ಬಡಾವಣೆಗಳಲ್ಲಿ ಇರುವ ಪಾರ್ಕಿಗೆ ಹೋಗಿ ವಾಕಿಂಗ್ ಮಾಡಿ ಸಣ್ಣಗಾಗುತ್ತಾರೆ. ಅಥವಾ ಆಗುವುದಿಲ್ಲ. ಏನಂತೆ?

ಹಿಡಿದಿಟ್ಟುಕೊಳ್ಳಲು ಹೋದಷ್ಟು ಕೈಬಿಟ್ಟು ಹೋಗುವುದೇ ಹೆಚ್ಚು.

ಎಲ್ಲರೂ ನಮ್ಮ ಟ್ರೆಡಿಷನಲ್ ಅಟೈರ್ನಲ್ಲಿ ಬರಬೇಕು ಎಂದು ನಮೂದಿಸಿದರೆ ಹೆಣ್ಣು ಸೀರೆಯಲ್ಲಿ, ಗಂಡು ಸೂಟಿನಲ್ಲಿ ಹೋಗಬೇಕು. (ನಮ್ಮ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕೊಡುವ ಫೇರ್ ವೆಲ್ ಪಾರ್ಟಿಗಳಲ್ಲಿ ಹಿಗೆಯೇ!)

ಸಣ್ಣ ಸಣ್ಣ ವಿಷಯಗಳಿರಬಹುದು. ಆದರೆ ಇವು ಚುಚ್ಚುವ ಚೂಪು ಮೊನೆಯ ಸೂಜಿಗಳು. ಮುಂದಿನ ಲೇಖನದಲ್ಲಿ ಚೂರಿಯ ಇರಿತದ ಬಗ್ಗೆ ಬರೆಯುತ್ತೇನೆ.

ಪೋಸ್ಟ್ ಮಾಡುವ ಮುನ್ನ ಈ ಲೇಖನವನ್ನು ಓದಿದ ನನ್ನ ಸ್ನೇಹಿತರೊಬ್ಬರು, ಇದೆಲ್ಲಾ ಈಗ ಹೀಗಿಲ್ಲ. ತೊಂಬತ್ತರ ದಶಕದ ಸಮಸ್ಯೆಯನ್ನು ನೀನು ಈಗ ಎತ್ತುತ್ತಿರುವಿ ಎಂದರು.

ಹೌದೇ?..

ನಾನು ನಾನು ಉದ್ಧರಿಸಿರುವ ಭಾಷಣವನ್ನು ನಾನು ಕೇಳಿದ್ದು ಮೂರು ವರ್ಷದ ಹಿಂದೆ.. ಮಂಗಳೂರಿನ ಪಬ್ ನಲ್ಲಿ ಇದ್ದರು ಎಂದು ಮಹಿಳೆಯರ ಮೇಲೆ ದಾಳಿ ನಡೆದಿದ್ದು ಎರಡು ವರ್ಷಗಳ ಹಿಂದೆ.. ಎಫ್.ಬಿನಲ್ಲಿ ಬೀಸೋ ಕಲ್ಲು, ಒನಕೆ, ರುಬ್ಬೋಕಲ್ಲುಗಳ ಚಿತ್ರವನ್ನು ಮಹಿಳೆಯರ ಜಿಮ್ ಎಂದು ಫೋಟೋ ಹಾಕಿದ್ದು ನಾಲ್ಕು ದಿನದ ಹಿಂದೆ.. ಟ್ರೆಡಿಷನಲ್ ಅಟೈರ್ ಅಂದರೆ ಸೀರೆಯಲ್ಲೇ ಬರಬೇಕು ಹುಡುಗಿಯರು ಎಂದು ಶಾಲೆಯಲ್ಲಿ ಕಂಡೀಷನ್ ಹಾಕಿದ್ದು ಎರಡು ದಿನದ ಹಿಂದೆ. ಹೆಣ್ಣು ತಾಯಿಯಾಗುತ್ತಾಳೆ, ನಿನ್ನ ಹೆತ್ತವಳು ಹೆಣ್ಣು.. ಹಾಗಾಗಿ ಅವಳನ್ನು ಗೌರವಿಸಿ ಎಂಬ ಲೇಖನ ಓದಿದ್ದು ಇಂದು ಬೆಳಗ್ಗೆ.

ಅಷ್ಟೊಂದು ಪ್ರಸ್ತುತವಿದೆ ಈ ವಿಚಾರ. ವಿದ್ಯಾಭ್ಯಾಸ, ಉದ್ಯೋಗ, ಹಣಕಾಸು, ಆಸ್ತಿಯಲ್ಲಿ ಸಮಪಾಲು ಹೆಣ್ಣಿಗೆ ಸಮಾನತೆ ತಂದುಕೊಡುವುದಿಲ್ಲ. ಗಂಡು, ಹೆಣ್ಣಿನ ಮನೋಭಾವದಲ್ಲಿ ಬದಲಾವಣೆ ಕಾಣಬೇಕು. ಅದಕ್ಕಾಗಿ ಸವೆಸಬೇಕಾದ ದಾರಿ ನಮ್ಮ ಮುಂದೆ ಉದ್ದವಾಗಿ ಬಿದ್ದಿದೆ.

1 COMMENT

Leave a Reply