ಸುದ್ದಿಸಂತೆ: ಕನ್ಹಯ್ಯಗೆ ಜಾಮೀನು, ಭಾರತದ ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳ, ಚಿತ್ರಪ್ರಶಸ್ತಿ…

ಕನ್ಹಯ್ಯಗೆ ಸಿಕ್ತು ಜಾಮೀನು

ಜೆಎನ್ ಯುನಲ್ಲಿ ದೇಶ ವಿರೋಧಿ ಕೂಗು ಹಾಕಿ, ದೇಶದ್ರೋಹ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಗೆ ಬುಧವಾರ 6 ತಿಂಗಳ ಕಾಲಾವಧಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ದೊರೆತಿದೆ. ಫೆ.12ರಂದು ಬಂಧಿತರಾಗಿದ್ದ ಕನ್ಹಯ್ಯ ಅವರ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ₹10 ಸಾವಿರ ಬಾಂಡ್ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ. ಸತತ ಮೂರು ಗಂಟೆಗಳ ವಿಚಾರಣೆ ನಡೆಸಿದ ನ್ಯಾ.ಪ್ರತಿಭಾ ರಾಣಿ, ಪೊಲೀಸರ ತನಿಖೆಗೆ ಸಹಕರಿಸುವಂತೆ ಕನ್ಹಯ್ಯಗೆ ಸೂಚನೆ ನೀಡಿದರು.

ಸಿನಿಮಾ ಸಾಧಕರಿಗೆ ಪುರಸ್ಕಾರ

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಕನ್ನಡ ವಾಕ್ಚಿತ್ರ ಹುಟ್ಟುಹಬ್ಬದ “ಕನ್ನಡ ಚಲನಚಿತ್ರ ದಿನಾಚರಣೆ” ಮಾರ್ಚ್  3 ರಂದು ನಗರದ ವಸಂತ ನಗರದ ಮಿಲ್ಲರ್ಸ್ ರಸ್ತೆಯ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಈ ವೇಳೆ ಕನ್ನಡ ಚಿತ್ರೋದ್ಯಮದಲ್ಲಿ ಜೀವಮಾನದ ಸಾಧನೆ ಮಾಡಿದ ಹತ್ತು ಮಂದಿಗೆ ಪ್ರಶಸ್ತಿ ನೀಡಲಿದ್ದಾರೆ. ಖ್ಯಾತ ನಿರ್ದೇಶಕ, ನಟ ಆರ್ ನಾಗೇಂದ್ರರಾವ್ ಪ್ರಶಸ್ತಿಗೆ ರಂಗಭೂಮಿ ಕಲಾವಿದೆ ಎಸ್ ಕೆ ಪದ್ಮದೇವಿರವರು ಆಯ್ಕೆಯಾಗಿದ್ದಾರೆ. ಬಿ.ಆರ್ ಪಂತುಲು ಪ್ರಶಸ್ತಿಗೆ ಸಾಹಸ ನಿರ್ದೇಶಕ ಜೋಸೈಮನ್, ಡಿ ಶಂಕರ್ ಸಿಂಗ್ ಪ್ರಶಸ್ತಿಗೆ ನಿರ್ಮಾಪಕ ಹೆಚ್ ಎನ್ ಮುದ್ದುಕೃಷ್ಣ, ಜಿ ವಿ ಅಯ್ಯರ್ ಪ್ರಶಸ್ತಿಗೆ ಸಂಗೀತ ನಿರ್ದೇಶಕ ರತ್ನಂ, ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿಗೆ ಸಂಭಾಷಣಾಕಾರ ಬಿ ಎ ಮಧು, ಬಿ ಎಸ್ ರಂಗ ಪ್ರಶಸ್ತಿಗೆ ಛಾಯಗ್ರಾಹಕ ಬಿ ಎಸ್ ಬಸವರಾಜು, ಬಿ ಜಯಮ್ಮ ಪ್ರಶಸ್ತಿಗೆ ಪ್ರದರ್ಶಕ ಬಾಬ್ಜಿ, ಎಂ ಪಿ ಶಂಕರ್ ಪ್ರಶಸ್ತಿಗೆ ತಂತ್ರಜ್ಞ ಆರ್ಮುಗಂ, ತೂಗುದೀಪ ಶ್ರೀನಿವಾಸ ಪ್ರಶಸ್ತಿಗೆ ನಟ ಜೈಜಗದೀಶ್, ಕೆ ಎನ್ ಟೈಲರ್ ಪ್ರಶಸ್ತಿಗೆ ತುಳು ಚಿತ್ರ ನಿರ್ಮಾಪಕ ರಿಚರ್ಡ್ ಕಾಸ್ಟೋಲಿನ್ (ಪ್ರಾದೇಶಿಕ ವಿಭಾಗ) ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವರಾದ ರೋಷನ್ ಬೇಗ್, ಅಂಬರೀಶ್, ಉಮಾಶ್ರೀ, ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಸಂಸದ ಪಿ ಸಿ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚನ್ನಪ್ಪಗೌಡ, ವಾರ್ತಾಇಲಾಖೆಯ ನಿರ್ದೇಶಕ ವಿಶುಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಭಾಗವಹಿಸಲಿದ್ದಾರೆ.

ಅಫ್ಘಾನಿಸ್ತಾನ ಭಾರತೀಯ ರಾಯಭಾರಿ ಕಚೇರಿ ಮೇಲೆ ಉಗ್ರರ ದಾಳಿ ಯತ್ನ

ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲೆ ಆತ್ಮಹುತಿ ಬಾಂಬ್ ದಾಳಿ ನಡೆಸಲು ಮುಂದಾಗಿದ್ದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಮಂಗಳವಾರವಷ್ಟೇ ರಾಜಧಾನಿ ಕಾಬುಲ್ ನಲ್ಲಿ ಆತ್ಮಹತ್ಯಾ ದಾಳಿಗೆ 12 ಬಲಿಯಾಗಿದ ಬೆನ್ನಲ್ಲೇ ಬುಧವಾರ ಅಫ್ಘಾನಿಸ್ತಾನದ ಪೂರ್ವ ಭಾಗದ ಜಲಲಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ಪ್ರಯತ್ನ ನಡೆದಿದೆ. ಮೊದಲು ಆತ್ಮಹತ್ಯಾ ಬಾಂಬರ್ ಬಂದ ಕಾರು ರಾಯಭಾರಿ ಕಚೇರಿ ಬಳಿ ಸ್ಫೋಟಗೊಂಡಿತು. ನಂತರ ಭದ್ರತಾ ಸಿಬ್ಬಂದಿ 8 ಕಾರಿನ ಮೇಲೆ ಗುಂಡಿನ ದಾಳಿ ನಡೆಸಿತು. ಈ ವೇಳೆ ರಾಯಭಾರಿ ಕಚೇರಿಯ ಬಾಗಿಲು ಮತ್ತು ಕಿಟಕಿಯನ್ನು ಮುಚ್ಚಲಾಯಿತು.

ಚರ್ಚ್ ಸ್ಟ್ರೀಟ್ ದಾಳಿ ಒಪ್ಪಿಕೊಂಡ ಉಗ್ರ ಅಫ್ರೀದಿ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ ಹಾಗೂ ಇಸ್ರೇಲ್ ವಿಸಾ ಸೆಂಟರ್ ಮೇಲಿನ ದಾಳಿಯನ್ನು ನಾನೇ ನಡೆಸಿದ್ದಾಗಿ ಉಗ್ರ ಅಲಮ್ ಜೆಬ್ ಅಫ್ರೀದಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಎನ್ ಎನ್- ಐಬಿಎನ್ ವರದಿ ಸಾಕಿದೆ. ಅಲಮ್ ಜೆಬ್ ಅಫ್ರೀದಿ ಸ್ವಯಂ ಪ್ರೇರಿತ ಉಗ್ರನಾಗಿದ್ದು, 2010ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ. ಅಲ್ಲದೆ ಎಸಿ ಮೆಕ್ಯಾನಿಕ್ ಆಗಿ 15 ಸಾವಿರ ಸಂಬಳಕ್ಕೆ ಕಾರ್ಯನಿರ್ವಹಿಸುತ್ತಿದ್ದ. ಹೈದರಾಬಾದ್ ನ ಇಸಿಸ್ ಉಗ್ರ ಸಂಘಟನೆಯ ನೇಮಕಗಾರನ ಜತೆ ನಿಕಟ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ. ಈ ಎರಡು ದಾಳಿಗಳನ್ನು ತಾನೇ ಮಾಡಿದ್ದಾಗಿ ಅಫ್ರೀದಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಷ್ಟ್ರೀಯ ಗುಪ್ತಚರಾ ಸಂಸ್ಥೆಯ ತನಿಖಾ ವರದಿಯ ಆಧಾರದ ಮೇಲೆ ಸುದ್ದಿ ವಾಹಿನಿ ವರದಿ ಮಾಡಿದೆ.

ಇಂಡೊನೇಷ್ಯಾದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ

ಮತ್ತೊಮ್ಮೆ ಇಂಡೊನೇಷ್ಯಾದ ಪಶ್ಚಿಮ ಭಾಗದ ಸುಮತ್ರಾ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಬುಧವಾರ 7.9 ರಷ್ಟು ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ಇಂಡೊನೇಷ್ಯಾ ಸುನಾಮಿ ಎಚ್ಚರಿಕೆ ನೀಡಿದೆ. ಈ ಭೂಕಂಪದ ಕುರಿತ ಹಾನಿ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ದೇಶದಲ್ಲಿ ಶತಕೋಟ್ಯಾಧಿಶರ ಪ್ರಮಾಣ ಶೇ.330 ರಷ್ಟು ಹೆಚ್ಚಳ!

ಭಾರತ ಬದಲಾಗುತ್ತಿದೆ, ಬೆಳೆಯುತ್ತಿದೆ ಎನ್ನುವ ಮಾತುಗಳು ಭಾಷಣಗಳಲ್ಲಿ ಕೇಳಿಸುತ್ತಿತ್ತು. ಆದರೆ ಎಲ್ಲಿ ಹೇಗೆ ಅಂತ ಕೇಳಿದರೆ ಉತ್ತರಿಸೋದು ಸ್ವಲ್ಪ ಕಷ್ಟ. ದೇಶದಲ್ಲಿ ಶ್ರೀಮಂತರ ಸಂಖ್ಯೆ ಶೇಕಡ 330 ರಷ್ಟು ಹೆಚ್ಚಾಗಿದೆ. ಈ ಅರ್ಥದಲ್ಲಿ ಭಾರತ ಬೆಳಿತೀರೋದು ಹೌದು.

ನೈಟ್ ಫ್ರಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್ 2016 ರ ಪ್ರಕಾರ ಭಾರತದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ಕಳೆದ 10 ವರ್ಷಗಳಲ್ಲಿ ಸುಮಾರು 4 ಪಟ್ಟು ಹೆಚ್ಚಾಗಿದೆ. ಇದು ಮುಂದಿನ ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಮುನ್ಸೂಚನೆ ಎಂದಿದೆ. ದೇಶದಲ್ಲಿ ಅತಿ ಹೆಚ್ಚು ಶತಕೋಟ್ಯಾಧಿಶರು ನಗರಗಳ ಪೈಕಿ ಮುಂಬೈ ಮೊದಲ ಸ್ಥಾನ ಪಡೆದರೆ ನಂತರದಲ್ಲಿ ದೆಹಲಿ ಇದೆ. ಇನ್ನು ಪ್ರಧಾನ ವಸತಿ ಸೂಚ್ಯಂಕ ಹೂಡಿಕೆ ವರದಿಯಲ್ಲಿ ವಿಶ್ವದ ಮೊದಲ 20 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಆದರೆ ಈ ಪಟ್ಟಿಯಲ್ಲಿ ದೇಶದ ಬೇರೆ ಯಾವ ನಗರವೂ ಸ್ಥಾನ ಪಡೆದಿಲ್ಲ. ದೆಹಲಿ 44 ಮತ್ತು ಮುಂಬೈ 51 ನೇ ಸ್ಥಾನ ಪಡೆದಿವೆ.

 ರೈಲ್ವೆ: ಕಾಯ್ದಿರಿಸದ ಟಿಕೆಟ್ ಗೆ ಬಾರ್ ಕೋಡಿಂಗ್ ವ್ಯವಸ್ಥೆ ಜಾರಿ

ರೈಲ್ವೆ ಇಲಾಖೆಯ ಟಿಕೆಟ್ ವ್ಯವಸ್ಥೆಯಲ್ಲಿ ಆಗುತ್ತಿರುವ ಆದಾಯ ಸೋರಿಕೆ ತಡೆ ಮತ್ತು ಪಾರದರ್ಶಕತೆ ತರಲು ಕಾಯ್ದಿರಿಸದ ಟಿಕೆಟ್ ಗಳಗೆ ಬಾರ್ ಕೋಡಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು 2016-17 ರ ರೈಲ್ವೆ ಬಜೆಟ್ ನ ಒಂದು ಯೋಜನೆ. ಪ್ರಸ್ತುತ ಹೊಸ ದೆಹಲಿ, ಹಳೆ ದೆಹಲಿ ಮತ್ತು ನಿಜಾಮುದ್ದಿನ್ ನಿಲ್ದಾಣಗಳಲ್ಲಿ ಈ ಸೇವೆ ಲಭ್ಯವಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತಾರವಾಗಲಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

Leave a Reply